ಸೋಮವಾರ, ಜನವರಿ 20, 2020
20 °C
ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ, ಮಿಂಚಿದ ಹರ್ಷಲ್‌

ರಾಹುಲ್‌ ಸೊಗಸಾದ ಆಟ

ಪ್ರಮೋದ್‌ ಜಿ.ಕೆ. /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹ್ಲಿ, ರೋಹ್ಟಕ್‌: ಸುಂದರವಾಗಿ ಅರಳಿಕೊಳ್ಳುತ್ತಿದ್ದ ಮುಂಜಾವನ್ನು ಮತ್ತಷ್ಟು ಅಂದಗೊಳಿಸಿದ್ದು ಕೆ.ಎಲ್‌. ರಾಹುಲ್‌. ಶನಿವಾರದ ದಿನದಾಟದಲ್ಲಿ ಚೆಂದನೆಯ ಆಟವಾಡಿದ ಈ ಬ್ಯಾಟ್ಸ್‌ಮನ್‌ ಕರ್ನಾಟಕ ತಂಡ ಇನಿಂಗ್ಸ್‌್ ಮುನ್ನಡೆ ಸಾಧಿಸಲು ಕಾರಣರಾದರು.ಶುಕ್ರವಾರದ ದಿನದಾಟದ ಅಂತ್ಯಕ್ಕೆ ಹತ್ತು ರನ್‌ ಗಳಿಸಿದ್ದ ರಾಹುಲ್‌ ಶನಿವಾರದ ಆಟ ಮುಗಿಯಲು 50 ನಿಮಿಷ ಬಾಕಿ ಇರುವ ತನಕವೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು. ಕವರ್ ಡ್ರೈ, ಸ್ಟ್ರೇಟ್‌ ಡ್ರೈವ್‌ ಮೂಲಕ ಮನಮೋಹಕ ಆಟವಾಡಿ ಎದುರಾಳಿ ತಂಡದ ಆಟಗಾರರ ಗಮನವನ್ನೂ ತಮ್ಮ ಬಳಿ ಸೆಳೆದುಕೊಂಡರು. ಇದರಿಂದ ಕರ್ನಾಟಕ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 92 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 253 ರನ್‌ ಕಲೆ ಹಾಕಿತು.ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಹರಿಯಾಣ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ ಕಲೆ ಹಾಕಿದೆ. ಆರು ರನ್‌ಗಳ ಮುನ್ನಡೆ ಹೊಂದಿರುವ ಸಿ.ಎಂ. ಗೌತಮ್‌ ಬಳಗ ಭಾನುವಾರ ಎದುರಾಳಿ ತಂಡವನ್ನು ಕಟ್ಟಿ ಹಾಕುವ ಲೆಕ್ಕಾಚಾರ ಹೊಂದಿದೆ.ತಪ್ಪಿದ ಶತಕ: ಈ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್‌ ರಾಹುಲ್‌ ತೀರಾ ಕೆಳ ಮಟ್ಟದಲ್ಲಿ ನುಗ್ಗಿ ಬರುತ್ತಿದ್ದ ಚೆಂಡನ್ನು ತುಂಬಾ ಚೆನ್ನಾಗಿ ಎದುರಿಸಿದರು. ಆದರೆ, ಶತಕದ ಹೊಸ್ತಿಲಲ್ಲಿ ಎಡವಿದರು. ಬರೋಬ್ಬರಿ ಆರು ಗಂಟೆ ಕ್ರೀಸ್‌ನಲ್ಲಿದ್ದ ರಾಹುಲ್‌ 239 ಎಸೆತಗಳಲ್ಲಿ 98 ರನ್‌ ಗಳಿಸಿದರು. ವೇಗದ ಬೌಲರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿಯೂ ಎದುರಾಳಿ ಬೌಲರ್‌ಗಳನ್ನು ಕಾಡಿದ  ಕರ್ನಾಟಕದ ಆಟಗಾರ ಒಂಬತ್ತು ಬೌಂಡರಿ ಬಾರಿಸಿದರು. ರಾಹುಲ್‌ ಒಡಿಶಾ ವಿರುದ್ಧ 67 ಮತ್ತು ವಿದರ್ಭ ಎದುರಿನ ಪಂದ್ಯದಲ್ಲಿ 158 ರನ್‌ ಗಳಿಸಿದ್ದರು.ಕವರ್‌ ಬಳಿ ಒಂಟಿ ರನ್‌ ಗಳಿಸುವ ಮೂಲಕ ರಾಹುಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐದನೇ ಅರ್ಧಶತಕ ದಾಖಲಿಸಿದರು. ಈ ಆಟಗಾರನಿಗೆ ಬೆಂಬಲ ನೀಡಿದ್ದು ಮಯಂಕ್‌ ಅಗರವಾಲ್‌. ಇವರಿಬ್ಬರು ಮೊದಲ ವಿಕೆಟ್‌ಗೆ 96 ರನ್‌ ಕಲೆ ಹಾಕಿ ಇನಿಂಗ್ಸ್‌್ ಮುನ್ನಡೆಯ ಕನಸಿಗೆ ಮುನ್ನುಡಿ ಬರೆದರು.ಮಯಂಕ್‌ 42 ರನ್‌ ಗಳಿಸಿದ್ದ ವೇಳೆ ಆಶಿಶ್‌ ಹೂಡಾ ಎಸೆತದಲ್ಲಿ ಜಯಂತ್‌ ಯಾದವ್‌ ಕೈಗೆ ಕ್ಯಾಚ್‌ ನೀಡಿದರು. ನಂತರ ಕರ್ನಾಟಕದ ‘ಪೆವಿಲಿಯನ್‌ ಪರೇಡ್‌’ ಶುರುವಾಯಿತು. ಈ ವೇಳೆ ರಾಹುಲ್‌ ಸಮುದ್ರದ ಅಲೆಗಳಿಗೆ ಸಿಲುಕಿ ಒದ್ದಾಡುತ್ತಿರುವ ಹಡಗನ್ನು ದಡ ಸೇರಿಸಲು ಹೋರಾಟ ನಡೆಸುತ್ತಿರುವ ದಿಟ್ಟ ನಾವಿಕನಂತೆ ಕಂಡರು. ಏಕೆಂದರೆ, ಕುನಾಲ್‌ ಕಪೂರ್‌ (8), ಮನೀಷ್‌ ಪಾಂಡೆ (4) ಬೇಗನೇ ಔಟಾಗಿದ್ದರು. ಇನಿಂಗ್ಸ್‌ ಮುನ್ನಡೆಯ ಕನಸನ್ನು ಸಾಕಾರ ಮಾಡಿಕೊಳ್ಳಲು ನಾಯಕ ಸಿ.ಎಂ. ಗೌತಮ್‌ ಜೊತೆಯಾದರು.ಉತ್ತಮ ಆರಂಭ ಪಡೆದು ನಂತರ ಕುಸಿದ ತಂಡ ವನ್ನು ರಾಹುಲ್‌ ಮತ್ತು ಗೌತಮ್‌ ಮೇಲಕ್ಕೆತ್ತಿದರು. ಗೌತಮ್‌ (54, 138 ನಿಮಿಷ, 109 ಎಸೆತ, 6 ಬೌಂಡರಿ) ಈ ಸಲದ ರಣಜಿಯಲ್ಲಿ ಮೊದಲ ಅರ್ಧಶತಕ ಗಳಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 97 ರನ್‌ ಕಲೆ ಹಾಕಿತು. ಇದಕ್ಕಾಗಿ ತಗೆದುಕೊಂಡಿದ್ದು 32 ಓವರ್‌! ಸಚಿನ್‌ ರಾಣಾ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲರಾದ ಗೌತಮ್‌ 79ನೇ ಓವರ್‌ನಲ್ಲಿ ಬೌಲ್ಡ್‌ ಆದರು. ಆಗ ಇನಿಂಗ್ಸ್‌ ಮುನ್ನಡೆ ಸಾಧಿಸಲು 31 ರನ್‌ ಬೇಕಿತ್ತು.ದಿಢೀರ್‌ ಕುಸಿತ: ಕರ್ನಾಟಕ ತಂಡ ಸುಲಭವಾಗಿ ಇನಿಂಗ್ಸ್‌್ ಮುನ್ನಡೆ ಗಳಿಸಬಹುದು ಎನ್ನುವ ನಿರೀಕ್ಷೆಯನ್ನು ಹರಿಯಾಣದ ವೇಗದ ಬೌಲರ್‌ಗಳು ಹುಸಿ ಮಾಡಿದರು. ಇದರಿಂದ ಶನಿವಾರದ ಕೊನೆಯ ಅರ್ಧಗಂಟೆಯ ಆಟದಲ್ಲಿ ಉಭಯ ತಂಡಗಳ ಆಟಗಾರರು ಉಸಿರು ಬಿಗಿ ಹಿಡಿದು ಕುಳಿತಿದ್ದರು. ಏಕೆಂದರೆ, ಗೌತಮ್‌ ಪಡೆ 29 ರನ್‌ ಗಳಿಸುವ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು!

ದಿಕ್ಕು ಬದಲಿಸಿದ ಹೊಸ ಚೆಂಡು: ದಿನದಾಟದಲ್ಲಿ ಎರಡನೇ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದ ಆತಿ ಥೇಯರು ಮೇಲುಗೈ ಸಾಧಿಸಿದರು. ಇದಕ್ಕೆ ಕಾರಣ ವಾಗಿದ್ದು ಹರ್ಷಲ್‌ ಪಟೇಲ್‌  ಮೊನಚಿನ ದಾಳಿ.ಕರ್ನಾಟಕದ ಮಧ್ಯಮ ಕ್ರಮಾಂಕದ ಭರವಸೆ ಎನಿಸಿರುವ ಸ್ಟುವರ್ಟ್‌ ಬಿನ್ನಿ (7), ಗಣೇಶ್‌ ಸತೀಶ್‌ (1) ಅವರನ್ನು ಹರ್ಷದ್‌ ಎಲ್‌ಬಿಬ್ಲ್ಯು ಬಲೆಗೆ ಕೆಡವಿದರೆ, ಅಭಿಮನ್ಯು ಮಿಥುನ್ ಅವರನ್ನು ಬೌಲ್ಡ್‌ ಮಾಡಿದರು. ಇದರಿಂದ ಹರಿಯಾಣಕ್ಕೂ ಇನಿಂಗ್ಸ್‌್ ಮುನ್ನಡೆ ಸಾಧಿಸುವ ಕನಸು ಚಿಗುರೊಡೆಯಿತು. ಬಲಗೈ ವೇಗಿ ಹರ್ಷದ್‌ ಐದು ವಿಕೆಟ್‌ ಉರುಳಿಸಿ ಈ ಕನಸಿನ ಒಡೆಯರಾದರು. ಆದರೆ, ಅಬ್ರಾರ್‌ ಖಾಜಿ ಇದಕ್ಕೆ ಅವಕಾಶ ನೀಡಲಿಲ್ಲ.ಆತಂಕ ದೂರ ಮಾಡಿದ ಖಾಜಿ: ಮೊದಲ ರಣಜಿ ಟೂರ್ನಿ ಆಡುತ್ತಿರುವ ಅಬ್ರಾರ್ ಖಾಜಿ (ಬ್ಯಾಟಿಂಗ್‌ 10) ರೋನಿತ್‌ ಮೋರೆ ಜೊತೆ ಸೇರಿ ಇನಿಂಗ್ಸ್‌್ ಮುನ್ನಡೆಗೆ ಅಗತ್ಯವಿದ್ದ  12 ರನ್‌ ಕಲೆ ಹಾಕಲು ಸಾಕಷ್ಟು ಪ್ರಯತ್ನ ಪಟ್ಟರು. ರಕ್ಷಣಾತ್ಮಕವಾಗಿ ಆಡುತ್ತಾ ಒಂದೊಂದೇ ರನ್‌ ಗಳಿಸಿದ ಖಾಜಿ 7 ರನ್‌ ಕಲೆ ಹಾಕಿದ್ದರು. ಈ ವೇಳೆ ರೋನಿತ್‌ 91ನೇ ಓವರ್‌ನಲ್ಲಿ ಸಚಿನ್‌ ರಾಣಾಗೆ ವಿಕೆಟ್‌ ಒಪ್ಪಿಸಿದರು. ಈ ಒತ್ತಡದ ಸಂದರ್ಭವನ್ನು ನೋಡಲಾಗದೆ ನಾಯಕ ಗೌತಮ್‌ ಡ್ರೆಸ್ಸಿಂಗ್‌ ಕೊಠಡಿ ಸೇರಿಕೊಂಡಿದ್ದರು.ಕೊನೆಯ ಬ್ಯಾಟ್ಸ್‌ಮನ್‌ ಶರತ್‌ ಮೇಲೆ ಎಲ್ಲರ ನಿರೀಕ್ಷೆಯಿತ್ತು. 91ನೇ ಓವರ್‌ನ ಕೊನೆಯ ಎಸೆತವನ್ನು ಶರತ್‌ ರಕ್ಷಣಾತ್ಮಕವಾಗಿ ಆಡಿದ ನಂತರ ಸ್ಟ್ರೇಕರ್‌ ಆಗಿ ಬಂದ ಖಾಜಿ ಫೈನ್‌ ಲೆಗ್‌ ಬಳಿ ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್‌್ ಮುನ್ನಡೆ ತಂದುಕೊಟ್ಟರು. ಆಗ, ಕರ್ನಾಟಕದ ಆಟಗಾರರು ಪಂದ್ಯ ಗೆದ್ದಷ್ಟೇ ಖುಷಿಪಟ್ಟರು.

ಪ್ರತಿಕ್ರಿಯಿಸಿ (+)