ಶನಿವಾರ, ಮೇ 8, 2021
18 °C

ವಕೀಲರ ಸಂಘದ ಸಭೆಯಲ್ಲಿ ನಿರ್ಣಯ:ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರ್ಚ್ 2ರಂದು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಅಹಿತಕರ ಘಟನೆಯ ವೇಳೆ ಕರ್ತವ್ಯಲೋಪ ಎಸಗಿರುವ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಗೃಹ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ಶನಿವಾರ ಬೆಂಗಳೂರು ವಕೀಲರ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಚರ್ಚಿಸಲು ಶನಿವಾರ ಸಂಘದ ತುರ್ತು ಸಭೆ ನಡೆಯಿತು. ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಮನವಿ ಸಲ್ಲಿಕೆ ನಂತರವೂ ಕ್ರಮ ಜರುಗಿಸದೇ ಇದ್ದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಕಾನೂನು ಸಚಿವರ ನಿವಾಸಗಳ ಎದುರು ಧರಣಿ ನಡೆಸುವುದಕ್ಕೂ ನಿರ್ಣಯ ತೆಗೆದುಕೊಳ್ಳಲಾಗಿದೆ.ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಕೀಲರ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಗೃಹ, ಕಾನೂನು ಸಚಿವರು, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಮತ್ತು ಹಿರಿಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮಾ. 2ರ ಘಟನೆ ಕುರಿತು ವಿವರಿಸುವುದಕ್ಕೂ ನಿರ್ಣಯಿಸಲಾಗಿದೆ.ಈ ಘಟನೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಮಾಡುವಂತೆಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಸಲ್ಲಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಮತ್ತು ಖಜಾಂಚಿ ಬಿ.ಎಸ್.ರಾಜಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.