ಭಾನುವಾರ, ಮೇ 9, 2021
26 °C

ರಾಷ್ಟ್ರಪತಿ ಚುನಾವಣೆ: ಅವಿರೋಧ ಆಯ್ಕೆ ಸಾಧ್ಯತೆ ಕ್ಲಿಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಯುಪಿಎ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡದಿದ್ದರೆ ದೇಶದ ಅತ್ಯುನ್ನತ ಸ್ಥಾನಕ್ಕೆ ಅವಿರೋಧ ಆಯ್ಕೆ ಕಷ್ಟವಾಗಿ, ಚುನಾವಣೆ ನಡೆಯುವ ಸಾಧ್ಯತೆ ಇದೆ.

ಪ್ರಾದೇಶಿಕ ಪಕ್ಷಗಳು ಸಮಾನ ಅಂಶ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಒಗ್ಗೂಡುತ್ತಿರುವುದರಿಂದ ಒಮ್ಮತ ಅಭ್ಯರ್ಥಿ ಆಯ್ಕೆ ಆಗದಿದ್ದರೆ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಎದುರಾಗುವ ಸಾಧ್ಯತೆ ಅಧಿಕವಾಗಿದೆ.

ಜುಲೈನಲ್ಲಿ ನಡೆಯಲಿರುವ ಚುನಾವಣೆಗೆ ಮತದಾನದ ಹಕ್ಕುಳ್ಳ ಮತದಾರರ ಮಂಡಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಅವುಗಳ ಮಿತ್ರ ಪಕ್ಷಗಳಿಗೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸದ ಧ್ವನಿಯಲ್ಲಿ ಹೇಳುವಷ್ಟು ಬಹುಮತ ಇಲ್ಲ. ಇದಕ್ಕಾಗಿ ಈ ಪಕ್ಷಗಳು ತಂತಮ್ಮ ಮೈತ್ರಿಕೂಟದ ಹೊರಗೂ ವಿಶ್ವಾಸ ಗಳಿಸುವುದು ಅತ್ಯಗತ್ಯವಾಗಿದೆ.

ರಾಷ್ಟ್ರಪತಿ ಚುನಾವಣೆ ಮತದಾರರ ಮಂಡಳಿಯಲ್ಲಿ ಕಾಂಗ್ರೆಸ್ ಶೇ 31ರಷ್ಟು ಮತದಾರರನ್ನು ಹೊಂದಿದ್ದರೆ, ಬಿಜೆಪಿಯ ಶೇ 24ರಷ್ಟು ಸದಸ್ಯರಿದ್ದಾರೆ.  ಯುಪಿಎ ಶೇ 40ಕ್ಕೂ ತುಸು ಹೆಚ್ಚು ಮತದಾರರನ್ನು ಹೊಂದಿದ್ದರೆ, ಎನ್‌ಡಿಎ ಶೇ 30ಕ್ಕೂ ಕಡಿಮೆ ಸಂಖ್ಯೆಯ ಮತದಾರರು ಇದ್ದಾರೆ.

ಕಳೆದ ಚುನಾವಣೆಯ ಸಮಯದಲ್ಲಿ ಯುಪಿಎ ಶೇ 51ರಷ್ಟು ಸದಸ್ಯರು ಮತದಾರರ ಮಂಡಳಿಯಲ್ಲಿದ್ದರು.

ಈ ಮಧ್ಯೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ (ಎಸ್‌ಪಿ), ಎಐಎಡಿಎಂಕೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಬಿಜು ಜತನಾ ದಳ (ಬಿಜೆಡಿ) ಪಕ್ಷಗಳ ನಡೆ ರಾಷ್ಟ್ರಪತಿ ಚುನಾವಣೆಯಲ್ಲಿ ಮಹತ್ವದ್ದಾಗಿದೆ. ಅದರಲ್ಲೂ  ಟಿಎಂಸಿ, ಎಸ್‌ಪಿ ಮತ್ತು ಬಿಎಸ್‌ಪಿಗಳು ತಮ್ಮದೇ ಆದ ರಾಜಕೀಯ ಆಟಗಳನ್ನು ಆಡುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಈ ಪಕ್ಷಗಳು ಈ ವಿಚಾರದಲ್ಲಿ ನಿರ್ಧಾರ ಪ್ರಕಟಿಸಲು ಆತುರ ತೋರಿಲ್ಲ.

ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರನ್ನು ಬೆಂಬಲ ನೀಡುವಂತೆ ಕಾಂಗ್ರೆಸ್ ಕೋರಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಹಾಗೆಯೇ ಬಿಜೆಪಿ ಕೂಡ ಜಯಲಲಿತಾ ಅವರ ಬೆಂಬಲವನ್ನು ನಿರೀಕ್ಷಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಈ ವಾರದಲ್ಲಿ ಜಯಲಲಿತಾ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ. ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಏನಾದರೂ ಬಿಜೆಪಿ ಬೆಂಬಲ ಅಪೇಕ್ಷಿಸಿದರೆ, ಎನ್‌ಡಿಎಗೆ ಉಪರಾಷ್ಟ್ರಪತಿ ಸ್ಥಾನವನ್ನು ಬಿಟ್ಟುಕೊಡುವ ಷರತ್ತನ್ನು ಬಿಜೆಪಿ ಮುಂದಿಡಬಹುದು. ಇದಕ್ಕೆ ಕಾಂಗ್ರೆಸ್ ಒಪ್ಪಿದರೆ, ಆಗ ಎನ್‌ಡಿಎ ಆಯ್ಕೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಆಗುವ ಸಾಧ್ಯತೆ ಇದೆ.

ಆದರೆ, ಯುಪಿಎ ಉಪರಾಷ್ಟ್ರಪತಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳಿಗೆ ಬಿಟ್ಟುಕೊಡಲು ಸಿದ್ಧಿವಿಲ್ಲ ಎಂದು ಹೆಸರು ಬಹಿರಂಗ ಪಡಿಸಬಾರದು ಎಂಬ ಕರಾರಿನ ಮೇಲೆ ಕಾಂಗ್ರೆಸ್‌ನ ಮುಖ್ಯಮಂತ್ರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

`ಉಪರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷರೂ ಆಗಿರುತ್ತಾರೆ. ರಾಜ್ಯಸಭೆಯಲ್ಲಿ ಯುಪಿಎಗೆ ಬಹುಮತ ಇಲ್ಲ. ಹೀಗಿರುವಾಗ ಪ್ರತಿಪಕ್ಷಗಳಿಗೆ ಆ ಸ್ಥಾನವನ್ನು ಹೇಗೆತಾನೆ ಬಿಟ್ಟುಕೊಡಲು ಸಾಧ್ಯ~ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್ ಯುಪಿಎ ಒಳಗೆ ಮತ್ತು ಮೈತ್ರಿಕೂಟದ ಆಚೆಗೂ ವಿವಿಧ ಪಕ್ಷಗಳ ವಿಶ್ವಾಸ ಗಳಿಸಿ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಲಿದೆ ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ನಾಲ್ಕು ತಿಂಗಳಿಗೂ ಕಡಿಮೆ ಅವಧಿ ಇದ್ದರೂ ಸಂಭಾವ್ಯ ಅಭ್ಯರ್ಥಿಗಳ ಹೆಸರೂ ಕೇಳಿಬರುತ್ತಿಲ್ಲ. ಈ ಮೊದಲು ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಎಂಬ ಊಹಾಪೋಹ ಇತ್ತು. ಆದರೆ, ಉತ್ತರಪ್ರದೇಶದ ಚುನಾವಣೆ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂತಹ ಊಹಾಪೋಹಕ್ಕೆ ತೆರೆ ಎಳೆದರು.

ನಂತರದಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಹೆಸರು ಕೇಳಿಬಂತಾದರೂ ಕಾಂಗ್ರೆಸ್ ಮುಖ್ಯಸ್ಥರು ಈ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ದಾರೆಂಬುದು ಗೊತ್ತಿಲ್ಲ. ಏಕೆಂದರೆ ಸಮ್ಮಿಶ್ರ ಸರ್ಕಾರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಬಿಕ್ಕಟ್ಟು ಉದ್ಭವಿಸುತ್ತಲೇ ಇದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಹಿರಿಯ ಮುಖಂಡ ಪ್ರಣವ್ ಮುಖರ್ಜಿ ಅವರಿಗೆ ಇದೆ. ಇಂತಹ ಸನ್ನಿವೇಶದಲ್ಲಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.