ಶನಿವಾರ, ಮೇ 28, 2022
24 °C

ರ‌್ಯಾಂಪ್ ಮೇಲೆ ಹಾರ್ಲೆ ಡೇವಿಡ್‌ಸನ್

ರಮೇಶ ಕೆ. Updated:

ಅಕ್ಷರ ಗಾತ್ರ : | |

ಅಮಾವಾಸ್ಯೆಯ ಕಗ್ಗತ್ತಲು. ಡಾಂಬಾರು ರಸ್ತೆ ಮೇಲೆ ಯುವತಿಯೊಬ್ಬಳು ಕುಳಿತಿದ್ದಳು. ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ಬಂದ ಯುವಕ ರಸ್ತೆ ಮಧ್ಯೆದಲ್ಲಿ ಬೈಕ್ ನಿಲ್ಲಿಸಿ ಹೊರಟು ಹೋದ. ನಂತರ ಮತ್ತೊಬ್ಬ ಯುವಕನ ಎಂಟ್ರಿ.ಯಾರನ್ನೋ ಕಾಯುತ್ತಾ ಕುಳಿತಿದ್ದ ಕನ್ನಡಕ ಹಾಗೂ ಜರ್ಕಿನ್ ತೊಟ್ಟಿದ್ದ ಯುವತಿ ಯುವಕನನ್ನು ಕಂಡೊಡನೆ ಬೈಕ್ ಕೀ ಕೊಟ್ಟು ರೈಡ್ ಮಾಡುವಂತೆ ಸಂಜ್ಞೆ ಮಾಡುತ್ತಾಳೆ. ಬೈಕ್ ಏರಿದ ಯುವಕ ಪೋಸ್ ಕೊಡುತ್ತಿದ್ದರೆ ಸೈಲೆನ್ಸರ್ ಶಬ್ದವಷ್ಟೇ ಕೇಳಿಸುತ್ತಿತ್ತು... ಇದು ಯಾವುದೋ ಸಿನಿಮಾ ಕಥೆಯಲ್ಲ. `ವೈಬ್ಸ್~ ಫ್ಯಾಷನ್ ಸಂಸ್ಥೆಯ ನೂತನ ಲೋಗೊ ಅನಾವರಣದ ಪ್ರಯುಕ್ತ ಐಟಿಸಿ ರಾಯಲ್ ಗಾರ್ಡೇನಿಯಾ ರೆಸ್ಟೋರೆಂಟ್‌ನಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋನ ಝಲಕ್ ಇದು.ಸೈಲೆನ್ಸರ್ ಶಬ್ದದ `ಹಿನ್ನೆಲೆ ಸಂಗೀತ~ಕ್ಕೆ ಬೆಡಗಿಯರು ಹೆಜ್ಜೆಹಾಕುತ್ತಿದ್ದಂತೆ ಡೇವಿಡ್‌ಸನ್ ಬೈಕ್‌ಅನ್ನು ನಿಧಾನವಾಗಿ ಚಲಾಯಿಸುತ್ತಾ ರ‌್ಯಾಂಪ್‌ನ ತುದಿಯಲ್ಲಿ  ಸೈಡ್ ಸ್ಟಾಂಡ್ ಹಾಕಿ ನಿಲ್ಲಿಸಿದ. ನಂತರ ಹೆಲ್ಮೆಟ್ ಹಿಡಿದು ಬಂದ ಇಬ್ಬರು ರೂಪದರ್ಶಿಯರು ಬೈಕ್‌ಗೆ ಒರಗಿನಿಂತು ಫೋಟೊಗೆ ಪೋಸ್ ನೀಡುತ್ತಿದ್ದಂತೆ ಮತ್ತೆ ಸೈಲೆನ್ಸರ್‌ನ ಸದ್ದು ಸ್ಪೀಕರ್‌ನಿಂದ ಕಿವಿಗಪ್ಪಳಿಸತೊಡಗಿತು. ಬೈಕ್ ಶೋಗೆ ಪ್ರೇಕ್ಷಕರಿಂದ `ಓ~ ಎಂಬ ಹರ್ಷೋದ್ಗಾರ.`ಗೋಲ್ಡನ್ ಅಡಿಗೊ~ ಹೆಸರಿನಲ್ಲಿ ನಂತರ ನಡೆದ ಶೋ ನಿಜಕ್ಕೂ ಅದ್ಭುತ ಪ್ರದರ್ಶನವಾಗಿತ್ತು. ಪೈಲ್ವಾನರಂತಿದ್ದ ಇಬ್ಬರು ತರುಣರು ದೇಹಕ್ಕೆ ಸಿಲ್ವರ್ ಬಣ್ಣ ಬಳಿದುಕೊಂಡು ಬಂದಿದ್ದರು. ಒಬ್ಬನ ಭುಜದ ಮೇಲೆ ಇನ್ನೊಬ್ಬ ಯಾವುದೇ ಆಧಾರವಿಲ್ಲದೆ ತಲೆ ಕೆಳಗಾಗಿ ಐದಾರು ಸೆಕೆಂಡ್ ನಿಂತು ಎಲ್ಲರನ್ನು ಬೆರಗಾಗಿಸಿದ.ಮುಂದುವರೆದು ಅಂಗಾತ ಮಲಗಿದ ರೂಪದರ್ಶಿ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಿದ್ದ, ಆ ಕಾಲುಗಳ ಮೇಲೆ ಮತ್ತೊಬ್ಬ ಯುವಕ ನಿಂತು ವಿವಿಧ ರೀತಿಯಲ್ಲಿ ಅಂಗಸೌಷ್ಠವ ಪ್ರದರ್ಶಿಸಿದ್ದು ಮಾತ್ರ ಮೈ ಜುಂ ಎನ್ನುವಂತಿತ್ತು. ಹೀಗೆ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಇಬ್ಬರೂ ರೂಪದರ್ಶಿಗಳು ಹುರಿಗೊಳಿಸಿದ್ದ ತಮ್ಮ ದೇಹವನ್ನು ಪ್ರದರ್ಶಿಸಿ ರ‌್ಯಾಂಪ್‌ನಿಂದ ಹೊರನಡೆದರು.ವೇದಿಕೆಯಲ್ಲಿ ಕತ್ತಲು. ರ‌್ಯಾಂಪ್ ಮಧ್ಯದಿಂದ ಸಣ್ಣ ಟೇಬಲ್‌ನಷ್ಟು ಜಾಗ ಮೇಲೇರುತ್ತಿತ್ತು. ಐದು ಅಡಿ ಎತ್ತರಕ್ಕೇರಿದ ವೇದಿಕೆ ಮೇಲೆ ಗಾಯಕಿಯಬ್ಬಳು ಪ್ರತ್ಯಕ್ಷ! ಆಕೆಯ ಮುಖ ಮುಚ್ಚುವಂತೆ ಕೂದಲು  ಹರಡಿಕೊಂಡಿತ್ತು. ಕೈಯಲ್ಲಿದ್ದ ಮೈಕ್‌ನಿಂದ ಪಾಪ್ ಗೀತೆ ಹೊರಹೊಮ್ಮತ್ತಿತ್ತು. ಕಪ್ಪು ವಸ್ತ್ರದಲ್ಲಿದ್ದ ಆ ಯುವಕರ ನಡುವೆ ಶ್ವೇತ ವಸ್ತ್ರಧಾರಿ ಯುವತಿ ಹಾಡಿಗೆ ತಕ್ಕಂತೆ ರ‌್ಯಾಂಪ್ ಮೇಲೆ ತಳುಕು ಬಳುಕಿನಿಂದ ನಡೆದ ರೀತಿ ಮನಮೋಹಕವಾಗಿತ್ತು.ಫ್ಯಾಷನ್ ಶೋಗೂ ಮುಂಚೆ ನಟ ಅಂಬರೀಷ್ ಹಾಗೂ ನೈಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ `ವೈಬ್ಸ್~ ಫ್ಯಾಷನ್ ಸಂಸ್ಥೆಯ ಲೋಗೊ ಅನಾವರಣ ಮಾಡಿದರು. `ಹಾರ್ಲೆ ಡೇವಿಡ್‌ಸನ್ ಬೈಕ್ ಮೇಲೆ ಯುವಕರ ರೈಡ್ ನೋಡುತ್ತಿದ್ದರೆ ನನಗ್ಯಾಕೆ ಇಷ್ಟು ಬೇಗ ವಯಸ್ಸಾಯಿತೆಂದು ಹೊಟ್ಟೆಕಿಚ್ಚಾಗುತ್ತಿದೆ. ಆದರೂ ನಮ್ಮ ಯುವಕರು ಈ ಬೈಕ್ ರೈಡ್ ಮಾಡುವುದನ್ನು ಕಂಡು ಖುಷಿ ಪಡುತ್ತೇವೆ ಎಂದು ಮನದಾಳದ ಮಾತನ್ನು ಅಂಬರೀಷ್ ಈ ಸಂದರ್ಭದಲ್ಲಿ ಹೊರಹಾಕಿದರು. `ವೈಬ್ಸ್~ ಸಂಸ್ಥೆಯು ವಾಣಿಜ್ಯ ಉದ್ದೇಶದ ಫ್ಯಾಷನ್ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದೆ. ಫ್ಯಾಷನ್ ಶೋ ಜೊತೆಗೆ ಪ್ರಚಾರದ ಉದ್ದೇದಿಂದ `ದಿ ನ್ಯೂ ಹಾರ್ಲೆ ಡೇವಿಡಸನ್ 48~ ಹಾಗೂ ಬಿಎಂಡಬ್ಲ್ಯೂ ಕಾರಿನ ಮಾದರಿಗಳ ಪ್ರದರ್ಶಿಸಲಾಯಿತು. ಅದ್ದೂರಿ ಹಾಗೂ ಆಕರ್ಷಕ ಮೋಟಾರು ಬೈಕ್ ಕಣ್ತುಂಬಿಕೊಂಡ ಕೆಲ ಯುವಕರು ಪ್ರದರ್ಶನಕ್ಕಿಟ್ಟಿದ್ದ ಆ ಬೈಕ್‌ಗಳ ಮೇಲೆ ಕುಳಿತು ಫೋಟೊ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.