ಮಂಗಳವಾರ, ಮೇ 24, 2022
29 °C

ಲೋಕಾಯುಕ್ತ ನೇಮಕಾತಿ ವಿಳಂಬ:ಸರ್ಕಾರದ ಜಾಣ ಮರೆವು: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಲೋಕಾಯುಕ್ತ ನೇಮಕಾತಿಯ ವಿಚಾರದಲ್ಲಿ ರಾಜ್ಯ ಸರ್ಕಾರ ಜಾಣ ಮರೆವು ಅನುಸರಿಸುತ್ತಿದೆ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಟೀಕಿಸಿದರು.ಪ್ರಬಲ ಲೋಕಪಾಲ್ ಮಸೂದೆ ಜಾರಿ ಹಾಗೂ ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತದ ಕಪ್ಪುಹಣ ವಾಪಸ್‌ಗೆ ಒತ್ತಾಯಿಸಿ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರ ಉಪವಾಸಕ್ಕೆ ಬೆಂಬಲ ವ್ಯಕ್ತಪಡಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾನುವಾರ ಭಾರತ್ ಸ್ವಾಭಿಮಾನ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, `ತೆರವಾಗಿರುವ ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಲೋಕಾಯುಕ್ತರ ನೇಮಿಸಲು ಸರ್ಕಾರಕ್ಕೆ ಆಸಕ್ತಿ ಇದ್ದಂತಿಲ್ಲ. ಹೀಗಾಗಿ ಆ ವಿಚಾರವನ್ನೇ ಸರ್ಕಾರ ಮರೆತಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ಪ್ರಬಲ ಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ. ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ವಾಪಸ್ ತರುವ ಬಗ್ಗೆಯೂ ಸರ್ಕಾರ ಅನಾದರ ತೋರುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಮಸೂದೆ ಜಾರಿಗೆ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.`ಭಾರತ ಮುಂದುವರಿದ ದೇಶವೆಂದು ಹೇಳಿಕೊಳ್ಳುತ್ತಿದ್ದರೂ ಭ್ರಷ್ಟಾಚಾರದ ಕಾರಣದಿಂದ ದೇಶ ನಿಜವಾದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಭ್ರಷ್ಟ ರಾಜಕಾರಣಿಗಳ ಕಾರಣದಿಂದ ದೇಶದ ಜನರು ಇಂದಿಗೂ ಬಡತನ ಅನುಭವಿಸುವಂತಾಗಿದೆ. ಭ್ರಷ್ಟಾಚಾರ ತಡೆಯ ಬಗ್ಗೆ ರಾಜಕಾರಣಿಗಳಿಗೆ ಮನಸ್ಸಿಲ್ಲ. ಹೀಗಾಗಿ ದೇಶದಲ್ಲಿ ಇಂದಿಗೂ ಭ್ರಷ್ಟಾಚಾರ ಹಾಗೂ ಬಡತನ ತಾಂಡವವಾಡುತ್ತಿವೆ~ ಎಂದು ಅವರು ವಿಷಾದಿಸಿದರು.ಸ್ವಾತಂತ್ರ್ಯ ಉದ್ಯಾನವನದಿಂದ ಮೈಸೂರು ಬ್ಯಾಂಕ್ ವೃತ್ತ, ಮೆಜೆಸ್ಟಿಕ್ ಹಾಗೂ ಆನಂದರಾವ್ ವೃತ್ತದ ಮಾರ್ಗವಾಗಿ ಮತ್ತೆ ಸ್ವಾತಂತ್ರ್ಯ ಉದ್ಯಾನವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಂಜೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿದ್ದ ಸಂಘಟನೆಯ ಕಾರ್ಯಕರ್ತರು ಮೇಣದ ಬತ್ತಿ ಮೆರವಣಿಗೆ ನಡೆಸಿ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.