ಗುರುವಾರ , ಫೆಬ್ರವರಿ 25, 2021
24 °C
ಜೀವಜಲಕ್ಕಾಗಿ ನಿತ್ಯವೂ ಗ್ರಾಮಸ್ಥರ ಅಲೆದಾಟ, ಟ್ಯಾಂಕರ್‌ ಮೂಲಕ ಪೂರೈಕೆಗೆ ಒತ್ತಾಯ

ವಡ್ರಾ ಳ, ಮುಗಳಿ: ಕುಡಿಯುವ ನೀರಿಗೆ ತತ್ವಾರ

ಪ್ರಜಾವಾಣಿ ವಾರ್ತೆ/ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ವಡ್ರಾ ಳ, ಮುಗಳಿ: ಕುಡಿಯುವ ನೀರಿಗೆ ತತ್ವಾರ

ಚಿಕ್ಕೋಡಿ: ಗ್ರಾಮದೊಳಗೆ ಕಾಲಿಡುತ್ತಿ­ದ್ದಂತೆಯೇ ಖಾಲಿ ಕೊಡಗಳ ಸಾಲು ಸ್ವಾಗತ ನೀಡುತ್ತವೆ. ಜೀವಜಲಕ್ಕಾಗಿ ಅಲೆದಾಡುವ ಜನರ ನರಕ ಸದೃಶ ಜೀವನ ಕಣ್ಣ ಮುಂದೆ ಬರುತ್ತದೆ. ಸತತ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ಸೇರಿ ಚಿಕ್ಕೋಡಿ, ನಿಪ್ಪಾಣಿ ಹೋಬಳಿಗಳ ಬಹುತೇಕ ಗ್ರಾಮಗಳಲ್ಲಿ ನಿತ್ಯ ಕಂಡು­ಬರುತ್ತಿರುವ ಸಾಮಾನ್ಯ ದೃಶ್ಯಗಳಿವು.ಮುಂಗಾರು–ಹಿಂಗಾರು ವೈಫಲ್ಯ­ದಿಂದ ಆರ್ಥಿಕವಾಗಿ ಕಂಗೆಟ್ಟು ಉಪ­ಜೀವನಕ್ಕಾಗಿ ಹರಸಾಹಸಪಡು­ವುದು ಒಂದೆಡೆ­ಯಾದರೆ, ಜನ–ಜಾನುವಾರು ಕುಡಿಯುವ ನೀರಿಗಾಗಿ ನಿತ್ಯವೂ ಪರ­ದಾಟ ನಡೆಸುವ ಪರಿಸ್ಥಿತಿ ಇನ್ನೊಂದೆಡೆ. ಅನಾವೃಷ್ಟಿಯಿಂದಾಗಿ ಅಂತರ್ಜಲಮಟ್ಟ ದಿನೇ ದಿನೇ ಪಾತಾಳಕ್ಕಿಳಿಯುತ್ತಿದೆ. ಬಾವಿ, ಬೋರವೆಲ್‌ಗಳು ಬತ್ತುತ್ತಿದ್ದು, ಲಭ್ಯ­ವಿರುವ ಅತ್ಯಲ್ಪ ನೀರನ್ನೇ ಸಂಗ್ರಹಿಸಿ­ಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ.ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಜೈನಾಪುರ ಹಾಗೂ ಇತರ 12 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು ₹ 14.10 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿ­ಸಿರುವ ಯೋಜನೆ ಎಲ್ಲ ಗ್ರಾಮಗಳಿಗೆ ನಿಯಮಿತವಾಗಿ ನೀರು ಸರಬರಾಜಾ­ಗುತ್ತಿಲ್ಲ. ವಡ್ರಾಳ, ಮುಗಳಿ ಮೊದಲಾದ ಗ್ರಾಮಗಳಿಗೆ ನೀರು ಬರುತ್ತಿಲ್ಲ. ಇತ್ತ ತಾಲ್ಲೂಕು ಆಡಳಿತ ಟ್ಯಾಂಕರ್‌ ಮೂಲ­ಕವೂ ನೀರು ಸರಬ­ರಾಜು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ತಾಲ್ಲೂಕಿನ ಚಿಕ್ಕೋಡಿ ರೋಡ್‌, ಮೀರಾಪುರಹಟ್ಟಿ, ಬೆಳಕೂಡ, ಬೆಣ್ಣಿಹಳ್ಳಿ , ಕೇರೂರ, ಉಮರಾಣಿ, ಇಟ್ನಾಳ, ಬಂಬಲವಾಡ ಹಾಗೂ ಕುಂಗಟೋಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬ­ರಾಜು ಮಾಡಲಾಗುತ್ತಿದೆ. ನಾಗರ­ಮುನ್ನೋಳಿ, ಕರಗಾಂವ, ಕಾಡಾಪುರ, ಕರೋಶಿ ಗ್ರಾಮಗಳಿಗೂ ಟ್ಯಾಂಕರ್‌ನಿಂದ ನೀರು ಪೂರೈಕೆಗೆ ಬೇಡಿಕೆ ಬಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ.‘ಬಂಬಲವಾಡ ಗ್ರಾಮಕ್ಕೆ ದಿನಕ್ಕೆ 4 ಟ್ಯಾಂಕರ್‌ ನೀರು ಪೂರೈಕೆಗೆ ಬೇಡಿಕೆಗೆ ಸಲ್ಲಿಸಲಾಗಿತ್ತು. ಆದರೆ, ಶಾಲೆಗೆ ಮಾತ್ರ ಒಂದು ಟ್ಯಾಂಕರ್‌ ಸರಬರಾಜು ಆಗುತ್ತಿದೆ. ಕುಂಗಟೋಳಿಗೆ 3 ಟ್ಯಾಂಕರ್‌ ಕೇಳಿದ್ದು ಕೇವಲ 1 ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ವಡ್ರಾಳ ತೋಟಪಟ್ಟಿ, ಡೋಣವಾಡ, ಕರಗಾಂವ ಗ್ರಾಮಗಳಿಗೂ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಕೇವಲ ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದು, ನೀರಿನ ಸಮಸ್ಯೆಯಿಂದ ಜನ ರೋಸಿ ಹೋಗುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದುಂಡಪ್ಪ ಬೆಂಡವಾಡೆ ಆರೋಪಿಸುತ್ತಾರೆ.‘ಜೈನಾಪುರ ಬಹುಗ್ರಾಮ ಕುಡಿ­ಯುವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ಬರುವ ವಡ್ರಾಳ ಗ್ರಾಮಕ್ಕೆ 10–15 ದಿನಕ್ಕೊಮ್ಮೆ ನೀರು ಬರುತ್ತಿದೆ. ಅಧಿ­ಕಾರಿಗಳು ಕೇವಲ ಕೊಳಾಯಿ ಮಾರ್ಗದ ಸೋರಿಕೆ ನೆಪ ಹೇಳುತ್ತಾರೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋ­ಜನವಾಗಿಲ್ಲ. ಕೂಡಲೇ ವಡ್ರಾಳ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಸರಬ­ರಾಜು ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥ ಮಾರುತಿ ನೇಜಕರ್ ಅವರ ಆಗ್ರಹ.‘ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮುಖ್ಯ ಕೊಳವೆ ಮಾರ್ಗ ತಿಂಗಳಿನಲ್ಲಿ ಒಂದೆರೆಡು ಬಾರಿಯಾದರೂ

ಸೋರಿಕೆ ಆಗುತ್ತಿರುವುದರಿಂದ ನಿಯಮಿತವಾಗಿ ನೀರು ಸರಬರಾಜು ಮಾಡಲು ಆಗುತ್ತಿಲ್ಲ’ ಎಂದು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಎ.ಎಸ್‌.ಬಣಕಾರ ಹೇಳುತ್ತಾರೆ.***

ಕೊಳವೆ ಮಾರ್ಗ ದುರಸ್ತಿಗೆ ಇಬ್ಬರು ತಂತ್ರಜ್ಞರನ್ನು ಕರೆಸಲಾಗಿದ್ದು,  ಒಂದು ವಾರದಲ್ಲಿ ಸಮರ್ಪಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು.

-ಎ.ಎಸ್‌.ಬಣಕಾರ,
 ಎಇಇ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.