ಶನಿವಾರ, ಮೇ 21, 2022
20 °C

ರುದ್ರ ರಮ್ಯ ಬೊರ್ರಾ ಗುಹೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರುದ್ರ ರಮ್ಯ ಬೊರ್ರಾ ಗುಹೆಗಳು

ನಿರಂತರವಾಗಿ ಹರಿದ ನದಿ ಗುಹೆಗಳನ್ನು ನಿರ್ಮಿಸಿ, ಅವುಗಳೊಳಗೆ ತರಹೇವಾರಿ ಶಿಲಾವಿನ್ಯಾಸಗಳನ್ನೂ ರೂಪಿಸಿದೆ. ಇದು ಇರುವುದು ಆಂಧ್ರಪ್ರದೇಶದ ವಿಶಾಖ ಪಟ್ಟಣ ಜಿಲ್ಲೆಯಲ್ಲಿ. ಈ ಬೊರ್ರಾ ಗುಹೆಗಳನ್ನು ಬ್ರಿಟನ್ ಭೌಗೋಳಿಕ ಶಾಸ್ತ್ರಜ್ಞ ವಿಲಿಯಂ ಕಿಂಗ್ 1807ರಲ್ಲಿ ಕಂಡು ಹಿಡಿದ. ಗೋಸ್ತನಿ ನದಿ ನಿರಂತರವಾಗಿ ಹರಿದ ಪರಿಣಾಮ ಇದು ರೂಪ ತಳೆದಿದೆ ಎನ್ನಲಾಗಿದೆ.ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಇವು ನೈಸರ್ಗಿಕವಾಗಿ ರಚಿತವಾದವು. ವಿಶಾಖಪಟ್ಟಣದಿಂದ 92 ಕಿ.ಮೀ ಅಂತರದಲ್ಲಿ ಇರುವ ಬೊರ್ರಾ ಗುಹೆಗಳು 100 ಮೀಟರ್ ಅಗಲ ಮತ್ತು 75 ಮೀಟರ್ ಉದ್ದ ಇವೆ. ಸಮುದ್ರ ಮಟ್ಟದಿಂದ 800ರಿಂದ 1300 ಎತ್ತರದಲ್ಲಿ ಇರುವ ಈ ಬೊರ್ರಾ ಗುಹೆಗಳು ಹಸಿರು ಬೆಟ್ಟ ಗುಡ್ಡಗಳ ನಡುವೆ ಇದೆ. ಕಲ್ಲಿನಲ್ಲಿ ಅರಳಿರುವ ಕಲಾಕೃತಿಗಳನ್ನು- ‘ಶಿಲಾಕಾವ್ಯ’ವನ್ನು- ನೋಡಲಿಕ್ಕೆ ಇಲ್ಲಿಗೆ ಪ್ರವಾಸಿಗರ ದಂಡು ಬರುತ್ತದೆ.ನೀರಿನಲ್ಲಿರುವ ಹ್ಯೂಮಿಕ್ ಆಸಿಡ್ ಸುಣ್ಣದ ಕಲ್ಲಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್ ಜೊತೆ ಪ್ರತಿಕ್ರಿಯಿಸಿ ಬಂಡೆಯಲ್ಲಿ ಇರುವ ಖನಿಜಗಳನ್ನು ಕರಗಿಸುವ ರಾಸಾಯನಿಕ ಪ್ರಕ್ರಿಯೆಯಲ್ಲಿ ಬಂಡೆಗಳು ಗುಹೆಗಳಾಗಿ ರೂಪಾಂತರಗೊಂಡಿವೆ.ಇಲ್ಲಿ ನೀರು ಹಲವು ವರ್ಷದವರೆಗೆ ನಿರಂತರವಾಗಿ ಹರಿದಿರುವುದರ ಪರಿಣಾಮ ಗುಹೆಗಳು ವಿಶಿಷ್ಟ ಆಕಾರ ಪಡೆದಿವೆ. ಬಂಡೆಗಳನ್ನು ಕೊರೆದು, ಅವುಗಳ ನಡುವೆ ಹರಿದ ನೀರು ಪೌರಾಣಿಕ ವ್ಯಕ್ತಿಗಳು, ಪ್ರಾಣಿಗಳನ್ನು ಹೋಲುವಂಥ ವಿನ್ಯಾಸ ರೂಪಿಸಿವೆ. ಅಲ್ಲಿರುವ ಪ್ರತಿಯೊಂದು ಬಂಡೆಗಳ ವಿನ್ಯಾಸಕ್ಕೂ ಶಿವ ಪಾರ್ವತಿ, ತಾಯಿ ಮಗು, ಋಷಿ ಗಡ್ಡ, ಮಾನವನ ಮಿದುಳು, ಮೊಸಳೆ, ಹುಲಿ, ಹಸುವಿನ ಕೆಚ್ಚಲು ಎಂದು ಹೆಸರಿಡಲಾಗಿದೆ. ಮಹಾಶಿವರಾತ್ರಿ ಹಬ್ಬದಂದು ಇಲ್ಲಿ ಬುಡಕಟ್ಟು ಜನರು ಹಾಡು ಹಸೆ ಹೇಳುತ್ತಾ ಜಾಗರಣೆ ಮಾಡುವುದು ವಾಡಿಕೆ. ಇದೀಗ ಗುಹೆಯೊಳಗೆ ಬಣ್ಣಬಣ್ಣದ ಬೆಳಕನ್ನು ಅಳವಡಿಸಲಾಗಿದೆ.ವಿಶಾಖಪಟ್ಟಣದಿಂದ ಅರಕು ಕಣಿವೆಗೆ ಹೋಗುವ ರೈಲಿನಲ್ಲಿ ಹಸಿರು ಬೆಟ್ಟಗಳ ನಡುವೆ 42 ಸುರಂಗ ಮಾರ್ಗಗಳನ್ನು ದಾಟಿ ಬೊರ್ರಾ ಗುಹೆಗಳ ರೈಲು ನಿಲ್ದಾಣವನ್ನು ತಲುಪಬಹುದು. ಅದೊಂದು ರುದ್ರ ರಮ್ಯ ಪ್ರಯಾಣ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.