ಗುರುವಾರ , ಏಪ್ರಿಲ್ 22, 2021
31 °C

ರಾಜ್ಯದಲ್ಲಿ ಹೊಸ ಔಷಧ ನೀತಿ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಂಪನಿಗಳಿಂದ ನೇರವಾಗಿ ಔಷಧಿ ಖರೀದಿಗೆ ಅನುವು ಮಾಡಿಕೊಡುವ ಹೊಸ ಔಷಧ ನೀತಿಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.ಸೋಮವಾರ ಕಿಮ್ಸ್ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗೆ ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯವನ್ನು ಪರಿಶೀಲಿಸಿ, ರೋಗಿಗಳು ಹಾಗೂ ಅವರ ಸಂಬಂಧಿಕರ ಅಹವಾಲು ಆಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೊಸ ನೀತಿಗೆ ಸಂಬಂಧಿಸಿ ಚರ್ಚಿಸಲು ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.‘ಏಜೆಂಟರ ಮೂಲಕ ಔಷಧಿಗಳನ್ನು ಖರೀದಿ ಮಾಡುವುದರಿಂದ ವಿವಿಧ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಕಂಪನಿಗಳಿಂದ ನೇರವಾಗಿ ಔಷಧಿ ಖರೀದಿಸಲು ತೀರ್ಮಾನಿಸಲಾಗಿದೆ.ಆಯಾ ಆಸ್ಪತ್ರೆಗಳು ಸ್ವತಂತ್ರವಾಗಿ ಔಷಧಿಗಳನ್ನು ಖರೀದಿಸಲು ಹೊಸ ನೀತಿ ಅವಕಾಶ ಮಾಡಿಕೊಡಲಿದೆ. ನೀತಿ ರೂಪಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು’ ಎಂದು ಅವರು ತಿಳಿಸಿದರು.‘ಕಿಮ್ಸ್‌ಗೆ ತರಿಸಲಾಗುವ ಔಷಧಿಗಳ ಗುಣಮಟ್ಟದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಈಚೆಗೆ 4.5 ಕೋಟಿ ರೀಪಾಯಿ ಮೊತ್ತದ ಔಷಧಿ ಖರೀದಿಗೆ ಸಂಬಂಧಿಸಿ ಕರೆದ ಟೆಂಡರ್‌ನಲ್ಲಿ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ’ ಎಂದು ಅವರು ತಿಳಿಸಿದರು.‘ರಾಜ್ಯದ ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಚಿಕಿತ್ಸೆ ನೀಡುವಾಗ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಲಾಗುವುದು. ಕಾರ್ಡ್ ಮಾಡಿಸುವಾಗ ತುಂಬುವ ಅರ್ಜಿಯಲ್ಲಿ ಎಸ್‌ಸಿ, ಎಸ್‌ಟಿ ಕಲಂ ಅನ್ನು ದಾಖಲಿಸಲು ಸೂಚಿಸಲಾಗುವುದು’ ಎಂದು ಅವರು ತಿಳಿಸಿದರು.‘ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಜನಿಸುವ ಮಗುವಿನ ಜನನ ಪ್ರಮಾಣ ಪತ್ರವನ್ನು ತಕ್ಷಣ ಸಿದ್ಧಪಡಿಸಿ ನೀಡಬೇಕು. ಅದಿಲ್ಲದಿದ್ದರೆ ಅಂಚೆ ಮೂಲಕ ತಲುಪಿಸಲು ಕ್ರಮ ಕೈಗೊಳ್ಳಬೇಕು. ಪ್ರಮಾಣ ಪತ್ರಕ್ಕಾಗಿ ಇನ್ನು ಯಾರೂ, ವಿಶೇಷವಾಗಿ ಬಾಣಂತಿಯರು ಅಲೆಯುವಂತಾಗಬಾರದು’ ಎಂದು ಸಚಿವ ರಾಮದಾಸ್ ಹೇಳಿದರು.‘ಕಿಮ್ಸ್ ಬಗ್ಗೆ ಅನೇಕ ದೂರುಗಳು ಬಂದಿದ್ದು ಇದರ ಪರಿಶೀಲನೆಗೆ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಮಂಗಳವಾರವೇ ಅವರು ಇಲ್ಲಿಗೆ ಆಗಮಿಸಿ ಪರಿಶೀಲನೆ ಮಾಡಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ ಅವರು, ಹೃದ್ರೋಗಿಗಳಿಗೆ ಅನುಕೂಲವಾಗುವಂತೆ ಇಲ್ಲಿ ಜಯದೇವ ಹೃದ್ರೋಗ ಕೇಂದ್ರದ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.ಆಸ್ಪತ್ರೆಯಲ್ಲಿ ಅವ್ಯವಹಾರ ಎಸಗಿದ ಒಟ್ಟು ಆರು ಮಂದಿಯನ್ನು ಅಮಾನತು ಮಾಡಲಾಗಿದ್ದು ಅನಧಿಕೃತ ರಜೆ ಹಾಕಿದ ವೈದ್ಯರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ತಿಂಗಳೊಳಗೆ ಹೊಸ ನಿರ್ದೇಶಕರು

ಕಿಮ್ಸ್‌ಗೆ ಹೊಸ ನಿರ್ದೇಶಕರ ಆಯ್ಕೆ ಒಂದು ತಿಂಗಳೊಳಗೆ ನಡೆಯಲಿದೆ. ಪಾರದರ್ಶಕ ಆಯ್ಕೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಾಂಶುಪಾಲ ಡಾ.ವಿ.ಎಸ್. ಹಂಗರಗ, ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ದೊಡಮನಿ, ಮುಖ್ಯ ಆಡಳಿತಾಧಿಕಾರಿ ಎಸ್.ಎಸ್. ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.