ಶುಕ್ರವಾರ, ಜೂನ್ 18, 2021
28 °C

ರೈಲು ದರ ಏರಿಕೆಗೆ ತ್ರಿವೇದಿ ತಲೆದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಳೆದ ಒಂದು ದಶಕದಿಂದಲೂ ಹೆಚ್ಚಳ ಕಾಣದ ರೈಲು ಪ್ರಯಾಣ ದರವನ್ನು ಬುಧವಾರ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಹೆಚ್ಚಿಸುವ ಮೂಲಕ `ಜೇನುಗೂಡಿಗೆ ಕಲ್ಲೆಸೆದ~ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ತಮ್ಮದೇ ಪಕ್ಷ ತೃಣಮೂಲ ಕಾಂಗ್ರೆಸ್‌ನ ವಿರೋಧ ಕಟ್ಟಿಕೊಂಡು, ತಡ ರಾತ್ರಿ ನಡೆದ ಬೆಳವಣಿಗೆಯಲ್ಲಿ  ಸಚಿವ  ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆಯನ್ನು ಅಂಗೀಕರಿಸಿದ್ದು, ಮಮತಾ ಬ್ಯಾನರ್ಜಿ ಅವರ ಆಕಾಂಕ್ಷೆಯಂತೆ  ಬಂದರು ಖಾತೆ ರಾಜ್ಯ ಸಚಿವ ಮುಕುಲ್ ರಾಯ್ ಅವರು ತ್ರಿವೇದಿ ಜಾಗಕ್ಕೆ ನೇಮಕಗೊಳ್ಳಲಿದ್ದಾರೆ.ತ್ರಿವೇದಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಕೋರಿ ತೃಣಮೂಲವು ರಾತ್ರಿ ಪ್ರಧಾನಿಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಮನೆಯಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಮಿತಿ ಸಭೆಯು ಮಮತಾ ಅವರ ಬೇಡಿಕೆಗೆ ಮಣಿದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈಲು ಪ್ರಯಾಣ ದರ ಕೊಂಚ ಮಟ್ಟಿಗೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಜೆಟ್ ಮುಖ್ಯಾಂಶ: ತೈಲ ಬೆಲೆಗೆ ಅನುಗುಣವಾಗಿ ಪ್ರಯಾಣ ದರ ಏರಿಳಿಸುವ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ, ರಾಷ್ಟ್ರೀಯ ಅಧಿಕ ವೇಗದ ರೈಲು ಪ್ರಾಧಿಕಾರ ಸ್ಥಾಪನೆ, ರೈಲುಗಳಲ್ಲಿ ಅಂಗವಿಕಲರಿಗಾಗಿ ವಿಶೇಷ ವಿನ್ಯಾಸದ ಕೋಚ್‌ಗಳ ಅಳವಡಿಕೆ, ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳ ಅಳವಡಿಕೆ...-ಇವು ತ್ರಿವೇದಿ ಅವರ 2012-13ರ ಸಾಲಿನ ರೈಲ್ವೆ ಬಜೆಟ್‌ನ ಗಮನಾರ್ಹ ಅಂಶಗಳು. ರೈಲ್ವೆ ಇಲಾಖೆಯು ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ಸಚಿವರು ಪ್ರಯಾಣ ದರ ಹೆಚ್ಚಿಸಿದ್ದರ ನಡುವೆಯೂ ಜನಪ್ರಿಯತೆಯ ಹಾದಿಯಲ್ಲೇ ಸಾಗಲು ಯತ್ನಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.ವಿವಿಧ ರೀತಿಯ ರೈಲುಗಳಲ್ಲಿ ಪ್ರಯಾಣ ದರವನ್ನು ಕಿಲೊಮೀಟರ್‌ಗೆ 2 ಪೈಸೆಯಿಂದ 30 ಪೈಸೆ ವರೆಗೆ ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಕೊಂಚ ಮಟ್ಟಿನ ದರ ಏರಿಕೆ ಅನಿವಾರ್ಯ ಎಂದು ಸಚಿವರು ಮೊದಲು ಸಮರ್ಥಿಸಿದ್ದರು.ರೈಲು ಸಂಚಾರ ಸೌಲಭ್ಯಕ್ಕೆ ಸಂಬಂಧಿಸಿದಂತೆ ಹೊಸದಾಗಿ 75 ಎಕ್ಸ್‌ಪ್ರೆಸ್ ರೈಲುಗಳ ಮತ್ತು 21 ಪ್ಯಾಸೆಂಜರ್ ರೈಲುಗಳ ಓಡಾಟಕ್ಕೆ ಚಾಲನೆ ನೀಡಲಾಗುವುದು. 39 ರೈಲುಗಳ ಸಂಚಾರ ಮಾರ್ಗವನ್ನು ವಿಸ್ತರಿಸಲಾಗಿದ್ದರೆ ಇತರ 23 ರೈಲುಗಳ ಸಂಚಾರ ಆವರ್ತನವನ್ನು ಹೆಚ್ಚಿಸಲಾಗಿದೆ. ಪ್ರಯಾಣ ದರದಲ್ಲಿ ಇಂಧನದ ಭಾಗವನ್ನು ಪ್ರತ್ಯೇಕಗೊಳಿಸಿ ಅದನ್ನು `ಇಂಧನ ಹೊಂದಾಣಿಕೆ ದರ~ ಎಂದು ನಮೂದಿಸಿ ಪ್ರಯಾಣಿಕರಿಂದ ವಸೂಲಿ ಮಾಡುವ ಕುರಿತು ರೈಲ್ವೆ ಸಚಿವಾಲಯ ಚಿಂತಿಸುತ್ತಿದೆ. ಇದು ಅತ್ಯಂತ ಚಲನಶೀಲ ವ್ಯವಸ್ಥೆಯಾಗಿದ್ದು, ತೈಲ ಬೆಲೆ ಏರಿಳಿತಕ್ಕೆ ತಕ್ಕಂತೆ ಪ್ರಯಾಣ ದರ ಕೂಡ ಹೆಚ್ಚುಕಡಿಮೆ ಆಗುತ್ತದೆ ಎಂದು ಸಚಿವರು ಬಜೆಟ್ ಮಂಡನೆ ವೇಳೆ ವಿವರಿಸಿದರು.

 

ಸ್ವಾಯತ್ತ ಅಧಿಕಾರ ಹೊಂದಿದ ರೈಲು ಪ್ರಯಾಣ ದರ ನಿಯಂತ್ರಣ ಪ್ರಾಧಿಕಾರ ರಚಿಸಬೇಕೆಂಬ ಸಲಹೆಗಳು ಇವೆ. ಆದರೆ ಈ ಕುರಿತು ವಿಸ್ತೃತ ಚರ್ಚೆ ನಡೆಯಬೇಕಿರುವುದರಿಂದ, ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಿರುವುದಾಗಿ ತಿಳಿಸಿದರು.ಬಜೆಟ್ ಮಂಡಿಸಿ 100 ನಿಮಿಷಗಳ ಕಾಲ ಮಾತನಾಡಿದ ಸಚಿವ ತ್ರಿವೇದಿ, ಸಾಮಾನ್ಯ ಪ್ರಯಾಣಿಕರಿಗೆ ಕನಿಷ್ಠ ಹೊರೆಯಾಗುವಂತೆ ಹಾಗೂ ದರದಲ್ಲಿ ವೈಜ್ಞಾನಿಕತೆ ತರುವ ರೀತಿಯಲ್ಲಿ ಹೆಚ್ಚಳ ಮಾಡಲಾಗಿದೆ.ಪ್ರಸ್ತಾವಿತ ಅಲ್ಪ ಹೆಚ್ಚಳವು ಕಳೆದ ಒಂಬತ್ತು ವರ್ಷಗಳಲ್ಲಿ ಆಗಿರುವ ಇಂಧನ ಬೆಲೆ ಏರಿಕೆಯ ಹೊರೆಯನ್ನೂ ಭರಿಸುವುದಿಲ್ಲ ಎಂದು ವಿವರಿಸಿದರು. ಪ್ರತಿವರ್ಷವೂ ಸಿಬ್ಬಂದಿ ವೆಚ್ಚ ಅಧಿಕವಾಗುತ್ತಿದ್ದು, ರಸ್ತೆ ಸಾರಿಗೆ ದರವೂ ಅಧಿಕವಾಗಿರುವುದರಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಿಂದ ಪ್ರಯಾಣ ದರ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಭಾರಿ ಏರಿಕೆ ಮಾಡಬೇಕೆಂಬ ಒತ್ತಡವಿತ್ತು. ಆದರೆ ಜನಸಾಮಾನ್ಯರಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಕನಿಷ್ಠ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

 

ರೈಲ್ವೆ ಇಲಾಖೆಗೆ ಅಗತ್ಯವಿರುವಷ್ಟು ಬಜೆಟ್ ಅನುದಾನ ಲಭ್ಯವಾಗಿಲ್ಲ ಎಂದೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ರೈಲ್ವೆ ನಿರ್ವಹಣಾ ವೆಚ್ಚಗಳು ಇನ್ನಷ್ಟು ಹೆಚ್ಚಳವಾದರೆ ಪ್ರಯಾಣಿಕರಿಗೆ ಅದನ್ನು ವರ್ಗಾಯಿಸದೆ ಇರಲು ಸಾಧ್ಯವಿಲ್ಲ ಎಂದರು. ರೈಲ್ವೆ ಇಲಾಖೆ ಆರ್ಥಿಕ ಬಿಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಬಜೆಟ್‌ನಲ್ಲಿ ಇಲಾಖೆ 45,000 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಿತ್ತು; ಆದರೆ ಸಾಧಾರಣ ಮೊತ್ತವಾದ 24,000 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ ಎಂದರು.ಪ್ರಸ್ತುತ ವರ್ಷ, ಇಲಾಖೆಯು ವೇತನ ಆಯೋಗಕ್ಕೆ ಯಾವುದೇ ಬಾಕಿ ನೀಡಬೇಕಿಲ್ಲ; ಆದರೆ ಭತ್ಯೆ ಹೆಚ್ಚಳ ಹಾಗೂ ಬಜೆಟ್ ನಂತರದ ಹಲವಾರು ಬೆಳವಣಿಗೆಗಳು ಇಲಾಖೆಯ ಆರ್ಥಿಕ ಹೊರೆಯನ್ನು ತೀವ್ರವಾಗಿ ಹೆಚ್ಚಿಸಿವೆ. ಪ್ರಸಕ್ತ ವರ್ಷ ಪ್ರಯಾಣಿಕರಿಗೆ ವಿವಿಧ ದರ್ಜೆಗಳಲ್ಲಿ 800 ಕೋಟಿ ರೂಪಾಯಿಗೆ ಹೆಚ್ಚಿನ ರಿಯಾಯಿತಿ ನೀಡಲಾಗಿದೆ  ಎಂದು ತಿಳಿಸಿದರು.12ನೇ ಪಂಚವಾರ್ಷಿಕ ಯೋಜನೆ ಹಾಗೂ ಹಿಂದಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರ `2020ರ ಕನಸನ್ನು~ ಒಗ್ಗೂಡಿಸುವ ಕೊಂಡಿಯಾಗಿ ಬಜೆಟ್ ಕೆಲಸ ಮಾಡುತ್ತದೆ ಎಂದರು. 2012-13ನೇ ಸಾಲಿಗೆ ಇಲಾಖೆಯ ಯೋಜನಾವೆಚ್ಚ 60,100 ಕೋಟಿ ರೂಪಾಯಿ ಆಗಿದ್ದು, ಇದು ಇಲಾಖೆಯ ಚರಿತ್ರೆಯಲ್ಲೇ ಅತ್ಯಧಿಕ ಮೊತ್ತವಾಗಿದೆ. ಪ್ರಯಾಣಿಕರ ಸೌಲಭ್ಯಗಳಿಗಾಗಿ 1,112 ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ 762 ಕೋಟಿ ರೂಪಾಯಿ ನೀಡಲಾಗಿತ್ತು.ಹೊಸ ಯೋಜನೆಗಳು: ರೈಲ್ವೆ ನಿಲ್ದಾಣಗಳ ನವೀಕರಣ, ಮಾರ್ಗಗಳ ಆಧುನೀಕರಣ, ಗೇಜ್‌ಗಳ ಪರಿವರ್ತನೆ ಇಲಾಖೆಯ ಹೊಸ ಯೋಜನೆಗಳಲ್ಲಿ ಸೇರಿವೆ. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದ ವತಿಯಿಂದ ಬರುವ ಆರ್ಥಿಕ ಸಾಲಿನಲ್ಲಿ 100 ನಿಲ್ದಾಣಗಳನ್ನು ನವೀಕರಿಸುವ ಯೋಜನೆಹಾಕಿಕೊಳ್ಳಲಾಗಿದೆ. ಸಂಚಾರ ದಟ್ಟಣೆಯ ಶೇ 80ರಷ್ಟನ್ನು ನಿಭಾಯಿಸುವ 19,000 ಕಿ.ಮೀ.  ಮಾರ್ಗ ಆಧುನೀಕರಣದ ಗುರಿ ಹೊಂದಲಾಗಿದೆ.12ನೇ ಪಂಚವಾರ್ಷಿಕ ಮುಕ್ತಾಯದ ವೇಳೆಗೆ ಪಾರಂಪರಿಕ ಮಾರ್ಗಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮೀಟರ್ ಗೇಜ್, ನ್ಯಾರೊ ಗೇಜ್ ಮಾರ್ಗಗಳನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.2012-13ರಲ್ಲಿ 1,950 ಕೋಟಿ ವೆಚ್ಚದಲ್ಲಿ 800 ಕಿ.ಮೀ. ಮಾರ್ಗದ ಗೇಜ್ ಪರಿವರ್ತನೆ ಆಗಲಿದೆ. ಇದೇ ವೇಳೆ 14 ಹೊಸ ರೈಲು ಮಾರ್ಗಗಳ ಕುರಿತು ಸರ್ವೆ ನಡೆಸಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.