ಮಂಗಳವಾರ, ಮೇ 11, 2021
21 °C

ರೈಲಿಗೆ ಸಿಲುಕಿ ವ್ಯಕ್ತಿ ಸಾವು: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರೈಲು ಹತ್ತುವ ಸಂದರ್ಭದಲ್ಲಿ ಪ್ರಯಾಣಿಕನೊಬ್ಬ ರೈಲಿನಡಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ನಗರದ ರೈಲು ನಿಲ್ದಾಣದಲ್ಲಿ ನಡೆದಿದೆ.ಮುಗಳೊಳ್ಳಿ ಗ್ರಾಮದ ಭೀಮರಾಯಪ್ಪ ನಾಯ್ಕರ್(34) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ನಗರಕ್ಕೆ ಆಗಮಿಸಿದ್ದ  ಭೀಮರಾಯಪ್ಪ ನಾಯ್ಕರ್ ಗ್ರಾಮಕ್ಕೆ ತೆರಳಲು  ಹುಬ್ಬಳ್ಳಿ- ವಿಜಾಪುರ  ಪ್ಯಾಸೆಂಜರ್ ರೈಲನ್ನು ಹತ್ತುವ ಸಂದರ್ಭ ಆಯ ತಪ್ಪಿ ಕೆಳಗೆಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತನಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.`ಪ್ರಜಾವಾಣಿ~ ಜೊತೆಗೆ ಮಾತನಾಡಿದ ಪ್ರತ್ಯಕ್ಷದರ್ಶಿ ಮುಗಳೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಭೀಮಣ್ಣ ಭಜಣ್ಣವರ, ಪ್ಯಾಸೆಂಜರ್ ರೈಲು ವಿಪರೀತ ಪ್ರಯಾಣಿಕರಿಂದ ತುಂಬಿದ್ದ ಕಾರಣ ರೈಲನ್ನು ಹತ್ತುವ ಸಂದರ್ಭದಲ್ಲಿ ಜಾಗವಿಲ್ಲದೇ ಆಯತಪ್ಪಿ ಬಿದ್ದಿದ್ದು, ಇದಕ್ಕೆ ರೈಲ್ವೆ ಇಲಾಖೆಯೇ ಕಾರಣವಾಗಿದೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ಮಾರ್ಗದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲಿಗೆ ಪ್ರಯಾಣಿಕರಿಗೆ ತಕ್ಕಂತೆ ಹೆಚ್ಚಿನ ಬೋಗಿ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.ಒಂದು ತಿಂಗಳ ಹಿಂದೆಯೂ ಇದೇ ರೈಲು ನಿಲ್ದಾಣದಲ್ಲಿ ಮಹಿಳೆಯರಿಬ್ಬರು ಹೊರಟಿದ್ದ ರೈಲನ್ನು ಏರಲು ಹೋಗಿ ಬಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ನಿಲ್ದಾಣದಲ್ಲಿ ರೈಲುಗಳನ್ನು ಹೆಚ್ಚು ಹೊತ್ತು ನಿಲ್ಲಿಸದ ಕಾರಣ ಮತ್ತು ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚಿನ ರೈಲನ್ನು ಓಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದರಿಂದ ರೈಲು ನಿಲುಗಡೆಯ ಅವಧಿಯನ್ನು ಹೆಚ್ಚಿಸಬೇಕು. ನಿಲ್ದಾಣದಲ್ಲಿ ಮೂಲಸೌಲಭ್ಯ ಒದಗಿಸುವ ಜೊತೆಗೆ, ಪ್ರಯಾಣಿಕರ ಹಿತಕಾಪಾಡಲು ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಇದರಿಂದಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚುವಂತಾಗಿವೆ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.