ಶನಿವಾರ, ಏಪ್ರಿಲ್ 17, 2021
23 °C

ಲಂಡನ್ ಒಲಿಂಪಿಕ್ಸ್‌ಗೆ ಕಾಲಿಲ್ಲದ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್ (ಪಿಟಿಐ): ಎರಡೂ ಕಾಲು ಸರಿ ಇರುವ ಅದೆಷ್ಟೊ ಮಂದಿ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿರದ ಉದಾಹರಣೆ ಇದೆ. ಅಷ್ಟೇ ಏಕೆ? ಒಂದು ಕಾಲು ಇಲ್ಲದಿದ್ದರೆ ಜೀವನ ಸಾಗುವುದೇ ತುಂಬಾ ಕಷ್ಟ. ಆದರೆ ಈ ಆಸ್ಕರ್ ಪಿಸ್ಟೋರಿಯಸ್‌ಗೆ ಎರಡೂ ಕಾಲು ಇಲ್ಲ. ಅವರೀಗ ಒಲಿಂಪಿಕ್ಸ್‌ನಂಥ ಶ್ರೇಷ್ಠ ವೇದಿಕೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ.ಇದು ಅಚ್ಚರಿ, ವಿಸ್ಮಯ ಎನಿಸಬಹುದು. ಆದರೆ ಪಿಸ್ಟೋರಿಯಸ್ ವಿಶ್ವದ ಸಮರ್ಥ ಓಟಗಾರರ ಎದೆಯಲ್ಲಿ ಭಯ ಸೃಷ್ಟಿಸಿರುವುದು ಮಾತ್ರ ಸತ್ಯ. ಕಾಲೂ ಇಲ್ಲದೆ ವೇಗದ ಓಟದಲ್ಲಿ ಒಲಿಂಪಿಕ್ಸ್ ಚಿನ್ನದ ಕನಸು ಕಾಣುತ್ತಿದ್ದಾರೆ.  ಅವರೀಗ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ದಕ್ಷಿಣ ಆಫ್ರಿಕಾ ರಿಲೇ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಎರಡೂ ಕಾಲಿಲ್ಲದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್‌ಗೆ ಸ್ಥಾನ ಪಡೆದಿರುವುದು ಇದೇ ಮೊದಲು. ಹಾಗಾಗಿ ಇದೊಂದು ಐತಿಹಾಸಿಕ ಸಾಧನೆ. ಅವರು 4ಗಿ400 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 400 ಮೀಟರ್ಸ್ ಓಟದಲ್ಲೂ ಸ್ಪರ್ಧಿಸುವ ಸಾಧ್ಯತೆ ಇದೆ.`ಇದು ನನ್ನ ಜೀವನದ ಅತ್ಯುತ್ತಮ ಕ್ಷಣ. ಕಠಿಣ ಶ್ರಮ, ದೃಢ ನಿರ್ಧಾರ ಹಾಗೂ ತ್ಯಾಗಕ್ಕೆ ಫಲ ಲಭಿಸಿದೆ~ ಎಂದು 25 ವರ್ಷ ವಯಸ್ಸಿನ ಪಿಸ್ಟೋರಿಯಸ್ ಪ್ರತಿಕ್ರಿಯಿಸಿದ್ದಾರೆ.ಇತ್ತೀಚೆಗೆ ನಡೆದ ಆಫ್ರಿಕಾ ಚಾಂಪಿಯನ್‌ಷಿಪ್‌ನ 400 ಮೀ.ಓಟದಲ್ಲಿ ಅವರು ಒಲಿಂಪಿಕ್ಸ್‌ನ `ಎ~ ದರ್ಜೆ ಅರ್ಹತೆ ಮಟ್ಟವನ್ನು (45.30 ಸೆ.) ತಲುಪಲು ವಿಫಲರಾಗಿದ್ದರು. 45.52 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಆದರೆ ರಿಲೇ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅವರ ಒಲಿಂಪಿಕ್ ಕನಸು ನನಸಾಗಿದೆ. ಈ ಹಿಂದೆ ಅವರು ಪ್ರಿಟೋರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 45.20 ಸೆಕೆಂಡ್‌ಗಳಲ್ಲಿ ಓಡಿದ್ದರು. ಆದರೆ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಅದನ್ನು ಪುನರಾವರ್ತಿಸಲು ಸಾಧ್ಯವಾಗಿರಲಿಲ್ಲ.ಆನುವಂಶಿಕ ಕಾಯಿಲೆಯಿಂದಾಗಿ ಪಿಸ್ಟೋರಿಯಸ್ ಚಿಕ್ಕ ವಯಸ್ಸಿನಲ್ಲೆ ತಮ್ಮ ಎರಡೂ ಕಾಲು ಕಳೆದುಕೊಂಡಿದ್ದರು. ಆಗ ಅವರು 11 ತಿಂಗಳ ಮಗು. ಜೀವಕ್ಕೆ ಅಪಾಯವಿದ್ದ ಕಾರಣ ಎರಡೂ ಕಾಲುಗಳನ್ನು ಕತ್ತರಿಸಲಾಯಿತು. ಆದರೆ ಶ್ರೇಷ್ಠ ಅಥ್ಲೀಟ್ ಆಗಬೇಕು ಎಂಬ ಅವರ ಕನಸಿಗೆ ಅಂಗವೈಕಲ್ಯ ಯಾವತ್ತೂ ಅಡ್ಡಿಯಾಗಲಿಲ್ಲ.2005ರಲ್ಲಿ ನಡೆದ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಮರ್ಥರೊಂದಿಗೆ ಸ್ಪರ್ಧಿಸಿ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಆದರೆ  ಪಿಸ್ಟೋರಿಯಸ್ ಅವರಿಗೆ ಸಮರ್ಥರೊಂದಿಗೆ ಸ್ಪರ್ಧಿಸಲು ಅಂತರರಾಷ್ಟ್ರೀಯ ಅಥ್ಲೆಟಿಕ್ ಸಂಸ್ಥೆ ಅವಕಾಶ ನೀಡಿರಲಿಲ್ಲ. ಆದರೆ ಕಾನೂನು ಹೋರಾಟದಲ್ಲಿ ಗ್ದ್ದೆದ್ದ್ದಿದ ಅವರು  ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದರು.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು `ಬ್ಲೇಡ್ ರನ್ನರ್~ ಖ್ಯಾತಿಯ ಪಿಸ್ಟೋರಿಯಸ್ ಕೊಂಚದರಲ್ಲಿ ಕಳೆದುಕೊಂಡಿದ್ದರು. ದಕ್ಷಿಣ ಕೊರಿಯಾದ ಡೇಗುನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ 400 ಮೀ.ನಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದರು. ಅವರು  ಪ್ಯಾರಾಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಲಿದ್ದಾರೆ. 100 ಮೀ, 200 ಮೀ, 400 ಮೀ ಹಾಗೂ 4x100 ಮೀ. ರಿಲೇ ಓಟ ಅವರ ನೆಚ್ಚಿನ ಸ್ಪರ್ಧೆಗಳಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.