ಶನಿವಾರ, ಮೇ 15, 2021
24 °C

ರೋಮಾಂಚನಗೊಳಿಸದ ಥ್ರಿಲ್ಲರ್: ಚಿತ್ರ: ಸಂಚಲನಂ (ತೆಲುಗು)

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮಾಂಚನಗೊಳಿಸದ ಥ್ರಿಲ್ಲರ್: ಚಿತ್ರ: ಸಂಚಲನಂ (ತೆಲುಗು)

ಪೊಲೀಸ್ ಎನ್‌ಕೌಂಟರ್ ಕುರಿತಾದ ವಸ್ತುವನ್ನು ಹೂರಣವಾಗಿಸಿಕೊಂಡ ಚಿತ್ರ `ಸಂಚಲನಂ~. ಎನ್‌ಕೌಂಟರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಇನ್ಸ್‌ಪೆಕ್ಟರೊಬ್ಬರು ತಿರುಗಿಬೀಳುವ ಕಥೆಯನ್ನು ಕುತೂಹಲ ಭರಿತವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಬಿ.ವಿ. ರಮಣ ರೆಡ್ಡಿ.ಸವೆದ ಜಾಡು ಬಿಟ್ಟು ತುಸು ಭಿನ್ನವಾಗಿ ಚಿತ್ರ ರೂಪಿಸುವ ಅವರ ಪ್ರಯತ್ನ ಮೆಚ್ಚುವಂತಹದೇ. ಚಿತ್ರಕ್ಕೆ ಆರಿಸಿಕೊಂಡಿರುವ ವಸ್ತು ಕೂಡ ಕುತೂಹಲ ಕೆರಳಿಸುವಂತ ಹದೇ. ಆದರೆ ಅದನ್ನು ನಿರೂಪಿಸಿರುವ ರೀತಿ ನೀರಸವಾಗಿದೆ. ರೋಮಾಂಚಕ ಆಗಬಹುದಾದ ವಸ್ತು, ಕಸುಬುದಾರಿಕೆಯ ಕೊರತೆಯಿಂದ ತೀರಾ ಸಪ್ಪೆ ಅನಿಸಿಬಿಡುತ್ತದೆ.ಸಸ್ಪೆನ್ಸ್ ಅಂಶವನ್ನು ಹಾಗೂ ಹೀಗೂ ವಿರಾಮದವರೆಗೂ ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಅದು ಬಿಚ್ಚಿಕೊಳ್ಳಲು ಶುರುವಾಗುತ್ತಲೇ ಚಿತ್ರ ಅತಾರ್ಕಿಕ ನೆಲೆಗೆ ಹೊರಳಿಕೊಂಡು, ಸಾಹಸ ಪ್ರಧಾನ ಸಾಧಾರಣ ಪೊಲೀಸ್ ಚಿತ್ರಗಳ ಜಾಡು ಹಿಡಿಯುತ್ತದೆ.ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಮೆಗೆ ಯತ್ನಿಸುತ್ತಿರುವಾಗ ವಿಕ್ರಂ (ಕಮಲಾಕರ್), ಅವರನ್ನು ತಡೆದು ಅವರಿಗೆ ತಮ್ಮ ಮನೆಯಲ್ಲಿ ನೆಲೆ ಒದಗಿಸುತ್ತಾನೆ. ಅದಾದ ಮಾರನೆ ದಿನ ಆತನ ಮೇಲೆ ರೌಡಿಗಳು ದಾಳಿ ನಡೆಸುತ್ತಾರೆ. ಆತ್ಮರಕ್ಷಣೆಗೆ ಅವರೊಂದಿಗೆ ಹೊಡೆದಾಡು ತ್ತಿರುವಾಗ ಪೊಲೀಸರು ಎಳೆದೊಯ್ಯುತ್ತಾರೆ. ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಇನ್ಸ್‌ಪೆಕ್ಟರ್ ನಂದಗೋಪಾಲ್ (ಸಾಯಿಕುಮಾರ್) ಜೀಪಿನಲ್ಲಿ ಕರೆದೊಯ್ಯುವಾಗ ಮತ್ತೊಂದು ದಾಳಿ ನಡೆಯುತ್ತದೆ.ದಕ್ಷ ಅಧಿಕಾರಿ ನಂದಗೋಪಾಲ್‌ಗೆ ಅಷ್ಟರಲ್ಲೇ ಅನುಮಾನ ಶುರುವಾಗುತ್ತದೆ. ಈ ದಾಳಿಯ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ಗುಮಾನಿಪಡುತ್ತಾನೆ. ವಿಕ್ರಂ ಮೇಲಿನ ದಾಳಿಗೆ ಕಾರಣ ಏನು. ಆತನನ್ನು ರಕ್ಷಿಸಲು ನಂದಗೋಪಾಲ್‌ಗೆ ಸಾಧ್ಯವಾಯಿತೆ ಎಂಬುದರ ಸುತ್ತ ಕಥೆ ಹಬ್ಬಿಕೊಂಡಿದೆ.ಚಿತ್ರದಲ್ಲಿ ಹೊಡೆದಾಟಗಳು ತುಸು ಹೆಚ್ಚಿಗೇ ಇವೆ. ಜತೆಗೆ ಚೇಸಿಂಗ್ ದೃಶ್ಯಗಳು. ಒಂದೇ ಒಂದು ಹಾಡಿದೆ. ಅದು ಕೂಡ `ವಂಗ ತೋಟ...~ ಗೀತೆಯ ರೀಮಿಕ್ಸ್. ಚಿನ್ನ ಅವರು ಸಂಗೀತ ಅಳವಡಿಸಿದ್ದಾರೆ.ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಮಲಾಕರ್ ಅಭಿನಯದಲ್ಲಿ ಇನ್ನೂ ಪಳಗಬೇಕಿದೆ. ಭಾವಾಭಿವ್ಯಕ್ತಿ ಏನೇನೂ ಸಾಲದು. ಪೊಲೀಸ್ ಪಾತ್ರಗಳಲ್ಲಿ ಸೈ ಅನ್ನಿಸಿಕೊಂಡಿರುವ ಸಾಯಿಕುಮಾರ್ ಇಲ್ಲೂ ಪಾತ್ರೋಚಿತ ವಾಗಿ ನಟಿಸಿದ್ದಾರೆ. ಹಾಗೆ ನೋಡಿದರೆ ಅವರ ಅಭಿನಯವೇ ಚಿತ್ರದ ಜೀವಾಳ ಅನ್ನಬಹುದು.ಹತಾಶ ರೈತನ ಪಾತ್ರದಲ್ಲಿ ಎಲ್.ಬಿ. ಶ್ರೀರಾಮ್ ಗಮನ ಸೆಳೆಯುತ್ತಾರೆ. ವೇಣು ಮಾಧವ್ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ಕಚಗುಳಿ ಇಡುತ್ತಾರೆ. `ಖಾಕಿ ಖಳ~ನ ಪಾತ್ರದಲ್ಲಿ ಆಶಿಷ್ ವಿದ್ಯಾರ್ಥಿ ಕಾಣಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.