ಗುರುವಾರ , ಏಪ್ರಿಲ್ 22, 2021
22 °C

ಲಂಚ ಪ್ರಕರಣ: ಮತ್ತೆ ಸಂಸತ್ತಿನಲ್ಲಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಈವರೆಗೂ ಅಡಗಿ ಕುಳಿತಂತಿದ್ದು ಈಗ ದಿಢೀರನೆ ಪ್ರತ್ಯಕ್ಷವಾಗಿ ಕೇಂದ್ರ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿರುವ ‘ವೋಟಿಗಾಗಿ ನೋಟು ಭೂತ’ದ ಹೇಷಾರವ ಶುಕ್ರವಾರವೂ ಸಂಸತ್ತಿನ ಉಭಯ ಸದನಗಳಲ್ಲಿ ಮಾರ್ದನಿಸಿತು. ಸಂಸದರಿಗೆ ಲಂಚ ನೀಡಿಕೆ ಆರೋಪವನ್ನು ಪ್ರಧಾನಿಯೇ ಖುದ್ದಾಗಿ ತಳ್ಳಿಹಾಕಿದ್ದರ ನಡುವೆಯೂ, ವಿರೋಧ ಪಕ್ಷಗಳ ಜೊತೆ ಸೇರಿ ಆಡಳಿತಾರೂಢರನ್ನು ಇನ್ನಿಲ್ಲದಂತೆ ಕಾಡಿತು.ಇದರಿಂದ ಆಡಳಿತ ಮತ್ತು ವಿರೋಧಿ ಸದಸ್ಯರ ನಡುವಿನ ಗದ್ದಲ ಮಿತಿಮೀರಿ ಪದೇ ಪದೇ ಎರಡೂ ಸದನಗಳನ್ನು ಮುಂದೂಡಲಾಯಿತು. ಪ್ರಧಾನಿಯನ್ನೇ ನೇರವಾಗಿ ಗುರಿಯಾಗಿಟ್ಟು ತೀವ್ರ ಹುಯಿಲೆಬ್ಬಿಸಿದ ವಿರೋಧ ಪಕ್ಷಗಳು, ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಬೆದರಿಕೆ ಒಡ್ಡಿದವು. ಸಭಾಧ್ಯಕ್ಷೆ ಮೀರಾ ಕುಮಾರ್ ಅವರನ್ನು ‘ಕಡೆಗಣಿಸಿದ’ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ವಿರುದ್ಧ ತಾವೂ ಇದೇ ಕ್ರಮಕ್ಕೆ ಮುಂದಾಗುವುದಾಗಿ ಕಾಂಗ್ರೆಸ್ ತಿರುಗೇಟು ನೀಡಿತು.ಮೊದಲಿಗೆ ಸದನ ಸೇರುತ್ತಿದ್ದಂತೆಯೇ, ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರು ಎದುರಿಸುತ್ತಿರುವ ಆತಂಕಗಳ ಬಗ್ಗೆ ವಿದೇಶಾಂಗ ಸಚಿವರ ಗಮನ ಸೆಳೆಯುವ ಸೂಚನೆ ಮಂಡಿಸಲು ನಿಗದಿಯಂತೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಸಭಾಧ್ಯಕ್ಷೆ ಮೀರಾ ಕುಮಾರ್ ಅವಕಾಶ ನೀಡಿದರು. ಆದರೆ, 2008ರಲ್ಲಿ ಸರ್ಕಾರದ ಪರವಾಗಿ ನಡೆದ ವಿಶ್ವಾಸಮತ ಯಾಚನೆ ವೇಳೆ ಸಂಸದರಿಗೆ ಲಂಚ ನೀಡಲಾಗಿತ್ತು ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಹ ಮಾಹಿತಿ ವಿಕಿಲೀಕ್ಸ್‌ನಿಂದ ಬಹಿರಂಗಗೊಂಡಿರುವುದರಿಂದ ಪ್ರಧಾನಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪಟ್ಟು ಹಿಡಿದವು.ವಿಕಿಲೀಕ್ಸ್ ಮಾಹಿತಿಯಿಂದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿರುವುದರಿಂದ ಸಚಿವರ ಗಮನ ಸೆಳೆಯುವ ಸೂಚನೆ ಮಂಡಿಸಲಾರೆ ಎಂದು ಸುಷ್ಮಾ ನಿರಾಕರಿಸಿದರು. ಪ್ರಧಾನಿ ಹೇಳಿಕೆ ನೀಡಲೇಬೇಕು ಎಂಬ ಅವರ ಒತ್ತಾಯಕ್ಕೆ ಎಲ್.ಕೆ.ಅಡ್ವಾಣಿ ಸಹ ದನಿಗೂಡಿಸಿದರು. ಈ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ಮುಂದಾದ ಇತರೆಲ್ಲ ವಿರೋಧ ಪಕ್ಷಗಳೂ ‘ಪ್ರಧಾನಿಯನ್ನು ಕರೆಸಿ’ ಎಂದು ಘೋಷಣೆ ಕೂಗಲಾರಂಭಿಸಿದಾಗ ಸದನವನ್ನು ಮಧ್ಯಾಹ್ನ 12.15ರವರೆಗೆ ಮುಂದೂಡಲಾಯಿತು.ಕೊನೆಗೂ ಈ ಪ್ರಬಲ ಬೇಡಿಕೆಗೆ ಮಣಿದ ಸರ್ಕಾರ, ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಹೇಳಿಕೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿತು. ಆದರೆ ಲಂಚ ನೀಡಿಕೆ ಆರೋಪವನ್ನು ಉಭಯ ಸದನಗಳಲ್ಲೂ ಪ್ರಧಾನಿ ಸಾರಾಸಗಟಾಗಿ ತಳ್ಳಿಹಾಕಿದಾಗ ಮಾತ್ರ ವಿರೋಧ ಪಕ್ಷಗಳ ಆಕ್ರೋಶದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯಿತು. ಗದ್ದಲ ಶಮನಗೊಳ್ಳುವ ಬದಲು ಮತ್ತಷ್ಟು ಉಲ್ಬಣಿಸಿತು.ಎರಡೂ ಕಡೆ ಒಂದೇ ಬಗೆಯ ಹೇಳಿಕೆ ನೀಡಿದ ಪ್ರಧಾನಿ, ಕಾಂಗ್ರೆಸ್ ಪಕ್ಷ ಅಥವಾ ಸರ್ಕಾರದ ಯಾರೊಬ್ಬರೂ ಅಂತಹ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ, ಈ ಆರೋಪಗಳು ಅಸಮರ್ಥ ಹಾಗೂ ಶಂಕಾಸ್ಪದ ಎಂದು ಘೋಷಿಸಿದರು.ಈಗಾಗಲೇ ಚರ್ಚೆಗೊಳಪಟ್ಟು ದೇಶದ ಜನರಿಂದ ತಿರಸ್ಕೃತಗೊಂಡಿರುವ ಹಳೆಯ ಆರೋಪಗಳನ್ನು ವಿರೋಧ ಪಕ್ಷ ಕೆದಕುತ್ತಲೇ ಇದೆ. ಇದಕ್ಕೆ ಜನ ಹಿಂದೆ ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದನ್ನು ಅದು ಮರೆತೇಬಿಟ್ಟಿದೆ ಎಂದು ತಿರುಗೇಟು ನೀಡಿದರು. ಆಗ ಸರ್ಕಾರದ ಪರವಾಗಿ 275 ಹಾಗೂ ವಿರುದ್ಧವಾಗಿ 256 ಮತಗಳು ಬಂದಿದ್ದವು. ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 141ರಿಂದ 206ಕ್ಕೆ ಏರಿದ್ದು, ಬಿಜೆಪಿ ಬಲ 138ರಿಂದ 116ಕ್ಕೆ ಹಾಗೂ ಎಡಪಕ್ಷಗಳ ಸಂಖ್ಯೆ 59ರಿಂದ 34ಕ್ಕೆ ಕುಸಿದಿತ್ತು ಎಂದು ಉದಾಹರಿಸಿದರು.ಅಮೆರಿಕದ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್‌ನ ವಿದೇಶಾಂಗ ಇಲಾಖೆ ನಡುವೆ ವಿಕಿಲೀಕ್ಸ್ ಹೇಳಿರುವಂತಹ ಸಂವಹನ ನಡೆದಿರುವುದೇ ಅನುಮಾನ.ಈ ಮಾಹಿತಿಯ ನಿಖರತೆ, ವಸ್ತುನಿಷ್ಠತೆ ಸಹ ಶಂಕಾಸ್ಪದ. ವಿಕಿಲೀಕ್ಸ್ ಹೆಸರಿಸಿರುವ ವ್ಯಕ್ತಿಗಳು ಈಗಾಗಲೇ ತಮ್ಮ ಮೇಲಿನ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ್ದಾರೆ ಎಂದರು.ಇದಕ್ಕೆ ಮೊದಲು ‘ಇಂಡಿಯಾ ಟುಡೆ’ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಸಿಂಗ್, ‘ಮತಗಳ ಖರೀದಿಗೆ ನಾನು ಯಾರನ್ನೂ ನೇಮಕ ಮಾಡಿರಲಿಲ್ಲ ಅಥವಾ ಅಂತಹ ಯಾವುದೇ ವ್ಯವಹಾರದಲ್ಲೂ ನಾನು ಭಾಗಿಯಾಗಿರಲಿಲ್ಲ. ಜೊತೆಗೆ ಈ ಬಗೆಯ ಕೃತ್ಯ ಎಸಗಿರುವುದು ಸಹ ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಹೇಳಿದರು.ಸ್ಪಷ್ಟನೆಗೆ ಸಿಗದ ಅವಕಾಶ: ಸದನದಲ್ಲಿ ಪ್ರಧಾನಿ ಮಾತು ಮುಗಿಯುತ್ತಿದ್ದಂತೆಯೇ ಅವರಿಂದ ಮತ್ತಷ್ಟು ಸ್ಪಷ್ಟನೆ ಕೇಳ ಬಯಸಿದ ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿಲ್ಲ. ಇದರಿಂದ ಕೆರಳಿದ ಸದಸ್ಯರು ಲೋಕಸಭೆಯಲ್ಲಿ ಕೂಗಾಡತೊಡಗಿದಾಗ ಸದನ ಮತ್ತೆ ಒಂದು ಗಂಟೆ ಸ್ಥಗಿತಗೊಂಡಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರೂ ವಿಷಯ ಪ್ರಸ್ತಾಪಕ್ಕೆ ಮುಂದಾದರು. ಇದನ್ನು ತೀವ್ರವಾಗಿ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು, ಕೆಲ ದಿನಗಳಿಂದಲೂ ಬಿಜೆಪಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ಬುಡಕಟ್ಟು ವ್ಯವಹಾರ ಸಚಿವಾಲಯಕ್ಕೆ ಸಂಬಂಧಿಸಿದ ನಿಗದಿತ ವಿಷಯವನ್ನೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕೋಲಾಹಲ ಮಿತಿಮೀರಿದಾಗ ಉಪಸಭಾಪತಿ ಕೆ.ರೆಹಮಾನ್ ಖಾನ್ ಮೊದಲು 15 ನಿಮಿಷ ಸದನವನ್ನು ಮುಂದಕ್ಕೆ ಹಾಕಿದರು. ನಂತರ ಸೇರಿದಾಗಲೂ ಇದೇ ಸ್ಥಿತಿ ಮುಂದುವರಿದಾಗ ಬುಡಕಟ್ಟು ವ್ಯವಹಾರ ಸಚಿವ ಕಾಂತಿಲಾಲ್ ಭೂರಿಯ ‘ನಿಮಗೆ (ಬಿಜೆಪಿ) ಆದಿವಾಸಿಗಳ ಬಗ್ಗೆ ಚರ್ಚಿಸುವುದು ಬೇಕಿಲ್ಲ, ಇಡೀ ದೇಶ ನಿಮ್ಮನ್ನು ನೋಡುತ್ತಿದೆ’ ಎಂದು ಟೀಕಿಸಿದರು.ಪ್ರಧಾನಿ ಸ್ವಯಂ ಪ್ರೇರಿತ ಹೇಳಿಕೆ ನೀಡಿಲ್ಲ. ಸದಸ್ಯರ ಬೇಡಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವುದರಿಂದ ನಿಯಮದ ಪ್ರಕಾರ ಸ್ಪಷ್ಟನೆಗೆ ಅವಕಾಶ ಸಾಧ್ಯವಿಲ್ಲ ಎಂದು ಅಧ್ಯಕ್ಷ ಹಮೀದ್ ಅನ್ಸಾರಿ ತಿಳಿಸಿದರು. ‘ಹಾಗಿದ್ದರೆ ಈ ನಿಯಮ ಇಷ್ಟು ದಿನ ಜಾರಿಯಲ್ಲಿ ಇರಲಿಲ್ಲವೇಕೆ’ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಪ್ರಶ್ನಿಸಿದರು. ವಿರೋಧ ಪಕ್ಷಗಳು ಹೇಳಿದ್ದನ್ನೆಲ್ಲಾ ಕೇಳಬೇಕಾದ ಅಗತ್ಯವಿಲ್ಲ ಎಂದು ಸಂಸದೀಯ ವ್ಯವಹಾರ ಸಚಿವ ಪಿ.ಕೆ.ಬನ್ಸಲ್ ಸಮರ್ಥಿಸಿಕೊಂಡರು.

‘ಈ ರೀತಿ ವಿರೋಧ ಪಕ್ಷಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ’ ಎಂದು ಜೇಟ್ಲಿ ಗುಡುಗಿದರು. ಸದನದ ಬಾವಿಯ ಬಳಿ ಬಂದ ಬಿಜೆಪಿ ಸದಸ್ಯರು ‘ಸರ್ವಾಧಿಕಾರ ಬೇಡ, ದಬಾವಣೆ ಬೇಡ’ ಎಂದು ಘೋಷಣೆ ಕೂಗಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ಕೂಗಾಡಲಾರಂಭಿಸಿದಾಗ ಸದನವನ್ನು ಮಂಗಳವಾರದವರೆಗೆ ಮುಂದೂಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.