ಆದಿ ಮಾನವನ ಜೀವನ ಹೇಗೆ ಆರಂಭವಾಯಿತು ಎನ್ನುವುದು ಕುತೂಹಲದ ಸಂಗತಿ. ಮಾತನಾಡುವ ಜ್ಞಾನವೇ ಇಲ್ಲದಿರುವಾಗ ಮನದ ಭಾವನೆಗಳನ್ನು ಬೇರೊಬ್ಬರಿಗೆ ಪ್ರವಹಿಸಲು ಆತನಿಗೆ ಮಾಧ್ಯಮವಾದುದು ರೇಖೆ. ಈ ರೇಖೆಗಳೇ ದೃಶ್ಯ ಭಾಷೆಯಾಗಿರಬೇಕು. ಅವುಗಳ ಮೂಲಕವೇ ಆದಿ ಮಾನವನ ಸಂವಹನ ನಡೆದಿರಬಹುದು. ಆಂತರಿಕ ಸಂವೇದನೆಗಳನ್ನು ರೇಖಾ ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದ್ದಾನೆ. ಈ ರೀತಿಯ ರೇಖೆಗಳ ಚಟುವಟಿಕೆ ಅವನಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸಿ ಚಿತ್ರಜ್ಞಾನವನ್ನು ವೃದ್ಧಿಸಿರಬಹುದು. ಇದು ಚಿತ್ರಗಳ ಹುಟ್ಟುವಿಕೆಗೆ ಭೂಮಿಕೆಯೂ ಆಗಿರಬೇಕು.

ಈ ಬಗೆಯ ಆದಿ ಮಾನವನ ಚಿತ್ರಗಳು ಬಹುಭಾಗಗಳಲ್ಲಿ ಕಂಡು ಬರುತ್ತವೆ. ಇದನ್ನು ಗುಹಾಂತರ ಚಿತ್ರ, ಕಲ್ಲಾಸರೆಯ ಚಿತ್ರ, ಬಯಲು ಬಂಡೆ ಚಿತ್ರ ಎಂದು ವಿಂಗಡಿಸಬಹುದು. ಈ ರೀತಿಯ ಚಿತ್ರಗಳು ಬಾಗಲಕೋಟೆ (ಬಾದಾಮಿ), ಬಳ್ಳಾರಿ (ಹಂಪಿ), ರಾಯಚೂರು, ಕೊಪ್ಪಳ, ಉತ್ತರ ಕನ್ನಡ (ಕಾರವಾರ) ತುಮಕೂರು, ಚಿತ್ರದುರ್ಗ ಮುಂತಾದ ಭಾಗಗಳಲ್ಲಿ ಕಾಣಬರುತ್ತವೆ.

ಈ ಪೈಕಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಈ ರೇಖಾಚಿತ್ರ ಅಧಿಕವಾಗಿ ಗೋಚರವಾಗಿವೆ. ಕೆಲವು ರೇಖೆಗಳನ್ನು ಶುದ್ಧ ಬಿಳಿ ಮಣ್ಣು, ಪ್ರಾಣಿಗಳ ಕೊಬ್ಬು, ಅಂಟು ದ್ರವ ಮುಂತಾದವುಗಳ ಮಿಶ್ರಣದಿಂದ ಚಿತ್ರಿಸಲಾಗಿದೆ. ಇವುಗಳನ್ನು ಗುಹೆ ಮತ್ತು ಕಲ್ಲಿನ ಮೇಲೆ ಕಾಣಬಹುದು. ಮೇಲಿನ ಬಿಳಿ ಮಣ್ಣಿನ ಬದಲಾಗಿ ಕೆಂಪು ಮಣ್ಣು, ಕೆಂಪು ಹೂಗಳು, ಪ್ರಾಣಿಗಳ ಕೊಬ್ಬು ಹಾಗೂ ರಕ್ತದ ಜೊತೆಗೆ ಅಂಟು ದ್ರವ ಸೇರಿಸಿ ಇನ್ನು ಕೆಲವು ಚಿತ್ರಣ ಮೂಡಿಬಂದಿವೆ. ಉಳಿದವು ಕೊರೆ ಚಿತ್ರಗಳು. ಇವುಗಳನ್ನು ಹಾಸು ಬಂಡೆಗಳ ಮೇಲೆ ಕಲ್ಲಿನ ಆಯುಧದಿಂದ ಕುಟ್ಟಿದ, ಗೀರಿದ ಅಥವಾ ಕೊರೆಯಲಾಗಿದೆ. ಇವೇ ಬಯಲು ಬಂಡೆ ಚಿತ್ರಗಳು.

ವಿಧವಿಧ ರೂಪ
ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಸಮೀಪದಲ್ಲಿ ಕಂಡುಬಂದಿರುವ ಇವು ಮಧ್ಯ ಶಿಲಾಯುಗ ಕಾಲಘಟ್ಟದಲ್ಲಿ ರಚಿಸಲ್ಪಟ್ಟ ಚಿತ್ರಗಳೆಂದು ಅಧ್ಯಯನ ಹೇಳುತ್ತದೆ. ಕಾಡುಕೋಣ, ಹೋರಿ, ಮಾಂತ್ರಿಕ ಕಟ್ಟಾಳೆಯ ನಕ್ಷೆಗಳು, ಕೆಲ ಅಮೂರ್ತ ರೂಪದ ರೇಖೆಗಳು, ಮತ್ತಾವುದೋ ಮಾರ್ಗಸೂಚಿ ರೇಖೆಗಳು, ಕೈ ಕೈ ಹಿಡಿದು ನಿಂತಿರುವ ಮತ್ತು ಆಯುಧಗಳನ್ನು ಹಿಡಿದು ಹೋರಾಡುತ್ತಿರುವ ಮನುಷ್ಯಾಕೃತಿಗಳು ಇಲ್ಲಿವೆ.

ಹೋರಿ ಮತ್ತು ಮನುಷ್ಯರ ಕೊರೆ ಚಿತ್ರಗಳು ಹೆಚ್ಚಿನ ಸಂಖ್ಯೆಗಳಲ್ಲಿವೆ. ಮನುಷ್ಯಾಕೃತಿಗಳು ಎರಡು ರೀತಿಯಲ್ಲಿ ಗೋಚರಿಸುತ್ತದೆ. ಕೆಲವು ರೇಖಾ ಪ್ರಧಾನವಾಗಿದ್ದರೆ ಇನ್ನು ಕೆಲವು ತ್ರಿಕೋನಾಕೃತಿಗಳನ್ನು ಮುಖಾಮುಖಿಯಾಗಿ ಜೋಡಿಸಿ ಅವುಗಳಿಗೆ ಕೈಕಾಲು, ತಲೆಗಳನ್ನು ಸೇರಿಸಿದಂತೆ ಕಾಣುತ್ತವೆ. ಮಕ್ಕಳೆಂದು ಗುರುತಿಸಲು ಸಣ್ಣ ಸಣ್ಣ ಮನುಷ್ಯಾಕೃತಿಗಳನ್ನು ದೊಡ್ಡವರ ಹತ್ತಿರ ನಿಂತಂತೆ ರಚಿಸಲಾಗಿದೆ. ಮನುಷ್ಯರ ಪಾದಗಳ ಗುರುತುಗಳಿವೆ, ಮನುಷ್ಯ ಮತ್ತು ಪ್ರಾಣಿಗಳ ಕೆಲ ಚಿತ್ರಗಳು ಚಲನಾತ್ಮಕ ಸ್ಥಿತಿಯಲ್ಲಿ ಕಂಡು ಬರುತ್ತವೆ.

ಗೂಳಿ ಇಲ್ಲವೆ ಹೋರಿ ಚಿತ್ರಗಳಲ್ಲಿ ನೆಲದವರೆಗೂ ಇಳಿ ಬಿದ್ದ ಬಾಲ, ಉದ್ದವಾದ ಮತ್ತು ಅರ್ಧ ಚಂದ್ರಾಕೃತಿಯಲ್ಲಿ ಮುಂಭಾಗಕ್ಕೆ ಬಾಗಿದ ಕೊಂಬುಗಳು, ಕೆಲವು ಕಡೆ ಹಿಂಭಾಗಕ್ಕೆ ಬಾಗಿದವುಗಳು, ಎತ್ತರವಾದ ಭುಜ ಇತ್ಯಾದಿ ಲಕ್ಷಣಗಳಿವೆ. ಹೋರಿಗಳು ಕಾಳಗ ಮಾಡುತ್ತಿರುವ ಆಕೃತಿಗಳು ಇವೆ.

ಇಲ್ಲಿಯ ಬಹುತೇಕ ಬಂಡೆಗಳು ಮಣ್ಣು ಇಲ್ಲವೇ ಜೆಲ್ಲಿ ಕಲ್ಲುಗಳಿಂದ ಮುಚ್ಚಿ ಹೋಗಿವೆ. ಇವುಗಳ ಮೇಲೆ ಕುರುಚಲು ಗಿಡ ಬೆಳೆದಿವೆ. ಇವುಗಳನ್ನು ಸ್ವಚ್ಛಗೊಳಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ಬೆಳಕಿಗೆ ಬರಬಹುದು. ಈ ಚಿತ್ರಗಳು ಉಡುವಳ್ಳಿ ಅರಣ್ಯ ಪ್ರದೇಶದ ಅಂಚಿನಲ್ಲಿವೆ. ಅಲ್ಲಿಯ ಭೂಮಿ ಕಲ್ಲು ಮಿಶ್ರಿತವಾಗಿದ್ದು, ಬರಡು ಬೆಟ್ಟಗಳಿಂದ ಕೂಡಿದೆ. ಆ ಬೆಟ್ಟಗಳ ಇಳಿಜಾರಿನಲ್ಲಿ ಮತ್ತು ಕೆಳಭಾಗದ ವಿಶಾಲವಾದ ಹಾಸು ಬಂಡೆಗಳಲ್ಲಿ ಕೊರೆ ಚಿತ್ರಗಳಿವೆ.

ಉಡುವಳ್ಳಿ ಪ್ರದೇಶದ ಬಯಲು ಬಂಡೆಗಳು ಕೆಂಪು ಮಿಶ್ರಿತ ಕಪ್ಪು ಬಂಡೆಗಳಾಗಿದ್ದು, ಅಷ್ಟೇನು ಗಟ್ಟಿಯಾದವುಗಳಲ್ಲ. ಇಂತಹ ಬಂಡೆಗಳಲ್ಲಿರುವ ಕೊರೆ ಚಿತ್ರಗಳಿಗೆ ಸದ್ಯದಲ್ಲಿ ಯಾವ ರಕ್ಷಣೆಯೂ ಇರುವುದಿಲ್ಲ. ಸ್ಥಳೀಯರಿಗೆ ಆ ಬಗ್ಗೆ ಮಾಹಿತಿಯೂ ಇಲ್ಲ. ಇದರಿಂದಾಗಿ ಯಾರು ಬೇಕಾದರೂ ಅರಿವಿಲ್ಲದೆ ಅವುಗಳನ್ನು ನಾಶಪಡಿಸುವ ಸಾಧ್ಯತೆ ಇದೆ.

ಅದರಲ್ಲೂ ಆ ಭಾಗದ ಭೂಮಿಯಲ್ಲಿ ಕಬ್ಬಿಣದ ಅದಿರಿನ ಅಂಶವಿರುವುದರಿಂದ ಗಣಿಗಾರಿಕೆಗೆ ಬಹುಬೇಗ ಬಲಿಯಾಗಿಬಿಡುವ ಅಪಾಯವೂ ಇದೆ. ಅಲ್ಲದೇ ಸ್ಥಳೀಯರು ಮನೆ ಕಟ್ಟಲು ಅಥವ ಇನ್ನಿತರೆ ಅಗತ್ಯಗಳಿಗಾಗಿ ಅಲ್ಲಿನ ಬಯಲು ಬಂಡೆಗಳನ್ನು ಸಿಡಿಸುವ ಸಂಭವವೂ ಅಧಿಕವಾಗಿದೆ. ಒಟ್ಟಿನಲ್ಲಿ ಪ್ರಾಚೀನ ಮಾನವನ ಆ ಸ್ಮಾರಕಗಳಿಗೆ ಕುತ್ತು ಒದಗುವುದು ಖಚಿತ. ಆದಕಾರಣ ಸಂಬಂಧಪಟ್ಟವರು ಕೂಡಲೇ ಆ ಪ್ರದೇಶವನ್ನು ರಕ್ಷಿಸುವ ಮನಸ್ಸು ಮಾಡಿದರೆ ಮಹದುಪಕಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.