ಮಂಗಳವಾರ, ಮೇ 18, 2021
31 °C

ಲ್ಯಾಬ್‌ನಿಂದ ಮಗ್ಗಕ್ಕೆ ಬಣ್ಣದ ಹತ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯತನಕ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿದ್ದ ನೈಸರ್ಗಿಕ ಬಣ್ಣದ ಹತ್ತಿ, ಇದೀಗ ಲ್ಯಾಬ್ ಕೋಣೆಯಿಂದ ಹೊರಕ್ಕೆ ಬಿದ್ದಿದ್ದು, ಆಗಲೇ ಮಗ್ಗದೊಳಗಿಂದ ಹಾಯ್ದು ಬಟ್ಟೆಯ ರೂಪವನ್ನೂ ತಾಳಿ ನಿಂತಿದೆ.ಹಸಿರು ಬಣ್ಣವಲ್ಲದೆ ಕಡು ಕಂದು ಹಾಗೂ ಸಾದಾ ಕಂದು ಬಣ್ಣದ ಹತ್ತಿಯನ್ನೂ ಆವಿಷ್ಕಾರ ಮಾಡಿರುವ ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರದ ತಜ್ಞರ ತಂಡ, ಅದರಿಂದ ತಯಾರಾದ ಬಟ್ಟೆಗಳನ್ನು ಕಂಡು ಹೆಮ್ಮೆಯಿಂದ ಬೀಗುತ್ತಿದೆ.ಕೃಷಿ ವಿವಿ ಆವರಣದಲ್ಲಿ ಶುಕ್ರವಾರ ಆರಂಭವಾದ ಕೃಷಿ ಮೇಳದಲ್ಲಿ ನೈಸರ್ಗಿಕ ಬಣ್ಣದ ಹತ್ತಿಯಿಂದ ತಯಾರಾದ ಬಟ್ಟೆಗಳೇ ಆಕರ್ಷಣೆ ಕೇಂದ್ರಬಿಂದುವಾಗಿದ್ದವು. ಕಡು ಕಂದು ಬಣ್ಣದ ಪ್ಯಾಂಟ್ ಅಂತೂ ~ಯಾವುದೇ ಜೀನ್ಸ್ ಪ್ಯಾಂಟಿಗೂ ನಾನೇನು ಕಡಿಮೆ ಇಲ್ಲ~ ಎಂದು ಸೆಡ್ಡು ಹೊಡೆದು ಹೇಳುತ್ತಿತ್ತು. ಹಸಿರು ಬಣ್ಣದ ಶರ್ಟ್‌ಗಳು ಮಸಾಲೆ ದೋಸೆಯಂತೆ ಖರ್ಚಾಗುತ್ತಿದ್ದವು. ಬಣ್ಣದ ಹತ್ತಿಯಿಂದ ತಯಾರಿಸಿದ ಚೂಡಿದಾರಗಳೂ ಗಮನ ಸೆಳೆಯುತ್ತಿದ್ದವು.~ಈವರೆಗೆ ಕಂದು ಹಾಗೂ ಹಸಿರು ಬಣ್ಣದ ನೈಸರ್ಗಿಕ ಹತ್ತಿಯನ್ನು ನಮ್ಮಲ್ಲಿ ಬೆಳೆಯಲಾಗುತ್ತಿತ್ತು. ಈ ಸಲ ಅವುಗಳ ಸಾಲಿಗೆ ಸಾದಾ ಕಂದು ಬಣ್ಣದ ಹತ್ತಿಯೂ ಸೇರಿಕೊಂಡಿದೆ. ಬಣ್ಣದ ಹತ್ತಿಯನ್ನು ಉತ್ಪಾದನೆ ಮಾಡಲಾಗುತ್ತಿದ್ದರೂ ನೇಯ್ಗೆಗೆ ಬಳಕೆ ಆಗುತ್ತಿರಲಿಲ್ಲ. ಈಗ ಆ ಹತ್ತಿಯಿಂದ ಬಟ್ಟೆಗಳು ಹೇಗೆ ಸಿದ್ಧವಾಗಿವೆ ನೀವೇ ನೋಡಿ~ ಎಂದು ಸಂಶೋಧನಾ ಕೇಂದ್ರದ ಡಾ. ಮಂಜುಳಾ ಮರಳಪ್ಪನವರ ~ಪ್ರಜಾವಾಣಿ~ಗೆ ಹೆಮ್ಮೆಯಿಂದ ಹೇಳಿದರು.~ಯಂತ್ರದ ನೇಯ್ಗೆಗೆ ಅನುಕೂಲವಾಗುವಂತೆ ಈ ನೈಸರ್ಗಿಕ ಬಣ್ಣದ ಹತ್ತಿಯನ್ನು ಉತ್ಪಾದನೆ ಮಾಡಿದ್ದೇವೆ. ಸದ್ಯ ನಮ್ಮಲ್ಲಿ ಮೂರು ನಮೂನೆಯ ಬಣ್ಣದ ಹತ್ತಿಯನ್ನು (ಡಿಎನ್‌ಬಿ-225, ಡಿಡಿಬಿ-12 ಮತ್ತು ಡಿಜಿಸಿ-78) ಬೆಳೆಯುತ್ತಿದ್ದೇವೆ. ಈ ಹತ್ತಿಯನ್ನೇ ಬಳಕೆ ಮಾಡಿಕೊಂಡು ನಮ್ಮ ವಿವಿಯ ಬಟ್ಟೆ ತಯಾರಿಕಾ ಘಟಕ ಸಿದ್ಧ ಉಡುಪು ಉತ್ಪಾದಿಸುತ್ತಿದೆ~ ಎಂದು ಅವರು ವಿವರಿಸಿದರು.~ಬಿಳಿ ಹತ್ತಿ ಜೊತೆಗೆ  ಬೇರೆ ಕೆಲವು ಸಸ್ಯಕೋಶಗಳನ್ನು ಕ್ರಾಸ್ ಮಾಡಿ ಬಣ್ಣದ ಹತ್ತಿ ಉತ್ಪಾದನೆ ಮಾಡಲಾಗುತ್ತದೆ. ಈಗಾಗಲೇ ನಮ್ಮ ಈ ಸಂಶೋಧನೆ ನಡೆದು ಹತ್ತು ವರ್ಷ ಪೂರ್ಣಗೊಂಡಿವೆ. ಹತ್ತಿ ನೂಲು ನೇಯ್ಗೆಗೆ ಯೋಗ್ಯ ಎಂಬುದೂ ಈಗ ಸಾಬೀತಾಗಿದೆ. ಸರ್ಕಾರದ ಅನುಮತಿ ಸಿಗದ ಕಾರಣ ಇನ್ನೂ ರೈತರಿಗೆ ಬೆಳೆಯಲು ಬಿಟ್ಟಿಲ್ಲ~ ಎಂದು ಡಾ. ಮಂಜುಳಾ ತಿಳಿಸಿದರು.ಕೃಷಿ ವಿಶ್ವವಿದ್ಯಾಲಯದಲ್ಲಿ ಬಣ್ಣದ ಹತ್ತಿಯ ಬೀಜದ ದಾಸ್ತಾನು ಬೇಕಾದಷ್ಟಿದೆ. ರೈತರು ಕೂಡ ಬೆಳೆಯಲು ಉತ್ಸುಕವಾಗಿದ್ದು, ~ಬೀಜ ಎಲ್ಲಿ ಸಿಗುತ್ತದೆ~ ಎಂಬ ಪ್ರಶ್ನೆ ಹಾಕುತ್ತಿದ್ದ ದೃಶ್ಯ ಸಂಶೋ`ನಾ ಕೇಂದ್ರದ ಮಳಿಗೆಯಲ್ಲಿ ಸಾಮಾನ್ಯವಾಗಿತ್ತು. ~ಸರ್ಕಾರದ ಅನುಮತಿ ಸಿಗದೆ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ~ ಎಂದು ಅವರಿಗೆಲ್ಲ ಸಮಾಧಾನ ಹೇಳಿ ಕಳುಹಿಸಲಾಗುತ್ತಿತ್ತು.~ಬಣ್ಣದ ಹತ್ತಿಯಿಂದ 24.0 ಮಿಲಿಮೀಟರ್‌ನಷ್ಟು ನೂಲು ಹಿಂಜಲು ಸಾಧ್ಯವಾಗಿದ್ದು, ಬಟ್ಟೆ ನೇಯ್ಗೆಗೆ ತಕ್ಕ ಬಲವನ್ನೂ ಹೊಂದಿದೆ. ನೈಸರ್ಗಿಕ ಬಣ್ಣವನ್ನು ಹೊಂದಿದ್ದರಿಂದ ಸಿದ್ಧ ಉಡುಪುಗಳ ಉತ್ಪಾದನಾ ವೆಚ್ಚದಲ್ಲಿ ಭಾರಿ ಕಡಿತ ಉಂಟಾಗುತ್ತದೆ. ಜೊತೆಗೆ ಪರಿಸರಸ್ನೇಹಿ ಬಟ್ಟೆ ತೊಟ್ಟ ಖುಷಿಯೂ ನಮ್ಮದಾಗಲಿದೆ~ ಎಂದು ಅವರು ತಿಳಿಸಿದರು.ಮೂರು ಬಗೆಯ ಬಣ್ಣದ ಹತ್ತಿ, ಅದರಿಂದ ಹಿಂಜಿದ ನೂಲು ಹಾಗೂ ತಯಾರಾದ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.