ಶುಕ್ರವಾರ, ಏಪ್ರಿಲ್ 23, 2021
22 °C

ವಕೀಲರಾಗಿ ಸೋತ ಪ್ರಕರಣದ ಪರ ತೀರ್ಪು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲರಾಗಿದ್ದಾಗ ಹೈಕೋರ್ಟ್‌ನಲ್ಲಿ ವಾದಿಸಿ ಸೋತರು. ಅವರ ವಿರುದ್ಧ ತೀರ್ಪು ಬಂತು. ಈಗ ನ್ಯಾಯಮೂರ್ತಿಗಳಾಗಿ ಅದೇ ಪ್ರಕರಣದ ಪರವಾಗಿ ತೀರ್ಪು ಇತ್ತರು!ಇಂತಹ ಕುತೂಹಲದ ಘಟನೆಯೊಂದಕ್ಕೆ ಹೈಕೋರ್ಟ್ ಸಾಕ್ಷಿಯಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರಾಗಿ ವಾದ ಮಂಡಿಸಿ ಸೋತಿದ್ದವರು ಈಗ ನ್ಯಾಯಮೂರ್ತಿಗಳಾಗಿ ಅರ್ಜಿದಾರರ ಪರವಾಗಿ ತೀರ್ಪು ನೀಡ್ದ್ದಿದಾರೆ. ಇದು ಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರಕರಣದ ವಿವರ: `ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಗೃಹ ನಿರ್ಮಾಣ ಸಹಕಾರ ಸಂಘ~ಕ್ಕಾಗಿ 1986ರಲ್ಲಿ ಯಲಹಂಕದ ಬಳಿ ಸುಮಾರು 66 ಎಕರೆ ಜಮೀನಿನ ಸ್ವಾಧೀನ ಪ್ರಕರಣ ಇದು. ಈ ಸ್ವಾಧೀನ ಪ್ರಕ್ರಿಯೆಯ ವಿರುದ್ಧ, ಭೂಮಾಲೀಕರ ಪರವಾಗಿ 1998ರಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರು ವಕೀಲರಾಗಿದ್ದ ವೇಳೆ ವಾದ ಮಂಡಿಸಿದ್ದರು. ಆಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಆಗ ವಜಾಗೊಳಿಸಿದ್ದ ಹೈಕೋರ್ಟ್, ಸ್ವಾಧೀನ ಪ್ರಕ್ರಿಯೆಯನ್ನು ಎತ್ತಿಹಿಡಿದಿತ್ತು.ಇದೇ ಪ್ರಕರಣ ಬೇರೆ ಬೇರೆ ರೂಪದಲ್ಲಿ 10ಕ್ಕೂ ಅಧಿಕ ಬಾರಿ ಬೇರೆ ಬೇರೆ ಭೂಮಾಲೀಕರ ಮೂಲಕ ಹೈಕೋರ್ಟ್ ಮೆಟ್ಟಿಲೇರಿತು. ಪ್ರತಿ ಬಾರಿಯೂ ಸ್ವಾಧೀನ ಪ್ರಕ್ರಿಯೆ ಊರ್ಜಿತಗೊಂಡಿತು. ನಂತರ, ನಾಗಮೋಹನದಾಸ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾದರು. ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಅವರು ನಡೆಸುತ್ತಿದ್ದ ಕಾರಣ, ಭೂಮಾಲೀಕರು ಸಲ್ಲಿಸಿದ್ದ ಈ ಅರ್ಜಿ ಕೂಡ ಅವರ ಮುಂದೆ ವಿಚಾರಣೆಗೆ ಬಂತು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಸ್ವಾಧೀನಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ರದ್ದು ಮಾಡಿದರು.ಇದನ್ನು ಪ್ರಶ್ನಿಸಿ ಸಂಘವು ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಎಚ್.ಎಸ್.ಕೆಂಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಏಕಸದಸ್ಯಪೀಠದ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿದೆ.  `ನ್ಯಾಯದಾನದ ಸಂದರ್ಭದಲ್ಲಿ ನ್ಯಾಯ ಮೂರ್ತಿಗಳು ಪಕ್ಷಪಾತ ಮಾಡಬಾರದು. ಇದು ನಿಯಮ. ಪಕ್ಷಪಾತ ಮಾಡದೇ ಇದ್ದರೂ, ಅದು ಕಕ್ಷಿದಾರರಲ್ಲಿ ಪಕ್ಷಪಾತ ಭಾವನೆ ಮೂಡಲು ನ್ಯಾಯಮೂರ್ತಿಗಳು ಅವಕಾಶ ಕಲ್ಪಿಸಬಾರದು.ಯಾವ ವ್ಯಕ್ತಿಯ ಮನಸ್ಸಿನಲ್ಲಿ ಏನು ಇರುತ್ತದೆ ಎನ್ನುವುದನ್ನು ತಿಳಿಯುವುದು ಕಷ್ಟ. ತಾನು ವಾದ ಮಂಡಿಸಿದ ಪ್ರಕರಣದಲ್ಲಿಯೇ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುವುದು ಕಾನೂನುಬಾಹಿರ. ಇದರ ಜೊತೆಗೆ, ನ್ಯಾಯಾಧೀಶರು ನೀಡುವ ಆದೇಶ ಯಾರ ಮೇಲೆ ಪ್ರಭಾವ ಬೀರುವುದೋ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸುವುದು ಧರ್ಮ. ಆದರೆ ಈ ಪ್ರಕರಣದಲ್ಲಿ ಅವೆರಡೂ ಆಗಿಲ್ಲ. ಆದುದರಿಂದ ಏಕಸದಸ್ಯಪೀಠದ ಆದೇಶವನ್ನು ರದ್ದು ಮಾಡದೇ ವಿಧಿಯಿಲ್ಲ~ ಎಂದು 80 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.`ಪ್ರಾಥಮಿಕ ಅಧಿಸೂಚನೆ 1985ರಲ್ಲಿ ಹಾಗೂ ಅಂತಿಮ ಅಧಿಸೂಚನೆ 1986ರಲ್ಲಿ ಹೊರಟಿದೆ. ಎರಡೂವರೆ ದಶಕ ಕಳೆದಿದೆ. ಸಂಘವು ಅಲ್ಲಿ 1800 ನಿವೇಶನಗಳನ್ನು ಮಾಡಿ, ಅವುಗಳನ್ನು ಮಾರಾಟ ಮಾಡಿದೆ. ಈ ನಿವೇಶನಗಳ ಮಾಲೀಕರನ್ನು ಅರ್ಜಿಯಲ್ಲಿ ಪ್ರತಿವಾದಿಯಾಗಿಸಿಲ್ಲ. ಇದು ಸರಿಯಲ್ಲ. ಈ ಸಂಘವು ವಂಚಕ ಸಂಘ ಎಂದು ಸಮಿತಿಯೊಂದು ನೀಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಲಾಗಿದೆ ಎಂದು ಏಕಸದಸ್ಯಪೀಠ ಹೇಳಿದೆ. ಸಮಿತಿಯೊಂದು ನೀಡಿರುವ ವರದಿ ಸಾಕ್ಷ್ಯವೇ ವಿನಾ, ಅದು ಹೇಳಿದ್ದೇ ಸರಿ ಎಂದು ಹೇಳುವುದು ನ್ಯಾಯಾಲಯಗಳ ಕರ್ತವ್ಯವಲ್ಲ. ವರದಿಯನ್ನು ಪರಾಮರ್ಶಿಸಿ ತೀರ್ಪು ನೀಡಬೇಕು~ ಎಂದು ಪೀಠ ಹೇಳಿದೆ.ಈ ಪ್ರಕರಣದ ವಿಚಾರಣೆ ಪುನಃ ನಡೆಸುವಂತೆ ಏಕಸದಸ್ಯಪೀಠಕ್ಕೆ ಅರ್ಜಿಯನ್ನು ಹಿಂದಿರುಗಿಸಲಾಗಿದೆ. ನ್ಯಾ.ನಾಗಮೋಹನದಾಸ ಅವರ ಹೊರತಾಗಿ ಬೇರೆ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.