ಶನಿವಾರ, ಮೇ 8, 2021
26 °C

`ರಾಜ್ಯ ಸಾರಿಗೆ ಸಂಸ್ಥೆಗೆ 1,528 ಹೊಸ ಬಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಸಾಲಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ಒಟ್ಟು 1,528 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಬೆಂಗಳೂರಿನಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿಯ 50 ಹೊಸ ಬಸ್ಸುಗಳ ಸೇವೆಗೆ ಚಾಲನೆ ನೀಡಿದ ಅವರು ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಹೊಸ ಬಸ್ಸುಗಳು 50 ಹೊಸ ಮಾರ್ಗಗಳಲ್ಲಿ ಸೇವೆ ಒದಗಿಸಲಿವೆ.4 ವೋಲ್ವೊ ಮಲ್ಟಿ ಆಕ್ಸೆಲ್ ಬಸ್ಸುಗಳು ಬೆಂಗಳೂರಿನಿಂದ ಮಂತ್ರಾಲಯ, ಹೈದರಾಬಾದ್, ಶೃಂಗೇರಿ, ಕೂನೂರು, ಪುದುಕೋಟೆಗೆ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಾರಿಗೆ ಸಂಪರ್ಕ ಕಲ್ಪಿಸಲು `ಫ್ಲೈ ಬಸ್'ಗಳನ್ನು ಎರಡು ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಇದಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.ವಿಶ್ವಬ್ಯಾಂಕ್, ನಗರಾಭಿವೃದ್ಧಿ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಈಗಾಗಲೇ ಮೈಸೂರು ನಗರದಲ್ಲಿ ಅನುಷ್ಠಾನಗೊಳಿಸಿರುವ ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲಿ ನಿಗಮದ 4,000 ಬಸ್‌ಗಳಲ್ಲಿ ವಿಟಿಎಂಎಸ್ (ಯಾವ ಬಸ್ಸು ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂಬುದನ್ನು ನಿಯಂತ್ರಣ ಕೊಠಡಿಯಿಂದಲೇ ಪತ್ತೆ ಮಾಡುವ ವ್ಯವಸ್ಥೆ) ವ್ಯವಸ್ಥೆಯನ್ನು ಮುಂದಿನ ಆರು ತಿಂಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿ ರೂ 50 ಕೋಟಿ ವೆಚ್ಚದಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೈಸೂರಿನ ವಿಜಯನಗರ, ಹಾಸನ (ಎರಡನೇ ಘಟಕ), ಹೊನ್ನಾಳಿ ಮತ್ತು ಬೇಲೂರಿನಲ್ಲಿ ಹೊಸ ಘಟಕಗಳನ್ನು ಆರಂಭಿಸಲಾಗುವುದು. ರಾಮನಗರ, ಮಾಗಡಿ, ಮುಳಬಾಗಿಲು, ಹರೇಹಳ್ಳಿ, ಹುಲಿಯೂರುದುರ್ಗ, ಜಗಳೂರಿನಲ್ಲಿ ಹೊಸ ಬಸ್ ನಿಲ್ದಾಣಗಳ ನಿರ್ಮಾಣ, ಹಾಸನದಲ್ಲಿ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಹಾಗೂ ಮೂಡಿಗೆರೆ ಬಸ್ ನಿಲ್ದಾಣವನ್ನು ನವೀಕರಣಗೊಳಿಸಲಾಗುವುದು ಎಂದರು.ಹೊನ್ನಾಳಿ, ಪಂಚನಹಳ್ಳಿ, ಬಾಗೇಪಲ್ಲಿ, ನಂಜನಗೂಡು, ಹಳೇಬೀಡು, ಸೋಮವಾರಪೇಟೆ, ಹೊಳೆನರಸೀಪುರ, ಅರಕಲಗೂಡು, ಸುಳ್ಯ ಮತ್ತು ಭರಮಸಾಗರದಲ್ಲಿರುವ ಬಸ್ ನಿಲ್ದಾಣಗಳು ಹಾಗೂ ಶಿರಾ, ಬಾಗೇಪಲ್ಲಿ, ಚಿಂತಾಮಣಿ ಮತ್ತು ಹುಣಸೂರಿನ ಬಸ್ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಪುತ್ತೂರಿನಲ್ಲಿ ವಿಭಾಗೀಯ ಕಾರ್ಯಾಗಾರ ಹಾಗೂ ಕಚೇರಿ, ಶ್ರೀನಿವಾಸಪುರ, ಚಿಕ್ಕಮಗಳೂರು ಮತ್ತು ಮಳವಳ್ಳಿಯಲ್ಲಿ ತಾಂತ್ರಿಕ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.ನಿಗಮವು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾಲೂರು, ಚಿಕ್ಕಮಗಳೂರು ಮತ್ತು ಮಳವಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಿದೆ. ಮೂರು ಕೇಂದ್ರಗಳಿಂದ ಒಟ್ಟು 3,600 ಚಾಲಕರು ಮತ್ತು 1,800 ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ನೀಡುವ ಗುರಿ ಇದೆ. ನಿಗಮದ ಚಾಲಕರು ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ನಿರುದ್ಯೋಗಿ ಯುವಕ, ಯುವತಿಯರು ಉಚಿತವಾಗಿ ತರಬೇತಿ ಪಡೆದುಕೊಳ್ಳಬಹುದು ಎಂದರು.ಬೆಂಗಳೂರಿನ ಪೀಣ್ಯದಲ್ಲಿ 6.20 ಎಕರೆ ವಿಸ್ತೀರ್ಣದಲ್ಲಿ ರೂ 32 ಕೋಟಿ ವೆಚ್ಚದಲ್ಲಿ `ಸ್ಯಾಟಲೈಟ್ ಬಸ್ ನಿಲ್ದಾಣ' ನಿರ್ಮಿಸಲಾಗುತ್ತಿದ್ದು, ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 500 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ದೂರ ಸಂಚಾರ ಮಾಡುವ ಬಸ್‌ಗಳು, ರಾತ್ರಿ ವೇಳೆ ಸಂಚಾರ ಹಾಗೂ ನಿಲ್ದಾಣಗಳಲ್ಲಿ ತಂಗುವ ಬಸ್‌ಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಬಸ್ಸುಗಳ ಸಂಖ್ಯೆ

-ಹೊಸದಾಗಿ ಸೇರ್ಪಡೆಯಾಗಲಿರುವ ಬಸ್ಸುಗಳು: 1,528

-ಗ್ರಾಮಾಂತರ ಸಾರಿಗೆ: 236

-ಕರ್ನಾಟಕ ಸಾರಿಗೆ: 1,079

-ನಗರ ಸಾರಿಗೆ: 87

-ಕರ್ನಾಟಕ ವೈಭವ: 6

-ರಾಜಹಂಸ: 58

-ವೋಲ್ವೊ ಮಲ್ಟಿ ಆಕ್ಸೆಲ್: 62

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.