ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಅನನ್ಯ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ಸ್‌ ಸ್ಪರ್ಧಿ

ರಿಯೊ ಒಲಿಂಪಿಕ್ಸ್‌ಗೆ ದೀಪಾ ಕರ್ಮಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯೊ ಒಲಿಂಪಿಕ್ಸ್‌ಗೆ ದೀಪಾ ಕರ್ಮಾಕರ್

ರಿಯೊ ಡಿ ಜನೈರೊ, ಬ್ರೆಜಿಲ್‌ (ಪಿಟಿಐ):  ಭಾರತದ ಜಿಮ್ನಾಸ್ಟಿಕ್ಸ್ ಅಂಗಳದಲ್ಲಿ  ಸೋಮವಾರ ಮಿಂಚಿನ ಸಂಚಲನ ಮೂಡಿತ್ತು. ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ  ಭಾರತ ಮಹಿಳಾ ಸ್ಪರ್ಧಿಯೊಬ್ಬರು ಭಾಗವಹಿಸುವ ಸಿಹಿಸುದ್ದಿ ಈ ಸಂಚಲನಕ್ಕೆ ಕಾರಣ. ತ್ರಿಪುರಾದ ದೀಪಾ ಕರ್ಮಾಕರ್ ಈಗ ಮತ್ತೊಂದು ಸಾಧನೆಯ ಮೈಲಿಗಲ್ಲು ದಾಟಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುವ ಅರ್ಹತೆ ಗಿಟ್ಟಿಸಿದ್ದಾರೆ. ಅದರೊಂದಿಗೆ ವಿಶ್ವದ ಅತ್ಯುನ್ನತ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ದೇಶದ ಪ್ರಪ್ರಥಮ ಮಹಿಳಾ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   ಇಲ್ಲಿ ಶನಿವಾರ ರಾತ್ರಿ ನಡೆದ ಒಲಿಂಪಿಕ್ಸ್‌ ಅರ್ಹತಾ ಸ್ಪರ್ಧೆಯಲ್ಲಿ ಅವರು 52.698 ಪಾಯಿಂಟ್ಸ್‌ಗಳನ್ನು ಗಳಿಸಿ ಒಲಿಂಪಿಕ್ಸ್‌ಗೆ ಲಗ್ಗೆ ಹಾಕಿದರು.52 ವರ್ಷಗಳಿಂದ ಭಾರತದ ಯಾವುದೇ ಜಿಮ್ನಾಸ್ಟಿಕ್ಸ್‌ ಪಟುವು ಮಾಡದ ಸಾಧನೆಯನ್ನೂ ಅವರು ಮಾಡಿದರು. ಪುರುಷರ ವಿಭಾಗದಲ್ಲಿ 1964ರಲ್ಲಿ ಭಾರತದ ಆರು ಮಂದಿ ಜಿಮ್ನಾಸ್ಟಿಕ್ಸ್‌ ಪಟುಗಳು ಭಾಗವಹಿಸಿದ್ದರು. ನಂತರದ ಒಲಿಂಪಿಕ್ಸ್‌ಗಳಲ್ಲಿ ಯಾರೂ ಅರ್ಹತೆ ಪಡೆದಿರಲಿಲ್ಲ. ಇದೀಗ ದೀಪಾ ಆ ಸಾಧನೆ ಮಾಡಿದ್ದಾರೆ.ಇಲ್ಲಿಯವರೆಗೆ ಪುರುಷರ ವಿಭಾಗದಲ್ಲಿ ಒಟ್ಟು 11 ಸ್ಪರ್ಧಿಗಳು  (1952ರಲ್ಲಿ ಇಬ್ಬರು, 1956ರಲ್ಲಿ ಮೂವರು ಮತ್ತು 1964ರಲ್ಲಿ  ಆರು) ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.  ಅರ್ಹತಾ ಸುತ್ತಿನ ಎಲ್ಲ ಸ್ಪರ್ಧೆಗಳ ಲ್ಲಿಯೂ 22 ವರ್ಷದ ದೀಪಾ 14 ಪ್ರತಿ ಸ್ಪರ್ಧಿಗಳಿಂದ ಕಠಿಣ ಪೈಪೋಟಿ ಎದುರಿಸಿದರು.ವಾಲ್ಟ್‌ ವಿಭಾಗದಲ್ಲಿ  15.066 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು.   ನಿಖರವಾದ ಕೌಶಲ್ಯ ಪ್ರದರ್ಶಿಸುವ ಮೂಲಕ ಕರಾರುವಾಕ್ ಲ್ಯಾಂಡಿಂಗ್ ಮಾಡಿದ ಅವರು ಈ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು. ಆದರೆ, ಅನ್‌ಈವನ್ ಬಾರ್‌್ಸನಲ್ಲಿ ಅವರ ಆಟ ಉತ್ತಮವಾಗಿರಲಿಲ್ಲ. 14 ಸ್ಪರ್ಧಿಗಳಿದ್ದ ವಿಭಾಗದಲ್ಲಿ ಅವರು ಕೇವಲ 11.700 ಅಂಕಗಳನ್ನು ಮಾತ್ರ ಪಡೆದರು. ನಂತರ ಬ್ಯಾಲೆನ್ಸಿಂಗ್ ಬೀಮ್ ಮತ್ತು ಫ್ಲೋರ್‌ ಎಕ್ಸ್‌ರ್‌ಸೈಜ್‌ ವಿಭಾಗಗಳಲ್ಲಿ ಕ್ರಮವಾಗಿ 13.366 ಮತ್ತು 12.566 ಅಂಕಗಳನ್ನು ಕಲೆ ಹಾಕಿದರು.ಒಲಿಂಪಿಕ್ಸ್‌ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ಗೆ ಇದುವರೆಗೆ ಒಟ್ಟು 78 ವನಿತೆಯರು ಆಯ್ಕೆಯಾಗಿದ್ದರು. ದೀಪಾ 79ನೇ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ.ಪ್ರಥಮಗಳ ಸಾಲು: ಐದು ವರ್ಷ ವಯಸ್ಸಿನಿಂದಲೇ ಜಿಮ್ನಾಸ್ಟಿಕ್ಸ್‌ ತರಬೇತಿ ಪಡೆಯುತ್ತಿರುವ ದೀಪಾ ಕರ್ಮಾಕರ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ನಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಮೊದಲ ವನಿತೆ ಎಂಬ ಶ್ರೇಯವೂ ಅವರದ್ದಾಗಿದೆ.ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಮಹಿಳೆಯೆಂಬ ಅಗ್ಗಳಿಕೆಯನ್ನೂ ಅವರು ಪಡೆದಿದ್ದಾರೆ. ಆ ಸ್ಪರ್ಧೆಯಲ್ಲಿ  ದೀಪಾ ಐದನೇ ಸ್ಥಾನ ಪಡೆದಿದ್ದರು. ಆದರೆ, ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫರಾಗಿದ್ದರು.  

‘ದೀಪಾ ಅತ್ಯುತ್ತಮ ಅಂಕಗಳನ್ನು ಕಲೆಹಾಕಿದ್ದರು. ಇದರಿಂದ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದು ಬಹುತೇಕ ಖಚಿತವಾಗಿತ್ತು.ಇದೀಗ ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್ (ಎಫ್‌ಐಜಿ) ಅವರ ಆಯ್ಕೆಯನ್ನು ಘೋಷಿಸಿದೆ. ಭಾರತದ ಜಿಮ್ನಾಸ್ಟಿಕ್ಸ್‌ ಕ್ರೀಡಾಕ್ಷೇತ್ರಕ್ಕೆ ಇದು ಅಪಾರವಾದ ಹೆಮ್ಮೆಯ ವಿಷಯ’ ಎಂದು ಅಂತರರಾಷ್ಟ್ರೀಯ ರೆಫರಿ ದೀಪಕ್ ಕಾಗ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದ ಜಿಮ್ನಾಸ್ಟಿಕ್ಸ್‌ ಫೆಡರೇಷನ್‌ನಲ್ಲಿ   ಎರಡು ಬಣಗಳ ನಡುವಿನ ಜಟಾಪಟಿಗಳು ತಾರಕಕ್ಕೇರಿವೆ. ಅಧಿಕೃತ ಫೆಡರೇಷನ್ ಮಾನ್ಯತೆ ಗಳಿಸಲು ಎರಡು ಬಣಗಳ ನಡುವೆ ಕಿತ್ತಾಟಗಳು ನಡೆದಿವೆ. ಆದ್ದರಿಂದಾಗಿ ಜಿಮ್ನಾಸ್ಟಿಕ್‌ ಪಟುಗಳ ತರಬೇತಿ ಶಿಬಿರ ಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ನಡೆಸಲಾಗಿತ್ತು .

ಕಠಿಣ ಹಾದಿಯಲ್ಲಿ ಸಾಧನೆಯ ಹೆಜ್ಜೆ

ದೀಪಾ ಕರ್ಮಾಕರ್ ಅವರು ಸವೆಸಿರುವ  ಸಾಧನೆಯ ಹಾದಿ ಸರಳವಲ್ಲ. ಅವರು ಆರು ವರ್ಷದ ಬಾಲಕಿಯಾಗಿದ್ದಾಗ  ಜಿಮ್ನಾಸ್ಟಿಕ್ಸ್‌ ಕೋಚ್ ವಿಶ್ವೇಶ್ವರ್ ನಂದಿ ಅವರು ತರಬೇತಿ ನೀಡಲು ಮೊದಲಿಗೆ ಒಪ್ಪಿರಲಿಲ್ಲ. ಏಕೆಂದರೆ ಒಬ್ಬ ಜಿಮ್ನಾಸ್ಟಿಕ್ಸ್‌ ಪಟುವಿಗೆ ಇರಬೇಕಾದ ಆಕೃತಿಯ ಪಾದಗಳು ದೀಪಾಗೆ ಇರಲಿಲ್ಲ. ಜಿಗಿಯಲು, ತುದಿಗಾಲಿನಲ್ಲಿ ಓಡಲು ಅವರಿಗಿದ್ದ ಪಾದಗಳ ರಚನೆ ಸೂಕ್ತವಾಗಿರಲಿಲ್ಲ. ಆದರೆ, ಬಾಲಕಿಯ ಆಸಕ್ತಿ ಗಮನಿಸಿದ್ದ ನಂದಿ ನಂತರ ತರಬೇತಿ ಆರಂಭಿಸಿದ್ದರು.

ಅಂದಿನಿಂದ ಇಂದಿನವರೆಗೆ ನಂದಿ ಅವರೇ ದೀಪಾಗೆ ಕೋಚ್ ಆಗಿದ್ದಾರೆ.   2011ರಲ್ಲಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಐದು ಚಿನ್ನದ ಪದಕ ಗೆದ್ದ ನಂತರವೂ ದೀಪಾ ಅತ್ಯಾಧುನಿಕ ಫ್ಲೋರ್‌ ಮ್ಯಾಟ್‌ನಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಸಮತಟ್ಟಾದ ಮ್ಯಾಟ್‌ ಗಳು ಇಲ್ಲದಿದ್ದರೂ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕದ ಸಾಧನೆ ಮಾಡಿದ್ದರು.

ಟ್ವೀಟ್

ದೀಪಾ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರು ತಮ್ಮ ಪ್ರತಿಭೆಯ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ. ತಮ್ಮ ಸಾಧನೆ ಮೂಲಕ ಭಾರತದ ಯುವಜನರಿಗೆ ಸ್ಫೂರ್ತಿ ತುಂಬಿದ್ದಾರೆ.

–ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ದೀಪಾ ಕರ್ಮಾಕರ್ ಅವರು ಟಾಪ್ಸ್‌ ಯೋಜನೆಗೆ ಅರ್ಹತೆ ಗಳಿಸಿದ್ದಾರೆ. ಅವರ ಮುಂದಿನ ಸಿದ್ಧತೆಗಾಗಿ ₹ 30 ಲಕ್ಷ ಪಡೆಯಲಿದೆ. ನಾಲ್ಕು ಹಂತದ ವಿಶೇಷ ತರಬೇತಿಯನ್ನೂ ಕೂಡ ಅವರು ಪಡೆಯುವರು.

–ಸಾಯ್  (ಭಾರತ ಕ್ರೀಡಾ ಪ್ರಾಧಿಕಾರ)ಭಾರತದ ಜಿಮ್ನಾಸ್ಟಿಕ್ಸ್‌ ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದೀರಿ. ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಭಾಗವಹಿಸುವ ಪ್ರಥಮ ಭಾರತೀಯ ಮಹಿಳೆ ಎಂಬ ಗೌರವ ನಿಮ್ಮದಾಗಿದೆ. ನಿಮಗೆ ಶುಭಾಶಯಗಳು.

ಸರ್ವಾನಂದ್ ಸೋನೊವಾಲ್, ಕೇಂದ್ರ ಕ್ರೀಡಾ ಸಚಿವರುಹಲವು ಪ್ರಥಮಗಳ ಸಾಧನೆ ಮಾಡಿರುವ ನಿಮಗೆ ಭವಿಷ್ಯದಲ್ಲಿಯೂ ಇನ್ನೂ ಹಲವು ಪ್ರಥಮಗಳು ಬರಲಿ.

ವಿಶ್ವನಾಥನ್ ಆನಂದ್, ಚೆಸ್ ಗ್ರ್ಯಾಂಡ್‌ಮಾಸ್ಟರ್ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಪ್ರಪ್ರಥಮ ಮಹಿಳಾ ಜಿಮ್ನಾಸ್ಟಿಕ್‌ ಪಟುವಾಗಿರುವ ದೀಪಾ ಅವರು ಉನ್ನತ ಸಾಧನೆ ಮಾಡುವಂತಾಗಲಿ.

–ವೀರೇಂದ್ರ ಸೆಹ್ವಾಗ್‌, ಮಾಜಿ ಕ್ರಿಕೆಟಿಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.