ಶುಕ್ರವಾರ, ಜೂನ್ 25, 2021
30 °C

ರೈತರ ಬಾಕಿ ಕೂಡಲೇ ಪಾವತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ ಜಿಲ್ಲೆಯಲ್ಲಿ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಿದ ಸರ್ಕಾರ, ರೈತರಿಗೆ ಇನ್ನೂ ಹಣವನ್ನೇ ಪಾವತಿಸಿಲ್ಲ ಎಂಬುದು ವರದಿ­ಯಾಗಿದೆ. ಈ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲ ಭಾಗದ ರೈತರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಲ್ಲದೆ ಬೇರೇನೂ ಅಲ್ಲ. ಮೊದಲೇ ಸಂಕಷ್ಟದಲ್ಲಿ ಜೀವನ ನಡೆಸುವ ರೈತರನ್ನು ಚುನಾಯಿತ ಸರ್ಕಾರವೊಂದು ನಡೆಸಿಕೊಳ್ಳುವ ರೀತಿಯೇ ಇದು?ಬಜೆಟ್‌ನಲ್ಲಿ ರೈತರ ಬಗ್ಗೆ ಬಣ್ಣ ಬಣ್ಣದ ಮಾತನಾಡಿದ ಸರ್ಕಾರ, ಬೆಂಬಲ ಬೆಲೆಗಾಗಿ ರೂ. 1,000 ಕೋಟಿ ಆವರ್ತ ನಿಧಿ ಇಟ್ಟಿರುವುದಾಗಿ ಘೋಷಿಸಿದೆ. ಆವರ್ತ ನಿಧಿಯಲ್ಲಿ ನಿಜವಾಗಲೂ ಇಷ್ಟೊಂದು ಹಣವನ್ನು ಇಟ್ಟಿದ್ದರೆ ರೈತರಿಗೆ ಏಕೆ ಇನ್ನೂ ಮೆಕ್ಕೆಜೋಳದ ಹಣ ಸಂದಾಯವಾಗಿಲ್ಲ? ಆವರ್ತ ನಿಧಿಗೆ ನಿಗದಿಯಾದ ಹಣವನ್ನು ಬೆಂಬಲ ಬೆಲೆಯ ಹೊರತಾಗಿ ಇತರೆ ಕಾರ್ಯಗಳಿಗೆ ವರ್ಗಾಯಿಸಲು ಮುಖ್ಯಮಂತ್ರಿ­ಗಳಿಗೆ ಅಧಿಕಾರವಿರುತ್ತದೆ. ಈ ರೀತಿ ವರ್ಗಾವಣೆಯಾಗುವುದು ತಪ್ಪಬೇಕು. ಆವರ್ತ ನಿಧಿಯನ್ನು  ಬೇರಾವುದೇ ಕಾರ್ಯ ಅಥವಾ ಯೋಜನೆಗೆ ವರ್ಗಾ­ಯಿಸಲು ಅವಕಾಶವಿಲ್ಲದಂತೆ ಮಾಡಬೇಕು. ಇದುವರೆಗಿನ ಯಾವ ಸರ್ಕಾರವೂ ಈ ಕೆಲಸಕ್ಕೆ ಕೈಹಾಕದಿರುವುದು ಖಂಡನೀಯ.‘ಕೃಷಿ ಬೆಲೆ ಆಯೋಗ’ ರಚಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ. ಆದರೆ ಇನ್ನೂ ಆಯೋಗ ಅಸ್ತಿತ್ವಕ್ಕೆ ಬಂದಿಲ್ಲ. ರೈತರ ನೋವು ನೀಗಿಸಲು ಬೆಲೆ ಆಯೋಗ ರಚನೆಗಿಂತ ಆದಾಯ ಖಾತರಿ ಆಯೋಗವನ್ನು  ರಚಿಸುವುದು ಒಳಿತು. ರೈತರ ಜೀವನ ಮಟ್ಟ ಅಧ್ಯಯನ ಮಾಡಿ, ಬದುಕು ನಿರ್ವಹಿಸಲು ಅನು­ವಾಗುವಂತೆ  ಬೆಲೆ ನಿಗದಿಯಾಗಬೇಕು. ಅದಕ್ಕೆ ಬೆಲೆ ರಕ್ಷಣಾ ನೀತಿ­ಯನ್ನು ರೂಪಿಸಬೇಕು. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ದರದಲ್ಲಿ ಯಾವ ಬೆಳೆಯೂ ಮಾರಾಟವಾಗಬಾರದು. ರೈತರು ಬೆಳೆದ ಎಲ್ಲ ಬೆಳೆ­ಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಇದನ್ನು ಅರಿತು ಪರ್ಯಾಯಗಳತ್ತ ಗಮನ ಹರಿಸಬೇಕು. ಕೃಷಿ ಉತ್ಪನ್ನಗಳ ಬೆಲೆ­ಯಲ್ಲಿ ಯರ್ರಾಬಿರ್ರಿ ಏರಿಳಿತ ಆಗುವುದನ್ನು ತಪ್ಪಿಸಲು  ಇದುವರೆಗೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು  ವಿಫಲವಾಗಿವೆ. ರೈತರ ಬಗೆಗಿನ ಸರ್ಕಾರದ ಕಾಳಜಿ ಕೇವಲ ಬೂಟಾಟಿಕೆಯದು ಎಂಬುದನ್ನು ಕೃಷಿಕರ ಬದುಕೇ ಸಾರು­ತ್ತಿದೆ. ಆದರೂ ಸರ್ಕಾರ ಮಾತ್ರ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟಿಲ್ಲ.ನಾನಾ ಕಾರಣಗಳಿಗೆ ರೈತರು ಪ್ರತಿಭಟನೆಗೆ ಇಳಿದಾಗ ಅವರ ರಕ್ಷಣೆಗೆ ಬದ್ಧವಾಗಿರುವುದಾಗಿ ಘೋಷಣೆ ಹೊರಡಿಸುತ್ತದೆ. ಪ್ರತಿಭಟನೆ ಕಾವು ಇಳಿದ ಮೇಲೆ ರಗ್ಗು ಹೊದ್ದು ಮಲಗುತ್ತದೆ. ರೈತರ ವಿಚಾರದಲ್ಲಿ ಸರ್ಕಾರ ಬದ್ಧತೆಯಿಂದ ನಡೆದುಕೊಂಡು, ಅವರ ಜೀವನ ಮಟ್ಟ ಸುಧಾರಿಸು­ವಂತಹ ನೀತಿ ರೂಪಿಸಬೇಕು. ಆಗಷ್ಟೇ ಅವರ ಬದುಕು ಹಸನಾದೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.