ಭಾನುವಾರ, ಏಪ್ರಿಲ್ 11, 2021
25 °C

ಲಂಡನ್ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದಲ್ಲಿ ತ್ರಿವರ್ಣ ಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತದ ಕೆಲವು ಅಥ್ಲೀಟ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಲಂಡನ್ ಒಲಿಂಪಿಕ್ಸ್‌ನ  `ಕ್ರೀಡಾ ಗ್ರಾಮ~ದಲ್ಲಿ ಭಾನುವಾರ ತ್ರಿವರ್ಣ ಧ್ವಜ ಆರೋಹಣ ಮಾಡಲಾಯಿತು. ಕೂಟ ಕೊನೆಗೊಳ್ಳುವ ತನಕ ಭಾರತದ ರಾಷ್ಟ್ರಧ್ವಜ ಕ್ರೀಡಾ ಗ್ರಾಮದಲ್ಲಿ ರಾರಾಜಿಸಲಿದೆ.ಧ್ವಜಾರೋಹಣದ ಜೊತೆ ಭಾರತ ತಂಡವನ್ನು ಕ್ರೀಡಾ ಗ್ರಾಮಕ್ಕೆ ಅಧಿಕೃತವಾಗಿ ಸ್ವಾಗತಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 35 ಕ್ರೀಡಾಳುಗಳು ಹಾಗೂ ಇತರ ಕೆಲವು ಪ್ರತಿನಿಧಿಗಳು ಈ ವೇಳೆ ಹಾಜರಿದ್ದರು.ಕ್ರೀಡಾ ಗ್ರಾಮದ ಮೇಯರ್ ಸರ್   ಚಾರ್ಲ್ಸ್ ಅಲೆನ್ ಭಾರತ ತಂಡದ ಉಪ ಚೆಫ್ ಡಿ ಮಿಷನ್ ಪಿ.ಕೆ. ಮುರಳೀಧರನ್ ರಾಜಾ ಅವರನ್ನು ಸ್ವಾಗತಿಸಿದರು. ತ್ರಿವರ್ಣ ಧ್ವಜದ ಜೊತೆಗೆ ಐದು ರಿಂಗ್‌ಗಳನ್ನು ಒಳಗೊಂಡ ಒಲಿಂಪಿಕ್ಸ್ ಧ್ವಜವನ್ನೂ ಆರೋಹಣ ಮಾಡಲಾಯಿತು.ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದ ಅಥ್ಲೀಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೇಯರ್, `ವಿವಿಧ ದೇಶ ಹಾಗೂ ಸಂಸ್ಕೃತಿಯ ಹಿನ್ನೆಲೆಯಿಂದ ಬಂದಿರುವ ಅಥ್ಲೀಟ್‌ಗಳು ಈ ಕ್ರೀಡಾ ಗ್ರಾಮವನ್ನು “ನಮ್ಮ ಮನೆ” ಎಂದೇ ಕರೆಯುವರು. ಕೂಟದ ಬಳಿಕ ನೀವೆಲ್ಲರೂ ಮಧುರ ನೆನಪುಗಳನ್ನು ಹೊತ್ತುಕೊಂಡು ತವರಿಗೆ ಮರಳುವ ವಿಶ್ವಾಸ ನನ್ನದು~ ಎಂದು ನುಡಿದರು.ಆರ್ಚರಿ ಸ್ಪರ್ಧಿ ದೀಪಿಕಾ ಕುಮಾರಿ ಸಮಾರಂಭದ ಪ್ರಮುಖ ಆಷರ್ಕಣೆಯಾಗಿದ್ದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ದೀಪಿಕಾ ಭಾರತದ ಪದಕದ ಭರವಸೆ ಎನಿಸಿದ್ದಾರೆ. ಸ್ಥಳೀಯ ಕಲಾವಿದರು ಸಂಗೀತ ಹಾಗೂ ನೃತ್ಯ ಪ್ರದರ್ಶನದ ಮೂಲಕ ಭಾರತದ ಪ್ರತಿನಿಧಿಗಳನ್ನು ರಂಜಿಸಿದರು. `ವಿ ಆರ್ ದಿ ಚಾಂಪಿಯನ್ಸ್~ ಹಾಡಿಗೆ ಕಲಾವಿದರು ನೃತ್ಯ ಪ್ರದರ್ಶಿಸಿದರು.ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಆಡಲಿರುವ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ, ಬಾಕ್ಸರ್‌ಗಳು ಹಾಗೂ ಹಾಕಿ ತಂಡದ ಕೆಲವು ಆಟಗಾರರು ಹಾಜರಿದ್ದರು. ಶೂಟರ್‌ಗಳಿಗೆ ಎಂದಿನಂತೆ ಅಭ್ಯಾಸದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಸಮಾರಂಭಕ್ಕೆ ಆಗಮಿಸಲಿಲ್ಲ.ಭಾರತ ತಂಡದ ತಂಡದ ಚೆಫ್ ಡಿ ಮಿಷನ್ ಅಜಿತ್‌ಪಾಲ್ ಸಿಂಗ್ ಇನ್ನೂ ಲಂಡನ್ ತಲುಪಿಲ್ಲ. ಅವರ ಅನುಪಸ್ಥಿತಿಯಲ್ಲಿ ಮುರಳೀಧರನ್ ರಾಜಾ ಕಾರ್ಯಕ್ರಮ ನಡೆಸಿಕೊಟ್ಟರು. ಭಾರತ ಒಲಿಂಪಿಕ್ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಲಂಡನ್‌ಗೆ ಆಗಮಿಸಿಲ್ಲ. ಸ್ವಾಗತ ಕಾರ್ಯಕ್ರಮವನ್ನು  ಎರಡು ದಿನಗಳಮಟ್ಟಿಗೆ ಮುಂದೂಡುವಂತೆ ಭಾರತ ತಂಡ ಕೇಳಿಕೊಂಡಿತ್ತು. ಆದರೆ ಸಂಘಟಕರು ಈ ಕೋರಿಕೆಯನ್ನು ಒಪ್ಪಿರಲಿಲ್ಲ.ಸಂಘಟಕರ ನಿರ್ಧಾರವನ್ನು ಸಮರ್ಥಿಸಿಕೊಂಡ ಮೇಯರ್, `ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ನಮಗೆ ಅನುಮತಿ ನೀಡಿಲ್ಲ. ಹೆಚ್ಚಿನ ರಾಷ್ಟ್ರಗಳು ಇದೇ ಕೋರಿಕೆಯನ್ನಿಟ್ಟಿದೆ. ಎಲ್ಲರ ಕೋರಿಕೆಗಳನ್ನು ಒಪ್ಪಿಕೊಂಡಿದ್ದಲ್ಲಿ, ನಮ್ಮ ಎಲ್ಲ ಕಾರ್ಯಕ್ರಮಗಳು ತಲೆಕೆಳಗಾಗುತ್ತಿದ್ದವು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.