ಭಾನುವಾರ, ಜೂನ್ 20, 2021
28 °C

ರೆಡ್ಡಿ, ಅಲಿಖಾನ್ ಮತ್ತೆ ಸಿಬಿಐ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಸಹಚರ ಮೆಹಫೂಜ್ ಅಲಿಖಾನ್‌ನನ್ನು ಇನ್ನೂ ನಾಲ್ಕು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ರೆಡ್ಡಿ ಅವರನ್ನು ಮಾ.2ರಿಂದ ಹತ್ತು ದಿನಗಳ ಕಾಲ ಮತ್ತು ಅಲಿಖಾನ್‌ನನ್ನು ಮಾ.5ರಿಂದ ಏಳು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಬ್ಬರೂ ಆರೋಪಿಗಳ ಪೊಲೀಸ್ ಬಂಧನದ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಲಾಗಿದೆ.

ಒತ್ತಡ ಹೇರಿಕೆ ಆರೋಪ: ಅಲಿಖಾನ್‌ನನ್ನು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ನ್ಯಾಯಾಲಯಕ್ಕೆ ಬೆಳಿಗ್ಗೆ 11ಕ್ಕೆ ಹಾಜರುಪಡಿಸಲಾಯಿತು. ಆಗ ಆರೋಪಿ ಪರ ವಕೀಲರು, ಮೂರು ಅರ್ಜಿಗಳನ್ನು ಸಲ್ಲಿಸಿದರು. ಮೊದಲನೇ ಅರ್ಜಿಯಲ್ಲಿ ಜಾಮೀನು ಕೋರಿದರೆ, ಎರಡನೇ ಅರ್ಜಿಯಲ್ಲಿ ಪ್ರಕರಣದ ಆರೋಪಿಗಳ ಪಟ್ಟಿಯಿಂದ ಅಲಿಖಾನ್ ಹೆಸರನ್ನು ಕೈಬಿಡುವಂತೆ ಕೋರಲಾಗಿದೆ. ಮೂರನೇ ಅರ್ಜಿಯಲ್ಲಿ, `ಪ್ರಕರಣದ ಮಾಫಿ ಸಾಕ್ಷಿದಾರ ಆಗುವಂತೆ ಸಿಬಿಐ ಪೊಲೀಸರು ಒತ್ತಡ ಹೇರುತ್ತಿದ್ದಾರೆ~ ಎಂಬ ಆರೋಪ ಮಾಡಲಾಗಿದೆ.

`ಜನಾರ್ದನ ರೆಡ್ಡಿ ಅವರ ವಿರುದ್ಧ ಮಾಫಿ ಸಾಕ್ಷಿದಾರ ಆಗುವಂತೆ ಸಿಬಿಐ ಪೊಲೀಸರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನನಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧ ಇಲ್ಲ. ಸಿಬಿಐ ವಶಕ್ಕೆ ಒಪ್ಪಿಸಿದರೆ ನಾನು ಮೌನವಾಗಿ ಇರಬಹುದು. `ಮೌನ ಮೂಲಭೂತ ಹಕ್ಕು~. ಅದನ್ನು ಬಳಸಲು ನನಗೆ ಅವಕಾಶವಿದೆ. ಹೈದರಾಬಾದ್‌ನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷಿಯಾಗಿ ನನಗೆ ಸಮನ್ಸ್ ನೀಡಲಾಗಿತ್ತು. ಇಲ್ಲಿಯೂ ಸಾಕ್ಷಿಯಾಗಿ ಪರಿಗಣಿಸಬೇಕು ~ ಎಂದು ಅಲಿಖಾನ್ ಅರ್ಜಿಯಲ್ಲಿ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಅಲಿಖಾನ್ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು, ಸಿಬಿಐ ಪರ ವಕೀಲರನ್ನು ಈ ಬಗ್ಗೆ ಪ್ರಶ್ನಿಸಿದರು. ಆರೋಪಿಯ ವಿಚಾರಣೆ ಬಾಕಿ ಇರುವುದರಿಂದ ಇನ್ನೂ ನಾಲ್ಕು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ಒಪ್ಪಿಸಬೇಕು ಎಂದು ವಕೀಲರು ಮನವಿ ಮಾಡಿದರು. ಈ ಬೇಡಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಇದೇ 16ರವರೆಗೆ ಅಲಿಖಾನ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸಿದರು.

`ನಾಲ್ಕು ದಿನಗಳಿಂದ ಪ್ರಶ್ನಿಸಿಲ್ಲ~: ಹೈಕೋರ್ಟ್ ಸೂಚನೆಯಂತೆ ಜನಾರ್ದನ ರೆಡ್ಡಿ ಅವರ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದಲ್ಲಿ ನಡೆಸಲಾಯಿತು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ವಿಚಾರಣೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಇನ್ನೂ ನಾಲ್ಕು ದಿನಗಳ ಕಾಲ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಅರ್ಜಿ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯೆ ರೀತಿಯಲ್ಲಿ ಅರ್ಜಿ ಸಲ್ಲಿಸಿದ ರೆಡ್ಡಿ ಪರ ವಕೀಲರು, ನಾಲ್ಕು ದಿನಗಳಿಂದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿಲ್ಲ. ಮತ್ತೆ ಪ್ರಶ್ನಿಸುವ ಅಗತ್ಯವೇ ಇಲ್ಲದಿರುವುದರಿಂದ ಸಿಬಿಐ ನಾಲ್ಕು ದಿನಗಳಿಂದ ವಿಚಾರಣೆ ನಡೆಸಿಲ್ಲ. ಈಗ ಅವರನ್ನು ಮತ್ತೆ ಸಿಬಿಐ ವಶಕ್ಕೊಪ್ಪಿಸುವ ಅಗತ್ಯವೇ ಇಲ್ಲ. ಈ ಕಾರಣದಿಂದ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಬಾರದು ಎಂದು ಮನವಿ ಮಾಡಿದರು.

ಆರೋಪಿ ಪರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, `ಸಿಬಿಐ ಅಧಿಕಾರಿಗಳಿಂದ ಕಿರುಕುಳ ಆಗುತ್ತಿದೆಯೇ~ ಎಂದು ಪ್ರಶ್ನಿಸಿದರು. `ಇಲ್ಲ~ ಎಂದು ಜನಾರ್ದನ ರೆಡ್ಡಿ ಉತ್ತರಿಸಿದರು. ನಾಲ್ಕು ದಿನಗಳಿಂದ ಪ್ರಶ್ನಿಸಿಲ್ಲ ಎಂಬ ಹೇಳಿಕೆ ಬಗ್ಗೆಯೂ ಪ್ರಶ್ನಿಸಿದರು. `ಅದು ಸತ್ಯ~ ಎಂದು ರೆಡ್ಡಿ ಉತ್ತರ ನೀಡಿದರು. ನಂತರ ಪ್ರಕರಣಕ್ಕೆ ಸಂಬಂಧಿಸಿದ ದಿನಚರಿ ಪುಸ್ತಕವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಬಿಐ ಅಧಿಕಾರಿಗಳು, `ಜನಾರ್ದನ ರೆಡ್ಡಿ ಅವರ ವಿಚಾರಣೆ ಇನ್ನೂ ಬಾಕಿ ಇದೆ~ ಎಂದು ತಿಳಿಸಿದರು. ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಮಾ.16ರವರೆಗೂ ರೆಡ್ಡಿ ಅವರನ್ನೂ ಸಿಬಿಐ ವಶಕ್ಕೆ ಒಪ್ಪಿಸಿದರು.

ಸಿಬಿಐಗೆ ಹೈಕೋರ್ಟ್ ನೋಟಿಸ್

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬಿಐಗೆ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿದೆ.

ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿ ಇದೇ 2 ರಂದು ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿ ರೆಡ್ಡಿ ಸಲ್ಲಿಸಿರುವ ಅರ್ಜಿ ಇದಾಗಿದೆ.

ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 269 (ಸಿ) ಕಲಮಿನ ಅನ್ವಯ ಮಾರ್ಚ್ 7ರ ನಂತರ ತಮ್ಮನ್ನು ಪೊಲೀಸರ ವಶಕ್ಕೆ ನೀಡುವಂತಿಲ್ಲ. ಆದರೂ 12ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ತಾವು ಆಕ್ಷೇಪಣೆ ಸಲ್ಲಿಸಿದರೂ ಅದನ್ನು ನ್ಯಾಯಾಧೀಶರು ಗಮನಕ್ಕೆ ತೆಗೆದುಕೊಳ್ಳದೇ ಅಚ್ಚರಿಯ  ಆದೇಶ ಹೊರಡಿಸಿದ್ದಾರೆ. ಇದು ಕಾನೂನು ಉಲ್ಲಂಘನೆ ಎನ್ನುವುದು ರೆಡ್ಡಿ ವಾದ. ವಿಚಾರಣೆಯನ್ನು ಮುಂದೂಡಲಾಗಿದೆ.

ಶ್ರೀರಾಮುಲುಗೆ ಜೈಕಾರ

ವಿಚಾರಣೆ ಬಳಿಕ ವಾಪಸ್ ಕರೆದೊಯ್ಯುವ ಸಂದರ್ಭದಲ್ಲಿ ಸಿಬಿಐ ವಾಹನದಿಂದ ಇಣುಕಿದ ಜನಾರ್ದನ ರೆಡ್ಡಿ, `ಶ್ರೀರಾಮುಲುಗೆ ಜಯವಾಗಲಿ, ಸತ್ಯಕ್ಕೆ ಜಯ ದೊರೆಯುತ್ತದೆ~ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಬಿಗಿ ಭದ್ರತೆಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ವಾಪಸ್ ತೆರಳುವಾಗ ಸಿಬಿಐ ವಾಹನದ ಹಿಂದೆ ದೌಡಾಯಿಸಿದ ದೃಶ್ಯ ಮಾಧ್ಯಮಗಳ ಕ್ಯಾಮೆರಾ ಎದುರು ರೆಡ್ಡಿ ಅವರು ತಮ್ಮ ಗೆಳೆಯ ಬಿ.ಶ್ರೀರಾಮುಲು ಅವರಿಗೆ ಜೈಕಾರ ಹಾಕಿದರು.

ನ್ಯಾಯಾಲಯದಿಂದ 500 ಮೀಟರ್ ದೂರದಲ್ಲೇ ಪ್ರವೇಶ ನಿರ್ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಸಂಪರ್ಕಿಸುವ ರಸ್ತೆಯುದ್ದಕ್ಕೂ ಬಿಗಿ ಭದ್ರತೆ ಒದಗಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.