ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಅಮೋಘ ಬದಲಾವಣೆ...

Last Updated 29 ಡಿಸೆಂಬರ್ 2010, 12:25 IST
ಅಕ್ಷರ ಗಾತ್ರ

ಈ ಹೊತ್ತಿನ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಂದು ಅಮೋಘ ಬದಲಾವಣೆ ಕೊಟ್ಟಿದ್ದಾರೆ. ಜೊತೆಗಾರರಾದ ರಾಜಕಾರಣಿಗಳಿಗೆ, ಅವರ ಗುಲಾಮಗಿರಿ ಮಾಡುವ ನೌಕರ ವರ್ಗಕ್ಕೆ, ಅಧಿಕಾರ ಹಂಬಲಕ್ಕೆ ಬೆನ್ನುಬಿದ್ದವರಿಗೆ ಈ ಬದಲಾವಣೆ ಗೊತ್ತಾಗುವುದಿಲ್ಲ. ಇವರೆಲ್ಲ ಒಟ್ಟಿಗೆ ಸೇರಿಕೊಂಡು ‘ಕುಡಿಯುವವರು’. ಈ ವರ್ಗದ ಜನರಿಗೆ ಪ್ರಾಮಾಣಿಕತೆ ಮತ್ತು ಮೋಸದ ನಡುವೆಯ ಅರ್ಥ ಗೊತ್ತಾಗುವುದಿಲ್ಲ.ಅವೆರಡೂ ಒಂದೇ ಎಂದು ಅಂದುಕೊಂಡಿದ್ದರೂ ಆಶ್ಚರ್ಯವಿಲ್ಲ. ವೇದಿಕೆಯ ಮೇಲಿನ ಇವರು ಮಾತುಗಳಿಂದ ಇದು ಸ್ಪಷ್ಟವಾಗುತ್ತಿದೆ. ಆ ವೇದಿಕೆಯ ಮೇಲೆ ಎಷ್ಟು ಸುಂದರವಾಗಿ ಕಾಣುತ್ತಾರೆ. ಸತ್ಯಹರಿಶ್ಚಂದ್ರನೇ ಪುನರ್‌ಜನ್ಮವೆತ್ತಿ ಬಂದಂತೆ ಕಾಣುತ್ತಾರೆ.

ಮುಖ್ಯಮಂತ್ರಿಗಳ ಅಮೋಘ ಸಾಧನೆ ಏನು ಗೊತ್ತಾ? ಕರ್ನಾಟಕದ ಜನರ ಸಾಮಾನ್ಯ ಪ್ರಜ್ಞೆಯನ್ನು (ಕಾಮನ್‌ಸೆನ್ಸ್) ಸಂಪೂರ್ಣ ಅನ್ನುವಂತೆ ನಾಶಮಾಡಿರುವುದು. ವಸ್ತು-ವಸ್ತು, ವ್ಯಕ್ತಿ-ವ್ಯಕ್ತಿ, ಸಂದರ್ಭ-ಸಂದರ್ಭದ ಮಧ್ಯದ ತುಲನಾತ್ಮಕ ತಿಳುವಳಿಕೆಯೆ ಸಾಮಾನ್ಯ ಜ್ಞಾನ. ದೃಢವಾಗಿ ಸಾಧಿಸಿ ತೋರಿಸಲಾಗದಿದ್ದರೂ ಕೆಟ್ಟವರು ಯಾರು ಒಳ್ಳೆಯವನು ಯಾರು ಎಂಬ ಸಾಮಾನ್ಯ ತಿಳುವಳಿಕೆ ಎಲ್ಲರಿಗೂ ಇರುತ್ತದೆ. ಚಿಂತನಶೀಲ ಇನ್ನೂ ಆಳಕ್ಕೆ ಹೋಗಿ ತರತಮ ಸ್ವಭಾವಗಳನ್ನು ವಿಶ್ಲೇಷಣೆ ಮಾಡಿ ತಿಳಿದುಕೊಳ್ಳುತ್ತಾನೆ.

ಸಾಮಾನ್ಯ ಮನುಷ್ಯ ಸಾಮಾನ್ಯ ಜ್ಞಾನಕ್ಕಿಂತ ಹೆಚ್ಚಿನ ತಿಳುವಳಿಕೆಗೆ ಕೈಹಾಕುವುದಿಲ್ಲ. ಆ ಪಜೀತಿಯೆಲ್ಲ ನನಗೆ ಬೇಡ ಎಂದು ದೂರವೇ ಉಳಿಯುತ್ತಾನೆ.ಜ್ಞಾನದ ಕೇಂದ್ರದಿಂದ ರಾಜ್ಯಾಧಿಕಾರ ಹೊರಹೊಮ್ಮುವ ಒಂದು ಕಾಲವಿತ್ತು. ‘ಹೊಯ್ ಸಳ’ ಎಂದರಂತೆ ಜ್ಞಾನಿಗಳಾದ ಗುರುಗಳು. ಆ ಹೊಯ್ಸಳ ವ್ಯಾಘ್ರವನ್ನು ಕೊಂದು ವೀರ ಅನ್ನಿಸಿಕೊಂಡನಂತೆ. ಮುಂದೆ ರಾಜ್ಯವನ್ನು ಕಟ್ಟಿ ಆಳಿದನಂತೆ.ಈಗ ಆ ಜ್ಞಾನ ಅಧಿಕಾರ ಶಕ್ತಿಗೆ ಶರಣಾಗಿದೆ. ಈ ಹೊತ್ತು ಅಧಿಕಾರದ ಕೇಂದ್ರವೂ ರಾಜಕಾರಣಿಗಳೆ, ತಿಳುವಳಿಕೆಯ ರೆಫರೆನ್ಸ್ ಕೂಡ ಅವರೆ. ಎಲ್ಲವನ್ನೂ ರಾಜಕಾರಣದ ತಿಳಿವಿನಿಂದಲೆ ನೋಡುವುದು ಸಾಮಾನ್ಯವಾಗಿಬಿಟ್ಟಿದೆ. ಸತ್ಯ-ಧರ್ಮ, ನ್ಯಾಯ-ನಿಷ್ಠೆ, ಪ್ರಾಮಾಣಿಕತೆ-ಮೋಸ, ಒಳಿತು-ಕೆಡುಕು ಎಲ್ಲವನ್ನೂ ರಾಜಕೀಯ ಭಾಷೆಯಲ್ಲೆ ಅರ್ಥೈಸಲಾಗುತ್ತಿದೆ. ರಾಜಕಾರಣದ ಓಲೈಸುವ ವಿರೋಧಿಸುವ ಕಥೆಗಳೆ ಪುರಾಣಗಳಾಗುತ್ತಿವೆ. ಹಳ್ಳಿಯಲ್ಲೂ ದಿಲ್ಲಿಯಲ್ಲೂ ಇವುಗಳದೆ ಪಾರಾಯಣ, ಅವಕಾಶಗಳ ದರೋಡೆ. ಅದಕ್ಕೆ ರಾಮನೂ ರಾಜಕೀಯಕ್ಕೆ ಬರುತ್ತಾನೆ, ರಹೀಮನೂ ರಾಜಕೀಯಕ್ಕೆ ಬರುತ್ತಾನೆ. ಅವರು ಮಂದಿರ ಮಸೀದಿಗಳನ್ನು ಬಿಟ್ಟು ಆಗಿದೆ.

ಜನಸಾಮಾನ್ಯರ ನಂಬಿಕೆಯ ತಲೆ ಚಿಪ್ಪನ್ನು ಒಡೆದು, ಮೆದುಳನ್ನು ಗೋರಿ ತೆಗೆದು, ನಿರಂತರ ನುಂಗುವ ಕೆಲಸವನ್ನು ಈ ರಾಜಕಾರಣಿಗಳು ಮಾಡುತ್ತಿದ್ದಾರೆ. ಮಸ್ತ್ ಮಜಾ ಮಾಡಲು ಹಣವಷ್ಟೇ ಸಾಕಾಗುತ್ತಿಲ್ಲ, ಈ ದೇಶದ ಪುರಾಣ-ಪುಣ್ಯ ಕಥೆಗಳೂ ಸಾಲದಾಗಿವೆ. ಇನ್ನು ಈ ರಾಕ್ಷಸಿ ಎತ್ತ ಹೊರಡುತ್ತಾನೊ ಕಾಣೆ!

ಆಗ ಸಾಮಾನ್ಯ ಜನರು ಪುರೋಹಿತರ ಭಕ್ತರು. ಈ ಭಕ್ತರ ತಲೆಯನ್ನು ಕೊರೆದು ಕೊರೆದು ತಿಂದರು. ಈಗಿನ ಮತದಾರರಲ್ಲಿ ಬಹುತೇಕರು ರಾಜಕಾರಣಿಗಳ ಭಕ್ತರು. ಈಗಿನ ನವಭಕ್ತರ ಮನೆಯಲ್ಲಿ ತಮ್ಮ ದಣಿ ರಾಜಕಾರಣಿಗಳದೆ ಕಥೆ ಪುರಾಣಗಳು. ಚಿಂತಕರು, ರಾಜಕಾರಣಿಗಳು ಬೇರೆ ಮತದಾರರು ಬೇರೆ ಎನ್ನುವಂತೆ ಮಾತನಾಡುತ್ತಿದ್ದಾರೆ. ರಾಜಕಾರಣಿಗಳು ಮತದಾರರನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಬರೆಯುತ್ತಾರೆ. 

 ರಾಜಕಾರಣಕ್ಕೆ ಹೊರತಾದ ಇನ್ನೊಂದು ಚಿಂತನ ಕೇಂದ್ರ ಮತ್ತು ಬದುಕುವ ದಾರಿ ಇಲ್ಲದಂತೆ ಮಡಲಾಗಿದೆ. ದಂಡ ಕೊಡಿಸುವ ಸೀರೆಯನ್ನು ರಾಜಕಾರಣಿ ಕೊಡಿಸುತ್ತಿದ್ದಾನೆ ಎಂದರೆ ಏನರ್ಥ? ಹಳೆಯ ಗಂಡನಿಂದ ಹೆಣ್ಣು ಹೊಸ ಗಂಡನನ್ನು ಹುಡುಕಿಕೊಂಡು ಹೋಗುವ ಹರಾಜು ಸಂಸ್ಕೃತಿ ಸೃಷ್ಟಿಯಾಗುತ್ತಿದೆ. ಹೆಣ್ಣು ತನ್ನ ಸ್ವತಂತ್ರ ದುಡಿಮೆ ಮತ್ತು ಸ್ವಾಭಿಮಾನದಿಂದ ತನ್ನ ಬಟ್ಟೆಯನ್ನು ತಾನೇ ಕೊಂಡು ಧರಿಸದಂತಾಗಿದೆ. ರಾಜಕಾರಣದ ಪಡಿತರ ವ್ಯವಸ್ಥೆ ಹೆಳವನನ್ನು ಕರಡಿ ತನ್ನ ಗೂಡಿನಲ್ಲಿ ಇಟ್ಟುಕೊಂಡು ಸಾಕುವ ಪರಿಸ್ಥಿತಿಯಾಗಿದೆ.

ಇಷ್ಟಿದ್ದೂ ಎಲ್ಲ ಮತದಾರನ ಒಳಗೊಬ್ಬ ಆತ್ಮಸಾಕ್ಷಿಯುಳ್ಳ ಮನುಷ್ಯ ಇದ್ದೇ ಇದ್ದಾನೆ. ಮತದಾರ ಭಕ್ತರ ಹೊರಗೆ ಜಗತ್ ಮಿಥ್ಯೆ ಜಗತ್‌ಸತ್ಯದ ಬಗ್ಗೆ ಮಾತು ಮನಸ್ಸು ತೇಲಿಸುವ ಸಾಮಾನ್ಯ ಪ್ರಜ್ಞೆ ಇರುವ ಮತದಾರರೂ ಇದ್ದಾರೆ. ಈ ಜನ ಸ್ಥಳೀಯ ಸಮಸ್ಯೆಗಳು ಎದುರಾದರೆ ಎದೆಕೊಡದೆ ತಪ್ಪಿಸಿಕೊಳ್ಳುತ್ತಾರೆ. ಆದರೆ ಇವರ ಮೌಲ್ಯಮಾಪನ ಸತ್ಯಕ್ಕೆ ಹತ್ತಿರದಲ್ಲಿರುತ್ತದೆ. ಒಂದು ರೀತಿಯಲ್ಲಿ ಇವರು ಬಹುಸಂಖ್ಯೆಯ ಮತದಾರರ ಮಧ್ಯೆ ಶಾಕ್‌ಅಬ್ಸರ್‌ವರ್ಸ್‌ ಇದ್ದ ಹಾಗೆ. ಉನ್ಮಾನದದ ಬೆನ್ನು ಹತ್ತಿ ಓಡುವವರ ಮಧ್ಯೆ ಈ ಒಂದು ವರ್ಗ, ಸಾಮಾನ್ಯ ಜನರ ದ್ವಂದ್ವ, ದಿಗ್ಭ್ರಮೆ, ಆತಂಕ ಮತ್ತು ಅಸಹಾಯಕತೆಯನ್ನು ಪ್ರತಿನಿಧಿಸುತ್ತಾರೆ.

ಇಂಥವರ ತಲೆಯನ್ನೂ ತಿಂದುಬಿಟ್ಟರೆ ಮುಗಿಯಿತು; ಒಬ್ಬನೆ ಹೆಗ್ಗಡಿ, ಒಂದೇ ಕುರಿಮಂದೆ. ಈ ಪರಿಸ್ಥಿತಿ ಈ ಹೊತ್ತಿನ ಕರ್ನಾಟಕದಲ್ಲಿ ಉಂಟಾಗಿದೆ.ಇತ್ತೀಚೆಗೆ ಕರ್ನಾಟಕದ ರಾಜ್ಯಪಾಲರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ರಾಜ್ಯದಲ್ಲಿ ಪ್ರಸ್ತಾಪವಾದ ಭೂ ಹಾಗೂ ಗಣಿ ಹಗರಣಗಳ ಬಗ್ಗೆ ಸವಿವರ ಕೊಡುವಂತೆ ಕೇಳಿದ್ದರಂತೆ. ಮುಖ್ಯಮಂತ್ರಿಗಳು ರಾಜ್ಯಪಾಲರ ಪತ್ರಕ್ಕೆ ಎರಡು ಸಾಲಿನ ಉತ್ತರ ಕೊಟ್ಟು ‘ಅಂಥದೇನೂ ನಡದೇ ಇಲ್ಲ’ ಎಂದಿದ್ದಾರಂತೆ. ವಿರೋಧ ಪಕ್ಷದವರು ಆಳುವ ಪಕ್ಷದವರ ಅನೇಕ ಭೂ ಹಗರಣಗಳನ್ನು ಮಾಧ್ಯಮಗಳ ಮೂಲಕ ಬಯಲಿಗೆಳೆದಿರುವುದು ಕಣ್ಣಾ- ಮುಚ್ಚಾಲೆಯಾಗಿ ಉಳಿದಿಲ್ಲ. ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಅಂಥದೇನೂ ನಡದೇ ಇಲ್ಲ!

ರಾಜ್ಯಪಾಲರಿಗೆ ಅಂಥ ವಿಶೇಷ ಉತ್ತರವನ್ನು ಕೊಡಲು ಸಾಧ್ಯವೆ? ಸಾಮಾನ್ಯ ಮತದಾರ ಪ್ರಭುಗಳಿಗೆ ದಿನನಿತ್ಯ ಏನು ಹೇಳುತ್ತಾ ಬಂದಿದ್ದಾರೊ ಅದನ್ನೇ ರಾಜ್ಯಪಾಲರಿಗೂ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನ ತಾನೇ!ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ವಿಷಯ ಒಂದು ಕಡೆ ಇರಲಿ. ಸಾಮಾನ್ಯ ಪ್ರಜ್ಞೆ ಇರುವ ಜನರು ದಿಕ್ಕುತಪ್ಪಿ ಹುಚ್ಚರಂತೆ ಆಗಿದ್ದಾರೆ. ತಮಗೆ ಬಹಳ ಕಾಲದಿಂದ ಇದ್ದ ಸಾಮಾನ್ಯ ತಿಳುವಳಿಕೆ ಕೈಕೊಟ್ಟಿದೆಯೆ? ನಾವು ಇದೇ ಕರ್ನಾಟಕ, ಇದೇ ಜನರ ಮಧ್ಯೆ ಇದ್ದೇವೆಯೆ? ಅಥವಾ ಇಲ್ಲವೆ, ಕಳೆದು ಹೋಗಿದ್ದೇವೆಯೆ? ಎಂಬ ಗುಮಾನಿ ಅವರನ್ನು ಆತಂಕಕ್ಕೀಡು ಮಾಡಿದೆ. ವಿಚಾರವಂತರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಮುಖ್ಯಮಂತ್ರಿಗಳು ಪ್ರಾಮಾಣಿಕತೆ ಯಾವುದು ಮತ್ತು ಕರಪ್ಪನ್ ಯಾವುದು ಎಂಬುದರ ಮಧ್ಯದ ಗೆರೆಯನ್ನೆ ಅಳಿಸಿಹಾಕಿಬಿಟ್ಟಿದ್ದಾರೆ.ಇದೇನು ಸಾಮಾನ್ಯ ಸಾಧನೆ ಅಲ್ಲ. ಎಷ್ಟೋ ಶತಮಾನಗಳಿಂದ ಬಂದ ಎರಡು ಮೌಲ್ಯಗಳ ಅಸ್ತಿತ್ವವನ್ನೇ ಕಲಸುಮೇಲೋಗರ ಮಾಡುವುದೆಂದರೆ ಅದು ಒಬ್ಬ ಮಹಾನ್ ನಾಯಕನ ಮಹತ್ ಸಾಧನೆಯಾಗುತ್ತದೆ. ದ್ವಾಪರನಿದ್ದೆ ಎದುರಾದ ಕಲಿ ಇಂಥ ಮಾತುಗಳನ್ನು ಆಡುತ್ತಾನಂತೆ. ಕರ್ನಾಟಕದಲ್ಲಿ ಇಂಥದೊಂದು ಸಾಧನೆ ನಡೆದಿದೆ ಎಂದರೆ ಅದು ವಿಶ್ವದಾಖಲೆಯೆ ಸರಿ.ಇದನ್ನು ಮನ್ವಂತರದ ಕಥೆ ಎಂದು ಕರೆಯಬಹುದು. ಮೌಲ್ಯಗಳ ಅಸ್ತಿತ್ವವನ್ನು ಅಳ್ಳಾಡಿಸಿ, ಜನರನ್ನು ತಲ್ಲಣಗೊಳಿಸಿ, ಮುಂದಿನ ಮುಂದುವರಿಕೆಗಾಗಿ ಜನ ಚಡಪಡಿಸುವಂಥ ಸಂದರ್ಭವನ್ನು ಸೃಷ್ಟಿ ಮಾಡಿ ಕೊಡುವುದಿದೆಯಲ್ಲ ಇದು ಸಾಮಾನ್ಯ ಸಂದರ್ಭವಲ್ಲ.

ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಸಾಚಾಗಳು ಎಂದು ಇದರರ್ಥವಲ್ಲ. ಇಂಥ ಸಂದರ್ಭಗಳು ಹಿಂದೆ ಬಂದಿರಲಿಲ್ಲ ಎಂಬುದೂ ಪ್ರಶ್ನೆಯಲ್ಲ. ಇದು ಒಂದು ರೀತಿಯಲ್ಲಿ ಹಿಂದಿನ ಗೌರವಾನ್ವಿತ ಕಳ್ಳರು (ಹಾನರಬಲ್ ಥೀವ್ಸ್) ಮತ್ತು ಈಗಿನ ಹಗಲು ದರೋಡೆ ಮಧ್ಯದ ತಾತ್ವಿಕ ಚಿಂತನೆ. ಸಮಾಜದ ಎದೆಗೆ ಒದ್ದೂ, ಇಲ್ಲ ನಾನು ಆಶೀರ್ವಾದ ಮಾಡಿದೆ ಎಂಬ ಹುಂಬತನವೊ, ಖದೀಮತನವೊ;ಲಜ್ಜೆಗೇಡಿತನವೊ ಕರ್ನಾಟಕದ ಮನಸ್ಸುಗಳನ್ನು ಕಸವಾಗಿಸಿದೆ. ಸ್ಥಳೀಯ ಚುನಾವಣೆಯಲ್ಲಿ ಬಹುಮತ ಪಡೆದು ಸರಿಮಾಡುತ್ತೇನೆ ಎನ್ನುವ ಮಾತೂ, ಹಾಗೆ ಬಹುಮತ ಪಡೆದ ಮೇಲೂ ಸಂದರ್ಭ ಅಸಹ್ಯವಾಗಿಯೆ ಉಳಿಯುತ್ತದೆ ಹಿಂದಿನವರು ಹೀಗೆ ಮಾಡಿದರು ಎನ್ನುವುದು ಸಬೂಬು. ಭೂತಕಾಲಕ್ಕೆ ಉತ್ತರ ಕೊಡುವುದು ಸುಲಭವಲ್ಲ. ಈ ಹೊತ್ತಿನ ಸತ್ಯ ಏನು? ವರ್ತಮಾನವನ್ನು ನಿರ್ವಹಿಸುವುದು ಮುಖ್ಯ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT