ಸೋಮವಾರ, ಏಪ್ರಿಲ್ 19, 2021
32 °C

ರಾಜ್ಯದಲ್ಲೇ ಅತ್ಯಂತ ಅವ್ಯವಸ್ಥೆ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಜ್ಯದಲ್ಲಿಯೇ ಅತ್ಯಂತ ಅವ್ಯವಸ್ಥೆಯ ಆಸ್ಪತ್ರೆ ಎಂದರೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಯಾಗಿದೆ. ವೈದ್ಯರು, ಸಿಬ್ಬಂದಿ ಸೇರಿ 340 ಜನರಿದ್ದಾರೆ. ಇಂದು 36 ವೈದ್ಯರು ಗೈರು ಹಾಜರಿದ್ದರೆ, 7 ವೈದ್ಯರು 20 ದಿನಗಳಿಂದ ಅನಧಿಕೃತ ರಜೆಯಲ್ಲಿದ್ದಾರೆ. ಅಸ್ವಚ್ಛತೆ ಎಲ್ಲೆಡೆ ಇದೆ. ಸಮರ್ಪಕ ಚಿಕಿತ್ಸೆ ದೊರಕಿಸುತ್ತಿಲ್ಲ ಹೀಗೆ ಅನೇಕ ಲೋಪಗಳಿವೆ. ಸಂಬಂಧಪಟ್ಟ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ರಜೆಯಲ್ಲಿರುವವರಿಗೆ ನೋಟಿಸ್ ನೀಡಲಾಗುವುದು. ಈ ಲೋಪದ ಬಗ್ಗೆ ಅವರ ಸರ್ವಿಸ್ ಬುಕ್‌ನಲ್ಲಿ ದಾಖಲಿಸಲಾಗುವುದು. ಆಸ್ಪತ್ರೆ ಆವರಣ, ಚರಂಡಿ ಸ್ವಚ್ಛತೆ ಬಗ್ಗೆ ಬೇಜವಾಬ್ದಾರಿವಹಿಸಲಾಗಿದೆ. ಗುತ್ತಿಗೆ ಪಡೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗುತ್ತಿಗೆ ಒಪ್ಪಂದವನ್ನು ಕೂಡಲೇ ರದ್ದುಪಡಿಸಲು ಸೂಚಿಸಿರುವುದಾಗಿ ಹೇಳಿದರು.ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ನವಜಾತ ಅವಳಿ ಶಿಶುಗಳನ್ನು ಬೆಡ್ ಇಲ್ಲ ಎಂಬ ನೆಪದ ಮೇಲೆ ನೆಲದ ಮೇಲೆ ಮಲಗಿಸಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದೇ 20 ಕಾಟ್ ಮತ್ತು ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.ತುರ್ತು ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಯ ವೈದ್ಯರು ಕಳುಹಿಸಿದ ರೋಗಿಗಳಿಗೆ ತುರ್ತು ಚಿಕಿತ್ಸೆ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ. ಏಜೆಂಟ್ ಹಾವಳಿ, ಸಾರ್ವಜನಿಕರು ಅಹವಾಲು ಆಲಿಸದೇ ಇರುವುದು, ಚಿಕಿತ್ಸೆ ನೀಡದೇ ಇರುವುದು ಮುಂತಾದ ವಿಚಾರಗಳು ರೋಗಿಗಳು ಹೇಳಿಕೊಂಡಿದ್ದಾರೆ. ಈ ಎಲ್ಲ ವಿಷಯದ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಅಮಾನತ್: ರೋಗಿಗಳಿಗೆ ಅನ್ನ-ಸಾಂಬಾರ, ಬಾಳೆ ಹಣ್ಣು ಪೂರೈಕೆ ಅವ್ಯವಸ್ಥೆ ಕಂಡು ಬಂದಿದೆ. ಯಾವುದೂ ಸರಿ ಇರಲಿಲ್ಲ. ಅಡುಗೆ ಮೇಲ್ವಿಚಾರಕ ರನ್ನು ಅಮಾನತ್‌ಗೊಳಿಸಲಾಗಿದೆ ಎಂದು ತಿಳಿಸಿದರು.ಅಧೀಕ್ಷಕರೇ ಹೊಣೆ: ಆಸ್ಪತ್ರೆ ಈ ರೀತಿಯ ಅವ್ಯವಸ್ಥೆಗೆ ಆಸ್ಪತ್ರೆ ಅಧೀಕ್ಷಕರೇ ಮುಖ್ಯ ಹೊಣೆ ಗಾರರಾಗುತ್ತಾರೆ. ಅವರನ್ನೇ ಜವಾಬ್ದಾರರ ನ್ನಾಗಿಸುತ್ತಿದ್ದು, ಅವರ ಮೇಲೂ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.ಖಾಸಗಿ ಸೇವೆ ನಿರ್ಬಂಧ: ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆದಿದ್ದು, ಕೇಂದ್ರದ ಜೊತೆ ಚರ್ಚಿಸಲಾಗುತ್ತಿದೆ. ಈ ವೇತನ ಹೆಚ್ಚಳ ಮಾಡಿದ ಬಳಿಕ ಸರ್ಕಾರಿ ವೈದ್ಯರು ನಡೆಸುವ ಖಾಸಗಿ ಸೇವೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.ಈಗಿರುವ ಜಿಲ್ಲಾ ಆಸ್ಪತ್ರೆಯ ಮಿತಿ 250 ಹಾಸಿಗೆಗಳು. ಸದ್ಯ 350 ಹಾಸಿಗೆಗಳಿವೆ. ಈ ಹಿನ್ನೆಲೆಯಲ್ಲ ಒಪೆಕ್ ಆಸ್ಪತ್ರೆಯ ಕೆಳಭಾಗದಲ್ಲಿ ಖಾಲಿ ಇರುವ ಕೊಠಡಿಗಳನ್ನು ತಾತ್ಕಾಲಿಕವಾಗಿ ದೊರಕಿಸಲು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ರಿಮ್ಸ್ ಆಸ್ಪತ್ರೆಯ 4 ಅಂತಸ್ತು ಪೂರ್ಣಗೊಂಡಿದ್ದು, ಏಪ್ರಿಲ್ 15ಕ್ಕೆ ಒಪ್ಪಿಸುತ್ತಿದ್ದಾರೆ. 5 ಮತ್ತು 6ನೇ ಅಂತಸ್ತು ಕಾಮಗಾರಿ, ಲಿಫ್ಟ್ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಶೀಘ್ರ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.