`ಸದಾಶಿವನಗರದಲ್ಲಿ ಕೊಲೆಯಾಗಲ್ವಾ ಸರ್?

ಅದ್ಯಾಕೆ ಈ ಕನ್ನಡ ಸಿನಿಮಾ ಇಂಡಸ್ಟ್ರಿಯವರು ನಮ್ಮ ಏರಿಯಾನ ಅಷ್ಟೊಂದು ಕೆಟ್ಟದಾಗಿ ತೋರಿಸ್ತಾರೆ? ನಾವೇನು ಇಲ್ಲಿರ್ಬೇಕಾ ಅಥವಾ ಬೇಡ್ವಾ? ಅವರು ದುಡ್ಡು ಮಾಡ್ಲಿಕ್ಕೆ ನಮ್ಮ ಫ್ಯೂಚರ್ ಏಕೆ ಹಾಳಾ ಮಾಡ್ತಾರೆ?

ನಿಮ್ಗತ್ತಾ ಸರ್... ನಮ್ಮ ಏರಿಯಾದ ಹುಡುಗಿಯರನ್ನು ಮದ್ವೆಯಾಗಲಿಕ್ಕೆ ಹಿಂದೆ ಮುಂದೆ ನೋಡ್ತಾರೆ. ಇಲ್ಲಿಗೆ ಮದ್ವೆ ಮಾಡಿಕೊಡ್ಲಿಕ್ಕೂ ಭಯ ಬೀಳ್ತಿದ್ದಾರೆ. ಇಲ್ಲಿನ ಮಕ್ಕಳ ಭವಿಷ್ಯ ಏನಾಗ್ ಬೇಕು ನೀವೇ ಹೇಳಿ?~

- ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರ ವೆಂಕಟೇಶ್ ಷಣ್ಮುಗಂ ಅವರ ಧ್ವನಿಯಲ್ಲಿ ನೋವಿತ್ತು, ದುಗುಡುವಿತ್ತು, ಸಿಟ್ಟಿತ್ತು. ಭವಿಷ್ಯದ ಕುರಿತು ಆತಂಕವಿತ್ತು. ದುಃಖವೂ ಬೆರೆತಿತ್ತು. ಕಣ್ಣೀರು ಸುರಿಸುವುದೊಂದೇ ಬಾಕಿ. ಅವರ ಇಷ್ಟೆಲ್ಲಾ ಆತಂಕಕ್ಕೆ ಕಾರಣ ಶ್ರೀರಾಮಪುರ.

ಒಂದು ಕಾಲದಲ್ಲಿ ಭೂಗತ ಜಗತ್ತಿನ ನೆಲೆಬೀಡು. ಬೆಂದಕಾಳೂರಿನ ಪಡ್ಡೆಗಳ ಹೊಡೆದಾಟದ ಆಡುಂಬೊಲ. ಪ್ರೌಢ ವಯಸ್ಸಿನವರೂ ಮಚ್ಚು ಹಿಡಿದು ಕೊಚ್ಚಾಡಿದ್ದ ಏರಿಯಾ. ಬೆಂಗಳೂರನ್ನೇ ನಡುಗಿಸಿದ್ದ ರೌಡಿಗಳ ದಂಧೆಯ ತಾಣ. ಭೂಗತಲೋಕಕ್ಕೂ ಈ ಪ್ರದೇಶಕ್ಕೂ ದೊಡ್ಡ ನಂಟು ಎನ್ನುವ ಮಾತುಗಳೂ ಇವೆ.

ಎರಡು ದಶಕಗಳ ಹಿಂದೆ ಈ ಏರಿಯಾದಲ್ಲಿ ಬಡಿದಾಟ, ಗ್ಯಾಂಗ್ವಾರ್ಗಳ ಸದ್ದು ಪದೇಪದೇ ಕೇಳಿಸಿತ್ತು. ವಸೂಲಿ, ಇಸ್ಪೀಟ್ ಕ್ಲಬ್, ಮಟ್ಕಾ, ವಿಡಿಯೋ ಗೇಮ್ಸ, ಮಸಾಜ್ ಪಾರ್ಲರ್ಗಳು, ವೇಶ್ಯಾವಾಟಿಕೆ ಇವುಗಳಿಗೂ ಪಾತಕಲೋಕಕ್ಕೂ ಒಂದು ನಂಟು ಇತ್ತು. ಬೆಂಗಳೂರಿನಲ್ಲಿ ಹೆಸರು ಮಾಡಿದ್ದ ಎಷ್ಟೋ ರೌಡಿಗಳು ಈ ಪ್ರದೇಶದವರು. ಇನ್ನು ಕೆಲವರು ಈ ಪ್ರದೇಶದವರು ತಾವು ಎಂದು ಹೇಳಿಕೊಂಡು ಪಾತಕಲೋಕದಲ್ಲಿ ಹೆಸರು ಮಾಡುವ ಹುನ್ನಾರ ರೂಪಿಸಿದ್ದೂ ಇದೆ.

ಕನ್ನಡದಲ್ಲಿ ರೌಡಿಸಂ ಚಿತ್ರಗಳಿಗೆ ಓಂಕಾರ ಹೇಳಿದ `ಓಂ~ನಿಂದ ಹಿಡಿದು ಕೆಲವು ದಿನಗಳ ಹಿಂದೆ ತೆರೆಕಂಡ `ಜೋಗಯ್ಯ~ವರೆಗೆ ಶ್ರೀರಾಮಪುರದ ಹೆಸರು ಸಿನಿಮಾಗಳಲ್ಲಿ ಸದ್ದು ಮಾಡಿದೆ. `ಜೋಗಿ~ ಸಿನಿಮಾದ `ಶ್ರೀರಾಂಪುರ ಗಲ್ಲಿ ಸುತ್ತು... ಮುಟ್ಟಾಕ್ ಬಂದ್ರೆ ಮಚ್ಚ ಎತ್ತು...~ ಎಂಬ ಹಾಡು, ಜೋಗಯ್ಯ ಚಿತ್ರದ `ಶ್ರೀರಾಂಪುರ ಅಡ್ಡದೊಳಗೆ ಅಂದರ್ ಬಾಹರ್ ಆಡುವಾಗ ತಗ್ಲಾಕ್ಕೊಂಡೆ....~ ಎಂಬ ಗೀತೆ ಎರಡೂ ಈ ಪ್ರದೇಶಕ್ಕೆ ಎಂಥ ಲಕ್ಷಣ ಕೊಟ್ಟಿವೆ ನೋಡಿ.

ಆದರೆ, ಶ್ರೀರಾಮಪುರ ಅರ್ಥಾತ್ ಶ್ರೀರಾಂಪುರ ಇಂದಿಗೂ ಹಾಗೇ ಇದೆಯಾ?

`ಯಾವುದೋ ಕಾಲದಲ್ಲಿ ಈ ಪ್ರದೇಶದಲ್ಲಿ ರೌಡಿಗಳು ಇದ್ದರು ಎಂಬ ಮಾತ್ರಕ್ಕೆ ಈಗಿನ ಯುವಕರನ್ನೂ ಕೆಟ್ಟದಾಗಿ ನೋಡುವುದು ಏಕೆ ಸರ್? ಹೆಚ್ಚಾಗಿ ಗಣ್ಯ ವ್ಯಕ್ತಿಗಳು ನೆಲೆಸಿರುವ ಸದಾಶಿವನಗರದಲ್ಲಿ ಕೊಲೆಯಾಗಲ್ವಾ? ಬಸವನಗುಡಿಯಲ್ಲಿ ಸರಗಳ್ಳತನ ನಡೆಯಲ್ವಾ?ವಿಜಯನಗರದಲ್ಲಿ ಬಡಿದಾಟ ನಡೆಯಲ್ವಾ? ಬರೀ ಶ್ರೀರಾಂಪುರವನ್ನು ಏಕೆ ಕೆಟ್ಟದಾಗಿ, ಹಿಂಸಾತ್ಮಾಕವಾಗಿ ಚಿತ್ರಿಸುತ್ತಾರೆ? ಯಾವ ಏರಿಯಾದಲ್ಲಿ ರೌಡಿಸಂ ಇಲ್ಲ ಹೇಳಿ...?~ ವೆಂಕಟೇಶ್ ಹೀಗೆ ಹಲವು ಪ್ರಶ್ನೆಗಳನ್ನು ಇಡುತ್ತಾ ಹೋದರು.

ನಿಜ, ಶ್ರೀರಾಮಪುರದ ಅದೆಷ್ಟೋ ಮಂದಿ ಖ್ಯಾತ ಕ್ರೀಡಾಪಟುಗಳಾಗಿದ್ದಾರೆ. ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದಾರೆ. ಕಷ್ಟಪಟ್ಟು ದುಡಿದು ಕುಟುಂಬದೊಂದಿಗೆ ಸಭ್ಯರಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಇಂದಿಗೂ ಶ್ರೀರಾಂಪುರವನ್ನು ಜನಪ್ರಿಯ ಮಾಧ್ಯಮ ಕೆಟ್ಟದೆಂಬಂತೆಯೇ ಬಿಂಬಿಸುತ್ತಿದೆ.

ಭಾರತ ತಂಡದ ಮಾಜಿ ನಾಯಕರೂ ಆಗಿರುವ ವೆಂಕಟೇಶ್ ಅವರ ಆತಂಕವೇ ಶ್ರೀರಾಮಪುರಕ್ಕೆ ಅಂಟಿಕೊಂಡಿರುವ ಹಣೆಪಟ್ಟಿ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಅವರ ಅಪ್ಪ ಷಣ್ಮುಗಂ ಕೂಡ ಖ್ಯಾತ ಫುಟ್ಬಾಲ್ ಆಟಗಾರರಾಗಿದ್ದವರು. ಸಹೋದರ ದಕ್ಷಿಣ ಮೂರ್ತಿ, ವಾಸುದೇವನ್ ಕೂಡ ಭಾರತ ತಂಡದ ಪ್ರತಿನಿಧಿಸಿದ ಆಟಗಾರರು. ದಕ್ಷಿಣ ಮೂರ್ತಿ ಈಗ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜೇಂದ್ರ ಪ್ರಸಾದ್, ಕುಟ್ಟಿಮಣಿ ರಾಜ್ಯ ತಂಡ ಪ್ರತಿನಿಧಿಸಿದವರು. ಗೋಪಿನಾಥ್ ಅವರಂಥ ಅಥ್ಲೀಟ್ ಈ ಪ್ರದೇಶದಿಂದ ಬಂದವರು. ಹಲವು ಮಂದಿ ಏಕಲವ್ಯ ಪ್ರಶಸ್ತಿ ಗೆದ್ದವರಿದ್ದಾರೆ. ಈ ಪ್ರದೇಶದ ಬಾಲಾಜಿ ಎಂಬುವವರು ಆಸ್ಟ್ರೇಲಿಯಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

`ನಮ್ಮ ತಂದೆ ಕೆಲವು ದಿನಗಳ ಹಿಂದೆ ಪ್ರೇಮ್ ನಿರ್ದೇಶನದ ಸಿನಿಮಾ ನೋಡಲು ಹೋಗಿದ್ದರು. ಅದರಲ್ಲಿ ಶ್ರೀರಾಂಪುರವನ್ನು ಕೆಟ್ಟ ಅರ್ಥಕ್ಕೆ ಬಳಸಿಕೊಂಡಿದ್ದ ಕಾರಣ ಅವರು ಅರ್ಧದಿಂದಲೇ ವಾಪಸ್ ಬಂದರು. ಏಕೆ ಈ ರೀತಿ ನಕಾರಾತ್ಮಕವಾಗಿ ಚಿತ್ರಿಸುತ್ತಾರೆ. ಕೆಟ್ಟ ವಿಷಯಗಳಿಗೆ ನಮ್ಮ ಏರಿಯಾದ ಹೆಸರು ಬಳಸಿಕೊಳ್ಳುತ್ತಾರೆ. ಈ ಹಿಂದಿನ ಸಿನಿಮಾಗಳಲ್ಲೂ ಅವರು ಈ ರೀತಿ ಮಾಡಿದ್ದಾರೆ~ ಎನ್ನುತ್ತಾರೆ ವೆಂಕಟೇಶ್.

`ಆದರೆ ಒಳ್ಳೆಯ ಉದ್ದೇಶಕ್ಕೆ ಯಾವತ್ತೂ ಈ ಹೆಸರನ್ನು ಬಳಸಿಕೊಂಡಿಲ್ಲ. ಶ್ರೀರಾಂಪುರದಲ್ಲಿ ಮೂರು ಮಂದಿ ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರರಿದ್ದಾರೆ ಎಂದು ಯಾರೂ ಹೇಳಿಲ್ಲ. ನಾನು ಮೂರು ವರ್ಷ ಭಾರತ ತಂಡದ ನಾಯಕನಾಗಿದ್ದೆ. ಆ ಮಾತನ್ನು ಯಾರೂ ಹೇಳುವುದಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

`ಹೀಗಾದರೆ ಶ್ರೀರಾಂಪುರದ ಹೆಣ್ಣು ಮಕ್ಕಳ ಗತಿ ಏನು ಹೇಳಿ? ನಮ್ಮ ಮಕ್ಕಳು ಸಮಾಜದಲ್ಲಿ ತಲೆ ಎತ್ತಿ ತಿರುಗಲು ಸಾಧ್ಯವೇ? ನಾನು ಖಂಡಿತ ಕನ್ನಡ ಸಿನಿಮಾ ಇಂಡಸ್ಟ್ರಿಯ ವಿರೋಧಿ ಅಲ್ಲ. ಆದರೆ ಹಣ ಮಾಡಲು ನಮ್ಮ ಭವಿಷ್ಯವನ್ನು ಹಾಳು ಮಾಡಬೇಡಿ ಅಷ್ಟೆ. ಒಳ್ಳೆಯದಕ್ಕೆ ನಮ್ಮ ಏರಿಯಾ ಹೆಸರನ್ನು ಬಳಸಿಕೊಂಡರೆ ಅಭ್ಯಂತರವಿಲ್ಲ. ಏಕೆಂದರೆ ಸಿನಿಮಾದಲ್ಲಿ ಕಂಡದ್ದನ್ನೇ ನಿಜ ಎಂದು ತಿಳಿಯುವ ಜಾಯಮಾನ ಈಗಿನ ಯುವಕರದ್ದು~ ಎಂಬುದು ವೆಂಕಟೇಶ್ ಆತಂಕ.

ರಾಮನ ಹೆಸರಿದ್ದರೂ ಈ ಬಡಾವಣೆಗೆ ರೌಡಿಗಳ ಊರೆಂಬ ಪಟ್ಟಿ ಅಂಟಿರುವುದರ ಪರಿಣಾಮ ಇನ್ನೂ ದೊಡ್ಡದು. ಇಲ್ಲಿ ಬಾಡಿಗೆ ಮನೆಗೆ ಬರಲು ಕೂಡ ಅನೇಕರು ಹಿಂಜರಿಯುತ್ತಾರೆ. ಇಲ್ಲವೇ ಚೌಕಾಸಿ ಬಾಡಿಗೆ ಕೇಳಿಕೊಂಡು ಬರುತ್ತಾರೆ. ಮಧ್ಯಮವರ್ಗದವರ ಸ್ವರ್ಗ ಎಂದೇ ಪರಿಗಣಿತವಾಗಿರುವ ಮಲ್ಲೇಶ್ವರಂಗೆ ಹೊಂದಿಕೊಂಡೇ ಇದ್ದರೂ ಶ್ರೀರಾಮಪುರದ ಸ್ಥಾನ-ಮಾನ ಈ ಸ್ಥಿತಿಯಲ್ಲಿದೆ. ದಶಕಗಳಿಂದ ಮರ್ಯಾದೆಯಿಂದ ಬದುಕುತ್ತಿರುವ ಅನೇಕರಿಗೆ ಸಿನಿಮಾಗಳು ತಮ್ಮ ವಾಸದ ಜಾಗವನ್ನು ತೋರಿಸುತ್ತಿರುವ ರೀತಿಗೆ ಸಿಟ್ಟಿದೆ.

ಅಂದಹಾಗೆ, ವೆಂಕಟೇಶ್ ಶ್ರೀರಾಮಪುರದಲ್ಲಿ `ವೆಂಕಟೇಶ್ ಫುಟ್ಬಾಲ್ ಅಕಾಡೆಮಿ~ ನಿರ್ಮಿಸಿ ಯುವಕರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಅವರ ನಿವಾಸಕ್ಕೆ ಈಗಾಗಲೇ ಬೈಚುಂಗ್ ಭುಟಿಯಾ, ಐ.ಎಂ.ವಿಜಯನ್ ಬಂದು ಹೋಗಿದ್ದಾರೆ.
ಇನ್ನಾದರೂ ಜನ ಶ್ರೀರಾಂಪುರ ಬಗ್ಗೆ ಒಂದೆರಡು ಒಳ್ಳೆಯ ಮಾತನಾಡುತ್ತಾರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.