ರಾಯಚೂರು ಕೋಟೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತು. ಕಲ್ಯಾಣದ ಚಾಲುಕ್ಯರು ಅದನ್ನು ಜೀರ್ಣೋದ್ಧಾರ ಮಾಡಿದರು. ಬಳಿಕ ವಾರಂಗಲ್ಲಿನ ಕಾಕತೀಯರು ಕ್ರಿ.ಶ. 1294ರಲ್ಲಿ ಕೋಟೆಯನ್ನು ಇನ್ನಷ್ಟು ಬಲಪಡಿಸಿದರು. ಕಾಕತೀಯ ಶಾಸನವೊಂದರ ಪ್ರಕಾರ ರಾಣಿ ರುದ್ರಮ್ಮ ದೇವಿಯ ಸಾಮಂತ ಗೋರೆಗನ್ನಯ್ಯರೆಡ್ಡಿಯ ಸೇನಾಪತಿ ವಿಠಲನಾಥರು ಈ ಪ್ರದೇಶ ಆಡಳಿತ ಉಸ್ತುವಾರಿ ನಿರ್ವಹಿಸುವಾಗ ಒಳ ಕೋಟೆ ನಿರ್ಮಿಸಿದರೆಂದೂ, ವಿಜಯನಗರದ ಕೃಷ್ಣದೇವರಾಯರು ತಮ್ಮ ವಿಜಯದ ಸಂಕೇತವಾಗಿ ಉತ್ತರ ದ್ವಾರ ನಿರ್ಮಿಸಿದರೆಂದೂ ಹೇಳಲಾಗಿದೆ.
ಮುದಗಲ್ ಕೋಟೆಯನ್ನು ಶಾಲಿವಾಹನ ಶಕೆ 1053ರಲ್ಲಿ ಮುದ್ದಪ್ಪರೆಡ್ಡಿ ಎಂಬ ಜಮೀನ್ದಾರರು ಕಟ್ಟಿಸಿದ್ದರೆಂದು ನಿಜಾಮ ಶಾಹಿ ಗೆಜೆಟ್‌ನಲ್ಲಿ ಉಲ್ಲೇಖವಾಗಿದೆ. ಬಹುಮನಿ ಸುಲ್ತಾನರು- ವಿಜಯನಗರ ಅರಸರು, ಬಿಜಾಪುರ ಆದಿಲ್ ಶಾಹಿಗಳು ಈ ಕೋಟೆಯ ಮೇಲೆ ತಮ್ಮ ಆಧಿಪತ್ಯ ಸ್ಥಾಪಿಸಲು ಯುದ್ಧಕ್ಕೆ ಮುಂದಾದರು. ಹೀಗಾಗಿ ಮುದಗಲ್ ಕೋಟೆ ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. 1565ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದ ನಂತರ ಈ ಕೋಟೆ ಬಿಜಾಪುರದ ಆದಿಲ್‌ಶಾಹಿಯ ವಶವಾಯಿತು. ಅಂದಿನ ಮುದಗಲ್ ಈಗ ಲಿಂಗಸುಗೂರು ತಾಲ್ಲೂಕಿನ ಸಣ್ಣ ಪಟ್ಟಣ.
ಈಗ ಲಿಂಗಸುಗೂರು ತಾಲ್ಲೂಕಿನಲ್ಲಿರುವ ‘ಜಲದುರ್ಗ’ದ ಐತಿಹಾಸಿಕ ಕೋಟೆಯನ್ನು ವಿಜಯನಗರ ಅರಸರು, ಬಿಜಾಪುರ ಆದಿಲ್‌ಶಾಹಿ, ಬಹುಮನಿ ಸುಲ್ತಾನರು ಆಳಿದ್ದರು. ಗುಡ್ಡದ ಮೇಲಿರುವ ಕೋಟೆಯಲ್ಲಿ ಕಾಲಕಾಲಕ್ಕೆ ಆಳ್ವಿಕೆ ನಡೆಸಿದ ರಾಜರು ಅದನ್ನು ವಿಭಿನ್ನವಾಗಿ ಬಳಸಿಕೊಂಡರು. ಕೋಟೆಯಲ್ಲಿ ಖಜಾನೆ, ಸೈನಿಕರ ನೆಲೆ ಇತ್ತು. ಗಲ್ಲು ಶಿಕ್ಷೆಗೆ ಗುರಿಯಾದವರನ್ನು ಕೋಟೆಯ ಮೇಲಿಂದ ಕೃಷ್ಣಾ ನದಿಗೆ ನೂಕಿ ಕೊಲ್ಲುತ್ತಿದ್ದರು ಎಂಬ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಲಿಂಗಸುಗೂರು ತಾಲ್ಲೂಕಿನ ಮಸ್ಕಿ ಬೆಟ್ಟದ ಮೇಲೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪತ್ತೆಯಾದ ಮೂರು ಮುಖಗಳ ಹಂಸ ಪಕ್ಷಿಯ ಚಿತ್ರವನ್ನು ದೆಹಲಿಯ ಎನ್‌ಸಿಇಆರ್‌ಟಿ ಸಂಸ್ಥೆಯು ತನ್ನ ಲಾಂಛನವನ್ನಾಗಿ ಬಳಸಿಕೊಂಡಿದೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಸಂಸ್ಥೆ ತನ್ನ ಮೂರು ಉದ್ದೇಶಗಳಾದ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಗಳ ಆಶಯವನ್ನು ಈ ಚಿತ್ರ ಬಿಂಬಿಸುತ್ತದೆ ಎಂದು ಹೇಳಿದೆ.
ದೇವದುರ್ಗ ತಾಲ್ಲೂಕಿನ ಗಬ್ಬೂರು ಸಾಂಸ್ಕೃತಿಕ ಕೇಂದ್ರ. ದೇವಾಲಯಗಳ ಊರು ಎಂದೂ ಪ್ರಸಿದ್ಧಿ ಪಡೆದಿದೆ. 30ಕ್ಕೂ ಹೆಚ್ಚು ಐತಿಹಾಸಿಕ ದೇವಾಲಯಗಳು ಇಲ್ಲಿವೆ. ಈ ಗ್ರಾಮಕ್ಕೆ ಬಬ್ರುವಾಹನನ ಕಾಲದಲ್ಲಿ ಮಣಿಪುರ ಎಂಬ ಹೆಸರಿತ್ತು. ಇಲ್ಲಿನ ಸ್ತೂಪಕ್ಕೆ ಬಬ್ರುವಾಹನ ಅಶ್ವಮೇಧದ ಕುದುರೆ ಕಟ್ಟಿದ್ದನೆಂಬ ನಂಬಿಕೆ ಇದೆ.
ರಾಯಚೂರಿನಿಂದ 10 ಕಿ.ಮೀ. ದೂರದಲ್ಲಿರುವ ಮಲಿಯಾಬಾದ್ ಕೋಟೆ ರಾಜ್ಯದ ಮಹತ್ವದ ಕೋಟೆಗಳಲ್ಲಿ ಒಂದು. ಇದು ಎರಡು ಸುತ್ತಿನ ಕೋಟೆ. 13ನೇ ಶತಮಾನದಲ್ಲಿ (ಕಾಕತೀಯರ ಕಾಲದಲ್ಲಿ) ಕೋಟೆಯ ಒಳ ಸುತ್ತು ನಿರ್ಮಾಣವಾಯಿತು. ಹೊರ ಸುತ್ತಿನ ಕೋಟೆಯನ್ನು 15ನೇ ಶತಮಾನದಲ್ಲಿ
ನಿರ್ಮಿಸಲಾಯಿತು. ಬೃಹತ್ ಗಾತ್ರದ ಕಲ್ಲಿನ ಕೋಟೆ ಕೊತ್ತಲಗಳು ಮತ್ತು ಕೋಟೆ ಆವರಣದಲ್ಲಿ ಇರುವ ಕಲ್ಲಾನೆಗಳು ಕೋಟೆ ನಿರ್ಮಾಣದ ವಾಸ್ತು ಶೈಲಿಯ ಪ್ರತೀಕವಾಗಿವೆ.
ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯ ವಿಜಯದಾಸರ ‘ಕಟ್ಟೆ’ ದಾಸ ಸಾಹಿತ್ಯ ಪ್ರಿಯರ ಆರಾಧ್ಯ ಕೇಂದ್ರ. ಗಬ್ಬೂರಿನ ಬೂದಿ ಬಸವೇಶ್ವರ ಸಂಸ್ಥಾನಮಠ,10ನೇ ಶತಮಾನದ ಲಿಂಗಸುಗೂರು ತಾಲ್ಲೂಕಿನ ನವಲಿ ಗ್ರಾಮದ ಜಡೆ ಶಂಕರಲಿಂಗ ದೇವಾಲಯ, ಗುರಗುಂಟದ ಅಮರೇಶ್ವರ ದೇವಸ್ಥಾನ, ಅಂಕಲಿಮಠ, ಛತ್ತರ ಆಂಜನೇಯ ದೇವಸ್ಥಾನ, ಮುದಗಲ್‌ನ ಹಜರತ್ ಹುಸೇನಿ ಆಲಂ ದರ್ಗಾ ಮತ್ತು ಹಳೆಬೀಡು ಶೈಲಿಯ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನ, ಮಾನ್ವಿ ತಾಲ್ಲೂಕಿನ ಕಲ್ಲೂರ ಲಕ್ಷ್ಮಿ ದೇವಸ್ಥಾನ, ನೀರಮಾನ್ವಿ ಯಲ್ಲಮ್ಮ ದೇವಸ್ಥಾನ, ಕವಿತಾಳದಲ್ಲಿರುವ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ತ್ರಯಂಬಕೇಶ್ವರ ದೇವಸ್ಥಾನ, ಸಿಂಧನೂರು ತಾಲ್ಲೂಕಿನ ಹಸ್ಮಕಲ್ ದರ್ಗಾ, ಮುಕ್ಕುಂದಿ ಮುರಹರಿ ದೇವಸ್ಥಾನ, ಚಿದಾನಂದ ಅವಧೂತರ ಸಿದ್ಧಿ ಸ್ಥಳವಾದ ಅಂಬಾಮಠ. ಬಳಗಾನೂರಿನ ಪುರಾತನ ಆಂಜನೇಯ ದೇವಸ್ಥಾನ, ಒಳ ಬಳ್ಳಾರಿ ಚನ್ನಬಸವೇಶ್ವರ ದೇವಸ್ಥಾನ, ದೇವಸುಗೂರಿನ ಸೂಗೂರೇಶ್ವರ ದೇವಸ್ಥಾನ, ಗಾಣದಾಳ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ಕುರವಗಡ್ಡೆಯ ದತ್ತಾತ್ರೇಯ ದೇವಸ್ಥಾನ, ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನ, ಕಲ್ಮಲಾ ಕರಿಯಪ್ಪ ತಾತಾ ದೇವಸ್ಥಾನ, ಯರಗೇರಿ ದರ್ಗಾ, ಬಿಚ್ಚಾಲಿ ಸಂಸ್ಥಾನ ಮಠ, ರಾಯಚೂರಿನ ಕಿಲ್ಲೆ ಬೃಹನ್ಮಠ, ಸೋಮವಾರಪೇಟೆ ಮಠ. ದೇವದುರ್ಗ ತಾಲ್ಲೂಕಿನ ಮುಂಡರಗಿ ಮಠ, ಜಾಲಹಳ್ಳಿಯ ರಂಗನಾಥ ದೇವಸ್ಥಾನಗಳು ಜಿಲ್ಲೆಯ ಪ್ರಮುಖ ದೇವಸ್ಥಾನಗಳು ಹಾಗೂ ಧಾರ್ಮಿಕ ಇತಿಹಾಸದ ಪ್ರತೀಕಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.