ಶುಕ್ರವಾರ, ಫೆಬ್ರವರಿ 26, 2021
22 °C

ರಾಜ್ಯದಲ್ಲಿ ಇನ್ನೂ 145 ವಸತಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಇನ್ನೂ 145 ವಸತಿ ಶಾಲೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 145 ವಸತಿ ಶಾಲೆಗಳ ಸ್ಥಾಪನೆಗೆ ಆದೇಶ ನೀಡಲಾಗಿದ್ದು,  ಮುಂದಿನ ತಿಂಗಳು ಇನ್ನೂ 245 ಶಾಲೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.ಹೋಬಳಿಗೆ ಒಂದು ವಸತಿಶಾಲೆ ಯೋಜನೆಯಡಿ ಮೂಲಸೌಕರ್ಯ ಸಹಿತ ಶಾಲೆ ಆರಂಭಿಸುವ ಸಂಕಲ್ಪ ಸರ್ಕಾರದ್ದಾಗಿತ್ತು. 750 ಹೋಬಳಿಗಳ ಪೈಕಿ 505 ಹೋಬಳಿಗಳಲ್ಲಿ ವಸತಿ ಶಾಲೆಗಳಿವೆ. 245 ಶಾಲೆಗಳ ಮಂಜೂರಾತಿ ಬಳಿಕ ಎಲ್ಲಾ ಹೋಬಳಿಗಳಲ್ಲೂ ಶಾಲೆ ಆರಂಭಿಸಲು ಸರ್ಕಾರ ಅನುದಾನ ನೀಡಿದಂತಾಗುತ್ತದೆ ಎಂದರು. ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಮಂಜೂರಾತಿ ನೀಡಲಾದ 145 ವಸತಿ ಶಾಲೆಗಳ ಪೈಕಿ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 105, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 40 ವಸತಿ ಶಾಲೆಗಳು ಲಭ್ಯವಾಗಲಿವೆ.  ಪ್ರತಿ ಶಾಲೆಗೆ ಬೋಧಕ ಮತ್ತು ಬೋಧಕೇತರ  ಸೇರಿ ಒಟ್ಟು 20 ಹುದ್ದೆಗಳಂತೆ 2,900 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.ಇದಕ್ಕಾಗಿ ₹2,000 ಕೋಟಿ ಅನುದಾನ ಮೀಸಲಿಡಲಾಗಿದೆ. ಸರ್ಕಾರಿ ಅಥವಾ ಖಾಸಗಿ ಭೂಮಿಯಲ್ಲಿ 10 ಎಕರೆ ಜಾಗ ನೀಡಿದಲ್ಲಿ  ₹12 ಕೋಟಿಯಿಂದ ₹15 ಕೋಟಿವರೆಗೆ ಒಂದು ಶಾಲೆಗೆ ಅನುದಾನ ನೀಡಲಾಗುವುದು. ಶಾಲೆ ಆರಂಭಿಸಲು ಭೂಮಿ ಒದಗಿಸಿದವರಿಗೆ ಆದ್ಯತೆ ಮೇರೆಗೆ ಶಾಲೆ ಆರಂಭಿಸಲು ಅನುದಾನ ನೀಡಲಾಗುವುದು ಎಂದರು.505 ಹಳೆಯ ವಸತಿ ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ಕೊರತೆ ಇದೆ. ಇದನ್ನು ಪರಿಹರಿಸಲು ಆದ್ಯತೆ ಮೇರೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಆಂಜನೇಯ  ಹೇಳಿದರು.20ರಂದು ಸರ್ಕಾರಕ್ಕೆ ವರದಿ:   ಹಿಂದುಳಿದ ವರ್ಗಗಳ ಆಯೋಗ  ನಡೆಸಿದ ಸಾಮಾಜಿಕ,ಆರ್ಥಿಕ ಸಮೀಕ್ಷೆಯ ವರದಿ ಇದೇ 20ರಂದು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು  ಆಂಜನೇಯ ತಿಳಿಸಿದರು.ಮಾಧ್ಯಮದವರ ಜತೆ ಗುರುವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಣೆ ಇದೇ 20 ರಂದು ನಡೆಯಲಿದೆ.  ಅದೇ ಸಮಾರಂಭದಲ್ಲಿ ವರದಿ  ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಮೊದಲ ಬಾರಿಗೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆ ಇದಾಗಿದೆ. ಹಿಂದುಳಿದ ವರ್ಗಗಳ ಆಯೋಗ ಎಲ್ಲಾ ಆಯಾಮಗಳಿಂದ  ಪರಿಶೀಲಿಸಿ ವರದಿ ಅಂತಿಮಗೊಳಿಸಿದ್ದು, ವರದಿಯ ಮುದ್ರಣ ನಡೆಯುತ್ತಿದೆ ಎಂದು ವಿವರಿಸಿದರು.ಜಾತಿ ಗಣತಿ ನಡೆಸುವ ಅಧಿಕಾರ ರಾಜ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆಂಜನೇಯ, ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರವೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಷ್ಟೆ ಎಂದು   ಪ್ರತಿಪಾದಿಸಿದರು.ಸಮೀಕ್ಷೆ ನಡೆಸಿರುವುದು ಸಂವಿಧಾನಬದ್ಧವಾಗಿದೆ. ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದು, ರಾಜ್ಯ ನಡೆಸಿದ ಮಾದರಿಯಲ್ಲಿ ಇತರೆ ರಾಜ್ಯಗಳು ಸಮೀಕ್ಷೆ ನಡೆಸಲಿವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.