ಸೋಮವಾರ, ಜನವರಿ 20, 2020
29 °C

ರೆಸಾರ್ಟ್‌ನಿಂದ ಜಿಂಕೆ ಕೊಂಬುಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕಿನ ಗುಂಡಮಗೆರೆ ಹೊಸಹಳ್ಳಿ ರಸ್ತೆಯಲ್ಲಿರುವ ಗ್ರೀನ್ ವ್ಯಾಲಿ ರೆಸಾರ್ಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಂಕೆ ಕೊಂಬುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. ರೆಸಾರ್ಟ್‌ನಲ್ಲಿ 15 ಕೊಂಬುಗಳು, ನಾಲ್ಕು ಜೀವಂತ ಜಿಂಕೆಗಳು ಪತ್ತೆಯಾಗಿವೆ.ಪ್ರಕರಣ ಪತ್ತೆ: ಶುಕ್ರವಾರ ಬೆಳಗ್ಗೆ ತಾಲ್ಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಹೆಣ್ಣು ಜಿಂಕೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿ ಕಚ್ಚಲು ಆರಂಭಿಸಿವೆ. ನಾಯಿಗಳಿಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರಾದ ಅಶೋಕ್, ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.ಆದರೆ ಇದಕ್ಕು ಮುನ್ನ ಬುಧವಾರ ಇದೇ ಗ್ರಾಮದ ಗಂಗಾಧರ್ ಎಂಬುವವರ ತೋಟದಲ್ಲಿ ಇದೇ ಜಿಂಕೆ ಕಾಣಿಸಿಕೊಂಡಿತ್ತು. ಇದನ್ನು ಗಂಗಾಧರ್ ರಕ್ಷಿಸಿ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದಾರೆ. ವಿಷಯ ತಿಳಿದ ಗ್ರೀನ್ ವ್ಯಾಲಿ ರೆಸಾರ್ಟ್‌ನವರು ಇಲ್ಲಿಗೆ ಬಂದು `ನಾವು ಸಾಕಿದ್ದ ಜಿಂಕೆ ತಪ್ಪಿಸಿಕೊಂಡು ಬಂದಿದೆ. ಜಿಂಕೆಯನ್ನು ನಮ್ಮ  ವಶಕ್ಕೆ ನೀಡಬೇಕು~ ಎಂದು ಗ್ರಾಮಸ್ಥರನ್ನು ಆಗ್ರಹಿಸಿದ್ದಾರೆ. ಅಷ್ಟರಲ್ಲಿ ಇಲ್ಲಿಂದಲ್ಲೂ ಜಿಂಕೆ ತಪ್ಪಿಸಿಕೊಂಡು ಹೋಗಿದ್ದು ಮತ್ತೆ ಶುಕ್ರವಾರ ಬೆಳಿಗ್ಗೆ ಅಶೋಕ್ ಅವರಿಗೆ ಸಿಕ್ಕಿದೆ.ಘಟನೆಯ ನಂತರ ಅನುಮಾನಗೊಂಡ ರಾಜ್ಯ ರೈತ ಶಕ್ತಿ ಕಾರ್ಯಕರ್ತರು ಗ್ರೀನ್ ವ್ಯಾಲಿ ರೆಸಾರ್ಟ್‌ಗೆ ದಾಳಿ ನಡೆಸಿದಾಗ, ಅಲ್ಲಿನ ಅಡುಗೆ ಮನೆಯಲ್ಲಿ  ಜಿಂಕೆ ಕೊಂಬುಗಳು ಹಾಗೂ ನಾಲ್ಕು ಜೀವಂತ ಜಿಂಕೆಗಳು ಪತ್ತೆಯಾಗಿವೆ.ಈ ಬಗ್ಗೆ ಮಾಹಿತಿ ನೀಡಿದ, ರಾಜ್ಯ ರೈತ ಶಕ್ತಿ ಅಧ್ಯಕ್ಷ ಹೊನ್ನಘಟ್ಟ ಮಹೇಶ್, ಗ್ರೀನ್ ವ್ಯಾಲಿ ರೆಸಾರ್ಟ್‌ಗೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಜಿಂಕೆ ಮಾಂಸವನ್ನು ಬಳಸಲಾಗುತ್ತಿದೆ.1998ರಲ್ಲಿ ಎರಡು ಜಿಂಕೆಗಳ ಸಾಕಾಣಿಕೆಗೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 12 ಜಿಂಕೆಗಳು ಸಾವನ್ನಪ್ಪಿವೆ ಎಂದು ಸುಳ್ಳು ಲೆಕ್ಕ ನೀಡುತ್ತಿದ್ದಾರೆ. ಆದರೆ ಜಿಂಕೆಗಳು ಸಾವನ್ನಪ್ಪಿರುವ ಬಗ್ಗೆ ಮಾತ್ರ ಅರಣ್ಯ ಇಲಾಖೆಗೆ ಮಾಹಿತಿಯೇ ನೀಡಿಲ್ಲ.

 

ಅಡುಗೆ ಮನೆಯಲ್ಲಿ ದೊರೆತಿರುವ ಕೊಂಬುಗಳ ಪೈಕಿ ಕೆಲವು ಇನ್ನು ಹಸಿಯಾಗಿಯೇ ಇದ್ದು ನಾಲ್ಕೈದು ದಿನಗಳ ಹಿಂದೆಯಷ್ಟೇ ಜಿಂಕೆಯಿಂದ ಬೇರ್ಪಡಿಸಲಾಗಿವೆ. ಈ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅರಣ್ಯ ಇಲಾಖೆ ಮತ್ತು ರೆಸಾರ್ಟ್ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಸ್ಪಷ್ಟನೆ: ಜಿಂಕೆ ಮಾಂಸವನ್ನು ಇಲ್ಲಿ ಬಳಸುತ್ತಿಲ್ಲ. ರೆಸಾರ್ಟ್‌ನ ಉದ್ಯಾನದಲ್ಲಿ ಮೇಯಿಸಲು ಐದು ಜಿಂಕೆಗಳನ್ನು ಸಾಕಲಾಗಿದೆ. ಇದರಲ್ಲಿ ಒಂದು ತಪ್ಪಿಸಿಕೊಂಡು ಅಂತರಹಳ್ಳಿ ಗ್ರಾಮಕ್ಕೆ ಹೋಗಿದೆ. ಕೊಂಬುಗಳು ಇಲ್ಲಿಯೇ ಸಾವನ್ನಪ್ಪಿರುವ ಜಿಂಕೆಗಳವು. ಹೊರಗಿನಿಂದ ಯಾವುದೇ ಜಿಂಕೆಗಳನ್ನು ತಂದಿಲ್ಲ ಎಂದು ಗ್ರೀನ್‌ವ್ಯಾಲಿ ರೆಸಾರ್ಟ್‌ನ ಸಹಾಯಕ ವ್ಯವಸ್ಥಾಪಕ ಅಧಿಕಾರಿ ವೆಂಕೋಬ್‌ರಾವ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)