ಭಾನುವಾರ, ಏಪ್ರಿಲ್ 11, 2021
28 °C

ಲಕ್ಕುಂಡಿಯಲ್ಲಿ ಫ್ಲೆಕ್ಸ್ ಸಂಸ್ಕೃತಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ರಾಜಕೀಯ ಪಕ್ಷಗಳ ಬೃಹತ್ ಸಮಾರಂಭಗಳಲ್ಲಿ ದೊಡ್ಡಮಟ್ಟದಲ್ಲಿ ಕಾಣಬರುವ ಫ್ಲೆಕ್ಸ್ ಸಂಸ್ಕೃತಿ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಬಿಟ್ಟಿಲ್ಲ.

ಇತಿಹಾಸ ಹಾಗೂ ಪುರಾಣದ ಕಾಲದಲ್ಲಿ ರಾಜ-ಮಹಾರಾಜರು ಆಳಿದ, ದಾರ್ಶನಿಕರು, ವಚನಕಾರರು ತಿರುಗಾಡಿದ ಲಕ್ಕುಂಡಿಯ ವೈಭವ ಹಿಂದಿನ ಪೀಳಿಗೆಗೆ ತಿಳಿಯಲಿ ಎನ್ನುವ ದೃಷ್ಟಿಯಿಂದ ವರ್ಷಕ್ಕೊಮ್ಮೆ ಉತ್ಸವ ಆಯೋಜನೆ ಮಾಡಲಾಗುತ್ತಿದೆ.

ಆದರೆ ಸಾಂಸ್ಕೃತಿಕ ವೈಭವ ಅನಾವರಣವಾಗುವ ಬದಲು ಬಣ್ಣ-ಬಣ್ಣದ ಪೋಷಾಕು ತೊಟ್ಟ ರಾಜಕಾರಣಿಗಳು ‘ಸೂಪರ್ ಮಾಡೆಲ್’ಗಳಂತೆ ಫೋಸ್ ಕೊಟ್ಟಿರುವ ಆಳೆತ್ತರದ ಫ್ಲೆಕ್ಸ್‌ಗಳೇ ಊರಿನ ತುಂಬಾ ರಾರಾಜಿಸುತ್ತಿವೆ. ಇವುಗಳ ಮುಂದೆ ಕಲ್ಯಾಣದ ಚಾಲ್ಯುಕರು ನಿರ್ಮಾಣ ಮಾಡಿರುವ ದೇವಾಲಯಗಳು ಮುದುರಿ ಮುದ್ದೆಯಾಗಿ ಕುಳಿತಿವೆ.

ಉತ್ಸವ ನಡೆಯುವ ಮುಖ್ಯ ವೇದಿಕೆಯಾದ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆ ಇರುವ ನನ್ನೇಶ್ವರ ದೇವಾಲಯ, ಅದರ ಪಕ್ಕದಲ್ಲಿರುವ ಕಾಶಿ ವಿಶ್ವೇಶ್ವರ ದೇವಾಲಯ, ಸೂರ್ಯ ದೇವಾಲಯ ಹಾಗೂ ದೋಣಿ ವಿಹಾರಕ್ಕೆ ಸಜ್ಜುಗೊಂಡಿರುವ ಕೆರೆಯ ಮೈದಾನ, ಹೆದ್ದಾರಿ, ಗಲ್ಲಿ-ಗಲ್ಲಿ ಎಲ್ಲವನ್ನು ‘ಫ್ಲೆಕ್ಸ್’ ಆವರಿಸಿಕೊಂಡು ಬಿಟ್ಟಿದೆ.

ಒಂದು ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕರ್ತರು, ಅಭಿಮಾನಿಗಳು, ಪದಾಧಿಕಾರಿಗಳು ತಮ್ಮ ಪಕ್ಷದ ಹಿರಿಯ ನಾಯಕರಿಗೆ ಶುಭ ಕೋರುವ ಫ್ಲೆಕ್ಸ್‌ಗಳು, ಮಂತ್ರಿ ಮಹೋದಯರು, ಶಾಸಕರು, ಮುಖ್ಯಮಂತ್ರಿ ಅವರ ಫ್ಲೆಕ್ಸ್‌ಗಳೇ ಎಲ್ಲ ಕಡೆ. ಇವುಗಳ ಮಧ್ಯ ಉತ್ಸವ ಪ್ರಚಾರಕ್ಕೆ ಅಲ್ಲೊಂದು-ಇಲ್ಲೊಂದು ಫ್ಲೆಕ್ಸ್‌ಗಳು.

ಪರಂಪರೆ ಹಾಗೂ ಇತಿಹಾಸ ಬಿಂಬಿಸುವ ದೇವಾಲಯಗಳ ಮುಂದೆ ಫ್ಲೆಕ್ಸ್‌ಗಳನ್ನು ನಿಲ್ಲಿಸಿ, ದೇವಾಲಯ ಸೌಂದರ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ ಆಗಿದೆ ಎನ್ನುವುದು ಕಾಳಜಿಯುಳ್ಳ ನಾಗರಿಕರ ಅಳಲು.

ಉತ್ಸವ ನಡೆಯುವ ಲಕ್ಕುಂಡಿಯಲ್ಲಿ ಮಾತ್ರವಲ್ಲದೆ ಅವಳಿ ನಗರವಾದ ಗದಗ-ಬೆಟಗೇರಿಯಲ್ಲೂ ಫ್ಲೆಕ್ಸ್ ತನ್ನ ಪ್ರಭಾವ ಬೀರಿದೆ. ಹಳೇ ಡಿಸಿ ಕಚೇರಿಯ ಸರ್ಕಲ್ ಬಳಿ ಒಂದರ ಪಕ್ಕ ಒಂದರಂತೆ ಐದಾರು ಫ್ಲೆಕ್ಸ್‌ಗಳನ್ನು ನಿಲ್ಲಿಸಲಾಗಿದೆ.

ಇದರಲ್ಲಿ ಒಂದೇ ಒಂದು ಮಾತ್ರ ಲಕ್ಕುಂಡಿ ಉತ್ಸವದ ವಿವರಣೆ ಒಳಗೊಂಡಿದೆ. ಮಿಕ್ಕ ಎಲ್ಲವೂ ರಾಜಕೀಯ ಪಕ್ಷವೊಂದರ ಶುಭಾಕಾಮನೆ ಒಳಗೊಂಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.