ಪ್ರತಿಭಾ ಪಾಟೀಲ್ ಉತ್ತರಾಧಿಕಾರಿಗಾಗಿ ಹುಡುಕಾಟ ಆರಂಭವಾಗಿದೆ. ಅಬ್ದುಲ್ ಕಲಾಂ, ಹಮೀದ್ ಅನ್ಸಾರಿ, ಮೀರಾ ಕುಮಾರ್, ಪಿ.ಎ. ಸಂಗ್ಮಾ, ಖುರೇಶಿ ಒಳಗೊಂಡಂತೆ ಹತ್ತಾರು ಹೆಸರು ರಾಜಕೀಯ ಪಕ್ಷಗಳ ಮುಂದೆ ಗಿರಕಿ ಹೊಡೆಯುತ್ತಿವೆ. `ರಾಷ್ಟ್ರಪತಿ ರೇಸ್~ನಲ್ಲಿ ಪ್ರಣವ್ ಮುಖರ್ಜಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಕಾಂಗ್ರೆಸ್ಗೂ ಅವರನ್ನು ಕಣಕ್ಕಿಳಿಸುವ ಉತ್ಸಾಹವಿದ್ದಂತಿದೆ. ಆದರೆ, ಮಿತ್ರಪಕ್ಷಗಳ `ಸಾಥ್~ ಬೇಕು. ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿ ಉಳಿದವರನ್ನು ಒಪ್ಪಿಸುವುದು ಆಡಳಿತ ಪಕ್ಷಕ್ಕೆ ಕಷ್ಟವೇನಲ್ಲ.

ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗೆ ಹಿಂದೆಯೂ ಪ್ರಣವ್ ಹೆಸರು ಪ್ರಸ್ತಾಪವಾಗಿತ್ತು. ಕೊನೆ ಗಳಿಗೆಯಲ್ಲಿ ಅದೃಷ್ಟ ಕೈಕೊಟ್ಟಿತು. 2007ರ ಚುನಾವಣೆಯಲ್ಲೂ ಅವರು ರಾಷ್ಟ್ರಪತಿ ಸ್ಥಾನದ ಪ್ರಬಲ ಆಕಾಂಕ್ಷಿ. ಆದರೆ, ಕಾಂಗ್ರೆಸ್ ಪಕ್ಷ ಅವರನ್ನು ಬಿಟ್ಟುಕೊಡುವ ಮನಸ್ಸು ಮಾಡಲಿಲ್ಲ. `ಮುಖರ್ಜಿ ಅವರಿಲ್ಲದೆ ಸರ್ಕಾರ ನಡೆಸುವುದು ಅಸಾಧ್ಯ~ ಎಂದು ಸೋನಿಯಾ ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಕಾರಣಕ್ಕಾಗಿ ಸರ್ಕಾರದಲ್ಲೇ ಮುಂದುವರಿಸಲಾಗಿದೆ.

ಪ್ರಣವ್ ಯುಪಿಎ ಸರ್ಕಾರಕ್ಕೆ ಅನಿವಾರ್ಯವಾಗಿದ್ದಾರೆ. ಅವರಿಲ್ಲದ ಸರ್ಕಾರ ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಸಂಸತ್ತಿನ ಒಳಗಿರಬಹುದು ಇಲ್ಲವೆ ಹೊರಗಿರಬಹುದು ಅವರಿರಲೇಬೇಕು. `ಸಂಕಟ ಬಂದಾಗ ವೆಂಕಟರಮಣ~ ಎಂಬಂತೆ ಸರ್ಕಾರ ಸಂಕಷ್ಟಕ್ಕೆ ಸಿಕ್ಕಾಗಲೆಲ್ಲ ರಕ್ಷಣೆಗೆ ಈ ವೆಂಕಟರಮಣ ಇರಬೇಕು. ಇದೇ ಅವರ ತಾಕತ್ತು. ಕಾಂಗ್ರೆಸ್ನಲ್ಲಿ ನಾಯರಿಗೇನೂ ಬರವಿಲ್ಲ. ಸಮರ್ಥ ನಾಯಕರ ಅಭಾವವಿದೆ.

ಯುಪಿಎ ಪಾಲಿನ `ಕೌಟಿಲ್ಯ~ ಪ್ರಣವ್ ಮುಖರ್ಜಿ ಅವರ ಪಾಂಡಿತ್ಯ, ಸಾಮರ್ಥ್ಯ, ನೆನಪಿನ ಶಕ್ತಿ ಅಗಾಧ. ಅವರ ಮಾತಿಗೆ ಮರುಳಾಗದವರೇ ಇಲ್ಲ. ಸಂಸತ್ತಿನಲ್ಲಿ ಮಾತನಾಡಲು ಎದ್ದು ನಿಂತರೆ, ಎಲ್ಲರ ಕಿವಿಗಳು ನೆಟ್ಟಗೆ ನಿಲ್ಲುತ್ತವೆ. ಮಾತು ಸಮುದ್ರದ ಮೊರೆತ. ಗಂಟೆಗಟ್ಟಲೆ ನಿರರ್ಗಳ. ಅವರನ್ನು ತಡವಲು ಗುಂಡಿಗೆ ಇರಬೇಕು. ವಿರೋಧ ಪಕ್ಷಗಳ ನಾಯಕರೂ ಅವರನ್ನು ಕೆಣಕಲು ಹೆದರುತ್ತಾರೆ. ಕಾಲೆಳೆಯುವ ಮೊದಲು ಹತ್ತಾರು ಸಲ ಆಲೋಚಿಸುತ್ತಾರೆ.

ಯಾವುದೇ ವಿಷಯದ ಮೇಲೆ ಮಾತನಾಡುವ ಛಾತಿ ಪ್ರಣವ್ ಅವರಿಗಿದೆ. ಅವರ ಮಾತಿಗೆ ಇಂತಹ ವಿಷಯವೇ ಬೇಕೆಂದೇನಿಲ್ಲ. ಲೋಕಪಾಲ ಮಸೂದೆಯಾದರೂ ಪರವಾಗಿಲ್ಲ, ಹಣದುಬ್ಬರವಾದರೂ ಸರಿ ಅಥವಾ ಮುಜುಗರದಿಂದ ಸರ್ಕಾರವನ್ನು ಪಾರುಮಾಡುವ ಪ್ರಸಂಗವಾದರೂ ಆಗಬಹುದು. ಅಧಿವೇಶನದ ವೇಳೆ ಪ್ರಣವ್ ಸದನದೊಳಗಿದ್ದಾರೆಂದರೆ ಸರ್ಕಾರ ನಿರಾಳ.

ಯುಪಿಎ ಸರ್ಕಾರ-1ರಲ್ಲಿ ರಕ್ಷಣಾ ಖಾತೆ ನಿರ್ವಹಣೆ ಮಾಡಿದ್ದ ಪ್ರಣವ್ ಅವರಿಗೆ ಈಗ ಹಣಕಾಸು ಹೊಣೆ ಸಿಕ್ಕಿದೆ. ಕೆಲಸದಲ್ಲಿ ಅಚ್ಚುಕಟ್ಟು. ಯಾವುದೇ ಕಡತವನ್ನು ಓದದೆ ಸಹಿ ಹಾಕುವುದಿಲ್ಲ. ಅಧಿಕಾರಿಗಳು ಹೇಳಿದಂತೆ ಕೇಳುವುದಿಲ್ಲ. ಸ್ವಂತದ ಆಲೋಚನೆ. ಅವರದೇ ತೀರ್ಮಾನ. ಹೀಗಾಗಿ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕವಿಲ್ಲ.

1969ರಲ್ಲಿ ಮೊದಲಸಲ ರಾಜ್ಯಸಭೆಗೆ ಆಯ್ಕೆಯಾದ ಮುಖರ್ಜಿ 4ವರ್ಷದ ಬಳಿಕ ಕೈಗಾರಿಕಾ ಖಾತೆ ಉಪ ಸಚಿವರಾಗಿ ನೇಮಕಗೊಂಡರು. ಅಲ್ಲಿಂದ ಸಾರ್ವಜನಿಕ ಜೀವನದಲ್ಲಿ ಬಹಳ ದೂರ ಸಾಗಿ ಬಂದಿದ್ದಾರೆ. ಒಮ್ಮೆ ಕಾಂಗ್ರೆಸ್ನಿಂದ ದೂರವಾಗಿ ಕಹಿ ಅನುಭವಿಸಿದ್ದಾರೆ. ಇಂದಿರಾ ಗಾಂಧಿ ಹತ್ಯೆ ಬಳಿಕ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ಸಂಪುಟದಲ್ಲಿ ಸ್ಥಾನ ವಂಚಿತರಾದರು. ಅಷ್ಟೇ ಅಲ್ಲ, ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು. ಅನಂತರ ತಮ್ಮದೇ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಕಟ್ಟಿದರು.

ಮುಂದೆ ರಾಜೀವ್ ಜತೆ ಭಿನ್ನಾಭಿಪ್ರಾಯ ದೂರವಾದ ಬಳಿಕ 1989ರಲ್ಲಿ ಕಾಂಗ್ರೆಸ್ನಲ್ಲಿ ತಮ್ಮ ಪಕ್ಷ ವಿಲೀನಗೊಳಿಸಿದರು. ಈ ಬೆಳವಣಿಗೆಯಿಂದಾಗಿ ಪ್ರಣವ್ ಅವರನ್ನು ಗಾಂಧಿ ಕುಟುಂಬದವರು ಪೂರ್ಣವಾಗಿ ನಂಬುವುದಿಲ್ಲ. ಹೀಗಾಗಿ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ತಪ್ಪಿಹೋಗಿವೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.

ಕಾಂಗ್ರೆಸ್ನಲ್ಲಿ ಯಾರ್ಯಾರೋ ಏನೇನೋ ಆಗಿಹೋಗಿದ್ದಾರೆ. ಪ್ರಣವ್ ಮುಖರ್ಜಿ ಅವರಂಥ ಸಮರ್ಥರು ಇನ್ನು ಏನೂ ಆಗಿಲ್ಲ. ಹಿಂದೆ ಇವರು ಹಣಕಾಸು ಸಚಿವರಾಗಿದ್ದಾಗ ಮನಮೋಹನ್ಸಿಂಗ್ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಈಗವರು ಪ್ರಧಾನಿ. ಇವರು ಸಂಪುಟ ದರ್ಜೆ ಸಚಿವ!

ಎಲ್ಲರಿಂದಲೂ `ದಾದಾ~ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಪ್ರಣವ್ ಮುಖರ್ಜಿ ಅವರಿಗೆ ಮೂಗಿನ ಮೇಲೆ ಸಿಟ್ಟು. ನಗು ದುಬಾರಿ. ಫುಲ್ ಕಾಲರ್ ಕೋಟ್ ಧರಿಸಿ ಶಿಸ್ತಿನ ಸಿಪಾಯಿಯಂತೆ ಓಡಾಡುವ `ಒನ್ ಮೆನ್ ಆರ್ಮಿ~.

ಹಣಕಾಸು ಇಲಾಖೆ ಮುನ್ನಡೆಸುತ್ತಿರುವ ಪ್ರಣವ್ ಮುಖರ್ಜಿ ಆರ್ಥಿಕ ತಜ್ಞರಲ್ಲ. ಪಶ್ಚಿಮ ಬಂಗಾಳದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದವರು. ದೇಶದ ಹಣಕಾಸು ವ್ಯವಸ್ಥೆಗೆ ಶಿಸ್ತು ತರಲು ಪ್ರಯತ್ನಿಸುತ್ತಿದ್ದಾರೆ. ಮೂಲ ಸೌಲಭ್ಯ ಹಾಗೂ ಆದ್ಯತಾ ವಲಯಗಳನ್ನು ಹೊರತುಪಡಿಸಿ ಎಲ್ಲ ಕಾರ್ಯಕ್ರಮಗಳಿಗೂ ಸಹಾಯಧನ ನೀಡುವುದಕ್ಕೆ ವಿರೋಧವಾಗಿದ್ದಾರೆ. ಇದರಿಂದ ಟೀಕೆಗಳಿಗೂ ಗುರಿಯಾಗುತ್ತಿದ್ದಾರೆ. ಹಣಕಾಸು ಸಚಿವರು ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತಾರೆ. ಎಷ್ಟೋ ಸಲ ತಮ್ಮ ಭೇಟಿಗೆ ಬರುವ ಗಣ್ಯರಿಗೆ ಮಧ್ಯರಾತ್ರಿ ಸಮಯ ನೀಡಿದ ಸಂದರ್ಭಗಳಿವೆ.

ಹಣಕಾಸು, ಭದ್ರತೆ, ರಾಜಕೀಯ, ಮೂಲಸೌಲಭ್ಯ, ಪೆಟ್ರೋಲ್, ಸಂಸದೀಯ ವ್ಯವಹಾರಗಳೂ ಒಳಗೊಂಡಂತೆ ಹಲವು ಸಂಪುಟ ಸಮಿತಿಗೆ ಪ್ರಣವ್ ಅಧ್ಯಕ್ಷರು. 1935 ಡಿಸೆಂಬರ್ 11ರಂದು ಪಶ್ಚಿಮ ಬಂಗಾಳದ ಮೀರಟಿಯಲ್ಲಿ ಪ್ರಣವ್ ಮುಖರ್ಜಿ ಹುಟ್ಟಿದರು.

ಇವರ ತಂದೆ ಕಮದ ಕಿಂಕರ ಮುಖರ್ಜಿ ಪಶ್ಚಿಮ ಬಂಗಾಳ ವಿಧಾನ ಪರಿಷತ್ ಸದಸ್ಯರಾಗಿದ್ದರು. ಸ್ಯೂರಿ ವಿದ್ಯಾಸಾಗರ ಕಾಲೇಜಿನಲ್ಲಿ ಓದಿದ ಪ್ರಣವ್ ಇತಿಹಾಸ, ರಾಜಕೀಯ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೋಲ್ಕತ್ತಾ ವಿವಿಯಲ್ಲಿ ಕಾನೂನು ಪದವಿ ಪಡೆದರು. ಕೆಲ ಸಮಯ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ.

ಮೊದಲಿಂದಲೂ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಪ್ರಣವ್ ಮುಖರ್ಜಿ 75, 81, 83 ಪುನರಾಯ್ಕೆಯಾದರು. ಮತ್ತೊಮ್ಮೆ 1999ರಲ್ಲಿ ರಾಜ್ಯಸಭೆ ಸದಸ್ಯ. 82- 84ರಲ್ಲಿ ಹಣಕಾಸು ಸಚಿವ. ನರಸಿಂಹರಾವ್ ಸಂಪುಟದಲ್ಲಿ ಒಂದು ವರ್ಷ 95-96ರಲ್ಲಿ ವಿದೇಶಾಂಗ ಸಚಿವರು. ರಾವ್ ಅವರೇ ಇವರಿಗೆ ರಾಜಕೀಯ ಪುರ್ನಜನ್ಮ ಕೊಟ್ಟರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ (91-96) ನೇಮಕ ಮಾಡಿದರು. ಅನಂತರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರು.

ಪ್ರಣವ್ ಮುಖರ್ಜಿ ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ 15 ವರ್ಷ (85- 10) ಕೆಲಸ ಮಾಡಿದ್ದಾರೆ. ಇಷ್ಟು ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಅವರಿಗೆ ಎಡ ಪಕ್ಷಗಳಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಸಾಧ್ಯವಾಗಲಿಲ್ಲ. ಅತ್ಯುತ್ತಮ ನಾಯಕರಾಗಿ ಬೆಳೆದಿರುವ ಹಣಕಾಸು ಸಚಿವರಿಗೆ ಜನ ಸಮುದಾಯದ ನಾಯಕರಾಗಿ ರೂಪುಗೊಳ್ಳಲು ಆಗಲಿಲ್ಲ.

2004ರಲ್ಲಿ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಪ್ರಣವ್ ಮುಖರ್ಜಿ ಸಹಜವಾಗಿಯೇ ಸದನದ ನಾಯಕ ಸ್ಥಾನಕ್ಕೆ ಆಯ್ಕೆಯಾದರು. ಪ್ರಧಾನಿ ಮನಮೋಹನ್ಸಿಂಗ್ ರಾಜ್ಯಸಭೆ ಸದಸ್ಯರಾದ ಹಿನ್ನೆಲೆಯಲ್ಲಿ ಲೋಕಸಭೆ ನಾಯಕ ಸ್ಥಾನ ಪ್ರಣವ್ ಪಾಲಿಗೆ ಬಂತು. ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಪ್ರಣವ್ ಮುಖರ್ಜಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಹಲವು ಮಹತ್ವದ ಸಂದರ್ಭಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ನಲ್ಹಟ್ಟಿ ಕ್ಷೇತ್ರದಿಂದ ಪ್ರಣವ್ ಪುತ್ರ ಸ್ಪರ್ಧಿಸುವವರೆಗೆ ಅವರ ಕುಟುಂಬದ ಬಗ್ಗೆ ಜನರಿಗೆ ಹೆಚ್ಚು ಗೊತ್ತಿರಲಿಲ್ಲ. ಪತ್ನಿ ಮತ್ತು ಮಕ್ಕಳು ಮುಖರ್ಜಿ ವ್ಯವಹಾರಗಳಲ್ಲಿ ಮೂಗು ತೂರಿಸುವುದಿಲ್ಲ. ಇಂಥ ನಡವಳಿಕೆಯನ್ನು ಸಹಿಸುವುದಿಲ್ಲ ಅವರು ಎಂದು ಹಣಕಾಸು ಸಚಿವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಪ್ರಣವ್ ಮುಖರ್ಜಿ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಕೇಳಿಬರುತ್ತಿದೆ. ಹೋದ ತಿಂಗಳು ಮುಗಿದ ಬಜೆಟ್ ಅಧಿವೇಶನದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪ್ರಣವ್ ಮುಖರ್ಜಿ ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದ್ದಾರೆ. ಯುಪಿಎ ಮಿತ್ರ ಪಕ್ಷ ತೃಣಮೂಲ ಕಾಂಗ್ರೆಸ್ ಮಾತ್ರ ಇವರಿಗೆ ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಖಚಿತಪಡಿಸಿದೆ. ಸಂಸತ್ತಿನ `ನಾರ್ಥ್ ಬ್ಲಾಕ್~ನಲ್ಲಿ ಕೂತು ಕಾರ್ಯನಿರ್ವಹಿಸುವ ಹಣಕಾಸು ಸಚಿವರಿಗೆ ಕೂಗಳತೆ ದೂರದಲ್ಲಿರುವ ರಾಷ್ಟ್ರಪತಿ ಭವನದ ಪ್ರವೇಶ ಸಿಗಲಿದೆಯೇ? ಅದೃಷ್ಟವೇ ಮುಖರ್ಜಿ ಅವರ ಯೋಗಾಯೋಗವನ್ನು ತೀರ್ಮಾನಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.