ಗುರುವಾರ , ಜೂಲೈ 2, 2020
22 °C
ಕ್ರಿಕೆಟ್: ಮತ್ತೆ ಮುಗ್ಗರಿಸಿದ ಕೊಹ್ಲಿ ಬಳಗ, ಸಿಂಹಳೀಯ ನಾಡಿನ ಬೌಲರ್‌ಗಳ ಪಾರಮ್ಯ

ಲಂಕಾ ಅಬ್ಬರ; ಭಾರತ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಕಾ ಅಬ್ಬರ; ಭಾರತ ತತ್ತರ

ಕಿಂಗ್‌ಸ್ಟನ್ (ಪಿಟಿಐ): ಶಿಸ್ತುಬದ್ಧ ದಾಳಿಯ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ ಶ್ರೀಲಂಕಾ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ತನ್ನ ಎರಡನೇ ಪಂದ್ಯದಲ್ಲಿ 161 ರನ್‌ಗಳ ಸುಲಭ ಗೆಲುವು ಪಡೆಯಿತು.ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿತು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಲಂಕಾ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬಲದಿಂದ 50 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 348 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು.ಈ ಗುರಿಯ ಸನಿಹಕ್ಕೂ ಸುಳಿಯದ ಭಾರತ 44.5 ಓವರ್‌ಗಳಲ್ಲಿ 187 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡು ವಾರಗಳ ಹಿಂದೆಯೆಷ್ಟೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತ್ರಿಕೋನ ಏಕದಿನ ಸರಣಿಯಲ್ಲಿ ಕಂಡ ಸತತ ಎರಡನೇ ಸೋಲು ಇದು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ನಿರಾಸೆ ಅನುಭವಿಸಿತ್ತು.ಸ್ಫೂರ್ತಿ ತುಂಬಬಲ್ಲ ನಾಯಕ ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿ ಭಾರತ ತಂಡವನ್ನು ಕಾಡುತ್ತಿದೆ. ವಿಂಡೀಸ್ ಎದುರಿನ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಬ್ಯಾಟ್ಸ್‌ಮನ್‌ಗಳಿಗೆ ದೋನಿ ಸ್ಫೂರ್ತಿ ತುಂಬಿದ್ದರು. ಅವರು ಸ್ನಾಯುಸೆಳೆತದ ನೋವಿನಿಂದ ಬಳಲುತ್ತಿರುವ ಕಾರಣ ಈ ಸರಣಿಯಿಂದ ಹೊರ ಉಳಿದಿದ್ದಾರೆ.ಮತ್ತೆ ವೈಫಲ್ಯ: ಈ ಸಲದ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು ಗರಿಷ್ಠ ರನ್ ಗಳಿಸಿದ ಶಿಖರ್ ಧವನ್ ವೈಫಲ್ಯ ಲಂಕಾ ಎದುರಿನ ಪಂದ್ಯದಲ್ಲೂ ಮುಂದುವರಿಯಿತು. ವಿಂಡೀಸ್ ಎದುರು 11 ರನ್‌ಗೆ ವಿಕೆಟ್ ಒಪ್ಪಿಸಿದ್ದ ಧವನ್ ಲಂಕಾ ವಿರುದ್ಧ 24 ರನ್ ಗಳಿಸಿ ರಂಗನಾ ಹೆರಾತ್ ಎಸೆತದಲ್ಲಿ ಔಟಾದರು.ಆದರೆ, ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಕೂಡಾ (5) ಬೇಗನೆ ಪೆವಿಲಿಯನ್ ಸೇರಿದರು. ಐದನೇ ಓವರ್‌ನಲ್ಲಿ ರೋಹಿತ್ ವಿಕೆಟ್ ಪಡೆದ ನುವಾನ್ ಕುಲಶೇಖರ ಲಂಕಾಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು. ಈ ಆಘಾತದ ಬೆನ್ನಲ್ಲೆ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್ (30), ನಾಯಕ ಕೊಹ್ಲಿ (2) ವಿಕೆಟ್ ಒಪ್ಪಿಸಿದರು.ಐದನೇ ವಿಕೆಟ್ ಜೊತೆಯಾಟದಲ್ಲಿ ದಿನೇಶ್ ಕಾರ್ತಿಕ್ (22, 41ಎಸೆತ, 2 ಬೌಂಡರಿ) ಹಾಗೂ ಸುರೇಶ್ ರೈನಾ (33, 33ಎಸೆತ, 4 ಬೌಂಡರಿ ) 53 ರನ್ ಕಲೆ ಹಾಕಿ ಸೋಲಿನ ಸುಳಿಯಿಂದ ತಂಡವನ್ನು ಪಾರು ಮಾಡಲು ನಡೆಸಿದ ಹೋರಾಟ ಸಾಕಾಗಲಿಲ್ಲ. ಹೆರಾತ್ ಓವರ್‌ನಲ್ಲಿ ಕಾರ್ತಿಕ್ ಕ್ರಿಸ್ ಬಿಟ್ಟು ಹೊಡೆಯಲು ಮುಂದೆ ಹೋದಾಗ ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ಬೇಲ್ಸ್ ಎಗರಿಸಿ ಈ ಜೊತೆಯಾಟ ಮುರಿದರು.ಕೊನೆಯಲ್ಲಿ ಲಂಕಾದ ದಾಳಿಯನ್ನು ಎದುರಿಸಿ ನಿಲ್ಲಲು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ. ಸೇನಾನಾಯಕೆ ಮತ್ತು ವೇಗಿ ಲಸಿತ್ ಮಾಲಿಂಗ ತಲಾ ಎರಡು ವಿಕೆಟ್ ಪಡೆದರೆ, ಹೆರಾತ್ ಮೂರು ವಿಕೆಟ್ ಉರುಳಿಸಿದರು. ರವೀಂದ್ರ ಜಡೇಜ (ಔಟಾಗದೆ 49, 62ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದರು. ದಿಢೀರ್ ಕುಸಿತ ಕಂಡ ಭಾರತ ಕೊನೆಯ 45 ರನ್ ಕಲೆ ಹಾಕುವ ಅಂತರದಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.ಹೊರಬೀಳುವ ಭೀತಿ: ಆಡಿರುವ ಎರಡೂ ಪಂದ್ಯಗಳಲ್ಲಿ ನಿರಾಸೆ ಕಂಡಿರುವ ಐಸಿಸಿ ಏಕದಿನ ಕ್ರಿಕೆಟ್‌ನ ಚಾಂಪಿಯನ್ ಭಾರತ, ತ್ರಿಕೋನ ಸರಣಿಯಿಂದ ಹೊರಬೀಳುವ ಭೀತಿಯಲ್ಲಿದೆ.ಮೂರೂ ತಂಡಗಳು ತಲಾ ಎರಡು ಪಂದ್ಯಗಳನ್ನಾಡಿದ್ದು, ವಿಂಡೀಸ್ 9 ಅಂಕಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬೋನಸ್ ಅಂಕದೊಂದಿಗೆ ಮೊದಲ ಗೆಲುವು ಪಡೆದಿರುವ ಲಂಕಾ 5 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ, ಭಾರತವಿನ್ನೂ ಪಾಯಿಂಟ್ ಖಾತೆ ತೆರೆದಿಲ್ಲ.ಮೂರು ತಂಡಗಳಿಗೂ ತಲಾ ಎರಡು ಪಂದ್ಯಗಳು ಬಾಕಿ ಇದ್ದು, ಭಾರತ ಎಲ್ಲಾ ಪಂದ್ಯಗಳಲ್ಲಿ ಗೆಲುವು ಕಾಣಬೇಕು. ಅದರ ಜೊತೆಗೆ ಅದೃಷ್ಟದ ಬಲವೂ ಬೇಕಿದೆ. ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ಎದುರು ಪೈಪೋಟಿ ನಡೆಸಲಿದೆ.                                        ಸ್ಕೋರ್ ವಿವರಶ್ರೀಲಂಕಾ 50 ಓವರ್‌ಗಳಲ್ಲಿ 1 ವಿಕೆಟ್‌ಗೆ 348

ಉಪುಲ್ ತರಂಗ ಔಟಾಗದೆ  174

ಮಾಹೇಲ ಜಯವರ್ಧನೆ ಸಿ ಉಮೇಶ್ ಬಿ ಆರ್.ಅಶ್ವಿನ್  107

ಏಂಜಲೊ ಮ್ಯಾಥ್ಯೂಸ್ ಔಟಾಗದೆ  44

ಇತರೆ: (ಬೈ -1, ಲೆಗ್ ಬೈ-6, ವೈಡ್-16)  23

ವಿಕೆಟ್ ಪತನ: 1-213 (ಜಯವರ್ಧನೆ; 38.4).

ಬೌಲಿಂಗ್: ಶಮಿ ಅಹ್ಮದ್ 10-0-68-0, ಉಮೇಶ್ ಯಾದವ್ 8-0-64-0, ಇಶಾಂತ್ ಶರ್ಮ 9-0-68-0, ರವೀಂದ್ರ ಜಡೇಜ 9-0-55-0, ಆರ್. ಅಶ್ವಿನ್ 10-0-67-1, ವಿರಾಟ್ ಕೊಹ್ಲಿ 2-0-9-0, ಸುರೇಶ್ ರೈನಾ 2-0-10-0.ಭಾರತ 44.5 ಓವರ್‌ಗಳಲ್ಲಿ 187

ರೋಹಿತ್ ಶರ್ಮ ಸಿ ಏಂಜಲೊ ಮ್ಯಾಥ್ಯೂಸ್ ಬಿ ನುವಾನ್ ಕುಲಶೇಖರ  05

ಶಿಖರ್ ಧವನ್ ಸಿ ಉಪುಲ್ ತರಂಗ ಬಿ ರಂಗನಾ ಹೆರಾತ್ 24

ಮುರಳಿ ವಿಜಯ್ ಬಿ ಲಸಿತ್ ಮಾಲಿಂಗ  30

ವಿರಾಟ್ ಕೊಹ್ಲಿ ಸಿ ಲಸಿತ್ ಮಾಲಿಂಗ ಬಿ ಏಂಜಲೊ ಮ್ಯಾಥ್ಯೂಸ್  02

ದಿನೇಶ್ ಕಾರ್ತಿಕ್ ಸ್ಟಂಪ್ಡ್ ಕುಮಾರ ಸಂಗಕ್ಕಾರ ಬಿ ರಂಗನಾ ಹೆರಾತ್  22

ಸುರೇಶ್ ರೈನಾ ರನ್‌ಔಟ್  33

ರವೀಂದ್ರ ಜಡೇಜ ಔಟಾಗದೆ  49

ಆರ್. ಅಶ್ವಿನ್ ಸಿ  ಮಾಲಿಂಗ ಬಿ ಸಚಿತ್ರಾ ಸೇನಾನಾಯಕೆ  04

ಶಮಿ ಅಹ್ಮದ್ ಬಿ ಸಚಿತ್ರಾ ಸೇನಾನಾಯಕೆ  00

ಇಶಾಂತ್ ಶರ್ಮ ಸಿ  ಸಂಗಕ್ಕಾರ ಬಿ ರಂಗನಾ ಹೆರಾತ್  02

ಉಮೇಶ್ ಯಾದವ್ ಬಿ ಲಸಿತ್ ಮಾಲಿಂಗ  00

ಇತರೆ: (ಲೆಗ್ ಬೈ-4, ವೈಡ್-12) 1 6

ವಿಕೆಟ್ ಪತನ: 1-2 (ರೋಹಿತ್; 4.2), 2-52 (ಧವನ್; 14.3), 3-57 (ಕೊಹ್ಲಿ; 15.5), 4-65 (ವಿಜಯ್; 18.3), 5-118 (ಕಾರ್ತಿಕ್; 28.1), 6-142 (ರೈನಾ; 33.5), 7-153 (ಅಶ್ವಿನ್; 37.4), 8-153 (ಶಮಿ; 37.5), 9-166 (ಇಶಾಂತ್; 40.3), 10-187 (ಉಮೇಶ್; 44.5).ಬೌಲಿಂಗ್: ನುವಾನ್ ಕುಲಶೇಖರ 9-0-37-1, ಏಂಜಲೊ ಮ್ಯಾಥ್ಯೂಸ್ 8-0-2-23-1, ಸಚಿತ್ರಾ ಸೇನಾನಾಯಕೆ 10-0-46-2, ರಂಗನಾ ಹೆರಾತ್ 10-0-37-3, ಲಸಿತ್ ಮಾಲಿಂಗ 7.5-0-40-2.ಫಲಿತಾಂಶ: ಶ್ರೀಲಂಕಾಕ್ಕೆ 161 ರನ್ ಜಯ ಹಾಗೂ ಐದು ಪಾಯಿಂಟ್ (ಒಂದು ಬೋನಸ್).ಪಂದ್ಯಶ್ರೇಷ್ಠ: ಉಪುಲ್ ತರಂಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.