ಶನಿವಾರ, ಮೇ 15, 2021
22 °C

ರೊಮ್ಯಾಂಟಿಕ್ ಹಾದಿಗೆ ಅನಿಶ್

-ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಸಾಹಸ ಪ್ರಧಾನ ಪಾತ್ರಗಳಿಗೆ ಹೊಂದುವುದಿಲ್ಲ ಎನ್ನುವಂತೆ ಕಾಣುವ ಯುವನಟ ಅನಿಶ್, ಸಾಹಸಪ್ರಧಾನ ಚಿತ್ರಗಳಲ್ಲಿಯೇ ಭವಿಷ್ಯ ಅರಸಿ ಕೊನೆಗೂ ಹೊರಳಿದ್ದು ತಮ್ಮ ಮೃದುಭಾವದ ಮುಖಕ್ಕೆ ಹೊಂದುವ ರೊಮ್ಯಾಂಟಿಕ್ ಪಾತ್ರಗಳತ್ತ.`ನಮ್ಮೇರಿಯಾದಲ್ ಒಂದಿನ', `ಪೊಲೀಸ್ ಕ್ವಾರ್ಟರ್ಸ್' ಚಿತ್ರಗಳಲ್ಲಿ ಬಿಡುಬೀಸಾದ ಪಾತ್ರಗಳಲ್ಲಿ ಅಭಿನಯಿಸಿದ ಅವರಿಗೆ ಚಿತ್ರನಟನಾಗಿ ಅವಕಾಶ ದೊರೆಯಿತೇ ಹೊರತು ಅಂಥ ಮನ್ನಣೆ ಸಿಗಲಿಲ್ಲ. ಕೊನೆಗೂ ತಮ್ಮ ದೇಹಭಾಷೆಯ ಗುಟ್ಟು ಅರಿತ ಈ ಚಿಗುರು ಗಡ್ಡದ ಪೋರ `ಕಾಫಿ ವಿತ್ ಮೈ ವೈಫ್' ಚಿತ್ರದ ಮೂಲಕ ಹೊಸ ಇಮೇಜಿನಲ್ಲಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಡುವ ತವಕದಲ್ಲಿದ್ದಾರೆ.`ಕಾಫಿ ವಿತ್ ಮೈ ವೈಫ್' ಚಿತ್ರದ ನಂತರ ಅವರ ಮತ್ತೆರಡು ಚಿತ್ರಗಳಲ್ಲೂ  ರೊಮ್ಯಾಂಟಿಕ್ ಪಾತ್ರಗಳೇ. ಈ ಚಿತ್ರಗಳಲ್ಲೂ ಮುತ್ತಿನ ಮಳೆ ಸುರಿಸಿ ನಾಯಕಿಯ ಕೆನ್ನೆ ಕೆಂಪು ಮಾಡುವ ಪಾತ್ರ. ಬೆಂಗಳೂರಿಗರೇ ಆದ ಅನಿಶ್ ಅವರ ಕುಟುಂಬಕ್ಕೆ ಚಿತ್ರರಂಗದ ನಂಟೇನೂ ಇಲ್ಲ. ಮಗನ ಚಿತ್ರರಂಗ ಪ್ರವೇಶಕ್ಕೆ ಪೋಷಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದರು.`ನಮ್ಮೇರಿಯಾದಲ್ ಒಂದಿನ' ಚಿತ್ರದ ನಂತರ ಅವರ ಚಿತ್ರಬದುಕನ್ನು ಪೋಷಕರು ಬೆಂಬಲಿಸಿದರು.`ಕಾಫಿ ವಿತ್ ಮೈ ವೈಫ್' ನಂತರ `ನನ್ನ ಲೈಫಲ್ಲಿ' ಮತ್ತು `ನೀನೆ ಬರಿ ನೀನೇ' ಎನ್ನುವ ಎರಡು ಚಿತ್ರಗಳಲ್ಲಿ ನಾಯಕಿಗೆ ಮುತ್ತಿಟ್ಟು ಮನವೊಲಿಸುವ ಯತ್ನ ಮಾಡಿದ್ದಾರೆ ಅನಿಶ್.`ಕಾಫಿ ವಿತ್ ಮೈ ವೈಫ್' ನಾಯಕಿ ಸಿಂಧು ಲೋಕನಾಥ್, ಅನಿಶ್‌ರ `ನನ್ನ ಲೈಫಲ್ಲಿ' ಚಿತ್ರದಲ್ಲೂ ಅವರೇ ನಾಯಕಿ. ಪಕ್ಕಾ ಕಾಲೇಜು ಹುಡುಗನಂತೆ ಕಾಣುವ ಅನಿಶ್ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದೂ ಆ ಪಾತ್ರದಲ್ಲಿಯೇ. ಚಿತ್ರದ ಮೊದಲರ್ಧದಲ್ಲಿ ತರಲೆ ಹುಡುಗನಾದರೆ, ದ್ವಿತೀಯಾರ್ಧದಲ್ಲಿ ವ್ಯತಿರಿಕ್ತ ಪಾತ್ರ. ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಅನಿಶ್ ಅವರ ಮತ್ತೊಂದು ಚಿತ್ರ `ನೀನೆ ಬರಿ ನೀನೇ' ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.ಜಯಂತ್ ಕಾಯ್ಕಿಣಿಯವರ ಹಾಡು, ಮನೋಮೂರ್ತಿಯವರ ಸಂಗೀತ, ಸೋನು ನಿಗಮ್ ಕಂಠ ಸೇರಿ ಮೂಡಿಬಂದ `ನೀನೆ ಬರಿ ನೀನೇ' ಆಲ್ಬಂ ಈ ಚಿತ್ರಕ್ಕೆ ಮೂಲ. ಆಲ್ಬಂಗೆ ಬಂಡವಾಳ ಹೂಡಿದ್ದ ಅಶೋಕ್ ಖೇಣಿ ಅವರೇ ನಿರ್ಮಾಪಕ. `ಬಾ ನೋಡು ಗೆಳತಿ ನವಿಲು ಗರಿಯು ಮರಿಹಾಕಿದೆ...' ಎಂದು ಕಿವಿಯಲ್ಲಿ ಉಸುರುವುದು ನಾಯಕಿ ದೀಪಿಕಾ ಕಾಮಯ್ಯ ಅವರಿಗೆ. ಸಂಗೀತ ಪ್ರಧಾನವಾದ ಈ ಚಿತ್ರದಲ್ಲಿ ಹಳ್ಳಿ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ದೀಪಿಕಾ ಹಳ್ಳಿ ಹೈದನ ಹೆಜ್ಜೆಗೆ ಜತೆಯಾಗಿದ್ದಾರೆ.ಕಥೆಯೇ ಪಾತ್ರದ ಆಯ್ಕೆಗೆ ಮೂಲ ಎನ್ನುವ ಅನಿಶ್‌ಗೆ ತಮ್ಮ ಮೊದಲ ಎರಡು ಚಿತ್ರಗಳಿಗೆ ಜನ ಮನ್ನಣೆ ದೊರಕದಿರುವುದಕ್ಕೆ ಬೇಸರವಿಲ್ಲ. ಎಲ್ಲ ಪಾತ್ರಗಳಲ್ಲೂ ಅಭಿನಯಿಸಬೇಕು ಎನ್ನುವ ಉಮೇದು. ಕಥೆಯ ಹೂರಣವನ್ನು ಸವಿದು ಪಾತ್ರ ಒಪ್ಪಿಕೊಳ್ಳುತ್ತಾರಂತೆ. `ನಮ್ಮೇರಿಯಾದಲ್ ಒಂದಿನ' ಚಿತ್ರದ ನಟನೆಯೇ ನನ್ನ ಚಿತ್ರ ಜೀವನಕ್ಕೆ ತಿರುವು ನೀಡಿದ್ದು. ಈಗಲೂ ಆ ಚಿತ್ರದ ಮೂಲಕವೇ ನನ್ನನ್ನು ನಿರ್ದೇಶಕರು ಗುರುತಿಸುವುದು' ಎನ್ನುತ್ತಾರೆ ಅನಿಶ್. ಈ ಮುಂಚಿನ ಚಿತ್ರಗಳಲ್ಲಿ ಮೇಕಪ್‌ಗೆ ಮುಖವೊಡ್ಡದ ಅವರು ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ.`ಮಾಸ್ ಸಿನಿಮಾಗಳಿಗೆ ಹೆಚ್ಚು ಕಸರತ್ತು ಬೇಕಿಲ್ಲ. ಸುಲಭವಾಗಿ ನಿಭಾಯಿಸಬಹುದು. ಆದರೆ ರೊಮ್ಯಾಂಟಿಕ್ ಪಾತ್ರಗಳಿಗೆ ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕು. ಪೂರ್ವ ಸಿದ್ಧತೆ ಮಾಡಿಕೊಂಡೇ ಈ ಪಾತ್ರಗಳನ್ನು ನಿರ್ವಹಿಸಿದ್ದೇನೆ' ಎನ್ನುತ್ತಾರೆ ಅನಿಶ್. ಕಾಲೇಜು ದಿನಗಳಲ್ಲಿ ಮಾಡೆಲಿಂಗ್‌ಗೆ ಒಡ್ಡಿಕೊಂಡ ಅನಿಶ್ ಅಲ್ಲಿ ತಮ್ಮ ಇಮೇಜು ರೂಪಿಸಿಕೊಂಡ ಮೇಲೆ ಚಿತ್ರರಂಗ ಪ್ರವೇಶಿಸಿದರು. ಹೈದರಾಬಾದ್‌ನಲ್ಲಿ ಕೆಲ ಕಾಲ ನಟನೆಯ ತರಬೇತಿ ಪಡೆದರು.ಶೀಘ್ರದಲ್ಲಿಯೇ ಅವರ ಮತ್ತೊಂದು ಚಿತ್ರ `ಬಜಾರ್'ನ ಚಿತ್ರೀಕರಣ ಆರಂಭವಾಗಲಿದೆಯಂತೆ. `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನೀಲ್ ಈ ಚಿತ್ರಕ್ಕೆ ಹಣ ಹೊಂದಿಸಿದರೆ, ಹರೀಶ್ ಆಕ್ಷನ್, ಕಟ್ ಹೇಳಲಿದ್ದಾರೆ. ಟ್ರಾವೆಲ್ ಏಜೆನ್ಸಿಗಳಲ್ಲಿ ಕೆಲಸ ಮಾಡುವ ಹುಡುಗನ ಪಾತ್ರ ಆ ಚಿತ್ರದಲ್ಲಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಚಿತ್ರದ ಮುಖ್ಯ ವಸ್ತುವಂತೆ.

ಚಿತ್ರ: ಕೆ.ಎನ್.ನಾಗೇಶ್ ಕುಮಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.