ಶುಕ್ರವಾರ, ಮೇ 20, 2022
26 °C

ರೈತರಿಂದ ಅನಿರ್ದಿಷ್ಟಾವಧಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರಿಂದ ಅನಿರ್ದಿಷ್ಟಾವಧಿ ಧರಣಿ

ಜಮಖಂಡಿ: ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಹೆಸ್ಕಾಂ ಅಧಿಕಾರಿಗಳ ಭ್ರಷ್ಟಾಚಾರ ಪ್ರತಿಭಟಿಸಿ ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ರೈತರು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ.ಬ್ಯಾನರ್, ಭಿತ್ತಿಫಲಕ ಹಿಡಿದು ನಗರದ ಉಮಾರಾಮೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಆರಂಭಿಸಿದ ರೈತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಯಲ್ಲಿ ಹೆಸ್ಕಾಂನ ವಿಭಾಗೀಯ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿ, ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಇಲ್ಲ ಎಂಬ ಕುಂಟು ನೆಪವೊಡ್ಡಿ ಛತ್ತಿಸಗಡ್‌ದಿಂದ 200 ಮೆಗಾವ್ಯಾಟ್ ವಿದ್ಯುತ್ ಖರೀದಿಸಿರುವುದಾಗಿ ಸುಳ್ಳು ಹೇಳುತ್ತ ಅಗ್ಗದ ಪ್ರಚಾರದಲ್ಲಿ ರಾಜ್ಯ ಸರಕಾರ ತೊಡಗಿದೆ ಎಂದು ಟೀಕಿಸಿದರು.

ಕೇಂದ್ರ ಸರಕಾರ ಕಲ್ಲಿದ್ದಲು ಪೂರೈಸಲು ಸಿದ್ಧವಿದೆ. ಆದರೆ ರಾಜ್ಯ ಸರಕಾರದ ಖಜಾನೆ ಖಾಲಿ ಆಗಿರುವುದರಿಂದ ಕಲ್ಲಿದ್ದಲು ಖರೀದಿಸಲು ಹಣವಿಲ್ಲ ಎಂದು ಆರೋಪಿಸಿದರು.ಜಿ.ಪಂ.ಸದಸ್ಯ ವಿಠ್ಠಲ ಚೌರಿ ಮಾತನಾಡಿ, ಆರಂಭಿಕವಾಗಿ ಮೊದಲ 3-4 ದಿನಗಳ ವರೆಗೆ ಸರತಿಯ ಮೇಲೆ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗುತ್ತದೆ. ಅಷ್ಟರೊಳಗೆ ಬೇಡಿಕೆಗಳು ಈಡೇರಿದರೆ ಸರಿ. ಇಲ್ಲದಿದ್ದರೆ ಆಮರಣ ಉಪವಾಸ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಡು ಮಾಳಿ ಮಾತನಾಡಿ, ಹೆಚ್ಚಿನ ಬೆಲೆಕೊಟ್ಟು ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಿ ಕಳೆದ ಬೇಸಿಗೆಯಲ್ಲಿ ವಿದ್ಯುತ್ ಪೂರೈಸಿ ಸಾರ್ವಜನಿಕರ ತಲೆಯ ಮೇಲೆ ಸಾಲದ ಹೊರೆ ಹೇರಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನಗರದಲ್ಲಿ ಸನ್ಮಾನಿಸಿರುವುದು ತಾಲ್ಲೂಕಿನ ದುರಂತ ಎಂದು ಲೇವಡಿ ಮಾಡಿದರು.ಮಾಜಿ ಶಾಸಕ ಆರ್.ಎಂ.ಕಲೂತಿ, ವಕೀಲ ಎನ್.ಎಸ್.ದೇವರವರ, ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಜಿ.ಪಂ.ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಜಿ.ಪಂ.ಸದಸ್ಯ ಅರ್ಜುನ ದಳವಾಯಿ, ವಕೀಲ ಅರುಣ ಪತ್ತಾರ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು.ವಕೀಲ ಎಸ್.ಆರ್.ಕಾಡಗಿ ಸ್ವಾಗತಿಸಿ ನಿರೂಪಿಸಿದರು. ಕಲ್ಲಪ್ಪ ಗಿರಡ್ಡಿ, ತಾ.ಪಂ.ಸದಸ್ಯ ಮಾಯಪ್ಪ ಮಿರ್ಜಿ, ತಾ.ಪಂ.ಸದಸ್ಯ ಪದ್ಮಣ್ಣ ಜಕನೂರ, ನಿಂಗಪ್ಪ ಕಡಪಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.ಗ್ರಾಮೀಣ ಭಾಗದಲ್ಲಿ ದಿನದಲ್ಲಿ ಕನಿಷ್ಠ 6 ಗಂಟೆ ತ್ರಿಪೇಸ್ ವಿದ್ಯುತ್ ಹಾಗೂ 12 ಗಂಟೆ ಸಿಂಗಲ್ ಪೇಸ್‌ವಿದ್ಯುತ್ ಪೂರೈಕೆಯಾಗಬೇಕು. ಸುಟ್ಟ `ಟಿಸಿ~ಗಳನ್ನು ಮೂರು ದಿನಗಳಲ್ಲಿ ಬದಲಾಯಿಸಿ ಬೇರೊಂದು ಟಿಸಿ ಕೊಡಬೇಕು. ಹೆಚ್ಚಿನ ಲೋಡ್ ಇರುವ ಕಡೆಗೆ ಹೊಸ ಟಿಸಿಗಳನ್ನು ಅಳವಡಿಸಬೇಕು.ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಹೆಸ್ಕಾಂ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.