ರೈಲು ಸಮಯ ಬದಲಾವಣೆಗೆ ಕ್ರಮ
ಬೀದರ್: ಬಹು ನಿರೀಕ್ಷಿತ ನಾಂದೇಡ್-ಬೆಂಗಳೂರು ನಡುವಣ ರೈಲು ಬೀದರ್ನಿಂದ ಸಂಜೆ ನಿರ್ಗಮಿಸುವಂತೆ ಸಮಯ ಬದಲಾವಣೆಯನ್ನು ಜುಲೈನಿಂದಲೇ ಕಾರ್ಯರೂಪಕ್ಕೆ ತರುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಆಗಮಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, `ಸಮಯ ಬದಲಾವಣೆ ಮಾಡಬೇಕು ಎಂಬುದು ಬಹಳ ದಿನಗಳ ಬೇಡಿಕೆ.
ಜುಲೈನಲ್ಲಿ ಕೆಲ ರೈಲುಗಳ ಸಮಯ ಬದಲಾವಣೆ ಮಾಡಬೇಕಿದ್ದು, ಇದನ್ನು ಪರಿಶೀಲಿಸಲಾಗುವುದು~ ಎಂದರು.
`ಸಂಸದ ಧರ್ಮಸಿಂಗ್ ಮತ್ತು ಈ ಭಾಗದ ಪ್ರಮುಖರು ಇತ್ತೀಚೆಗೆ ಭೇಟಿಯಾಗಿ ಈ ಬಗೆಗೆ ಮನವಿ ಸಲ್ಲಿಸಿದ್ದಾರೆ. ಬೇಡಿಕೆ ನಮ್ಮ ಗಮನದಲ್ಲಿದೆ. ಪ್ರಸ್ತುತ ಬೆಂಗಳೂರು ಬೆಳಿಗ್ಗೆ 7ರ ವೇಳೆಗೆ ಬೆಂಗಳೂರು ತಲುಪುತ್ತಿದೆ. ಬೀದರ್ನಿಂದ ಈಗಿನ ಬೆಳಿಗ್ಗೆ 12ರ ಬದಲಾಗಿ ಸಂಜೆ 4-5 ಗಂಟೆಗೆ ತೆರಳಬೇಕು ಎಂಬುದು ಬೇಡಿಕೆಯಾಗಿದೆ~ ಎಂದು ವಿವರಿಸಿದರು.
ಸರ್ಚ್ಖಂಡ್ ಮತ್ತು ನಾಂದೇಡ್ ನಡುವಣ ರೈಲು ಸಂಪರ್ಕವನ್ನು ಬೀದರ್ವರೆಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕುರಿತು ಗಮನಸೆಳೆದಾಗ, `ತಾವು ಆ ನಿಟ್ಟಿನಲ್ಲಿ ಭರವಸೆ ನೀಡಿಲ್ಲ. ಈ ಭಾಗದ ಜನರು ದೆಹಲಿಗೆ ತೆರಳಲು ಸುಗಮ ಆಗುವಂತೆ ದೆಹಲಿಗೆ ತೆರಳುವ ರೈಲು ಗುಲ್ಬರ್ಗ ಮಾರ್ಗ ಹೋಗಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದರು.
ರೈಲ್ವೆ ಮೇಲುಸೇತುವೆ ಕಾಮಗಾರಿ: ನಗರದಲ್ಲಿ ಮಹಾವೀರ ವೃತ್ತದಿಂದ ಬೊಮ್ಮಗುಂಡೇಶ್ವರ ವೃತ್ತದ ನಡುವೆ ನಿರ್ಮಾಣ ಆಗುತ್ತಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿ ವಿಳಂಬ ಆಗುತ್ತಿರುವುದರ ಬಗೆಗೆ ಗಮನಸೆಳೆದಾಗ, `ಭೂಮಿ ಸ್ವಾಧೀನ ಪಡೆಯುವ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ~ ಎಂದರು.
ಅಧಿಕಾರಿಗಳಿಂದ ಮಾಹಿತಿ ಬಯಸಿದ ಸಚಿವರಿಗೆ ರೈಲ್ವೆ ಅಧಿಕಾರಿಯೊಬ್ಬರು, `ಆ ಭಾಗದಲ್ಲಿ ಭೂಮಿ ಸ್ವಾಧೀನ ಪಡೆಯುವ ಪ್ರಕ್ರಿಯೆ ವಿಳಂಬ ಆಗಿರುವ ಕಾರಣ ಸೇತುವೆ ನಿರ್ಮಾಣವು ವಿಳಂಬವಾಗಿದೆ~ ಎಂದು ಮಾಹಿತಿ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮಾಜ ಬೇಡಿಕೆ ಇಟ್ಟಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. ಇದಕ್ಕೂ ಮುನ್ನ ರೈಲಿನಲ್ಲಿ ಆಗಮಿಸಿದ ಸಚಿವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.