ಭಾನುವಾರ, ಮೇ 22, 2022
22 °C
ರಾಷ್ಟ್ರೀಯ ಕ್ರೀಡಾ ಪ್ರಧಾಕಾರ ಮಸೂದೆ ಕರಡು - 2013

ರಾಷ್ಟ್ರೀಯ ಫೆಡರೇಷನ್‌ಗಳು ಏನು, ಎತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಕ್ರೀಡೆಗಳ ರಾಷ್ಟ್ರೀಯ ಫೆಡರೇಷನ್‌ಗಳು ತಮ್ಮ ಆಂತರಿಕ ಚಟುವಟಿಕೆಗಳೆಲ್ಲವನ್ನೂ ಪಾರದರ್ಶಕವಾಗಿಟ್ಟುಕೊಂಡು, ಸಂಬಂಧಪಟ್ಟ ಕ್ರೀಡೆಯ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಬಗ್ಗೆ ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆ 2013ರ ಕರಡುನಲ್ಲಿ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ.ಸಂಬಂಧಪಟ್ಟ ಕ್ರೀಡಾ ಫೆಡರೇಷನ್ ತಾನು ಆ ವರ್ಷ ನಡೆಸಿದ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ವಿವರಗಳನ್ನು ವರ್ಷದ ಕೊನೆಯಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.ಇಂಡಿಯ ಅಥವಾ ಇಂಡಿಯನ್ ಇಲ್ಲವೇ ಇದಕ್ಕೆ ಯಾವುದೇ ಭಾರತೀಯ ಭಾಷೆಯ ಸಮಾನಾಂತರ ಪದವನ್ನು ಬಳಸಲು ಸಂಬಂಧಪಟ್ಟ ಕ್ರೀಡಾ ಫೆಡರೇಷನ್‌ಗೆ ಮಾತ್ರ ಅಧಿಕಾರವಿರಬೇಕು.ಅಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಂಬಂಧಪಟ್ಟ ಕ್ರೀಡೆಯ ಫೆಡರೇಷನ್‌ಗಳಿಗೆ ಅಥವಾ ಈ ಫೆಡರೇಷನ್‌ಗಳನ್ನು ಪ್ರತಿನಿಧಿಸುವವರಿಗೆ ಮಾತ್ರ ಆದ್ಯತೆ ಇರಬೇಕು. ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಅಧಿಕಾರ ಈ ಫೆಡರೇಷನ್‌ಗೆ ಇರುತ್ತದೆ.ದೇಶದೊಳಗೆ ಸಂಬಂಧಪಟ್ಟ ಕ್ರೀಡೆಯ ಅಂತರರಾಷ್ಟ್ರೀಯ ಕೂಟ ನಡೆಸುವ ಅಧಿಕಾರ ಇರುತ್ತದೆ. ಆದರೆ ಅದಕ್ಕೆ ಮೊದಲು ಸಂಬಂಧಪಟ್ಟ ಫೆಡರೇಷನ್ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿರಬೇಕು.ಅಂತರರಾಷ್ಟ್ರೀಯ ಫೆಡರೇಷನ್‌ಗಳ ನಿಯಮಗಳಿಗೆ ಅನುಸಾರವಾಗಿ, ಅವುಗಳು ಬಯಸುವಂತೆ ಸಂಬಂಧಪಟ್ಟ ಕ್ರೀಡೆಯ ಅಭಿವೃದ್ಧಿಗೆ ರಾಷ್ಟ್ರೀಯ ಫೆಡರೇಷನ್‌ಗಳು ಸಂಬಂಧಪಟ್ಟ ಕ್ರೀಡೆಯ ಅಭಿವೃದ್ಧಿಗೆ ನಿರಂತರವಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ತನ್ನ ವ್ಯಾಪ್ತಿಯಲ್ಲಿ ಬರುವ ಕ್ರೀಡಾಪಟುಗಳಿಗೆ ಅಗತ್ಯವಾದ ಕ್ರೀಡಾಂಗಣ, ಆಟದ ಸಲಕರಣೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಷ್ಟ್ರೀಯ ಫೆಡರೇಷನ್ ಶ್ರಮಿಸಬೇಕು.ಸಂಬಂಧಪಟ್ಟ ಕ್ರೀಡೆಯ ಅಂತರರಾಷ್ಟ್ರೀಯ ಫೆಡರೇಷನ್‌ನಿಂದ ಮಾನ್ಯತೆ ಪಡೆಯದ ಯಾವುದೇ ಸಂಘಟನೆಯನ್ನು ರಾಷ್ಟ್ರೀಯ ಫೆಡರೇಷನ್ ಎಂದು ಪರಿಗಣಿಸುವಂತಿಲ್ಲ.ಯಾವುದೇ ಒಂದು ಕ್ರೀಡೆಯ ರಾಷ್ಟ್ರೀಯ ಫೆಡರೇಷನ್ ಎಂಬುದಾಗಿ ಎರಡು ಘಟಕಗಳಿಗೆ ಸರ್ಕಾರ ಮಾನ್ಯತೆ ನೀಡಬಾರದು.

ಸಹಕಾರಿ ಸಂಘಗಳ ನೋಂದಣಿ ಕಾಯ್ದೆ 1860ರ ಅನ್ವಯ ಅಥವಾ ಯಾವುದೇ ರಾಜ್ಯದ ಕಂಪನಿ ಕಾಯ್ದೆ-1956ರ ಅನುಸಾರ ರಾಷ್ಟ್ರೀಯ ಫೆಡರೇಷನ್ ನೋಂದಣಿಗೊಂಡಿರಬೇಕು. ಚಳಿಗಾಲದ ಒಲಿಂಪಿಕ್ ಕ್ರೀಡೆ, ಪ್ಯಾರಾಲಿಂಪಿಕ್ ಕ್ರೀಡೆ, `ವಿಶೇಷ ಒಲಿಂಪಿಕ್' ಕ್ರೀಡೆಗಳ ಫೆಡರೇಷನ್‌ಗಳಿಗೂ ಈ ಕಾನೂನುಗಳು ಅನ್ವಯವಾಗುತ್ತವೆ.ಈ ಫೆಡರೇಷನ್ ಪ್ರತಿ ವರ್ಷವೂ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಅನ್ನು ಸಂಘಟಿಸಲೇ ಬೇಕು.

ಕ್ರೀಡೆಯೊಂದು ಸಂಪೂರ್ಣ ದೇಶೀಯವಾಗಿದ್ದು, ಇದಕ್ಕೆ ಅಂತರರಾಷ್ಟ್ರೀಯ ಫೆಡರೇಷನ್ ಎಂಬ ಸಂಸ್ಥೆ ಇಲ್ಲದಿದ್ದರೆ, ಈ ಕ್ರೀಡೆಗೆ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಥವಾ ಭಾರತ ಸರ್ಕಾರ ನೀಡುವ ಮಾನ್ಯತೆಯನ್ನೇ ಪರಿಗಣಿಸಬೇಕು.ಒಲಿಂಪಿಕ್ ಸಮಿತಿ:

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯು ರಾಷ್ಟ್ರೀಯ ಒಲಿಂಪಿಕ್ ಸಮಿತಿಯಾಗಿರುತ್ತದೆ. ಇದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿಯಮಗಳಿಗೆ ಸಂಪೂರ್ಣ ಬದ್ಧವಾಗಿರುತ್ತದೆ. ಭಾರತದಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಅತ್ಯುನ್ನತ ಸಂಸ್ಥೆಯಾಗಿದೆ.ಒಲಿಂಪಿಕ್ ಕ್ರೀಡೆ, ಏಷ್ಯನ್ ಗೇಮ್ಸ, ಕಾಮನ್‌ವೆಲ್ತ್ ಗೇಮ್ಸ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಈ ಸಂಸ್ಥೆಯು ಪ್ರಯತ್ನಿಸಬಹುದು. ಅದಕ್ಕೆ ಮೊದಲು ಅದು ಸರ್ಕಾರದ ಅನುಮತಿ ಪಡೆದಿರಬೇಕು.ಎಲ್ಲಾ ಒಲಿಂಪಿಕ್ ಕ್ರೀಡೆಗಳ ರಾಷ್ಟ್ರೀಯ ಫೆಡರೇಷನ್‌ಗಳು ಈ ಒಲಿಂಪಿಕ್ ಸಮಿತಿಯ ವ್ಯಾಪ್ತಿಯಲ್ಲಿ ಬರುತ್ತವೆ.

ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ತನ್ನ ಚಟುವಟಿಕೆಗಳ ಸವಿವರವಾದ ವಾರ್ಷಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ವರದಿಯನ್ನು ಸಂಸತ್ತಿನ ಉಭಯ ಸದನಗಳ ಮುಂದಿಡಬೇಕು.

(ನಾಳಿನ ಸಂಚಿಕೆಯಲ್ಲಿಭಾಗ 5)ಕ್ರಿಕೆಟ್ ಮಟ್ಟಿಗೆ ಒಂದಷ್ಟು ಗೊಂದಲ


ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆಯ ಕರಡುನಲ್ಲಿ ಬಹಳಷ್ಟು ಅಂಶಗಳು ಸ್ವಾಗತಾರ್ಹವೇ. ಆದರೆ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್ ಮತ್ತು ಭಾರತ ಒಲಿಂಪಿಕ್ ಸಮಿತಿಯನ್ನು ಪ್ರತಿನಿಧಿಸುವವರು ಮಾತ್ರವೇ ಇಂಡಿಯ, ಇಂಡಿಯನ್ ಪದ ಬಳಸಬಹುದೆಂಬುದು ಸ್ವಲ್ಪ ಗೊಂದಲಮಯವಾಗಿದೆ. ಹಾಗಿದ್ದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ `ಭಾರತ ಕ್ರಿಕೆಟ್ ತಂಡ' ಯಾವ ಹೆಸರನ್ನು ಹೊಂದಬೇಕು ಎನ್ನುವುದು ಈಗ ಪ್ರಶ್ನೆ.ಕ್ರಿಕೆಟನ್ನು ಒಲಿಂಪಿಕ್ ಆಂದೋಲನದ ಚೌಕಟ್ಟಿನೊಳಗೆ ತರುವುದು ಸ್ವತಃ ಬಿಸಿಸಿಐಗೇ ಇಷ್ಟವಿಲ್ಲ. ಒಲಿಂಪಿಕ್ಸ್ ವಾಪ್ತಿಗೆ ಒಳಗಾದರೆ ಸಹಜವಾಗಿಯೇ `ವಾಡಾ' ಕಣ್ಗಾವಲಲ್ಲಿ ಇರಬೇಕಾಗುತ್ತದೆ. `ವಾಡಾ'ದವರು ಎಲ್ಲೆಂದರಲ್ಲಿ ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ನಡೆಸುತ್ತಾರೆ. ಜತೆಗೆ ಆಟಗಾರರು ಮುಂದಿನ ಮೂರು ತಿಂಗಳು ತಾವು ಎಲ್ಲೆಲ್ಲಿ ಇರುತ್ತೇವೆಂಬ ಮಾಹಿತಿಯನ್ನು `ವಾಡಾ'ಕ್ಕೆ ನೀಡಬೇಕಾಗುತ್ತದೆ. ಇದು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ತೀರಾ ಅನಾನುಕೂಲಕರ ಎಂದು ಬಿಸಿಸಿಐ ವಾದಿಸುತ್ತಿದೆ.ಜತೆಗೆ ಜಗತ್ತಿನಲ್ಲಿ ಕ್ರಿಕೆಟ್ ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿರುವುದರಿಂದ ಒಲಿಂಪಿಕ್ಸ್ ಚೌಕಟ್ಟಿನಲ್ಲಿರುವುದಕ್ಕೆ ಇಷ್ಟ ಪಡುತ್ತಿಲ್ಲವೇನೋ. ಒಟ್ಟಾರೆ, ಈ ಗೊಂದಲ ಬಗೆಹರಿಯ ಬೇಕಿದೆ.

-ಚಂದ್ರಮೌಳಿ ಕಣವಿ, ಕ್ರಿಕೆಟ್ ವಿಶ್ಲೇಷಕರು, ಬೆಂಗಳೂರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.