ಶನಿವಾರ, ಜೂನ್ 19, 2021
22 °C

ವಕ್ಫ್ ಮಂಡಳಿ : 2 ಲಕ್ಷ ಕೋಟಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಗೆ ಸೇರಿದ ಶೇಕಡ 50ಕ್ಕಿಂತ ಹೆಚ್ಚಿನ ಆಸ್ತಿ ದುರುಪಯೋಗ ಆಗಿದೆ. ಮಂಡಳಿಯಲ್ಲಿ ನಡೆದಿರುವ ಅವ್ಯವಹಾರದ ಒಟ್ಟು ಮೊತ್ತ ಅಂದಾಜು 2 ಲಕ್ಷ ಕೋಟಿ ರೂಪಾಯಿ ಎಂದು ಈ ಕುರಿತು ತನಿಖೆ ನಡೆಸಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗ ಹೇಳಿದೆ.`ವಕ್ಫ್ ಮಂಡಳಿಯ ಆಸ್ತಿಯನ್ನು ಮಂಡಳಿಯ ಸದಸ್ಯರು, ಜನಪ್ರತಿನಿಧಿಗಳು, ವಕ್ಫ್ ಸಚಿವರು, ಮುತವಲ್ಲಿಗಳು ಮತ್ತು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿದ ಆಯೋಗ, ಈ ಕುರಿತ ಏಳು ಸಾವಿರ ಪುಟಗಳ ವರದಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸೋಮವಾರ ಸಲ್ಲಿಸಿತು.ವರದಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು, `ಬೀದರ್ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಮಂಡಳಿಗೆ ಸೇರಿದ ಆಸ್ತಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಲಾಗಿದೆ. ಮಂಡಳಿಯ ಅಧಿಕಾರಿಗಳು ಮತ್ತು ಭೂ ಮಾಫಿಯಾ ಶಾಮೀಲಾಗಿ, ಆಸ್ತಿಯನ್ನು 1954ರಿಂದಲೇ ದುರುಪಯೋಗ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ನಡೆದಿರುವ ಈ ಹಗರಣದ ಮೊತ್ತ 2-ಜಿ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಹಗರಣಕ್ಕಿಂತಲೂ ದೊಡ್ಡದು~ ಎಂದರು.ಮಂಡಳಿಯ ಆಸ್ತಿ ದುರುಪಯೋಗ ಕುರಿತು ಬೀದರ್ ಜಿಲ್ಲೆಯಲ್ಲಿ ಮೊದಲು ಆರೋಪ ಕೇಳಿಬಂತು. ಕಳೆದ ನವೆಂಬರ್ 19ರಂದು ಆಯೋಗ ತನಿಖೆ ಆರಂಭಿಸಿದೆ. ಬೀದರ್ ಜಿಲ್ಲೆಯಲ್ಲಿ ಮಂಡಳಿಗೆ ಸೇರಿದ 2,586 ಎಕರೆ ಆಸ್ತಿಯ ಪೈಕಿ 1,803 ಎಕರೆ ಅತಿಕ್ರಮಣ ಆಗಿದೆ. ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ 54 ಸಾವಿರ ಎಕರೆ ಭೂಮಿಯಲ್ಲಿ 33,741 ನೋಂದಾಯಿತ ಆಸ್ತಿ ಇದೆ. ತನಿಖೆಯ ಸಂದರ್ಭದಲ್ಲಿ ಪ್ರಾಣ ಬೆದರಿಕೆ ಕೂಡ ಬಂದಿತ್ತು. ಈ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.

 

ವರದಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, `ಮಂಡಳಿಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವ ವ್ಯಕ್ತಿಗಳು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಮಂಡಳಿಯ ಕೈತಪ್ಪಿರುವ ಭೂಮಿಯನ್ನು ಪುನಃ ಅದರ ವಶಕ್ಕೆ ಒಪ್ಪಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು~ ಎಂದು ಹೇಳಿದರು.ಮಂಡಳಿಯಲ್ಲಿ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಅನ್ವರ್ ಮಾಣಿಪ್ಪಾಡಿ ಅವರಲ್ಲದೆ, ಆಯೋಗದ ಕಾರ್ಯದರ್ಶಿ ಅತೀಕ್ ಅಹಮದ್ ಮತ್ತು ಸದಸ್ಯ ಪಿ.ಎನ್. ಬೆಂಜಮಿನ್ ಅವರು ಈ ವರದಿ ಸಿದ್ಧಪಡಿಸಿದ್ದಾರೆ.ಆರೋಪಿ ಸ್ಥಾನದಲ್ಲಿರುವ ಶಾಸಕರೆಂದರೆ ಖಮರುಲ್ ಇಸ್ಲಾಂ, ಅಲ್‌ಹಾಜ್ ಸೈಯದ್ ಯಾಸೀನ್, ರೋಷನ್ ಬೇಗ್, ಎನ್.ಎ. ಹ್ಯಾರಿಸ್, ಮಂಡಳಿಯ ಹಾಲಿ ಅಧ್ಯಕ್ಷ ಸೈಯದ್ ರಿಯಾಜ್ ಅಹಮದ್, ವಕ್ಫ್ ಸಂಸ್ಥೆಯ ಅಧ್ಯಕ್ಷ ತನ್ವೀರ್ ಸೇಠ್, ಮಂಡಳಿಯ ಮಾಜಿ ಅಧ್ಯಕ್ಷ ಖಾಲಿದ್ ಅಹಮದ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ, ಗುಲ್ಬರ್ಗದ ಉಪ ಮೇಯರ್ ಅಷ್ಫಾಕ್ ಅಹಮದ್ ಚುಲ್ಬುಲ್.ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳು: ಸಲಾಹುದ್ದೀನ್ (ಐಎಎಸ್), ಎಂ.ಎಫ್. ಪಾಷಾ (ನಿವೃತ್ತ ಐಎಎಸ್), ಎಂ.ಎ. ಖಾಲಿದ್ (ನಿವೃತ್ತ ಕೆಎಎಸ್), ಮಹಮದ್ ಸನಾವುಲ್ಲಾ (ಐಎಎಸ್), ಮಾಜ್ ಅಹಮದ್ ಶರೀಫ್ (ಕೆಎಎಸ್), ಅನೀಸ್ ಸಿರಾಜ್ (ಕೆಎಎಸ್), ಸಾದಿಯಾ ಸುಲ್ತಾನಾ (ಕೆಎಎಸ್), ಕೆ.ಎ. ಖಾಲಿದ್ಪ್ರಮುಖ ಶಿಫಾರಸುಗಳು:

ಆರೋಪಗಳ ಕುರಿತು ನಿಷ್ಪಕ್ಷಪಾತವಾಗಿ ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆ ನಡೆಸಲು ಅನುಕೂಲ ಆಗುವಂತೆ ವಕ್ಫ್ ಮಂಡಳಿಯನ್ನು ಒಂದು ವರ್ಷದ ಅವಧಿಗೆ ಅಮಾನತಿನಲ್ಲಿ ಇಡಬೇಕು. 1998ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಅನ್ವಯ ಮಂಡಳಿಯ ಆಸ್ತಿ ಮರಳಿ ಪಡೆಯಲು `ವಕ್ಫ್ ಆಸ್ತಿ ಕಾರ್ಯಪಡೆ~ ರಚಿಸಬೇಕು. ಮಂಡಳಿಯ ಕಾರ್ಯಗಳು ಪಾರದರ್ಶಕ ಆಗಿರುವಂತೆ ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿ ನೇಮಕ ಮಾಡಬೇಕು.ಇಬ್ಬರು ಹಿರಿಯ ನಿವೃತ್ತ ಐಎಎಸ್ ಅಧಿಕಾರಿಗಳು, ಒಬ್ಬರು ನಿವೃತ್ತ ನ್ಯಾಯಾಧೀಶ, ವಕ್ಫ್ ಆಸ್ತಿಯನ್ನು ಮರಳಿ ಪಡೆಯಲು ಹೋರಾಟ ನಡೆಸಿರುವ ಎರಡು ಸರ್ಕಾರೇತರ ಸಂಘಟನೆಗಳು, ಅಲ್ಪಸಂಖ್ಯಾತ ಆಯೋಗದ ಮೂವರು ಸದಸ್ಯರು ಉನ್ನತ ಮಟ್ಟದ ಸಮಿತಿಯಲ್ಲಿ ಇರಬೇಕು ಎಂದು ಶಿಫಾರಸು ಮಾಡಲಾಗಿದೆ.ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಬೇಕು.ವಕ್ಫ್ ಮಂಡಳಿಯ ಆರ್ಥಿಕ ಸ್ಥಿತಿ ಕುರಿತು ಲೆಕ್ಕಪರಿಶೋಧನೆ ನಡೆಸಬೇಕು.ಮಂಡಳಿಯ ಆಸ್ತಿಯ ಎರಡನೆಯ ಸಮೀಕ್ಷೆಯನ್ನು ತಕ್ಷಣ ಆರಂಭಿಸಬೇಕು.ಮುತವಲ್ಲಿಗಳು ಅಕ್ರಮವಾಗಿ ಮಾರಾಟ ಮಾಡಿರುವ ಆಸ್ತಿಯನ್ನು ಪತ್ತೆ ಮಾಡಬೇಕು.ತಪ್ಪೆಸಗಿರುವ ಮಂಡಳಿಯ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು, ಸಲಹಾ ಸಮಿತಿ, ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ತಪ್ಪೆಸಗಿದವರಿಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡ, ಮಾರಾಟ ಮಾಡಿದ ಅಥವಾ ಖರೀದಿಸಿದ ಆಸ್ತಿಯ ಎರಡರಷ್ಟು ದಂಡ ಮತ್ತು ಐದರಿಂದ 10 ವರ್ಷಗಳ ಸೆರೆವಾಸ ವಿಧಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.