ಭಾನುವಾರ, ಜೂನ್ 13, 2021
26 °C
ಬೆಳಗಾವಿಯಲ್ಲಿ ಕೆಎಟಿ ಸ್ಥಾಪನೆಗೆ ಒತ್ತಾಯ

ವಕೀಲರ ಸಂಘದಿಂದ ಉಪವಾಸ ಸತ್ಯಾಗ್ರಹ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠವನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸಲು ಒತ್ತಾ­ಯಿಸಿ ಮಂಗಳವಾರದಿಂದ (ಮಾ. 4) ಉಪವಾಸ ಸತ್ಯಾಗ್ರಹ ಆರಂಭಿಸಲು ಹಾಗೂ ಕೋರ್ಟ್‌ ಕಲಾಪಗಳಿಂದ ದೂರ ಉಳಿಯಲು ಇಲ್ಲಿನ ವಕೀಲರ ಸಂಘದ ಸದಸ್ಯರು ಸೋಮವಾರ ಸಭೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡರು.ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ಅವರು ಹೋರಾಟ ಕುರಿತು ಸಭೆಯ ನಿರ್ಣಯವನ್ನು ಓದಿ­ದರು. ಸದಸ್ಯರೆಲ್ಲರೂ ಚಪ್ಪಾಳೆ ಮೂಲಕ ನಿರ್ಣಯವನ್ನು ಬೆಂಬಲಿಸಿದರು.‘ಹೈಕೋರ್ಟ್‌ ಪೀಠ ಸ್ಥಾಪನೆ ಸಂದರ್ಭದಲ್ಲೂ ಬೆಳಗಾವಿ ವಕೀಲರು ಹೋರಾಟ ನಡೆಸಿದ್ದರು. ಧಾರವಾಡ ವಕೀಲರ ಹೋರಾಟಕ್ಕೂ ಬೆಂಬಲ ವ್ಯಕ್ತಪಡಿಸಲಾಗಿತ್ತು. ಎಲ್ಲವೂ ಧಾರವಾಡಕ್ಕೆ ಎಂದರೆ ಸರಿಯಲ್ಲ. ಬೆಳಗಾವಿಯ ಅಭಿವೃದ್ಧಿ ದೃಷ್ಟಿಯಿಂದ ಕೆಎಟಿ ಹಾಗೂ ಕಾರ್ಮಿಕ ನ್ಯಾಯಾ­ಲಯ ಇಲ್ಲಿ ಸ್ಥಾಪನೆಯಾಗಬೇಕು’ ಎಂದು ಆಗ್ರಹಿಸಿದ ಮುಳವಾಡಮಠ ಅವರು, ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.ಧಾರವಾಡದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಆ ಭಾಗದ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಆದರೆ, ಈ ಜಿಲ್ಲೆಯ ಯಾವೊಬ್ಬ ಶಾಸಕರು, ಸಚಿವರು ಈ ಕುರಿತು ಸದನದಲ್ಲಿ ಮಾತನಾಡಿಲ್ಲ. ಆದ್ದರಿಂದ ಶಾಸಕರು ಹಾಗೂ ಸಚಿವರ ಮನೆಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿಬಂದವು.‘ಧಾರವಾಡ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ, ಸಚಿವ ಎಚ್‌.ಕೆ.ಪಾಟೀಲ, ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಬೇಕು. ಬೆಳಗಾವಿಯಲ್ಲಿಯೇ ಕೆಎಟಿ ಪೀಠ ಸ್ಥಾಪನೆಗೆ ಒತ್ತಡ ತರಬೇಕು’ ಎಂದು ಸಂಘದ ಮಾಜಿ ಅಧ್ಯಕ್ಷ ಎಸ್‌.ಎಸ್‌. ಕಿವಡಸಣ್ಣವರ ಸಲಹೆ ನೀಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ದೇಶಪಾಂಡೆ, ಆರ್‌.ಜಿ. ಪಾಟೀಲ, ವಿ.ಪಿ.ಶೇರಿ, ಎಂ.ಎನ್‌. ಮಾವಿನಕಟ್ಟಿ, ಗುರುರಾಜ ಹುಳ್ಳೇರ, ಆರ್‌.ಸಿ.ಪಾಟೀಲ ಮತ್ತಿತರರು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.