ಒಂದು ಸಲ, ಒಂದು ನಗರದಲ್ಲಿ, ಒಂದು ಭಯಂಕರ ರೋಗ ಅಮರಿಕೊಂಡಿತು. ಜನ ನರಳಿ ನರಳಿ ಸಾಯತೊಡಗಿದರು. ಯಾವ ಔಷಧಿಗೂ ಜಗ್ಗಲಿಲ್ಲ, ಯಾವ ಮಂತ್ರಕ್ಕೂ ಬಗ್ಗಲಿಲ್ಲ. ರೋಗವು ವೈದ್ಯರ ಹಿಡಿತಕ್ಕೆ ಸಿಕ್ಕಲಿಲ್ಲ. ಯಾವುದೊ ಹೊಸ ರೋಗ, ಇದಕ್ಕೆ ಯಾವ ಮದ್ದೆಂದು ಗೊತ್ತಿಲ್ಲ ಎಂದು ಕೈಚೆಲ್ಲಿ ಕೂತರು. ಆಳುವವನಿಗೆ ಆಕಾಶವೇ ಕಳಚಿ ಬಿದ್ದಂತೆ ಆಯಿತು. ಪುರಜನರು ದುಃಖಿತರಾದರು.

ಅಂಥ ಸಮಯದಲ್ಲಿ ಆ ಊರಿಗೆ ಮೂವರು ಭೂತವಾದಿಗಳು ಬಂದರು. ಅವರ ವಶದಲ್ಲಿ ಒಂದೊಂದು ಭೂತವಿತ್ತು. ಅವರು ಜನನಾಯಕನ ಹತ್ತಿರ ಬಂದು, ‘ಪ್ರಭು! ನಮ್ಮ ವಶದಲ್ಲಿ ಶಕ್ತಿಶಾಲಿ ಭೂತಗಳಿವೆ. ಅವುಗಳ ಸಹಾಯದಿಂದ ಪುರದ ಉಪದ್ರವವನ್ನು ಉಪಶಮನಗೊಳಿಸುತ್ತೇವೆ. ಅಪ್ಪಣೆ ನೀಡಿ ಉಪಕರಿಸಬೇಕು’ ಎಂದು ಕೇಳಿ ಕೊಂಡರು.

ಆಗ ವಿವೇಕಿಯಾದ ದೊರೆ, ‘ನಿಮ್ಮ ಭೂತಗಳ ಶಕ್ತಿಯನ್ನು ಪರಿಚಯ ಮಾಡಿಕೊಡಿ’ ಎಂದ. ‘ನನ್ನ ಭೂತ ವಿವಿಧ ವೇಷಗಳನ್ನು ಧರಿಸಿ, ತರಹ ತರಹದ ಆಟಗಳನ್ನು ಆಡಿ ಎಲ್ಲರನ್ನು ಆನಂದಗೊಳಿಸುವುದು. ಆ ವೇಳೆಯಲ್ಲಿ ಅದನ್ನು ಯಾರಾದರು ಕಂಡು, ಅದರ ಆಟವನ್ನು ನೋಡಿಯೂ ಅದಕ್ಕೆ ನಮಸ್ಕರಿಸದಿದ್ದರೆ, ಅವರನ್ನು ಕೊಂದುಹಾಕುವುದು, ಯಾರು ನಮಸ್ಕರಿಸುವರೋ ಅವರನ್ನು ಕುತ್ತದಿಂದ ಮುಕ್ತಗೊಳಿಸುವುದು’ ಎಂದು ಮೊದಲ ಭೂತವಾದಿ ನಿವೇದಿಸಿದ. ಆಗ ದೊರೆಯು, ಅಂಥ ಭೂತವು ಬೇಕಿಲ್ಲವೆಂದು ತಲೆಯಲ್ಲಾಡಿಸಿದ.

ಆಗ ಎರಡನೇ ಭೂತವಾದಿಯು, ‘ಎಲೈ ರಾಜನೇ! ನನ್ನ ಭೂತಕ್ಕೆ ಚಂದದ ರೂಪವಿಲ್ಲ. ವಿಕರಾಳ ರೂಪ. ಆದರೆ ಗಲ್ಲಿಗಲ್ಲಿಗಳಲ್ಲಿ ದಣಿವಿಲ್ಲದೆ ಕುಣಿದು ಕುಪ್ಪಳಿಸುವುದು. ಆಗ ಯಾರಾದರೂ ಗೇಲಿ ಮಾಡಿದರೆ, ಅಲ್ಲಿಯೇ ಅವರ ತಲೆ ಸಿಡಿದು ಹೋಗುವುದು. ಯಾರು ಅದನ್ನು ಸ್ತುತಿಸಿ ಪೂಜಿಸುವರೋ, ಭಕ್ತಿ ತೋರುವರೋ ಅವರ ರೋಗವನ್ನು ಅರೆಕ್ಷಣದಲ್ಲಿ ನಿವಾರಿಸುವುದು’ ಎಂದು ಹೇಳಿದ. ಇದರ ಸಹವಾಸ ಅಪಾಯಕಾರಿ ಆಗಬಹುದೆಂದು ಭಾವಿಸಿದ ರಾಜ, ಅದು ಬೇಡವೆನ್ನುವಂತೆ ತಲೆಯಾಡಿಸಿದ.

‘ಎಲೈ ಪ್ರಜಾಪಾಲಕನೇ! ನನ್ನ ಭೂತ ಸರಳವಾದುದು. ಸೀದಾ-ಸಾದಾ. ಹೊಗಳಿಕೆಗೆ-ತೆಗಳಿಕೆಗೆ ಕಿವಿಕೊಡುವುದಿಲ್ಲ. ತನ್ನನ್ನು ಯಾರಾದರು ಅರ್ಚಿಸಲಿ ಅಥವಾ ಅಪಹಾಸ್ಯಗೈಯಲಿ, ಅದು ಯಾವುದನ್ನು ಗಮನಿಸದೆ, ಮಂದಿಯ ಕಾಯಿಲೆಯನ್ನು ನಿವಾರಿಸುವುದು. ಜನರ ಕಷ್ಟ ದೂರಮಾಡುವುದೇ ತನ್ನ ಧರ್ಮ, ಕರ್ತವ್ಯವೆಂದು ಭಾವಿಸುವುದು’ ಎಂದನು ಮೂರನೆಯ ಭೂತವಾದಿ.

ಆಗ ಮಹಾರಾಜನ ಮೊಗದಲ್ಲಿ ನಗು ಅರಳಿತು. ‘ಇಂಥ ಭೂತವೇ ನಮಗೆ ಬೇಕು’ ಎಂದನು. ಆ ಭೂತವೇ ಎಲ್ಲ ವಿಪತ್ತುಗಳನ್ನು ದೂರಮಾಡಿ, ಊರನ್ನು ರೋಗಮುಕ್ತಗೊಳಿಸಿತು.

ಅಂದಿನಿಂದ ಆ ದೇಶದಲ್ಲಿ ಭೂತಾರಾಧನೆ ಆರಂಭಗೊಂಡತು. ಯಾವ ವ್ಯಕ್ತಿ ಪ್ರಿಯಕ್ಕೆ ಹಿಗ್ಗದೆ, ಅಪ್ರಿಯಕ್ಕೆ ಕುಗ್ಗದೆ ಶ್ರಮಣನಂತೆ ಎರಡನ್ನು ಸಮನಾಗಿ ಕಾಣುವನೋ, ಸರಳ-ಸುಲಭನಾಗಿರುವನೋ, ಅವನೇ ಎಲ್ಲರಿಗೂ ಬೇಕಾಗುತ್ತಾನೆ. ಭಾಷಾತೀತನಾದ, ಪಕ್ಷಾತೀತನಾದ, ಭ್ರಷ್ಟಾತೀತನಾದ ಆ ಲೋಕೋಪಕಾರಿಯನ್ನೇ ಎಲ್ಲರೂ ಎಲ್ಲ ಕಾಲದಲ್ಲೂ ಆರಾಧಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.