ಬುಧವಾರ, ಮೇ 25, 2022
23 °C

ರಾತ್ರಿಯಿಡಿ ನೀರಿಗೆ ಕಾಯುವ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದ ಗುರಪ್ಪನಪಾಳ್ಯ ವಾರ್ಡ್‌ನ ಬಹುತೇಕ ಜನ ರಾತ್ರಿ ಹೊತ್ತು ನಿದ್ರಿಸುವುದಿಲ್ಲ. ಬದಲಿಗೆ ಕುಡಿಯುವ ನೀರಿಗಾಗಿ ಕಾಯುತ್ತ ಕೂರುತ್ತಾರೆ. ಹಲವು ತಿಂಗಳಿನಿಂದ ಇಲ್ಲಿ ನೀರಿನ ಬವಣೆ ಇದ್ದು ಕಳೆದ ಒಂದು ವಾರದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಲ್ಲದೇ ತಗ್ಗು ಪ್ರದೇಶವಾದ ವಾರ್ಡ್ ಒಳಚರಂಡಿ ಅವ್ಯವಸ್ಥೆಯಿಂದಲೂ ಬಳಲುತ್ತಿದೆ.

ಸುಮಾರು ಒಂದು ಚದರ ಕಿ.ಮೀ ವಿಸ್ತೀರ್ಣವುಳ್ಳ ಈ ಪುಟ್ಟ ವಾರ್ಡ್‌ನಲ್ಲಿ ದಟ್ಟ ಜನಸಂಖ್ಯೆ ಇದೆ. ಇಷ್ಟು ಕಿರಿದಾದ ಪ್ರದೇಶದಲ್ಲಿ 1 ಲಕ್ಷ 25 ಸಾವಿರ ಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಮದರ್ ಸಾಬ್ ಬಡವಾಣೆ, ನಾರಾಯಣಪ್ಪ ಗಾರ್ಡನ್, ಕೃಷ್ಣಪ್ಪ ಬಡವಾಣೆ. ನ್ಯೂ ಗುರಪ್ಪನಪಾಳ್ಯ, ಮಾರುತಿ ಬಡಾವಣೆ, ಕೆಂಗಲ್ ಹನುಮಂತಯ್ಯ ಬಡಾವಣೆ ಸೇರಿದಂತೆ ಇಲ್ಲಿನ ಅನೇಕ ಪ್ರದೇಶಗಳಲ್ಲಿ ಸುಮಾರು ಒಂದು ವರ್ಷದಿಂದ ನೀರು ಪೂರೈಕೆ ವ್ಯವಸ್ಥಿತವಾಗಿಲ್ಲ. ಹೀಗಾಗಿ ಇಲ್ಲಿನ ಯಾವುದೇ ಮನೆಯ ಕದ ತಟ್ಟಿದರೂ ಅಲ್ಲಿಂದ ಕೇಳಿಬರುವುದು ಒಂದೇ ಪ್ರಶ್ನೆ ‘ಇವತ್ತಾದರೂ ನೀರು ಬರುತ್ತದೆಯೇ?’ ವಿಪರ್ಯಾಸ ಎಂದರೆ ಈ ವಾರ್ಡ್ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮಂಡಳಿಯ ಕೇಂದ್ರ ಕಚೇರಿಯಿಂದ ಅನತಿ ದೂರದಲ್ಲಿದೆ.

ಇದು ಕೇವಲ ಬೇಸಿಗೆಯ ಸಮಸ್ಯೆ ಮಾತ್ರವಲ್ಲ. ಕಳೆದ ಏಳೆಂಟು ತಿಂಗಳಿನಿಂದ ಜನರ ನೀರಿನ ಬವಣೆ ಎದುರಿಸುತ್ತಿದ್ದಾರೆ. ಎರಡು ಅಥವಾ ಮೂರು ಅಂತಸ್ತಿನ ಮನೆಗಳೇ ಹೆಚ್ಚಾಗಿರುವ ವಾರ್ಡ್‌ನಲ್ಲಿ ನೀರು ನೆಲ ಅಂತಸ್ತಿನ ಮನೆಗಳಿಗೂ ಸರಾಗವಾಗಿ ತಲುಪುತ್ತಿಲ್ಲ. ತಗ್ಗು ಪ್ರದೇಶಗಳಲ್ಲಿ ಅಲ್ಪಮಟ್ಟಿನ ನೀರು ಸರಬರಾಜಾದರೂ ಎತ್ತರದ ಪ್ರದೇಶಗಳಲ್ಲಿರುವ ಜನರ ಸಂಕಷ್ಟ ಹೇಳ ತೀರದಾಗಿದೆ.

ಮಧ್ಯರಾತ್ರಿಯ ನಂತರ ಕುಡಿಯುವ ನೀರು ಪೂರೈಕೆಯಾಗುವುದರಿಂದ ಇಲ್ಲಿನ ಜನರ ದೈನಂದಿನ ಜೀವನ ಏರುಪೇರಾಗಿದೆ. ಇಷ್ಟೇ ಸಮಯಕ್ಕೆ ನೀರು ಬರುತ್ತದೆ ಎಂದು ಖಚಿತವಾಗಿ ತಿಳಿಯದೇ ಜನ ಕಂಗಾಲಾಗಿದ್ದಾರೆ. ಒಮ್ಮೆ ಮಧ್ಯರಾತ್ರಿ 12 ಗಂಟೆಗೆ ನೀರು ಬಂದರೆ ಮತ್ತೊಮ್ಮೆ ಬೆಳಗಿನ ಜಾವ ಮೂರರವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ. ಹೆಚ್ಚೆಂದರೆ ದಾರದ ರೂಪದಲ್ಲಿ ಇಲ್ಲವೇ ಹನಿಹನಿಯಾಗಿ ನೀರು ಇಣುಕುತ್ತದೆ. ನೀರಿಗಾಗಿ ಜಗಳಗಳೂ ನಡೆದ ಉದಾಹರಣೆಗಳಿವೆ ಎನ್ನುತ್ತಾರೆ ಇಲ್ಲಿನ ಜನ.

ಇತ್ತ ಕಾವೇರಿ ನೀರನ್ನೂ ಕಾವೇರಿ ನೀರು ಪೂರೈಕೆ ಮಾಡುವುದಿಲ್ಲ ಅತ್ತ ಟ್ಯಾಂಕ್‌ಗಳಿಂದಲೂ ನೀರು ಪೂರೈಕೆ ಮಾಡುವುದಿಲ್ಲ. ಇಷ್ಟಾದರೂ ಟ್ಯಾಂಕ್‌ಗಳ ನೀರು ಎಲ್ಲಿಗೆ ಸರಬರಾಜಾಗುತ್ತದೆ ಎಂಬುದು ನಿಗೂಢವಾಗಿದೆ. ಶಾಲೆಗಳಿಗೆ, ಕಚೇರಿಗೆ ತೆರಳುವ ಕುಟುಂಬ ಸದಸ್ಯರು ನೀರಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಾರ್ಡ್‌ನ ಮಹಿಳೆಯರು ಜಲ ಮಂಡಳಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುವ  ವಾಲ್‌ಮನ್‌ಗಳು ಹಣದ ಆಮಿಷಕ್ಕೆ ಒಳಗಾಗಿ ಸರಿಯಾಗಿ ನೀರು ಬಿಡುತ್ತಿಲ್ಲ ಎನ್ನುವ ಆರೋಪ ಇಲ್ಲಿನ ಬಹುತೇಕ ನಾಗರಿಕರದ್ದು. ಪ್ರತಿ ಬೀದಿಗೆ ನೀರು ಬಿಡಲು ಸುಮಾರು 50ರಿಂದ ನೂರು ರೂಪಾಯಿ ನೀಡಬೇಕಾದ ಪರಿಸ್ಥಿತಿ ಇದೆ ಎಂಬ ದೂರುಗಳು ಕೇಳಿಬಂದಿವೆ.

ಜಂಡಾಗಲ್ಲಿ ಬವಣೆ : ವಾರ್ಡ್‌ನಲ್ಲಿರುವ ಜಂಡಾಗಲ್ಲಿಯಲ್ಲಿ ನೀರಿನ ಕೊರತೆ ತೀವ್ರಗೊಂಡಿದೆ. ಇದು ಕೊಳವೆ ಮಾರ್ಗದ ಕೊನೆಯ ಸ್ಥಾನವಾಗಿರುವುದರಿಂದ ಜಲಮಂಡಲಿ ಸರಬರಾಜು ಮಾಡುವ ನೀರು ಇಲ್ಲಿಯವರೆಗೂ ತಲುಪುವುದೇ ಇಲ್ಲ. ನೀರಿನ ಒತ್ತಡ ಕಡಿಮೆ ಇರುವುದರಿಂದ ಇಲ್ಲಿಗೆ ನೀರು ಪಂಪ್ ಆಗುವುದರ ಒಳಗಾಗಿ ನೀರಿನ ಪೂರೈಕೆಯೇ ನಿಂತು ಹೋಗುತ್ತಿದೆ. ಈ ಗಲ್ಲಿಯ ಒಂದು, ಎರಡು ಹಾಗೂ ಮೂರನೇ ಮುಖ್ಯರಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಒಂದನೇ ಮುಖ್ಯರಸ್ತೆಯಲ್ಲಿರುವ ಖಾಲಿ ಸ್ಥಳದಲ್ಲಿ ಕೊಳವೆ ಬಾವಿ ಕೊರೆಸುವ ಬಿಬಿಎಂಪಿ ಯತ್ನವೂ ವಿಫಲವಾಗಿದೆ.

‘ವಾರ್ಡ್‌ನಲ್ಲಿ ಜನಸಂಖ್ಯೆ ವಿಪರೀತ ಹೆಚ್ಚಿದೆ. ಇಲ್ಲಿನ ಮತದಾರರ ಸಂಖ್ಯೆ 50 ಸಾವಿರಕ್ಕೂ ಮಿಗಿಲು. ಜನಸಂಖ್ಯೆ ಹೆಚ್ಚಿದಂತೆಲ್ಲಾ ಸಮಸ್ಯೆಗಳೂ ಹೆಚ್ಚಿವೆ. ಹಾಗಾಗಿ ನೀರು ಸರಬರಾಜು ಮತ್ತು ಒಳಚರಂಡಿ ಅವ್ಯವಸ್ಥೆ ಇಲ್ಲಿನ ನಿತ್ಯದ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿತ್ಯ ನನಗೆ ನೂರಾರು ದೂರವಾಣಿ ಕರೆಗಳು ಬರುತ್ತವೆ. ಜನರ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ವಿಶೇಷ ಒತ್ತು ನೀಡಬೇಕು’ ಎನ್ನುವುದು ಬಿಬಿಎಂಪಿ ಸದಸ್ಯ ಮಹಮದ್ ರಿಜ್ವಾನ್ ನವಾಬ್ ಅವರ ಅಭಿಪ್ರಾಯ.

ಒಳಚರಂಡಿ ಅವ್ಯವಸ್ಥೆ: ನೀರಿನ ಕೊರತೆಯಿಂದ ಬಳಲುತ್ತಿರುವ ವಾರ್ಡ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಗ್ಗು ಪ್ರದೇಶದಲ್ಲಿರುವ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಸಮಸ್ಯೆಯಾಗಿ ಕಾಡುತ್ತಿದೆ. ಜಯನಗರ ನಾಲ್ಕನೇ  ಟಿ ಬ್ಲಾಕ್, ಬೈರಸಂದ್ರ ಮುಂತಾದ ಎತ್ತರದ ಪ್ರದೇಶಗಳಿಂದ ಮಳೆ ನೀರು ಇಲ್ಲಿಗೇ ಹರಿಯುತ್ತದೆ.

ಆದರೆ ಮಳೆ ನೀರಿನ ಕಾಲುವೆಯಲ್ಲಿ ಹೂಳು ತುಂಬಿದ್ದು ತ್ಯಾಜ್ಯ ವಸ್ತುಗಳು ಸೇರಿ ಮಾಲಿನ್ಯ ಹೆಚ್ಚಿದೆ. ನಿವಾಸಿಗಳು ಕಾಲುವೆಯಲ್ಲಿ ಕಸ ಚೆಲ್ಲುತ್ತಿರುವುದರಿಂದ ಕಾಲುವೆಯಲ್ಲಿ ನೀರು ಸರಾಗವಾಗಿ ಚಲಿಸದೇ ಜನರಿಗೆ ತೊಂದರೆ ಉಂಟಾಗಿದೆ.

‘ವಾರ್ಡ್‌ನ ಬಹುತೇಕ ಭಾಗದಲ್ಲಿ ಕಾಲುವೆ ಚಾಚಿಕೊಂಡಿದ್ದು ಮಳೆಗಾಲದಲ್ಲಿ ನೀರು ಬಂದರೆ   ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೇರವಾಗಿ ಕೊಳಚೆ ನೀರು ಹಾಯುತ್ತದೆ. ಕೆಂಗಲ್ ಹನುಮಂತಯ್ಯ ಬಡಾವಣೆಯಲ್ಲಿ ಹಲವು ಕೊಳವೆ ಬಾವಿಗಳಿಗೆ ಮಲಿನಯುಕ್ತ ನೀರು ನುಗ್ಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಜಯರಾಂ.

ಏನಂತಾರೆ ಜನ?

 ವಾರ್ಡ್‌ನ ವ್ಯಾಪ್ತಿಗೆ ಒಳಪಡುವ ಹೋಲಿ ಮೇರಿಯಂ ಶಾಲೆಯಲ್ಲಿ ಒಮ್ಮೊಮ್ಮೆ ನೀರು ಬರುವುದಿಲ್ಲ. ಆಗೆಲ್ಲಾ ನೂರಾರು ರೂಪಾಯಿ ತೆತ್ತು ಕ್ಯಾನ್‌ಗಳಲ್ಲಿ ನೀರು ತಂದು ವಿದ್ಯಾರ್ಥಿಗಳಿಗೆ ಒದಗಿಸುತ್ತೇವೆ.

- ಸಾದಿಕ್ ಪಾಷಾ, ಮುಖ್ಯ ಶಿಕ್ಷಕರು, ಹೋಲಿ ಮೇರಿಯಂ ಶಾಲೆ.

ಇಡೀ ವಾರ್ಡ್‌ನಲ್ಲಿ ನೀರು ಬರದಿದ್ದರೂ ನೀರಿನ ಬಿಲ್ ಮಾತ್ರ ಪ್ರತಿ ತಿಂಗಳು ಬರುತ್ತದೆ. ಇದು ಹೇಗೆ ಸಾಧ್ಯ ಎನ್ನುವುದೇ ಅರ್ಥವಾಗುತ್ತಿಲ್ಲ. ಒಮ್ಮೊಮ್ಮೆ ನೀರಿನ ದುರುಪಯೋಗ ಆಗುತ್ತಿದೆಯೋ ಎಂಬ ಅನುಮಾನ ಕಾಡುತ್ತದೆ.

- ಸೈಯದ್ ಮುಜೀಬ್,  ಗುರಪ್ಪನಪಾಳ್ಯ ನಿವಾಸಿ

ಮೂರು ಅಥವಾ ನಾಲ್ಕು ದಿವಸಗಳಿಗೊಮ್ಮೆ ನೀರು ಬರುತ್ತದೆ. ಅರ್ಧಗಂಟೆ ನೀರು ಬಂದರೆ ನಮ್ಮ ಪುಣ್ಯ. ಕಳೆದ ಹಲವು ತಿಂಗಳಿನಿಂದ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.

- ಸರಸ್ವತಮ್ಮ, ಗೃಹಿಣಿ

ನೀರಿನ ಸಮಸ್ಯೆ ಮಾತ್ರವಲ್ಲ ಕೊಳಚೆ ನೀರು ಸರಾಗವಾಗಿ ಹರಿಯದೇ ಸಮಸ್ಯೆ ಉಂಟಾಗಿದೆ. ರಾತ್ರಿ ಹೊತ್ತು ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಳೆಗಾಲ ಬಂದಾಗ ಮನೆಗಳ ಒಳಗೇ ಕೊಳಚೆ ನೀರು ನುಗ್ಗಿ ಅಸಹ್ಯಕರ ವಾತಾವರಣ ನಿರ್ಮಾಣವಾಗುತ್ತದೆ. 

 - ಅನ್ವರ್,  ಗುರಪ್ಪನಪಾಳ್ಯ ನಿವಾಸಿ

ಹೀಗೆನ್ನುತ್ತದೆ ಜಲಮಂಡಳಿ

ತಾಂತ್ರಿಕ ದೋಷ- ದುರಸ್ತಿ ಪ್ರಗತಿ

ಗುರಪ್ಪನಪಾಳ್ಯದಲ್ಲಿ ನೀರಿನ ಸಮಸ್ಯೆ ಇರಲೇ ಇಲ್ಲ. ಕಾವೇರಿ ನಾಲ್ಕನೇ ಹಂತದ ಒಂದನೇ ಘಟ್ಟದ ಪಂಪ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಬುಧವಾರ ಮಾತ್ರ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಶುಕ್ರವಾರದ ಒಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಇಲ್ಲವೇ ಇಲ್ಲ ಎಂದು ನಮ್ಮ ಮೀಟರ್ ರೀಡಿಂಗ್‌ಗಳೇ ಹೇಳುತ್ತವೆ. ನೀರು ಬಾರದಿದ್ದರೆ ಮೀಟರ್ ಹೇಗೆ ಓಡಲು ಸಾಧ್ಯ? ನಗರದ ಪೂರ್ವ ವಿಭಾಗಕ್ಕಿಂತ ಹೆಚ್ಚಾಗಿ ಗುರಪ್ಪನ ಪಾಳ್ಯ ವಾರ್ಡ್ ಮತ್ತಿತರೆ ಪ್ರದೇಶಗಳಿರುವ ದಕ್ಷಿಣ ವಿಭಾಗದಲ್ಲಿಯೇ ನೀರಿನ ಬಳಕೆ ಹೆಚ್ಚಿದೆ ಎಂಬುದು ತಾಂತ್ರಿಕ ಅಂಶಗಳಿಂದ ತಿಳಿದು ಬಂದಿದೆ.

- ಟಿ. ವೆಂಕಟರಾಜು, ಜಲಮಂಡಳಿಯ ಪ್ರಧಾನ ಎಂಜಿನಿಯರ್.

ಕಾಲುವೆ ಕಸ ಶುಚೀಕರಣ-ಭರವಸೆ

ಜಯನಗರ, ಬಿಟಿಎಂ ಲೇಔಟ್‌ನಿಂದ ಮುಂದೆ ಚಾಚಿಕೊಂಡಿರುವ ಮಳೆ ನೀರಿನ ಕಾಲುವೆ ಗುರಪ್ಪನಪಾಳ್ಯದ ಬಳಿ ಕಿರಿದಾಗುತ್ತಾ ಹೋಗಿದೆ. ಕಳೆದ ವರ್ಷ ಕಾಲುವೆಯಿಂದ ಹೂಳು ಮೇಲೆತ್ತಲಾಗಿದೆ. ಈ ವರ್ಷವೂ ಕಾಲುವೆಯನ್ನು ಸ್ವಚ್ಛಗೊಳಿಸಲಾಗುವುದು.

- ರಘುಕುಮಾರ್, ಜಲಮಂಡಳಿಯ ಹೆಚ್ಚುವರಿ ಕಾರ್ಯನಿರ್ವಾಹಕ ಎಂಜಿನಿಯರ್.

ಮೆರೆದ ಮಾನವೀಯತೆ...

ಗುರಪ್ಪನಪಾಳ್ಯ ವಾರ್ಡ್‌ನ ಕೆಂಗಲ್ ಹನುಮಂತಯ್ಯ ಬಡಾವಣೆಯಲ್ಲಿ ಅಲ್ಲಿನ ಅಪಾರ್ಟ್‌ಮೆಂಟ್ ಒಂದರ ಮಾಲೀಕರು ತಮ್ಮ ಕೊಳವೆ ಬಾವಿಯಿಂದ ನೀರು ಒದಗಿಸಿ ಸಹಾಯಹಸ್ತ ಚಾಚಿದ್ದಾರೆ. ಈ ಸಹಾಯವನ್ನು ಇಲ್ಲಿನ ಜನ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ನೀರು ದೊರೆಯದಿದ್ದಾಗ ಅಪಾರ್ಟ್‌ಮೆಂಟ್‌ನಿಂದ ನೀರು ಪಡೆಯಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.

ಇಲ್ಲಿನ ಜಂಡಾ ಗಲ್ಲಿಯ ಮಸೀದಿಯೊಂದರ ಆಡಳಿತ ಮಂಡಳಿ ಸುಮಾರು ಒಂದು ವರ್ಷದಿಂದ ಸುತ್ತಲಿನ ಜನರಿಗೆ ಸ್ವಯಂಪ್ರೇರಿತವಾಗಿ ಕುಡಿಯುವ ನೀರು ಒದಗಿಸುತ್ತಿದೆ. ತುರ್ತು ಸಂದರ್ಭಗಳಲ್ಲಿ ಮಸೀದಿಯ ಹೊರಭಾಗದಲ್ಲಿರುವ ನಲ್ಲಿಯಿಂದ ಜನ ನೀರು ಪಡೆಯುತ್ತಾರೆ.

ಇಲ್ಲಿ ಸಂಪರ್ಕಿಸಿ

ನಿ ಮ್ಮ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಇದೆಯೇ? ಹಾಗಿದ್ದರೆ ಕೂಡಲೇ ಸಂಪರ್ಕಿಸಿ: citypv@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.