ಗುರುವಾರ , ಮೇ 19, 2022
20 °C

ರೆಸಾರ್ಟ್‌ಗಳಿಗೆ ಅಂಕುಶ: ಜಿಲ್ಲಾಧಿಕಾರಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ ಮತ್ತು ಅಪರೂಪದ ಗಿರಿಶಿಖರವೆನಿಸಿದ್ದ ಚಂದ್ರದ್ರೋಣ ಪರ್ವತ ಶ್ರೇಣಿಗೆ ಕಂಟಕ ಪ್ರಾಯವಾಗಿದ್ದ ರೆಸಾರ್ಟ್ ಕಾಮಗಾರಿಗಳಿಗೆ ಕೊನೆಗೂ ಅಂಕುಶ ಬಿದ್ದಿದೆ.ಕಳೆದ ಒಂದು ವರ್ಷದಲ್ಲಿ ಗಿರಿತಪ್ಪಲಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತುತ್ತಿದ್ದ ಬೃಹತ್ ಪ್ರಮಾಣದ ರೆಸಾರ್ಟ್ ಕಾಮಗಾರಿಗಳಿಂದಾಗುವ ಪ್ರತಿಕೂಲ ಪರಿಣಾಮದ ಬಗ್ಗೆ `ಪ್ರಜಾವಾಣಿ~ ಮತ್ತು `ಡೆಕ್ಕಾನ್ ಹೆರಾಲ್ಡ್~ ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ರೆಸಾರ್ಟ್ ಮತ್ತು ಬೃಹತ್ ಪ್ರಮಾಣದ ವಾಣಿಜ್ಯ ಉದ್ದೇಶದ ಹೋಂ ಸ್ಟೇಗಳ ನಿರ್ಮಾಣಕ್ಕೆ ಪರಿಸರ ಸಂರಕ್ಷಣೆ ಸ್ವಯಂ ಸೇವಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರೆಸಾರ್ಟ್‌ಗಳ ನಿರ್ಮಾಣಕ್ಕೆ ನೀಡಿದ್ದ ಭೂಪರಿವರ್ತನಾ ಮಂಜೂರಾತಿಯನ್ನು ರದ್ದುಪಡಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಸರ್ವೆ ನಂಬರ್ 148/2ರಲ್ಲಿ 4.35 ಎಕರೆ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲು ಸಟೋರಿ ಎಕೊ ಅಡ್ವೆಂಚರ್ ರೆಸಾರ್ಟ್ ಸಂಸ್ಥೆಗೆ ನೀಡಿದ್ದ ಭೂ ಪರಿವರ್ತನೆ ಮಂಜೂರಾತಿಯನ್ನು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಆದೇಶ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.ಚಂದ್ರದ್ರೋಣ ಗಿರಿ ಶ್ರೇಣಿಯಲ್ಲಿ ಬೃಹತ್ ಪ್ರಮಾಣದ ರೆಸಾರ್ಟ್ ನಿರ್ಮಿಸಿದರೆ ಅತ್ಯಂತ ಸೂಕ್ಷ್ಮ ಪ್ರದೇಶ ಪರಿಸರಕ್ಕೆ ಹಾನಿಯಾಗುತ್ತದೆ. ವನ್ಯಜೀವಿಗಳ ಮುಕ್ತ ಓಡಾಟಕ್ಕೂ ಭಂಗ ಉಂಟಾಗುತ್ತದೆ. ಅಲ್ಲದೆ ನೈಸರ್ಗಿಕವಾಗಿ ಹರಿದು ನಿತ್ಯಹರಿದ್ವರ್ಣ ಕಾಡು ಸದಾ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದ ನೀರಿನ ಸೆಲೆಗಳಿಗೂ ಕಂಟಕವಾಗುವ ಅಪಾಯವಿದೆ ಎಂದು ಪರಿಸರಾಸಕ್ತರು ಮಂಜೂರಾತಿ ನೀಡದಂತೆ ಒತ್ತಾಯಿಸಿದ್ದರು.ಸಟೋರಿ ಸಂಸ್ಥೆಗೆ ರೆಸಾರ್ಟ್ ನಿರ್ಮಿಸಲು ಭೂ ಪರಿವರ್ತನೆಗಾಗಿ ನೀಡಿದ್ದ ಭೂಪರಿವರ್ತನೆ ಮಂಜೂರಾತಿ ಆದೇಶ ಜಿಲ್ಲಾಧಿಕಾರಿಗಳು ವಾಪಸ್ ಪಡೆದಿರುವುದನ್ನು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್ ವ್ಯವಸ್ಥಾಪಕ ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್-ಸಿ ಟ್ರಸ್ಟಿ ಶ್ರೀದೇವ್ ಹುಲಿಕೆರೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಸ್ವಾಗತಿಸಿದ್ದಾರೆ.ಸಟೋರಿ ಎಕೋ ಅಡ್ವೆಂಚರ್ ಸಂಸ್ಥೆ ರೆಸಾರ್ಟ್ ನಿರ್ಮಿಸುತ್ತಿರುವ ಪ್ರದೇಶ ಕಬ್ಬಿಣದ ಅದಿರು ನಿಕ್ಷೇಪದಿಂದ ಕೂಡಿದೆ. ಇಲ್ಲಿ ಶೇಖರಣೆಯಾಗಿರುವ ಮಣ್ಣಿನ ಮೇಲೆ ಕಾಮಗಾರಿ ಕೈಗೊಂಡರೆ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುವ ಅಪಾಯವಿದೆ. ಅಲ್ಲದೆ ರೆಸಾರ್ಟಿಗೆ ಬರುವ ಜನಸಂದಣಿ ಮತ್ತು ವಾಹನಗಳ ಸಂಚಾರ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ತಂದೊಡ್ಡಲಿದೆ.ತ್ಯಾಜ್ಯ ನೀರನ್ನು ಹರಿಯುವ ಹಳ್ಳಕ್ಕೆ ಬಿಟ್ಟರೆ ಜಲಮಾಲಿನ್ಯವಾಗಿ ನೈಸರ್ಗಿಕ ಜಲಮೂಲಗಳಿಗೂ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಭೂಪರಿವರ್ತನಾ ಮಂಜೂರಾತಿ ರದ್ದುಪಡಿಸಿದ್ದಾರೆ.ಐ.ಡಿ. ಪೀಠದ ಈ ಪ್ರದೇಶ ಶೋಲಾ ಕಾಡು ಹಾಗೂ ಹುಲ್ಲುಗಾವಲು ಹೊಂದಿದೆ. ಔಷಧಿ ಸಸ್ಯಗಳಿಂದಲೂ ಈ ಕಾಡುಗಳು ಸಮೃದ್ಧವಾಗಿದೆ. ಭದ್ರಾ ಹುಲಿ ಯೋಜನೆಯಿಂದ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಈ ಸೂಕ್ಷ್ಮ ಪ್ರದೇಶ ಬರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡ ರೆಸಾರ್ಟ್ ನಿರ್ಮಾಣಕ್ಕೆ ಆಕ್ಷೇಪ ಎತ್ತಿತ್ತು. ಅಲ್ಲದೆ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಒತ್ತುವರಿ ಮಾಡಿರುವ ಬಗ್ಗೆಯೂ ಇಲಾಖೆಗಳು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.