ಬುಧವಾರ, ಜನವರಿ 29, 2020
23 °C

ರಾತ್ರಿ ವೇಳೆಯೂ ನಡೆದಿದೆ ಪಾಠ!

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶ ಪಡೆಯುವ ಸಲುವಾಗಿ ಜಿಲ್ಲಾದ್ಯಂತ ಶಾಲೆಗಳಲ್ಲಿ ರಾತ್ರಿ ವೇಳೆಯೂ ಪಾಠಗಳು ನಡೆದಿವೆ. ಬೆಳಿಗ್ಗೆಯಿಂದ ಸಂಜೆವರೆಗೂ ಪಾಠ ಹೇಳುವ ಶಿಕ್ಷಕರು, ಕೇಳುವ ವಿದ್ಯಾರ್ಥಿಗಳು ಶಾಲೆಯ ಅವಧಿ ಮುಗಿದ ಬಳಿಕವೂ ಅಧ್ಯಯನಾಸಕ್ತರಾಗಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನರಹಿತವೆಂಬ ಭೇದಗಳಿಲ್ಲದೆ ಈ ತರಗತಿಗಳು ನಡೆಯುತ್ತಿವೆ ಎಂಬುದು ವಿಶೇಷ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ ರಾತ್ರಿ ಶಾಲೆಗಳು ನಡೆಯುತ್ತಿರುವ ಬಗ್ಗೆ ತಪಾಸಣೆ ನಡೆಸುವ ಸಲುವಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ತಂಡಗಳನ್ನೂ ರಚಿಸಿದೆ.ಜಿಲ್ಲೆಯ ಕೆಲವು ತಾಲ್ಲೂಕುಗಳ ಶಾಲೆಗಳಲ್ಲಿ ಕಳೆದ ಡಿಸೆಂಬರ್‌ನಿಂದಲೇ ರಾತ್ರಿ ಶಾಲೆಗಳು ಶುರುವಾಗಿವೆ. ಬಹಳಷ್ಟು ಶಾಲೆಗಳಲ್ಲಿ ಜನವರಿ ಮೊದಲ, ಎರಡನೇ ವಾರದಿಂದ ತರಗತಿಗಳು ಆರಂಭವಾಗಿವೆ. ಬಹಳಷ್ಟು ಶಾಲೆಗಳಲ್ಲಿ ಪಠ್ಯಗಳ ಪುನರಾವರ್ತನೆ ಸೇರಿದಂತೆ ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸುವ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ.ಸರ್ಕಾರಿ ಶಾಲೆಗಳಲ್ಲಿ ಪ್ರತಿ ದಿನ ಸಂಜೆ 5.30ರಿಂದ 7.30ರವರೆಗೂ ತರಗತಿಗಳು ನಡೆಯುತ್ತಿವೆ. ಕೆಲವು ಖಾಸಗಿ ಶಾಲೆಗಳಲ್ಲಿ ಸಂಜೆ 6ರಿಂದ 9ರವರೆಗೂ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ರಾತ್ರಿ ಶಾಲೆಗಳಲ್ಲಿ ದಿವಸಕ್ಕೊಂದು ವಿಷಯದಂತೆ ಆರು ವಿಶೇಷ ತರಗತಿಗಳು ನಡೆಯುತ್ತಿವೆ. ಒಂದೇ ವಿಷಯಕ್ಕೆ ಸಂಬಂಧಿಸಿ ಎರಡು-ಮೂರು ಗಂಟೆ ಕಾಲ ಬೋಧನೆ, ಚರ್ಚೆ ನಡೆಯುತ್ತಿವೆ.ಏನೇನು?: ತರಗತಿಗಳಲ್ಲಿ ಈಗಾಗಲೇ ಬೋಧನೆ ಪೂರ್ಣಗೊಂಡಿರುವ ಪಾಠಗಳ ಪುನರಾವರ್ತನೆ, ಗಣಿತ ಲೆಕ್ಕಗಳು, ವಿಜ್ಞಾನದ ಸೂತ್ರಗಳ ಅಭ್ಯಾಸ, ಗುಂಪು ಚಟುವಟಿಕೆಗಳು ನಡೆಯುತ್ತವೆ. ಒಟ್ಟಾರೆಯಾಗಿ ಆರೂ ವಿಷಯಗಳ ಹೆಚ್ಚುವರಿ ಬೋಧನೆ ನಡೆಯುತ್ತದೆ. ಕಲಿಕೆಯಲ್ಲಿ ಉತ್ತಮರು, ಸರಾಸರಿ ಹಂತದಲ್ಲಿರುವ ವಿದ್ಯಾರ್ಥಿಗಳು ಮತ್ತು ಹಿಂದುಳಿದ 4-5 ವಿದ್ಯಾರ್ಥಿಗಳನ್ನು ಸೇರಿಸಿ ಗುಂಪುಗಳುನ್ನು ರಚಿಸಲಾಗಿದೆ. ಬೋಧನೆಯ ಜೊತೆಗೆ ಗುಂಪು ಚರ್ಚೆ ಮೂಲಕ ಕಲಿಕೆಗೂ ಅವಕಾಶ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್.ಹಿಂದುಳಿದವರೇ ಮುಖ್ಯ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೇ ಈ ರಾತ್ರಿ ಶಾಲೆಗಳಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂಬುದು ವಿಶೇಷ. ಹಿಂದುಳಿದವರಲ್ಲಿ ಮೂಡಿರಬಹುದಾದ ಕೀಳರಿಮೆ, ಕಲಿಕೆಯ ಕುರಿತು ಅವರಲ್ಲಿರುವ ಭಯ,ಆತಂಕವನ್ನು  ಹೋಗಲಾಡಿಸುವುದು, ಇತರೆ ವಿದ್ಯಾರ್ಥಿಗಳಂತೆಯೇ ಕಲಿಕೆಯಲ್ಲಿ ಮುಂದೆ ಬರುವಂಥ ವಾತಾವರಣ ರೂಪಿಸುವ ಕೆಲಸವೂ ನಡೆಯುತ್ತಿದೆ. ಫಲಿತಾಂಶ ಗುಣಾತ್ಮಕವಾಗಿ ಮತ್ತು ಜಿಲ್ಲಾವಾರು ಮಟ್ಟದಲ್ಲಿ ಹೆಚ್ಚಾಗಬೇಕಾದರೆ ಎಲ್ಲ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಸಮಾನವಾಗಿ ಹೆಚ್ಚಿಸುವುದೂ ಮುಖ್ಯ ಎಂಬ ಹಿನ್ನೆಲೆಯಲ್ಲಿ ಈ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಾರೆ ಅವರು.ರಾತ್ರಿ ಶಾಲೆ ಪ್ರಯೋಜನ-ಸಮಸ್ಯೆ

ರಾತ್ರಿ ಶಾಲೆಯಿಂದ ಪ್ರಯೋಜನಗಳಿರುವಂತೆ ಸಮಸ್ಯೆಗಳೂ ಇವೆ. ಬೆಳಿಗ್ಗೆಯಿಂದ ಸಂಜೆವರೆಗೂ ಓದುವ ಮಕ್ಕಳು ಮತ್ತೆ ರಾತ್ರಿವರೆಗೂ ಶಾಲೆಯಲ್ಲೇ ಉಳಿದು ಪಾಠ ಕಲಿಯುವುದು ಅವರ ಮೇಲೆ ಒತ್ತಡ ಹೆಚ್ಚಿಸುತ್ತದೆ.ಆದರೆ ಒತ್ತಡಕ್ಕೆ ಸಿಲುಕಿಸದೆ ಮಕ್ಕಳಿಗೆ ಬೋಧಿಸುವುದು ಅಗತ್ಯ ಎನ್ನುತ್ತಾರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಗಣಿತ ಶಿಕ್ಷಕ ರಾಮಚಂದ್ರಪ್ಪ.ಸಂಜೆ. 5.20ಕ್ಕೆ ಶಾಲೆ ಅವಧಿ ಮುಗಿಯುತ್ತದೆ. ನಂತರ 5.30ಕ್ಕೆ ರಾತ್ರಿ ಶಾಲೆ ಆರಂಭವಾಗುತ್ತದೆ. ಮಕ್ಕಳಿಗೆ ಬಿಡುವು ಸಿಗುವುದಿಲ್ಲ. ಅಲ್ಲದೆ ರಾತ್ರಿ ಶಾಲೆಯಲ್ಲಿ ಪಾಠ ಮಾಡುವವರಿಗೆ ವಿಶೇಷ ಗೌರವ ಧನವೂ ಇಲ್ಲ. ವಿದ್ಯಾರ್ಥಿ ಮತ್ತು ಫಲಿತಾಂಶದ ಮೇಲಿನ ಪ್ರೀತಿ-ಕಾಳಜಿಯೇ ಇಲ್ಲಿ ಮುಖ್ಯವಾಗುತ್ತದೆ. ಪೋಷಕರ ಜವಾಬ್ದಾರಿಯನ್ನು ಶಿಕ್ಷಕರು ವಹಿಸಿಕೊಳ್ಳುತ್ತಾರೆ. ಗ್ರಾಮಾಂತರ ಶಾಲೆಗಳ ಮಕ್ಕಳಿಗೆ ಹೆಚ್ಚು ಅನುಕೂಲ ಎನ್ನುತ್ತಾರೆ ತಾಲ್ಲೂಕಿನ ಸುಗಟೂರಿನ ಸಬರಮತಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಆರ್.ಚೌಡರೆಡ್ಡಿ.ಎಲ್ಲ ಶಾಲೆಗಳಲ್ಲೂ ರಾತ್ರಿ ಶಾಲೆ ನಡೆಸುವುದೂ ಕಷ್ಟ. ಶಿಕ್ಷಕಿಯರು ಸಂಜೆ ಬಳಿಕ ಶಾಲೆಗೆ ಬರುವುದು ಕಷ್ಟ. ಕೌಟುಂಬಿಕ ವಲಯದಲ್ಲೂ ಆ ಬಗ್ಗೆ ಅಸಮಾಧಾನವೂ ಇರುತ್ತದೆ. ರಾತ್ರಿ ಶಾಲೆ ನಡೆಸುವ ಜವಾಬ್ದಾರಿ ಹೊತ್ತವರಿಗೆ ಕಷ್ಟದ ಸಂಗತಿ. ಕೆಲವು ಶಾಲೆಗಳಲ್ಲಿ ಸಹಶಿಕ್ಷಣವಿರುತ್ತದೆ. ಅಂಥ ಕಡೆ ಬಹಳ ಜೋಪಾನವಾಗಿ ನಿಭಾಯಿಸಬೇಕು. ಹದಿಹರೆಯದಲ್ಲಿರುವ ವಿದ್ಯಾರ್ಥಿಗಳನ್ನು ಸೂಕ್ಷ್ಮ ಕಣ್ಣುಗಳಿಂದ ಗಮನಿಬೇಕಾಗುತ್ತದೆ. ಬಹಳಷ್ಟು ಪೋಷಕರು ಹೆಣ್ಣುಮಕ್ಕಳನ್ನು ರಾತ್ರಿ ಶಾಲೆಗೆ ಕಳಿಸುವುದಿಲ್ಲ. ಕೆಲವು ಶಾಲೆಗಳಲ್ಲಿ  ನೀರು, ಶೌಚಲಯ, ವಿದ್ಯುತ್  ಇರುವುದಿಲ್ಲ. ಅದು ಕೂಡ ಸಮಸ್ಯೆಯಾಗುತ್ತದೆ ಎಂಬುದು ಮತ್ತೊಬ್ಬ ಶಿಕ್ಷಕರ ಅನಿಸಿಕೆ.ಖಾಸಗಿ ಶಾಲೆಗಳೂ ಮುಂದು... ಸರ್ಕಾರಿ ಶಾಲೆಗಳಿಗಿಂತಲೂ ಒಂದು ಕೈ  ಮುಂದು ಎಂಬಂತೆ ಖಾಸಗಿಶಾಲೆಗಳಲ್ಲೂ ರಾತ್ರಿ ತರಗತಿಗಳು ನಡೆಯುತ್ತಿವೆ.ಶೈಕ್ಷಣಿಕ ವರ್ಷದ ಆರಂಭದಲ್ಲೆ ಶಿಕ್ಷಕರ ಸಭೆಯ ಮೂಲಕವೇ ಸಿದ್ಧತೆ ಆರಂಭಿಸುತ್ತೇವೆ. ಹಿಂದಿನ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲೂ ದೊರಕಿರುವ ಫಲಿತಾಂಶ ವಿಶ್ಲೇಷಣೆ ನಡೆಸುತ್ತೇವೆ. ಬೋಧನಾ ವೈಖರಿಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಯತ್ನಿಸಿದ್ದೇವೆ.

 

ಕಳೆದ ನ.31ಕ್ಕೆ ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಿ ಡಿಸೆಂಬರ್‌ನಲ್ಲೆ ಪರೀಕ್ಷೆ ನಡೆಸಿದ್ದೇವೆ. ಇನ್ನು ನಾಲ್ಕು ಪರೀಕ್ಷೆಗಳನ್ನು ನಡೆಸಲಿದ್ದೇವೆ ಎನ್ನುತ್ತಾರೆ ನಗರದ ಚಿನ್ಮಯ ಶಾಲೆ ಮುಖ್ಯಶಿಕ್ಷಕ ನಾರಾಯಣಸ್ವಾಮಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸೇರಿಸಿ ಸಂಜೆ 6ರಿಂದ 9ರವರೆಗೆ ಇಬ್ಬರು ಶಿಕ್ಷಕರಿಂದ ವಿಶೇಷ ಬೋಧನೆ ನಡೆಸಲಾಗುತ್ತಿದೆ.ವಿಷಯದಲ್ಲಿ ಒಂದು ಅಥವಾ 2 ಪಾಠಗಳನ್ನು ಬೋಧನೆ ಮಾಡಿ  ವಿದ್ಯಾರ್ಥಿಗಳ ಗ್ರಹಿಕೆ ಕುರಿತು ಮಾಹಿತಿ ಪಡೆಯಲಾಗುವುದು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಲಿಂಕ್ ವಿಧಾನದಲ್ಲಿ ನೆನಪಿಟ್ಟುಕೊಳ್ಳುವ ತಂತ್ರದ ಕುರಿತೂ ವಿಶೇಷ ಕಾರ್ಯಾಗಾರ ನಡೆಸಲಾಗಿದೆ ಎಂದರು.ಉತ್ತಮ ಫಲಿತಾಂಶ.. ರಾತ್ರಿ ಶಾಲೆ ನಡೆಸಲಾರಂಭಿಸಿದ್ದರಿಂದ ಫಲಿತಾಂಶ ಉತ್ತಮಗೊಂಡಿದೆ ಎಂಬುದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ಗೋವಿಂದಪ್ಪ ಅವರ ನುಡಿ.10ನೇ ತರಗತಿಯ 218  ವಿದ್ಯಾರ್ಥಿಗಳು ಐದು ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಡಿಸೆಂಬರ್ ಕೊನೆ ವಾರದಿಂದ ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿದೆ. ಪರಿಕ್ಷೆ ಆರಂಭವಾಗುವವರೆಗೂ ನಡೆಸುತ್ತೇವೆ.  2009-10ನೇ ಸಾಲಿನಲ್ಲಿ ಶೇ. 44ರಷ್ಟಿದ್ದ ಫಲಿತಾಂಶ ಕಳೆದ ಸಾಲಿನಲ್ಲಿ  (2010-11)ಶೇ. 65ಕ್ಕೆ ಏರಿದೆ. ಪ್ರಸ್ತುತ ವರ್ಷ ಫಲಿತಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

 

ರಾತ್ರಿ ತರಗತಿಗಳ ಪ್ರಯೋಜನ ಹೆಚ್ಚು. ಬಹಳಷ್ಟು ಮಕ್ಕಳು ಸಂಜೆ ಮನೆಗೆ ಹೋದ ಬಳಿಕ ಅನ್ಯ ವಿಷಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಪಾಠ ಮರೆಯುತ್ತಾರೆ. ಬಹಳ ಮನೆಗಳಲ್ಲಿ ಓದುವ ವಾತಾವರಣ ಇರುವುದಿಲ್ಲ. ರಾತ್ರಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಅವರ ಗಮನ ಓದುವ ಕಡೆಗೇ ಹೆಚ್ಚು ಕೇಂದ್ರೀಕೃತವಾಗುತ್ತದೆ. ಶಿಸ್ತಿನಿಂದ ಓದುತ್ತಾರೆ. ಪ್ರತಿ ಶುಕ್ರವಾರ ರಸಪ್ರಶ್ನೆಯನ್ನೂ ಏರ್ಪಡಿಸಲಾಗುತ್ತಿದೆ ಎನ್ನುತ್ತಾರೆ ಅವರು.

24 ಅಂಶದ ಕಾರ್ಯಕ್ರಮ

2011ರ ಏಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ. 81.46ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ. 2012ರಲ್ಲಿ ನಡೆಯುವ ಪರೀಕ್ಷೆಯಲ್ಲಿ  ಈ ಸ್ಥಾನವನ್ನು ಉಳಿಸಿಕೊಳ್ಳುವ ಮತ್ತು ಅದಕ್ಕಿಂತಲೂ ಉತ್ತಮ ಸ್ಥಾನ ಗಳಿಸುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಿಗೂ 24 ಅಂಶದ ಕಾರ್ಯಕ್ರಮ ರೂಪಿಸಿ ನೀಡಲಾಗಿದೆ.ಅದರಲ್ಲಿ ರಾತ್ರಿ ಶಾಲೆ ನಡೆಸುವುದೂ ಒಂದು. ರಾತ್ರಿ ಶಾಲೆಯನ್ನು ನಡೆಸುವುದಕ್ಕಿಂತಲೂ ಶಿಕ್ಷಕರು ಹೆಚ್ಚಿನ ಶೈಕ್ಷಣಿಕ ಕಾಳಜಿ ಮತ್ತು ಮಹತ್ವಾಕಾಂಕ್ಷೆಯಿಂದ ನಡೆಸಬೇಕು. ಆಗ ಮಾತ್ರ ರಾತ್ರಿ ಶಾಲೆ ಯಶಸ್ವಿಯಾಗಬಲ್ಲದು ಎನ್ನುತ್ತಾರೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್.

ಪ್ರತಿಕ್ರಿಯಿಸಿ (+)