ಗುರುವಾರ , ಏಪ್ರಿಲ್ 15, 2021
31 °C

ರಾಜ್ಯ ಸರ್ಕಾರದಿಂದ ಲಕ್ಷ ಅನುದಾನ: ಅನಂತ ಹೆಗಡೆ ಆಶೀಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಹೊಗರೇಖಾನ್ ಗಿರಿಯಲ್ಲಿ ಅರಣ್ಯ ಪರಿಸರ ಪರಿಸ್ಥಿತಿ ವಿಶೇಷ ಅಧ್ಯಯನ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರ ಇದಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಸಂಶೋಧನಾ ಸಂಸ್ಥೆಗಳ ಮೂಲಕ ಅಧ್ಯಯನ ನಡೆಸಲಾಗುವುದು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಲಿತ ಜೀವ ವೈವಿಧ್ಯದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸುವುದು ಉದ್ದೇಶವಿದೆ. ಹೊಗರೇಖಾನ್ ಗಿರಿ ಪಾರಂಪರಿಕ ತಾಣವಾಗಿದ್ದು, ಅರಣ್ಯ ಪರಿಸರ ಪರಿಸ್ಥಿತಿ ವಿಶೇಷ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಹಾಗೆಯೇ ನದಿಗಳ ಮೂಲ ರಕ್ಷಣೆಗೂ ಯೋಜನೆ ಹಾಕಿಕೊಂಡಿದ್ದು, ಶರವಾತಿ, ಕಾಳಿ, ಅಘನಾಶಿನಿ, ವರದಾ ನದಿಗಳ ಮೂಲವನ್ನು ರಕ್ಷಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕರಾವಳಿಯಲ್ಲಿ ಹಸಿರು ಕವಚ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆ ಯಲ್ಲಿ ಔಷಧಿ ವನವನ್ನು ಬೆಳೆಸುವ ಯೋಜನೆಯೂ ಇದೆ. 30 ಸಾವಿರ ಸಸಿಗಳನ್ನು ಸಸ್ಯ ಕೇಂದ್ರಗಳನ್ನು ಸಸ್ಯ ಕ್ಷೇತ್ರಗಳಲ್ಲಿ ಬೆಳೆಸಲಾಗಿದೆ. ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಸಿಗಳನ್ನು ನೆಡಲಾಗುವುದು ಎಂದು ಹೇಳಿದರು.2009-10ರಲ್ಲಿ ಅರಣ್ಯ ಇಲಾಖೆಗೆ 10 ಸಾವಿರ ಮಂದಿಯನ್ನು ನೇಮಕ ಮಾಡಲಾಗಿದೆ. ಈ ವರ್ಷ ಒಂದು ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅರಣ್ಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೂಲಸೌಕರ್ಯ ಕಲ್ಪಿಸಲು 20 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಕಾರ್ಯಪಡೆ ಅಸ್ತಿತ್ವಕ್ಕೆ ಬಂದ ನಾಲ್ಕು ವರ್ಷಗಳ ನೆನಪಿಗಾಗಿ ಹಸಿರು ಆರೋಗ್ಯ ಅಭಿಯಾನ ಆರಂಭಿಸಲಾಗಿದೆ.

 

ಇದಕ್ಕಾಗಿ ರಾಜ್ಯದ 15 ಸ್ಥಳಗಳಲ್ಲಿ ಔಷಧಿ ಸಸ್ಯಗಳ ಸಂರಕ್ಷಣೆ, ಸಂವರ್ಧನೆ ಮಾಡುವ ಜತೆಗೆ ಆಯುರ್ವೇದ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಗ್ಗೆ ಆಳ ಅಧ್ಯಯನ ನಡೆಸಿ, ವನೀಕರಣ ಮಾಡುವ ಉದ್ದೇಶವಿದೆ ಎಂದರು.ಪಶ್ಚಿಮಘಟ್ಟದ 10 ತಾಣಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿರುವುದು ಸ್ವಾಗತಾರ್ಹ. ಇದು ರಾಜ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದರಿಂದ ಪ್ರತಿಯೊಬ್ಬರು ಹೆಮ್ಮೆ ಪಡುವ ವಿಚಾರ. ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ತಕ್ಷಣ ಯಾವುದೇ ಅಪಾಯ ಎದುರಾಗುವುದಿಲ್ಲ. ನಮ್ಮಲ್ಲಿ ಜಾರಿಯಲ್ಲಿರುವ ವನ್ಯಜೀವಿ ಕಾಯ್ದೆಗಳೇ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಅತ್ಯಂತ ಶಸಕ್ತವಾಗಿವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಿ.ಯಾದವ್, ಕೊಪ್ಪ ಅರಣ್ಯ ಉಪಸಂರಕ್ಷಣಾಧಿಕಾರಿ ಡಾ.ಶಂಕರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದುಪುಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್, ಪಶ್ಚಿಮಘಟ್ಟ ಕಾರ್ಯಪಡೆ ಗಜೇಂದ್ರ ಗೊರಸುಕುಡಿಗೆ ಇನ್ನಿತರರು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.