ಮಂಗಳವಾರ, ಜನವರಿ 21, 2020
28 °C

ರೈತ ಮಿತ್ರ ಬೆಳ್ಳಕ್ಕಿ ಆಹ್ವಾನಕ್ಕೆ ರೈತರ ತಂತ್ರ

.ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಕಡಲೆ ಬೆಳೆಗೆ ಅಂಟಿ ಕೊಂಡಿರುವ ಕೀಟಬಾಧೆ ನಿಯಂತ್ರಣಕ್ಕೆ ಕೃಷಿಕ ಸಮೂಹ ನಡೆಸಿದ ಪ್ರಯತ್ನ ಗಳೆಲ್ಲ ವಿಫಲವಾದ ಪರಿಣಾಮ ಇದೀಗ ಕ್ರಿಮಿನಾಶಕ ಸಿಂಪಡಣೆಯಿಂದ ದೂರ ಉಳಿದು ‘ಹೆಜ್ಜಾರ್ಲೆ’ (ಬೆಳ್ಳಕ್ಕಿ)  ಪಕ್ಷಿಗಳಿಂದ ಕೀಟಬಾಧೆ ನಿಯಂತ್ರ ಣಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬೆಳ್ಳಕ್ಕಿ­ಗಳಿಗೆ ಸದ್ಯ ರಾಜಾತೀಥ್ಯ!ಎರಿ (ಕಪ್ಪು ಮಣ್ಣಿನ) ಪ್ರದೇಶದ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ‘ಕಡಲೆ’ಗೆ ವ್ಯಾಪಿಸಿರುವ ಕೀಟಬಾಧೆ ನಿಯಂತ್ರಣಕ್ಕೆ ಕೃಷಿಕ ಸಮೂಹ ಪ್ರೋಪೋನಾಫಾಸ್, ಫೇಮ್‌, ಮೊನೊಪೊ್ರಟೊಫಾಸ್‌ ಮುಂತಾದ ದುಬಾರಿ ಮೊತ್ತದ ಕ್ರಿಮಿ ನಾಶಕ ರಾಸಾಯನಿಕಗಳನ್ನು ಸಿಂಪಡಿ ಸಿದ್ದರು. ಆದರೆ ಎಷ್ಟೇ ದುಬಾರಿ ಮೊತ್ತದ ಕ್ರಿಮಿನಾಶಕಗಳನ್ನು ಸಿಂಪಡಿಸಿ ದರೂ ಹವಾಮಾನ ವೈಪರೀತ್ಯದಿಂದಾಗಿ ಕಡಲೆಗೆ ಅಂಟಿಕೊಂಡಿರುವ ಕೀಟಬಾಧೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಹೀಗಾಗಿ ಕಡಲೆ ಬೆಳೆದ ತಪ್ಪಿಗಾಗಿ ಕೃಷಿಕರು ಕೈಕೈಹಿಸುಕಿಕೊಳ್ಳುವಂತಾಗಿತ್ತು.‘ರಾಸಾಯನಿಕ ಸಿಂಪಡಣೆಯಿಂದ ಕೀಟಬಾಧೆ ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲ. ಅಲ್ಲದೆ, ಮಾರುಕಟ್ಟೆಯಲ್ಲಿ ಕಡಲೆಗೆ ನಿರೀಕ್ಷೆಯಷ್ಟು ದರ ದೊರಕುವ ಸಾಧ್ಯತೆಗಳು ತೀರಾ ವಿರಳ’ ಎಂಬು ದನ್ನು ಅರಿತ ಕಡಲೆ ಬೆಳೆಗಾರರು

ಶೂನ್ಯ ಬಂಡವಾಳದಲ್ಲಿ ಕೀಟ ನಿಯಂತ್ರಣಕ್ಕಾಗಿ ನೈಸರ್ಗಿಕ ವಿಧಾನವಾದ ಪಕ್ಷಿಗಳನ್ನು ಆಕರ್ಷಿಸುವ ಪ್ರಕ್ರಿಯೆಯ ಮೂಲಕ ಕೀಟ ನಿಯಂತ್ರಣಕ್ಕೆ ಮುಂದಾಗಿದ್ದಾರೆ.ಬೆಳ್ಳಕ್ಕಿ ಆಕರ್ಷಿಸುವು ಹೇಗೆ?: ಕಡಲೆ ಬೆಳೆ ಪಕ್ಷಿಗಳನ್ನು ಆಕರ್ಷಿಸುವುದಕ್ಕಿಂತ ಪೂರ್ವದಲ್ಲಿ ಬೆಳೆಗೆ ಕ್ರಮಿನಾಶಕ ಸಿಂಪಡಿ ಸಿರಬಾರದು. ಹಾಗೊಂದು ವೇಳೆ ಬೆಳೆಗೆ ರಾಸಾಯನಿ ಸಿಂಪಡಿಸಿದ್ದರೆ ಕನಿಷ್ಠ 8 ದಿನಗಳ ಕಾಲ ಬೆಳ್ಳಕ್ಕಿ ಪಕ್ಷಗಳನ್ನು ಆಕರ್ಷಿಸುವ ಗೋಜಿಗೆ ಹೋಗ ಬಾರದು. ರಾಸಾಯನಿಕ ಸಿಂಪಡಿಸಿದ 8 ದಿನಗಳ ಬಳಿಕ ಬೆಳಿಗ್ಗೆ ಕಡಲೆ ಬೆಳೆ ಇರುವ ಜಮೀನಿನಲ್ಲಿ ಮಂಡಕ್ಕಿ (ಚುರು ಮುರಿ)ಯನ್ನು ಜಮೀನಿನ ತುಂಬೆಲ್ಲಾ ಚಲ್ಲಬೇಕು. ಈ ಮಂಡಕ್ಕಿಯನ್ನು ತಿನ್ನಲು ಬೆಳ್ಳಕ್ಕಿಗಳ ತಂಡ ಕಡಲೆ ಬೆಳೆ ಇರುವ ಜಮೀನಿಗೆ ಲಗ್ಗೆ ಇಡುತ್ತವೆ. ಮಂಡಕ್ಕಿ ಜತೆಗೆ ಕಡಲೆಗೆ ಅಂಟಿರುವ ಕೀಟಗಳನ್ನು ತಿಂದು ಹಾಕುತ್ತವೆ.ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಮಂಡಕ್ಕಿ ಚಲ್ಲುವ ಕಾರ್ಯಕ್ಕೆ ಮುಂದಾದರೆ ನಾಲ್ಕು ದಿನಗಳಲ್ಲಿ 4 ಎಕರೆ ಕಡಲೆ ಬೆಳೆಯಲ್ಲಿನ ಕೀಟಗಳನ್ನು ಪೂರ್ಣ ಪ್ರಮಾಣಲ್ಲಿ ಈ ಬೆಳ್ಳಕ್ಕಿಗಳು ತಿಂದು ಹಾಕುತ್ತವೆ. ಆದರೆ, ಬೆಳೆಗೆ ಯಾವುದೇ ರಾಸಾಯನಿಕ ಸಿಂಪಡಿಸಿರ ದಿದ್ದರೆ ಬೆಳ್ಳಕ್ಕಿಗಳು ಬೆಳೆಯನ್ನು ಬಿಟ್ಟು ಕದಲುವುದಿಲ್ಲ. ರಾಸಾಯನಿಕದ ವಾಸನೆ ಇದ್ದರೆ ಅಂತಹ ಬೆಳೆಯನ್ನು ಈ ಪಕ್ಷಗಳು ತಿರುಗಿಯೂ ನೋಡುವುದಿಲ್ಲ.ಪ್ರಸಕ್ತ ವರ್ಷ ಸೂಡಿ, ಇಟಗಿ, ರಾಜೂರ, ಬೇವಿನಕಟ್ಟಿ, ಗುಳಗುಳಿ, ಹಿರೇಅಳಗುಂಡಿ, ಚಿಕ್ಕಅಳಗುಂಡಿ, ನಿಡಗುಂದಿ, ಕೊಡಗಾನೂರ, ಕಳಕಾ ಪುರ ಸೇರಿದಂತೆ ತಾಲ್ಲೂಕಿನ ಎರಿ (ಕಪ್ಪು ಮಣ್ಣಿನ ಪ್ರದೇಶ) ದಲ್ಲಿ 43,927 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಯನ್ನು ಬೆಳೆಯಲಾಗಿದೆ. ಆದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುತ್ತಾ ಬಂದಿದ್ದ ಕಡಲೆಗೆ ಪ್ರಸಕ್ತ ವರ್ಷ ಅಂಟಿಕೊಂಡಿರುವ ಕೀಟಬಾಧೆ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬೆಳ್ಳಕ್ಕಿ ಆಕ ರ್ಷಣೆಯ ಮೂಲಕ ಕೀಟನಿಯಂತ್ರಣ ಕ್ರಮದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಶರಣಪ್ಪ ತಳವಾರ. ಯಮನೂರಸಾಬ ನದಾಫ್‌.ಬೆಳ್ಳಕ್ಕಿಗಳ ಸಾಮೂಹಿಕ ದಾಳಿ: ಕಡಲೆ ಬೆಳೆಯಲ್ಲಿ ಮಂಡಕ್ಕಿಯನ್ನು ಚೆಲ್ಲಿ ದರೆ ಆಕಾಶದಿಂದ ನೇರ ಬೆಳೆಗೆ ಧುಮು ಕುವ ಬೆಳ್ಳಕ್ಕಿಗಳ ಹಿಂಡು ಮಂಡಕ್ಕಿಯ ಜತೆಗೆ ಕೀಟಗಳನ್ನು ತಿನ್ನುತ್ತವೆ. ಮಂಡಕ್ಕಿ ಆಸೆಗಾಗಿ ಕಡಲೆಗೆ ಮುತ್ತಿಕೊಳ್ಳುವ ಬೆಳ್ಳಕ್ಕಿಗಳು ಕೀಟಗಳನ್ನು ಕಂಡ ತಕ್ಷಣ ಮಂಡಕ್ಕಿ ಯನ್ನು ಬಿಟ್ಟು ಕೀಟಗಳನ್ನು ತಿನ್ನಲು ಆರಂಭಿಸುತ್ತವೆ.50, 100 ಸಂಖ್ಯೆಯ ಬೆಳ್ಳಕ್ಕಿ ಹಿಂಡು ಕಡಲೆಯಲ್ಲಿನ ಕೀಟ ಗಳನ್ನು ತಿಂದು ತೇಗುತ್ತಿವೆ. ಬೆಳಗ್ಗೆ ಮತ್ತು ಸಂಜೆ ಅತ್ಯಂತ ಉತ್ಸಾಹದಲ್ಲಿ ರುವ ಬೆಳ್ಳಕ್ಕಿಗಳು ಬಿಸಿಲಿನ ಪ್ರತಾಪ ಜೋರಾಗುತ್ತಿದ್ದಂತೆ ಮಂಕಾಗುತ್ತವೆ. ಹೀಗಾಗಿಯೇ ಕಡಲೆ ಬೆಳೆಗಾರರು ಬೆಳಿಗ್ಗೆ ಮತ್ತು ಸಂಜೆ ಮಂಡಕ್ಕಿ ಚಲ್ಲುವ ಮೂಲಕ ಕೀಟ ನಿಯಂತ್ರಣಕ್ಕೆ ಬೆಳ್ಳಕ್ಕಿ ಪಕ್ಷಿಗಳನ್ನು ಆಕರ್ಷಿಸಲು ನಾ ಮುಂದು... ತಾ ಮುಂದು ಎನ್ನು ತ್ತಿದ್ದಾರೆ.‘ರಾಸಾಯನಿಕ ಅತಿ ಬಳಕೆ ಬೇಡ’

‘ಕೀಟಬಾಧೆ ನಿಯಂತ್ರಣಕ್ಕೆ ಕೃಷಿಕರು ಪಕ್ಷಗಳನ್ನು ಆಯ್ಕೆ ಮಾಡಿ ಕೊಂಡಿರುವುದು ಉತ್ತಮ ಬೆಳವಣಿಗೆ. ಬೆಳೆಗೆ ರಾಸಾಯನಿಕ ಸಿಂಪಡಣೆ ಮಾಡು ವುದರಿಂದ ಇಳುವರಿ ಕ್ಷೀಣಿಸುತ್ತದೆ. ಸಾಗುವಳಿ ಭೂಮಿಯ ಫಲವತ್ತಗೆ ಕ್ಷೀಣಿಸು ತ್ತದೆ. ಪಕ್ಷಿಗಳನ್ನು ಆಕರ್ಷಿಸುವುದರಿಂದ ಕೃಷಿಕರು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿದಂತಾಗುತ್ತದೆ. ಎಲ್ಲ ಕೃಷಿಕರು ಈ ಕ್ರಿಯೆಯನ್ನು ಅನುಸುರಿಸುವುದು ಸೂಕ್ತ’

- ಎಸ್.ಎ.ಸೂಡಿಶೆಟ್ಟರ್‌, ತಾಲ್ಲೂಕು ಕೃಷಿ ನಿರ್ದೇಶಕರು, ರೋಣ

ಪ್ರತಿಕ್ರಿಯಿಸಿ (+)