ಸೋಮವಾರ, ಜನವರಿ 20, 2020
18 °C

ಲೆವಿ ನೀತಿ ವಿರೋಧಿಸಿ ಅಕ್ಕಿ ಗಿರಣಿ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೆವಿ ನೀತಿ ವಿರೋಧಿಸಿ ಅಕ್ಕಿ ಗಿರಣಿ ಬಂದ್‌

ಬೆಂಗಳೂರು: ಹೆಚ್ಚಿನ ಪ್ರಮಾಣದಲ್ಲಿ ಲೆವಿ ಅಕ್ಕಿ ಸಂಗ್ರಹಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ, ಅಕ್ಕಿ ಗಿರಣಿ ಮಾಲೀಕರು ರಾಜ್ಯದಾದ್ಯಂತ ಸೋಮವಾರದಿಂದ ಅನಿರ್ದಿಷ್ಟ ಅವಧಿ ಮುಷ್ಕರ ಆರಂಭಿಸಿದರು.ಎಲ್ಲೆಡೆ ಅಕ್ಕಿ ಗಿರಣಿಗಳ ಗೇಟ್‌ಗಳನ್ನು ಮುಚ್ಚಲಾಗಿತ್ತು. ಸದಾ  ಚಟುವಟಿಕೆ­ಯಿಂದ ಕೂಡಿರುತ್ತಿದ್ದ ಗಿರಣಿಗಳು ಬಿಕೊ ಎನ್ನುತ್ತಿದ್ದವು. ಭತ್ತ ಖರೀದಿ, ಹಲ್ಲಿಂಗ್‌ ಮತ್ತು ಅಕ್ಕಿ ಮಾರಾಟವನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಗೇಟ್‌ಗಳ ಮೇಲೆ ‘ಡಿ.16ರಿಂದ ಅನಿರ್ದಿಷ್ಟ ಅವಧಿಯ ತನಕ ಅಕ್ಕಿ ಗಿರಣಿ ಬಂದ್‌ ಮಾಡಲಾಗಿದೆ’ ಎಂಬ ಸೂಚನಾ ಫಲಕ ಅಂಟಿಸಲಾಗಿತ್ತು.ದಾವಣಗೆರೆ, ರಾಯಚೂರು, ಕೊಪ್ಪಳ, ತುಮಕೂರು, ಗುಲ್ಬರ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಕ್ಕಿ ಗಿರಣಿಗಳನ್ನು ಮುಚ್ಚಲಾಗಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಗಿರಣಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಆರ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಂಘದ ಕಾರ್ಯಾಧ್ಯಕ್ಷ ವಿಶ್ವಾರಾಧ್ಯರ ಜತೆ ತುಮಕೂರಿನಲ್ಲಿ ಮಾತುಕತೆ ನಡೆಸಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ, ಅಧಿಕೃತವಾಗಿ ಇದುವರೆಗೂ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ವಿವರಿಸಿದರು.ದಾವಣಗೆರೆಯಲ್ಲಿ ಸಭೆ:  ಡಿ.17ರಂದು ದಾವಣಗೆರೆಯ ‘ಚೇಂಬರ್‌ ಆಫ್‌ ಕಾಮರ್ಸ್‌’ ಕಚೇರಿಯಲ್ಲಿ ಗಿರಣಿ ಮಾಲೀಕರ ಸಭೆ ನಡೆಯಲಿದೆ. ಜತೆಗೆ, ಸಗಟು ವ್ಯಾಪಾರಿ­ಗಳು, ದಲಾಲರು, ಅಕ್ಕಿ ಗಿರಣಿ ಹಾಗೂ ಅವಲಕ್ಕಿ ಮಿಲ್‌ ಮಾಲೀಕರು, ಕಾರ್ಮಿಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.‘ಪ್ರತಿವರ್ಷ 1 ಲಕ್ಷ ಟನ್‌ ಲೆವಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, 2013–14ನೇ ಸಾಲಿನಲ್ಲಿ 13.5 ಲಕ್ಷ ಟನ್‌ ಅಕ್ಕಿಯನ್ನು ಲೆವಿ ಮೂಲಕ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಇದು ಅವೈಜ್ಞಾನಿಕ. ಗಿರಣಿ ಮಾಲೀಕರ ಜತೆಗೆ ಯಾವುದೇ ಮಾತುಕತೆ ನಡೆಸದೇ ಲೆವಿ ನಿಗದಿ ಮಾಡಲಾಗಿದೆ. ಸರ್ಕಾರಕ್ಕೆ ಮಾತುಕತೆಗೆ ಆಹ್ವಾನಿಸುವಂತೆ 28 ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೂ, ಸರ್ಕಾರ ನಿರ್ಲಕ್ಷ್ಯ ಮಾಡಿತು. ಸೋನಾಮಸೂರಿಗೆ ಮಾರುಕಟ್ಟೆ­ಯಲ್ಲಿರೂ 40 ದರವಿದೆ. ಸರ್ಕಾರ ನಿಗದಿ ಮಾಡಿರುವುದು ಕೇವಲರೂ 24. ಈ ದರದಲ್ಲಿ ಲೆವಿ ನೀಡಿದರೆ ಪ್ರತಿ 10 ಟನ್‌ಗೆರೂ 60 ಸಾವಿರ ನಷ್ಟ ಉಂಟಾಗಲಿದೆ’ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ  ಖಜಾಂಚಿ ಕೋಗುಂಡಿ ಬಕ್ಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.ಮರಣ ಶಾಸನ: ‘ದೇಶ­ದಾದ್ಯಂತ ಭತ್ತ ಸಾಗಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಲೆವಿ ಕೂಡ ವಿಧಿಸು­ವುದಿಲ್ಲ. ಆದರೆ, ಅಕ್ಕಿಗೆ ಮಾತ್ರ ಲೆವಿ ನೀತಿ ಜಾರಿಗೊಳಿಸಲಾಗಿದೆ. ಇದು ಅಕ್ಕಿ ಗಿರಣಿ ಮಾಲೀಕರಿಗೆ ಮರಣ ಶಾಸನ’ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘ ಅಧ್ಯಕ್ಷರೂ ಆದ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)