ಸೋಮವಾರ, ಏಪ್ರಿಲ್ 12, 2021
28 °C

ಲಿಂಗ ಪರೀಕ್ಷೆಯಲ್ಲಿ ಪುರುಷನಾದ ಪಿಂಕಿ ಪ್ರಾಮಾಣಿಕ್ ವಿರುದ್ಧ ಆರೋಪ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಸಾತ್ (ಪಶ್ಚಿಮ ಬಂಗಾಳ) (ಪಿಟಿಐ): ಅತ್ಯಾಚಾರ ಆರೋಪ ಹೊತ್ತು ಜಾಮೀನು ಮೇಲೆ ಬಿಡುಗಡೆ ಹೊಂದಿರುವ ಮಾಜಿ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ಅವರು ಲಿಂಗ ಪರೀಕ್ಷೆಯಲ್ಲಿ `ಪುರುಷ~ ಎಂದು ಸಾಬೀತಾದ ಬೆನ್ನಲ್ಲೇ ಪೊಲೀಸರು ಸೋಮವಾರ ಪಿಂಕಿ ಅವರ ವಿರುದ್ಧ ನ್ಯಾಯಾಲಯಕ್ಕೆ ಅತ್ಯಾಚಾರ ಹಾಗೂ ವಂಚನೆಯ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಪಿಂಕಿ ಅವರನ್ನು ಕೋಲ್ಕತ್ತದ ಎಸ್‌ಎಸ್‌ಕೆಎಂ ಸರ್ಕಾರಿ ಆಸ್ಪತ್ರೆಯಲ್ಲಿ ಲಿಂಗ ಪರೀಕ್ಷೆಗೆ ಒಳಪಡಿಸಿದ ವೈದ್ಯರ ತಂಡವು ಲಿಂಗ ಪರೀಕ್ಷೆಯ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಪಿಂಕಿ ಅವರು ಪುರುಷ ಎಂದ ಸಾಬೀತಾಗಿದೆ ಎಂದು ಹೇಳಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾದ ವೈದ್ಯಕೀಯ ವರದಿಯ ವಿಷಯ ತಿಳಿದ ಪೊಲೀಸರು ಸೋಮವಾರ ಪಿಂಕಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದರು.2006ರ ದೋಹಾ ಏಷ್ಯನ್ ಕ್ರೀಡಾಕೂಟದ 4x400 ಮೀಟರ್ ರಿಲೆಯಲ್ಲಿ ಸ್ವರ್ಣ ಪದಕ ಪಡೆದಿದ್ದ ಪಿಂಕಿ ಅವರ ವಿರುದ್ಧ ಜೂನ್ 14ರಂದು ಅನಾಮಿಕಾ ಆಚಾರ್ಯ ಎಂಬ ಮಹಿಳೆಯು `ಪಿಂಕಿ ಪುರುಷನಾಗಿದ್ದು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ~ ಎಂದು ಪೊಲೀಸರಿಗೆ ದೂರು ನೀಡಿದ್ದರು.

 

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅಂದೇ ಪಿಂಕಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಪ್ರಯತ್ನಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದ ಪ್ರಾಥಮಿಕ ಪರೀಕ್ಷೆಗಳು ಈ ಅಥ್ಲೀಟ್ ಮಹಿಳೆ ಅಲ್ಲ ಪುರುಷ ಎನ್ನುವುದನ್ನು ಸಾಬೀತು ಪಡಿಸಿದ್ದವು.ಆನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ಖಾತ್ರಿ ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದರು. ಆದರೆ ಆಗ ಎರಡು ಬಾರಿಯೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಪಿಂಕಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.ನ್ಯಾಯಾಲಯವು ಪಿಂಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆನಂತರ ಪರೀಕ್ಷೆಗೆ ಮಾರ್ಗ ಸುಗಮವಾಯಿತು. ಸಂಕೀರ್ಣವಾದ ಈ ಪ್ರಕರಣದಲ್ಲಿ ಉನ್ನತ ಮಟ್ಟದ ಪರೀಕ್ಷೆ ನಡೆಸುವುದು ಅಗತ್ಯವಿದೆ ಎಂದು ಪ್ರಧಾನ ವೈದ್ಯಾಧಿಕಾರಿ ಡಾ.ಸುಕಾಂತ ಸಿಲ್ ನಿರ್ಣಯಿಸಿದ್ದರಿಂದ ಪಿಂಕಿ ಅವರಿಗೆ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಲಿಂಗ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೇ ವೇಳೆ ಪಿಂಕಿ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.