ವರದೆಯ ತೀರದಲ್ಲಿ ವಿದೇಶಿ ಅತಿಥಿಗಳ ಕಲರವ..!

ಹಾವೇರಿ: ಅರೇ ಮಾಲೆನಾಡಿಗೆ ಹೆಸರಾದ ಹಾವೇರಿ ಜಿಲ್ಲೆಗೆ ವಿದೇಶಿ ಹಕ್ಕಿಗಳು ಆಹಾರ ಮತ್ತು ಸಂತಾನಾಭಿವೃದ್ಧಿಗೆ ವಲಸೆ ಬಂದಿದ್ದು, ತಾಲ್ಲೂಕಿನ ನಾಗನೂರ ಗ್ರಾಮದ ಸಮೀಪದ ವರದಾ ನದಿಯ ತೀರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ.
ವಿದೇಶದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದ್ದ ಕಾರಣ ಸಂತಾನಾಭಿವೃದ್ಧಿಗಾಗಿ ವಿದೇಶಿ ಹಕ್ಕಿಗಳು ಈ ಭಾಗಕ್ಕೆ ವಲಸೆ ಬಂದಿದ್ದು, ಈ ಅಪರೂಪದ ವಿದೇಶ ಅತಿಥಿಗಳನ್ನು ಪ್ರಜಾವಾಣಿ ಪತ್ರಿಕೆ ಛಾಯಾಗ್ರಾಹಕ ನಾಗೇಶ ಬಾರ್ಕಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ನೀರಿಲ್ಲದೇ ಬಣಗುಡುತ್ತಿದ್ದ ನಾಗನೂರಿನ ವರದಾ ನದಿಯು ಏಪ್ರಿಲ್ ತಿಂಗಳಲ್ಲಿ ಆಗಾಗ ಸುರಿದ ಮಳೆಯಿಂದ ನದಿಯಲ್ಲಿನ ಗುಂಡಿಗಳಲ್ಲಿ ಹಾಗೂ ನದಿಗೆ ಅಡ್ಡಲಾಗಿ ನಿರ್ಮಿಸಿದ ಬಾಂದಾರನ ಹಿಂಬದಿಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಪಕ್ಷಗಳಿಗೆ ಆಹಾರವಾಗಿ ಮೀನು, ಬಾಲಹುಳ, ಎರೆಹುಳು ಇತ್ಯಾದಿ ಜಲಚರಗಳು ಹೇರಳವಾಗಿ ಸಿಗುವುದರಿಂದ ಪಕ್ಷಿಗಳು ಆಹಾರ ಅರಿಸುತ್ತ ಈ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬಂದಿವೆ.
ಅತಿಯಾದ ಮೊಬೈಲ್ ಬಳಕೆಯಿಂದ ಹಕ್ಕಿಗಳ ಸಂತತಿ ಕ್ಷೀಣಿಸುತ್ತಿರುವ ಇಂದಿನ ಕಾಲದಲ್ಲಿ ಬಹುದೂರದ ಮಂಗೋಲಿಯಾ, ಯೂರೋಪ್, ಉತ್ತರ ಧ್ರು್ರವ, ಸೈಬೀರಿಯಾ, ಕಾಶ್ಮೀರ ಸೇರಿದಂತೆ ಇತರ ಪೂರ್ವ ರಾಷ್ಟ್ರಗಳಿಗಲ್ಲಿ ಕಾಣಸಿಗುವ ಹಕ್ಕಿಗಳು ಇದೀಗ ಜಿಲ್ಲೆಯ ಅತಿಥಿಗಳಾಗಿದ್ದು ಪಕ್ಷಿ ಪ್ರೇಮಿಗಳಲ್ಲಿ ಹರ್ಷವನ್ನುಂಟು ಮಾಡಿದೆ.
ವಲಸೆ ಬಂದ ಪಕ್ಷಿಗಳು: ಪೆಂಟೆಡ್ ಸ್ಟಾರ್ಕ್(ಬಣ್ಣದ ಕೊಕ್ಕರೆ), ಏಷ್ಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್, ಕಾರ್ಮೊರೆಂಟ್, ಎರೋಸೈನ್ ಸ್ಪೂನ್ಬಿಲ್ ಶಾನ್ ಪೈಪರ್, ಕೊಕ್ಕರೆಗಳು, ಗ್ರೀನ್ ಶ್ಯಾಂಕ್, ಬಾರ್ ಹೆಡೆಡ್(ಹೆಬ್ಬಾತು), ಬುಲ್ಬುಲ್ ಹಕ್ಕಿ, ಬಾತುಗಳು, ಶೆವೆಲರ್, ರಾಕೆಟ್ ಹಕ್ಕಿ, ಸೇರಿದಂತೆ ಸುಮಾರು 20 ಪ್ರಭೇದದ ಪಕ್ಷಿಗಳು ವಲಸೆ ಬಂದಿವೆ. ಇವುಗಳು ಆಹಾರಕ್ಕಾಗಿ ಬೆಳಿಗ್ಗೆ ನದಿಯ ದಂಡೆಗೆ ಆಗಮಿಸಿದರೆ, ಮಧ್ಯಾಹ್ನ ಗಿಡಗಳ ಮೇಲಿರುತ್ತಿವೆ. ಮತ್ತೆ ಸಂಜೆ ಆಹಾರಕ್ಕಾಗಿ ನದಿಯ ಸಮೀಪ ಬರುತ್ತವೆ.
ಸಂತಾನಾಭಿವೃದ್ಧಿ: ಅರೇ ಮೆಲೆನಾಡು ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಧರ್ಮ ಹಾಗೂ ಕುಮಧ್ವತಿ ಎಂಬ ನಾಲ್ಕು ನದಿಗಳು ಹರಿಯುವಿಕೆಯಿಂದ ತಂಪು ವಾತಾವರಣ ಇರುವುದರಿಂದ ವಿದೇಶಿ ಅತಿಥಿಗಳಿಗೆ ಸಂತಾನಾಭಿವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಬಹುತೇಕ ಪಕ್ಷಿಗಳು ಋತು ಮಾನಕ್ಕೆ ಅನುಸಾರವಾಗಿ ಸಂತಾನಾಭಿವೃದ್ಧಿ ನಡೆಸುತ್ತಿವೆ. ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿದ ನಂತರ ಮರಿಗಳು ಹಾರಾಡುವ ತನಕ ಪೋಷಿಸುವ ಕಾಲವನ್ನೇ ಸಂತಾನಾಭಿವೃದ್ಧಿ ಎಂದು ಹೇಳಲಾಗುವುದು ಎನ್ನುತ್ತಾರೆ ಪಕ್ಷಿ ತಜ್ಞ ಡಾ. ಎನ್.ಆರ್.ಬಿರಸಾಲ.
ಸಾಮಾನ್ಯವಾಗಿ ಜೋಡಿಯಾಗಿಯೇ ಬರುವ ಹಕ್ಕಿಗಳು ನದಿಯ ದಡದಲ್ಲಿನ ಗಿಡಮರಗಳಲ್ಲಿ ಗೂಡುಕಟ್ಟಿ, ಮೊಟ್ಟೆ ಇಟ್ಟು ಮರಿಮಾಡಿದ ನಂತರ ಮರಿಗಳು ಹಾರಾಟ ನಡೆಸುವಷ್ಟು ಬೆಳೆದ ಮೇಲೆ ಪುನಃ ಮರಿಗಳೊಂದಿಗೆ ತಮ್ಮ ತಾಯಿ ನಾಡಿಗೆ ಮರಳುತ್ತವೆ ಎನ್ನುತ್ತಾರೆ ಅವರು.
ಪ್ರತಿವರ್ಷ ಸಾವಿರಾರು ಹಕ್ಕಿಗಳು ಆಹಾರಕ್ಕೆ ನದಿಗೆ ಬರುತ್ತಿವೆ. ಆದರೆ, ಈ ವರ್ಷ ನದಿಗಳಿಗೆ ತಡವಾಗಿ ಬಾಂದಾರ ಗೇಟ್ ಹಾಕಿದ್ದರಿಂದ ನದಿಯಲ್ಲಿ ನೀರು ಕಡಿಮೆ ಇರುವ ಕಾರಣಕ್ಕೆ ಕಡಿಮೆ ಪಕ್ಷಿಗಳು ಬಂದಿವೆ ಎನ್ನುತ್ತಾರೆ ನಾಗನೂರ ಗ್ರಾಮಸ್ಥ ಶಂಕರಗೌಡ ಕಟ್ಟೇಗೌಡ್ರ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.