ಶುಕ್ರವಾರ, ಜೂನ್ 18, 2021
28 °C

ರಾಷ್ಟ್ರೀಯ ಅಂತರ ಜಿಲ್ಲಾ ಕ್ರೀಡಾಕೂಟಕ್ಕೆ 13 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಹೋಳಿ ಹಬ್ಬದ ದಿನದಂದು ನಗರದ ಬಾಲಕ, ಬಾಲಕಿಯರು ಬಣ್ಣಗಳ ಆಟದಲ್ಲಿ ತೊಡಗಿ­ರುವ ವೇಳೆಯಲ್ಲೇ ಇತ್ತ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಳುಗಳು ಬೆವರಿಳಿಸುತ್ತಿದ್ದರು. ಕ್ರೀಡಾಂಗಣದ ಹೊರಗೆ ಓಕುಳಿಯಾಟ ನಡೆಯುತ್ತಿದ್ದರೆ, ಕ್ರೀಡಾಂಗಣದ ಒಳಗೆ ಓಟ, ಎಸೆತ, ಜಿಗಿತಗಳಲ್ಲಿ ಕ್ರೀಡಾಪಟುಗಳು ತಲ್ಲೀನರಾಗಿದ್ದರು.

ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಅವರೆಲ್ಲರೂ ಬಂದಿದ್ದರು. ಅಷ್ಟೇ ಅಲ್ಲದೆ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪರೀಕ್ಷೆಗಳು ಸೋಮವಾರದಿಂದಲೇ ಆರಂಭವಾಗು­ತ್ತಿದ್ದರೂ, 14 ಮತ್ತು 16 ವಯೋಮಿಯೊಳಗಿನ ಈ ಬಾಲಕ, ಬಾಲಕಿಯರು ಓದುವ ಉತ್ಸಾಹವನ್ನು ಬದಿಗಿಟ್ಟು, ಆಟೋಟದ ಉತ್ಸಾಹ­ದೊಂದಿಗೆ ಬಂದಿದ್ದರು.ಅದಕ್ಕೆ ಕಾರಣವಾಗಿದ್ದು ಮಾತ್ರ ಹರಿದ್ವಾರದಲ್ಲಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್‌ ಇಂಡಿಯಾ ಏ.25ರಿಂದ 27ರವರೆಗೆ ಏರ್ಪಡಿಸಿ­ರುವ 12ನೇ ರಾಷ್ಟ್ರೀಯ ಅಂತರ ಜಿಲ್ಲಾ ಕ್ರೀಡಾಕೂಟ. ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಲು ಟ್ರಯಲ್ಸ್‌ನಲ್ಲಿ ಅವರು ಪಾಲ್ಗೊಳ್ಳುವುದು ಕಡ್ಡಾಯವಾಗಿತ್ತು. ಆಯ್ಕೆ ಟ್ರಯ­ಲ್ಸ್‌ನಲ್ಲಿ ಪಾಲ್ಗೊಂಡ  100 ಕ್ರೀಡಾಪಟುಗಳ ಪೈಕಿ 13 ಮಂದಿ ಹರಿದ್ವಾರದ ಕ್ರೀಡಾ­ಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದರು. ಡಿವೈಎಸ್‌ಪಿ ಕೆ.ಅಶೋಕ್‌­ಕುಮಾರ್‌, ಸಂಘಟಕ­ರಾದ, ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಕೆ.ಜಯದೇವ್‌, ಪದಾಧಿಕಾರಿಗಳಾದ ಗೌಸ್ ಖಾನ್‌, ರಾಜೇಶ್, ಪುರುಷೋತ್ತಂ, ಜಗನ್ನಾಥ್ ಕ್ರೀಡಾಪಟುಗಳ ಉತ್ಸಾಹದ ಕುರಿತು ಮೆಚ್ಚುಗೆ ಮಾತನಾಡಿದರು. 

ಜಿಲ್ಲಾ ಅಥ್ಲೆಟಿಕ್‌ ತರಬೇತುದಾರ ಪಿ.ಎಲ್.­ಶಂಕರಪ್ಪ, ಕ್ರೀಡಾಪಟುಗಳಾದ ವಿ.ಅರುಣಕುಮಾರ್, ಯಶವಂತ್, ಹರ್ಷವರ್ಧನ, ಆರ್.ಹರೀಶ್, ಚಂದು ಅವರೊಂದಿಗೆ ಅಥ್ಲೆಟಿಕ್ಸ್ ಸಂಸ್ಥೆಯ ಗೌಸ್‌ಖಾನ್‌ ಮತ್ತು ರಾಜೇಶ್‌ ಕ್ರೀಡಾಕೂಟ ನಿರ್ವಹಿಸಿದರು.ಪೋಷಕರ ಖುಷಿ: ಹಬ್ಬವನ್ನು ಯಾವಾಗ ಬೇಕಾದರೂ ಆಚರಿಸಬಹುದು.ಆದರೆ ಸ್ಪರ್ಧೆಗಳು ಒಮ್ಮೆ ಮಾತ್ರ ನಡೆಯುತ್ತವೆ. ಅಂಥ ಅವಕಾಶವನ್ನು  ಮಕ್ಕಳು ತಪ್ಪಿಸಿಕೊಳ್ಳಬಾರದಷ್ಟೇ ಎಂದು ಎಂ.­ಮಹೇಶ್‌, ಬೀನಾ, ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯ್ಕೆಯಾದವರು

ಕ್ರೀಡಾವಸತಿ ನಿಲಯ: 
ಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ 6ನೇ ತರಗತಿಯ ಇ.ಭಾವನ, ಗುಂಡು ಎಸೆತ ಪ್ರಥಮ, ಉದ್ದಜಿಗಿತ ದ್ವಿತೀಯ ಸ್ಥಾನ ಗಳಿಸಿದ ಎಂ.ಸಂಗೀತ, 600 ಮೀ ಓಟದಲ್ಲಿ  ಪ್ರಥಮ ಸ್ಥಾನ ಗಳಿಸಿದ ಪವಿತ್ರಾ ಆಯ್ಕೆಯಾದರು.

ಬಂಗಾರಪೇಟೆ: 16 ವಯೋಮಿತಿಯ ವಿಭಾಗದಲ್ಲಿ ಗುಂಡು, ಚಕ್ರ, ಜಾವೆಲೆನ್ ಎಸೆತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, 1500 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದ  ಎನ್‌.ಜಿ.ಹುಲ್ಕೂರು ಶಾಲೆಯ ಮೃತ್ಯುಂಜಯ, 100 ಮೀ, 1000ಮೀ ಓಟ, ಉದ್ದ ಜಿಗಿತದಲ್ಲಿ ಪ್ರಥಮ, 400 ಮೀ ಓಟ, ಗುಂಡು ಎಸೆತ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದ ವಿ.ಹರೀಶ್‌ ಆಯ್ಕೆಯಾದರು.14 ವಯೋಮಿತಿ ಒಳಗಿನವರ ವಿಭಾಗದಲ್ಲಿ 100 ಮೀ, ಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದ ಗಣೇಶ್, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಪಳನಿ, 100 ಮೀ ಓಟ, ಎತ್ತರ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಯಶವಂತ್.ಶ್ರೀನಿವಾಸಪುರ ತಾಲ್ಲೂಕು: 16 ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ 200 ಮೀ, 400 ಮೀ ಮತ್ತು 1000 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಮೋನಿಕ, 100 ಮೀ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವಿತಾ, ಗುಂಡು, ಚಕ್ರ ಎಸೆತದಲ್ಲಿ ಪ್ರಥಮ. 1000 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಗೌತಮಿ, ಉದ್ದ ಜಿಗಿತದಲ್ಲಿ ಪ್ರಥಮ, ಎತರ ಜಿಗಿತ, 100ಮೀ, 200 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಸಾರಿಕಾ.  16 ವಯೋಮಿತಿ ಒಳಗಿನ ಬಾಲಕರ ವಿಭಾಗದ 200 ಮೀ, 400 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಕೋಲಾರದ ಮಹಿಳಾ ಸಮಾಜ ಶಾಲೆಯ ವಿನಯ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.