ಮಂಗಳವಾರ, ಏಪ್ರಿಲ್ 20, 2021
27 °C

ವರದಿ ತಿರಸ್ಕರಿಸಲು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರದೆ ಸಾರಾಸಗಟಾಗಿ ತಿರಸ್ಕರಿಸಿ, ಮರು ಸಮೀಕ್ಷೆಗೆ ಆದೇಶಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊರಚ, ಕೊರಮ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿ ರುವ ಕೊರಚ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಿರುವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಮಾಜದ ಶೋಷಿತ ಸಮುದಾಯಗಳ ಪೈಕಿ ಕೊರಚ ಸಮಾಜವೂ ಒಂದಾ ಗಿದ್ದರೂ, ಆಯೋಗವು ಅವೈಜ್ಞಾನಿಕ ಅಂಶಗಳನ್ನು ಸಂಗ್ರಹಿಸುವ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡು ಶಿಫಾರಸು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕೊರಚ, ಕೊರಮ ಎಂಬ ಉಪ ಜಾತಿಗಳಲ್ಲಿ ಕಸಬಾರಿಗೆ ಕಟ್ಟುವುದು, ಹಂದಿ ಸಾಕಣೆ, ಬ್ಯಾಂಡ್ ಬಾರಿಸುವ ವೃತ್ತಿಯಲ್ಲಿ ಇರುವವರೇ ಅಧಿಕ. ಕೆಲವೇ ಕೆಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದನ್ನು ಪರಿಗಣಿಸಲಾಗಿದೆ. ಆರ್ಥಿಕವಾಗಿ, ಶೈಕ್ಷಣಿಕ ಪ್ರಗತಿ ಸಾಧಿಸದೆ, ರಾಜಕೀಯ ಪ್ರಾತಿನಿಧ್ಯವೂ ದೊರೆಯದೆ ಬಳಲುತ್ತಿರುವ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಆಯೋಗವು ವರದಿ ಸಿದ್ಧಪಡಿಸಬೇಕಿತ್ತು ಎಂದು ಅವರು ತಿಳಿಸಿದರು.ಶೇ 15ರ ಮೀಸಲಾತಿ ಅಡಿ 101 ಉಪ ಜಾತಿಗಳು ಸೇರಿದ್ದು, ಈ ಪೈಕಿ ಕೇವಲ ಶೇ 2ರಷ್ಟಿರುವ ಉಪ ಜಾತಿ ಗಳಿಗೆ ಶೇ 11ರಷ್ಟು ಒಳ ಮೀಸಲಾತಿ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ಆಯೋಗವು ಶೋಷಣೆಗೆ ಒಳಗಾಗಿರುವ ಕೊರಚ, ಕೊರಮ ಸಮುದಾಯಗಳನ್ನು ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವರದಿಯನ್ನು ಅಂಗೀಕರಿಸಬಾರದು. ಅಂಗೀಕರಿಸಿದ್ದೇ ಆದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಸಲ್ಲಿಸಿದರು.ಹೋರಾಟ ಸಮಿತಿ ಸಂಚಾಲಕ ಬಿ.ತಿಪ್ಪೇರುದ್ರ, ಕೆ.ರಾಮಾಂಜಿನಿ, ಲೋಕೇಶ್, ಹನುಮಂತ, ಡಾ.ಹನು ಮಂತಪ್ಪ, ಕೆ.ಈರಣ್ಣ, ರಂಗಸ್ವಾಮಿ, ರಾಮಾಂಜಿನಿ,    ಗಾದಿಲಿಂಗಪ್ಪ ಬೀಳಗಿ, ಬಿ.ರಮಣಪ್ಪ, ಕೆ.ಸುಧಾಕರ್, ಧರ್ಮರಾಜ, ಕೃಷ್ಣ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.