ಮಂಗಳವಾರ, ಏಪ್ರಿಲ್ 20, 2021
29 °C

ವನ್ಯಜೀವಿ ಪ್ರವಾಸೋದ್ಯಮ ಕೇರಳ ಮಾದರಿ

ಶಶಿಧರ ಗರ್ಗೇಶ್ವರಿ Updated:

ಅಕ್ಷರ ಗಾತ್ರ : | |

ಜೀವನೋಪಾಯಕ್ಕಾಗಿ ಅರಣ್ಯ ಸಂಪತ್ತಿಗೆ ಕನ್ನ ಹಾಕುತ್ತಿದ್ದವರು ಈಗ ಅರಣ್ಯ ಪರಿಪಾಲಕರು! ಇದು ಕೇರಳದ ಮಾದರಿ! `ವಿನಾಶದಿಂದ ವಿಕಾಸದೆಡೆಗೆ~ ಎನ್ನುವ ಧ್ಯೇಯದಲ್ಲಿ ಸಮುದಾಯ ಆಧಾರಿತ ವನ್ಯಜೀವಿ ಪ್ರವಾಸೋದ್ಯಮ ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದ (ಪಿಟಿಆರ್) ವನ್ಯಜೀವಿ ಪ್ರವಾಸೋದ್ಯಮದ `ಮಾದರಿ~ ಕಥೆ ಇದು. ಇಲ್ಲಿ ಬುಡಕಟ್ಟು ಜನರು ಮತ್ತು ಸ್ಥಳೀಯರು ಸದಸ್ಯರಾಗಿರುವ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ನಡೆಸುತ್ತಿರುವ `ಪರಿಸರ ಸ್ನೇಹಿ ಪ್ರವಾಸೋದ್ಯಮ~ವು ಸ್ಥಳೀಯ ಸಮುದಾಯಕ್ಕೆ ಜೀವನೋಪಾಯ. ಅದು ಅರಣ್ಯ ರಕ್ಷಣೆಗೆ ಮಾರ್ಗೋಪಾಯವೂ ಹೌದು.ಪಿಟಿಆರ್‌ನಲ್ಲಿ 76 ಇಡಿಸಿಗಳಿವೆ. ಪ್ರವಾಸೋದ್ಯಮಕ್ಕೆಂದೇ ಐದು, ಉಳಿದವು ಗ್ರಾಮ ಇಡಿಸಿಗಳು. ಪ್ರವಾಸೋದ್ಯಮದ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು. ದಂತಕ್ಕಾಗಿ ಆನೆ ಹತ್ಯೆ, ಶ್ರೀಗಂಧದ ಮರ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಕದ್ದು ಸಾಗಿಸುತ್ತಿದ್ದವರು. ಈಗ ಅವರೇ ಅರಣ್ಯದ ಸಂರಕ್ಷಕರು! ಇಡಿಸಿಗಳಲ್ಲಿ ಶೇ 80ರಷ್ಟು ಬುಡಕಟ್ಟು ಜನರು, ಉಳಿದ ಶೇ 20ರಷ್ಟು ಜನರು ಸ್ಥಳೀಯರು.ಬುಡಕಟ್ಟು ಜನರ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವ `ಟ್ರೈಬಲ್ ಟ್ರಕ್ಸ್~, ಅರಣ್ಯದ ನಡುವೆಯಿರುವ ಪ್ರವಾಸಿಗರ ಕ್ಯಾಂಪ್‌ಗಳನ್ನು ನಿರ್ವಹಿಸುವ `ಟೈಗರ್ ಟ್ರಯಲ್ಸ್~, ಬಿದಿರಿನ ತೆಪ್ಪದ ರ‌್ಯಾಫ್ಟಿಂಗ್ ಮಾಡಿಸುವ `ಟ್ರೈಬಲ್ ಹೆರಿಟೇಜ್~, ತಲೆತಲಾಂತರಗಳಿಂದ ಅರಣ್ಯ ರಕ್ಷಕರಾದ `ಪೆಟ್ಸ್~ ಇಡಿಸಿಗಳ ಜೊತೆಗೆ `ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್‌~, `ವಿಡಿಯಾಲ್ ವನಪಾದುಕಾಪು ಸಂಘಂ~ ಮತ್ತು `ತಳ್ಳಿ ಕಲೆಕ್ಟರ್ಸ್‌~ ಎಂಬ ಇಡಿಸಿಗಳೂ ಇವೆ. ಈ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯ ಸಂಪತ್ತು ಕಳ್ಳತನ, ವನ್ಯಜೀವಿ ಬೇಟೆಯಂತಹ ಪಾತಕಗಳಲ್ಲಿ ತೊಡಗಿದ್ದವರು.`ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್‌~ ಇಡಿಸಿ ಸದಸ್ಯರು `ಸಿನ್ನಮೊಮೊ~ (ಸುಗಂಧ ದ್ರವ್ಯಗಳಲ್ಲಿ ಮತ್ತು ಅಗರಬತ್ತಿಗಳಲ್ಲಿ ಸುವಾಸನೆಗೆ ಉಪಯೋಗಿಸುವ ಪದಾರ್ಥ- ಇದು `ವೈನಾ ಬರಾಕ್~ ಮರಗಳ ತಿರುಳಿನಲ್ಲಿರುತ್ತದೆ) ಕಳ್ಳರಾಗಿದ್ದರು. ಅವರ ಮನವೊಲಿಸಿ ಈಗ ಅರಣ್ಯ ಸಂರಕ್ಷಣೆಗೆ ನಿಯೋಜಿಸಿಕೊಳ್ಳಲಾಗಿದೆ. `ವೈನಾ ಬರಾಕ್~ ಮರಗಳ ಕಳ್ಳಸಾಗಣೆ ನಿಲ್ಲಿಸಿ ಸುಧಾರಣೆಗೊಂಡವರ ಇಡಿಸಿಗೆ `ಎಕ್ಸ್‌ವೈನಾ ಬರಾಕ್ ಕಲೆಕ್ಟರ್ಸ್‌~ ಎಂಬ ಅನ್ವರ್ಥ ಹೆಸರನ್ನೇ ನೀಡಲಾಗಿದೆ.`ವಿಡಿಯಲ್ ವನಪಾದುಕಾಪು ಸಂಘಂ~ ತಮಿಳಿಗರು ಇರುವ ಇಡಿಸಿ. ಪೆರಿಯಾರ್ ಅರಣ್ಯವು ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ಹಾಗಾಗಿ ಈ ಗಡಿ ಭಾಗದ ಜನರಿಗೂ ಇಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.ಈ ಇಡಿಸಿಯ 20 ಸದಸ್ಯರು ಹಿಂದೆ ಆನೆ ಹತ್ಯೆ, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆಯಂತಹ ಗಂಭೀರ ಸ್ವರೂಪದ ಅಪರಾಧದಲ್ಲಿ ತೊಡಗಿದ್ದವರು. ಅವರ ಮನವೊಲಿಸಿ ಈ ಸಂಘ ರಚಿಸಲಾಗಿದೆ.`ಮೊದಲು ನಾವು ಅರಣ್ಯದಲ್ಲಿ ಕಳ್ಳತನ ಮಾಡುತ್ತಿದ್ದೆವು. ಆಗ ಜನರು ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈಗ ಸಾಮಾಜಿಕ ಸ್ಥಾನಮಾನ ಸಿಕ್ಕಿದೆ.ತಿಂಗಳಿಗೆ 9 ಸಾವಿರ ರೂಪಾಯಿ ವರಮಾನ ಇದೆ~ ಎನ್ನುತ್ತಾರೆ ಈ ಇಡಿಸಿ ಅಧ್ಯಕ್ಷ ಬೋಸ್.ಈ ಇಡಿಸಿ ಈಗ ಅರಣ್ಯ ಸಂರಕ್ಷಣೆಗೆ ರಾತ್ರಿ ಗಸ್ತು ತಿರುಗುವುದರ ಜೊತೆಗೆ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ವಿಹಾರ ನಡೆಸುತ್ತದೆ.

 

ಆದರೆ ಕೆಲವು ತಿಂಗಳ ಹಿಂದೆ ತಮಿಳುನಾಡು- ಕೇರಳ ನಡುವೆ ಉಂಟಾದ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದದಿಂದಾಗಿ ತಮಿಳುನಾಡಿನ ಕೆಲವು ದುಷ್ಕರ್ಮಿಗಳು `ತಮಿಳಿಗರಾಗಿ ಕೇರಳಕ್ಕೆ ದುಡಿಯುತ್ತೀರಾ~ ಎಂಬ ಆಕ್ರೋಶದಿಂದ ಪರಿಯಾರ್ ಅರಣ್ಯದ ಗಡಿ ಭಾಗದಲ್ಲಿದ್ದ ಈ ಇಡಿಸಿಯ ಶಿಬಿರ ಕಚೇರಿಯನ್ನು ಮತ್ತು ಎತ್ತಿನ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.`ತಳ್ಳಿ ಕಲೆಕ್ಟರ್ಸ್‌~ ಇಡಿಸಿ 25 ಜನರ ಸಮೂಹ. ಇವರು ಮೂಲತಃ ಧೂಪ ಸಂಗ್ರಹಕಾರರು. ಈಗ ಅರಣ್ಯ ಪರಿಪಾಲಕರಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.ಕೇರಳದಲ್ಲಿ 22 ವನ್ಯಜೀವಿ ಧಾಮಗಳಿವೆ. ಇವುಗಳಲ್ಲಿ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿರುವ ಪೆರಿಯಾರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಳಂ ಕಾಡುಗಳು ಹುಲಿ ಯೋಜನೆಗೆ ಅಡಕವಾಗಿವೆ. ಈ ಅರಣ್ಯಗಳಲ್ಲಿ 80 ಹುಲಿಗಳಿವೆ ಎಂದು ಅಂದಾಜಿಲಾಗಿದೆ. ಪರಂಬಿಕುಳಂನಲ್ಲೂ ಇಡಿಸಿ ಮೂಲಕ ಸಮುದಾಯ ಆಧಾರಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಜಾರಿಯ್ಲ್ಲಲಿದೆ.ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಶೇ10ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಉಳಿದ ಭಾಗವನ್ನು ಇಡಿಸಿ ಸದಸ್ಯರ ವೇತನ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.ಪೆರಿಯಾರ್ ಅಭಯಾರಣ್ಯದ ಸಮುದಾಯ ಆಧಾರಿತ ಪರಸರ ಸ್ನೇಹಿ ಪ್ರವಾಸೋದ್ಯಮವನ್ನು ಅಧ್ಯಯನ ಮಾಡಲು ವಿಶ್ವಸಂಸ್ಥೆಯ ನಿಯೋಗ ಸೇರಿದಂತೆ ದೇಶ-ವಿದೇಶಗಳ ಅನೇಕ ತಂಡಗಳು ಇಲ್ಲಿಗೆ ಭೇಟಿ ಕೊಟ್ಟಿವೆ.ಕೇರಳದಲ್ಲಿ ಮುಖ್ಯವಾಗಿ ಆರು ವಿಧದ ಬುಡಕಟ್ಟು ಜನರು ಇಲ್ಲಿನ ಅರಣ್ಯದ ಆಶ್ರಿತರು. ಇವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಇಲ್ಲಿ ನಡೆದಿಲ್ಲ ಎನ್ನುವುದು ಗಮನಾರ್ಹ.ಪೆರಿಯಾರ್ ಅಭಯಾರಣ್ಯದಲ್ಲಿ `ಮನ್ನಾಸ್~. `ಪಳಿಯನ್~, `ಉರಳಿ~ ಬುಡಕಟ್ಟು ಜನರು ಇದ್ದಾರೆ. ಉಳಿದಂತೆ `ಮಲಉಲ್ಲಾಡನ್~, `ಮಲಆರ್ಯನ್~ ವರ್ಗದ ಜನರು ಇದ್ದಾರೆ. ಇವರೆಲ್ಲಾ ಈಗಾಗಲೇ ಬಹುತೇಕ ಸಮಾಜದ ಮುಖ್ಯವಾಹಿನಿಗೆ ಬಂದವರಾಗಿದ್ದಾರೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ `ಮಲನ್‌ಪಂಡ್ರಂ~ ಅಲೆಮಾರಿ ಬುಡಕಟ್ಟು ಜನರು ಇನ್ನೂ ಅರಣ್ಯಗಳ ಒಳಭಾಗದಲ್ಲೇ ವಾಸಿಸುತ್ತಿದ್ದಾರೆ. 

(ಸಿಎಸ್‌ಇ ಫೆಲೊಶಿಪ್ ಲೇಖನ)ಕೇರಳ - ಕರ್ನಾಟಕ: ಅಜಗಜಾಂತರ

ಕರ್ನಾಟಕದ ವನ್ಯಜೀವಿ ಪ್ರವಾಸೋದ್ಯಮ ಕೇರಳದಷ್ಟು ಸುಸ್ಥಿರವಾದುದಲ್ಲ. ಅಣಬೆಗಳಂತೆ ಅರಣ್ಯದ ಪರಧಿಯಲ್ಲಿ ಹಬ್ಬಿಕೊಂಡಿರುವ ರೆಸಾರ್ಟ್‌ಗಳು, ಹೋಂ ಸ್ಟೇಗಳಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಬೀಳುತ್ತಿದೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳಿವೆ ಎಂದು ಅಂದಾಜಿಸಲಾಗಿದೆ.ಅರಣ್ಯ ಇಲಾಖೆ `ಪ್ರವಾಸೋದ್ಯಮ ವಲಯ~ ಎಂದು ಗುರುತಿಸಿರುವ ಕಡೆ ಸಫಾರಿ ನಡೆಸಲಾಗುತ್ತಿರುವ ನಿದರ್ಶನಗಳಿವೆ. ಇಲಾಖೆಯ ವಾಹನಗಳನ್ನು ಹೊರತುಪಡಿಸಿದರೆ ಸರ್ಕಾರಿ ಸ್ವಾಮ್ಯದ ಅರಣ್ಯ ವಸತಿ ಮತ್ತು ವಿಹಾರಧಾಮ (ಜೆಎಲ್‌ಆರ್) ವಾಹನಗಳಿಗೆ ಮಾತ್ರ ಪ್ರವೇಶ. ಖಾಸಗಿ ರೆಸಾರ್ಟ್‌ಗಳು ಜೆಎಲ್‌ಆರ್ ಮೂಲಕ ತನ್ನ ಗ್ರಾಹಕರಿಗೆ ಸಫಾರಿ ನಡೆಸುತ್ತದೆ.ಅನೇಕ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ರೆಸಾರ್ಟ್‌ಗಳ ಆಮಿಷಕ್ಕೆ ಒಳಗಾಗಿ ಖಾಸಗಿ ವಾಹನಗಳನ್ನು ಸಫಾರಿಗೆ ಬಿಡುತ್ತಾರೆ ಎಂಬ ಆರೋಪಗಳಿವೆ. ಇಲಾಖೆ ಪ್ರವಾಸೋದ್ಯಮ ನೀತಿಯ ಬಗ್ಗೆ ಹಲವು ಖಾಸಗಿ ರೆಸಾರ್ಟ್/ಹೋಂ ಸ್ಟೇಗಳಿಗೆ ಅಸಮಾಧಾನವಿದೆ. ಅಣಶಿ-ದಾಂಡೇಲಿಯ ಹುಲಿ ಸಂರಕ್ಷಿತಾರಣ್ಯದ ಪಣಸೋಲಿಯಲ್ಲಿ ಸ್ಥಳೀಯ ಇಡಿಸಿಗಳು ಸಫಾರಿ ನಡೆಸುತ್ತವೆ. ಸುಮಾರು 10 ಜೀಪ್‌ಗಳು ಇಲ್ಲಿದ್ದು, ಒಂದು ಟ್ರಿಪ್‌ಗೆ 700 ರೂಪಾಯಿಗಳಂತೆ ಅರಣ್ಯ ಇಲಾಖೆ ಸಫಾರಿಗೆ ಕರೆದುಕೊಂಡು ಹೋಗುವವರಿಗೆ ನೀಡುತ್ತದೆ.`ರಜೆ ಅವಧಿಯಲ್ಲಿ ನಿತ್ಯ ಸಫಾರಿ ಸಿಗುತ್ತದೆ. ವಾರಾಂತ್ಯಗಳಲ್ಲಿ ಪರವಾಗಿಲ್ಲ. ಕಚ್ಚಾ ರಸ್ತೆಯಲ್ಲಿ ಓಡಾಡುವುದರಿಂದ ಜೀಪ್ ಬೇಗ ರಿಪೇರಿಗೆ ಬರುತ್ತದೆ~ ಎಂಬುದು ಪಣಸೋಲಿಯಲ್ಲಿ ಸಫಾರಿಗೆ ಜೀಪ್ ಓಡಿಸುವ ಸದಾನಂದ, ಸಿದ್ದು, ಈಶ್ವರ್, ಗಣೇಶ್ ಅವರ ಒಕ್ಕೊರಲ ಧ್ವನಿ.ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ ವರ್ಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರ ಕನಿಷ್ಠ ವೇತನ 4,500 ರೂಪಾಯಿಯಿಂದ ಆರಂಭವಾಗುತ್ತದೆ. 20- 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿಗೆ ಬಂದವರೂ ಇದ್ದಾರೆ. ವೇತನ ತಾರತಮ್ಯದ ಬಗ್ಗೆ ಈ ನೌಕರ ವರ್ಗದಲ್ಲಿ ತೀವ್ರ ಅಸಮಾಧಾನವಿದೆ. ಈ ವಿಚಾರದಲ್ಲಿ ಕೇರಳ-ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.ಪ್ರವಾಸೋದ್ಯಮದಿಂದ ಬದುಕು!

ಕೇರಳ ರಾಜ್ಯದ ಒಟ್ಟು ಆದಾಯದಲ್ಲಿ ಶೇ 40ರಷ್ಟು ಪ್ರವಾಸೋದ್ಯಮದಿಂದಲೇ ಬರುತ್ತದೆ. ಇದಕ್ಕೆ ಕಾರಣ ಸ್ಥಳೀಯರ ಸಹಕಾರದಿಂದ ನಡೆಯುತ್ತಿರುವ ಸುಸ್ಥಿರ ಪರಿಸರ ಸ್ನೇಹಿ ಪ್ರವಾಸೋದ್ಯಮ. ಇದು ನಾಲ್ಕು ಸಾವಿರ ಕುಟುಂಬಗಳಿಗೆ (ಸುಮಾರು 40 ಸಾವಿರ ಜನರು) ಆಸರೆ ನೀಡಿದೆ.1997-98ರಲ್ಲೇ ಗ್ರಾಮ ಇಡಿಸಿಗಳ ರಚನೆ ಆಗಿದ್ದು, 2001-02ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐದು ಇಡಿಸಿಗಳನ್ನು ರಚಿಸಲಾಗಿದೆ. ಗ್ರಾಮ ಇಡಿಸಿಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಸದಸ್ಯತ್ವ ಇರುವ ಉದಾಹರಣೆಯೂ ಇದೆ.ಪೆರಿಯಾರ್ ಈ ಇಡಿಸಿಗಳಿಗೆ ಜಾಗತಿಕ ಪರಿಸರ ಫೆಸಿಲಿಟೇಟ್ ಕಾರ್ಯಕ್ರಮದಡಿ ವಿಶ್ವಬ್ಯಾಂಕ್ ಶೇ 80ರಷ್ಟು ಧನ ಸಹಾಯ ಒದಗಿಸಿತ್ತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 10ರಷ್ಟು ಹಣಕಾಸಿನ ನೆರವು ನೀಡಿವೆ. ಈ ಯೋಜನೆ 2004ರಿಂದ ಎಂಟು ವರ್ಷಗಳ ಕಾಲ ಜಾರಿಯಲ್ಲಿತ್ತು. ಈ ಯೋಜನೆ ಮುಗಿದ ನಂತರ `ಪೆರಿಯಾರ್ ಪ್ರತಿಷ್ಠಾನ~ ಸ್ಥಾಪಿಸಲಾಗಿದೆ. ಇದು ಇಡಿಸಿಗಳಿಗೆ ಹಣಕಾಸಿನ ನೆರವು ನೀಡುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.