ಶುಕ್ರವಾರ, ಜೂನ್ 25, 2021
25 °C

ವರಿಷ್ಠರಿಗೆ ಸಿಎಂ ಮನವಿ; ಬಿಕ್ಕಟ್ಟನ್ನು ಪರಿಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  `ರಾಜ್ಯ ಬಿಜೆಪಿ ಬಿಕ್ಕಟ್ಟನ್ನು ತಕ್ಷಣ ಪರಿಹಾರ ಮಾಡಿ. ಬಿಕ್ಕಟ್ಟಿನ ಪರಿಣಾಮ ಈಗಾಗಲೇ ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆ ಮೇಲೆ ಆಗಿದೆ. ಇದು ಹೀಗೆ ಮುಂದುವರಿದರೆ ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ. ಏನಾದರೂ ತೀರ್ಮಾನ ಮಾಡಿ. ಆದರೆ, ತಡಮಾಡಬೇಡಿ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಿರಿಯ ಬಿಜೆಪಿ ನಾಯಕರಿಗೆ ನೇರವಾಗಿ ಹೇಳಿದ್ದಾರೆ.ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಜತೆಗೂಡಿ ಬುಧವಾರ ಬೆಳಗಿನ ಜಾವ ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ, ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಸೇರಿದಂತೆ ಎಲ್ಲ ಮುಖಂಡರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.`ನೀವು ನನ್ನನ್ನಾದರೂ ಅಧಿಕಾರದಲ್ಲಿ ಮುಂದುವರಿಸಿ, ಇಲ್ಲವೆ ಯಡಿಯೂರಪ್ಪ ಅವರನ್ನಾದರೂ ನೇಮಕ ಮಾಡಿ. ಬೇಗ ಯಾವುದಾದರೂ ನಿರ್ಧಾರ ಕೈಗೊಳ್ಳಿ. ನನ್ನ ನಾಯಕತ್ವ ಬೇಡವೆನ್ನುವುದಾದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ~ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.`ನಮ್ಮ ಮಧ್ಯದ ಒಡಕು ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಫಲಿತಾಂಶದಲ್ಲಿ ಇದು ಪ್ರತಿಫಲಿತವಾಗಿದೆ. ಈ ಕ್ಷೇತ್ರದ ಜನ ಪ್ರಜ್ಞಾವಂತರು. ವಾಮ ಮಾರ್ಗಗಳಿಂದ ಅವರ ಓಲೈಕೆ ಸಾಧ್ಯವಿಲ್ಲ. ಇದೇ ಪಕ್ಷದ ಸೋಲಿಗೆ ಕಾರಣ.ಯಾರೋ ಬರಲಿಲ್ಲ ಎಂಬ ಕಾರಣಕ್ಕೆ ಸೋತಿಲ್ಲ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತು ಬಿಕ್ಕಟ್ಟು ಅಂತ್ಯಗೊಳಿಸಿ~ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರು ಕೊಡುತ್ತಿರುವ ಕಿರುಕುಳಗಳನ್ನು ಮುಖ್ಯಮಂತ್ರಿ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ. `ಉಪ ಚುನಾವಣೆ ಮುನ್ನಾ ದಿನ ಶಾಸಕರನ್ನು ಅಪಹರಣ ಮಾಡಿ ರೆಸಾರ್ಟ್‌ಗೆ ಒಯ್ಯಲಾಗಿದೆ. ಚುನಾವಣೆಯಲ್ಲಿ ಪಕ್ಷದ ವಿರುದ್ಧವೇ ಕೆಲಸ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು  ಇಷ್ಟೆಲ್ಲ ಆದ ಮೇಲೂ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿದ್ದರೆ ಸರ್ಕಾರವನ್ನು ಸಮರ್ಥವಾಗಿ ನಡೆಸುವುದಾದರೂ ಹೇಗೆ?~ ಎಂದು  ಪ್ರಶ್ನಿಸಿದ್ದಾರೆ.`ರಾಜ್ಯದಲ್ಲಿ ಕುಗ್ಗಿರುವ ಬಿಜೆಪಿ ವರ್ಚಸ್ಸನ್ನು ಮರಳಿ ಪಡೆಯುವ ಕೆಲಸವನ್ನು ನನ್ನ ಸರ್ಕಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಬಜೆಟ್ ಕೊಟ್ಟಿದ್ದೇನೆ. ಎಲ್ಲ ವರ್ಗ, ಸಮಾಜದ ಜನರನ್ನು ತೃಪ್ತಿ ಪಡೆಸುವ ಕೆಲಸ ಮಾಡಿದ್ದೇನೆ. ನನ್ನ ಕೈಯಲ್ಲಿರುವ 19 ಇಲಾಖೆಗಳ ಪ್ರಗತಿಯನ್ನು ಮೂರ‌್ನಾಲ್ಕು ಬಾರಿ ಪರಿಶೀಲಿಸಿದ್ದೇನೆ.ಒಳ್ಳೆ ಕೆಲಸ ಮಾಡುವುದು ನಿಮಗೆ ಬೇಡವಾದರೆ ಬದಲಾವಣೆ ಮಾಡಿ~ ಎಂದು ಮುಖ್ಯಮಂತ್ರಿ ಕಟುವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಮಾತಿಗೆ ಈಶ್ವರಪ್ಪ ಅವರೂ ಗಟ್ಟಿಯಾಗಿ ದನಿಗೂಡಿಸಿದ್ದಾರೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.  ಅಡ್ವಾಣಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಂಡರು. ಅವರ ಕೈಗಿತ್ತ ಬಜೆಟ್ ಪ್ರತಿ ಮೇಲೆ ಕಣ್ಣಾಡಿಸಿದರು. `ನನಗೆಲ್ಲವೂ ಗೊತ್ತಿದೆ. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ನಿಮಗೆ ಯಾವುದೇ ತೊಂದರೆಯೂ ಇಲ್ಲ. ನಾವು ನಿಮ್ಮಂದಿಗಿದ್ದೇವೆ. ನಿರಾತಂಕವಾಗಿ ಮುನ್ನಡೆಯಿರಿ~ ಎಂದು ಶುಭ ಹಾರೈಸಿದರು.ನಗುನಗುತ್ತಾ ಫೋಟೋಗೆ `ಪೋಸ್~ ಕೊಟ್ಟರು ಎಂದು ಮೂಲಗಳು ವಿವರಿಸಿವೆ. ಮಧ್ಯಾಹ್ನ ಬಿಜೆಪಿ ಅಧ್ಯಕ್ಷ ಗಡ್ಕರಿ ಮನೆಯಲ್ಲಿ ಸುಮಾರು ಎರಡು ಗಂಟೆ ಚರ್ಚೆ ನಡೆಯಿತು. ಅರುಣ್ ಜೇಟ್ಲಿ, ರಾಂಲಾಲ್, ರವಿಶಂಕರ ಪ್ರಸಾದ್, ಧರ್ಮೇಂದ್ರ ಪ್ರಧಾನ್, ಸತೀಶ್ ಮತ್ತು ಇತರ ಮುಖಂಡರು ಸಭೆಯಲ್ಲಿ ಇದ್ದರು. ಗಡ್ಕರಿ ಏನೂ ಮಾತನಾಡದೆ ಮೌನವಾಗಿದ್ದರು. ಉಡುಪಿ- ಚಿಕ್ಕಮಗಳೂರು ಚುನಾವಣೆ ಸೋಲು ಕುರಿತು ಜೇಟ್ಲಿ ಕೆದಕಿ, ಕೆದಕಿ ಕೇಳಿದರು. ಕೊನೆಗೆ ಏನೂ ಹೇಳದೆ ಕಳುಹಿಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ."ಮುಖ್ಯಮಂತ್ರಿ ರಾತ್ರಿ ಬೆಂಗಳೂರಿಗೆ ಹೊರಡುವ ಮೊದಲು ಗಡ್ಕರಿ ಮತ್ತೆ ಕರೆಸಿಕೊಂಡಿದ್ದರು. ಇದಕ್ಕೂ ಮೊದಲು ಸುಷ್ಮಾ ಸ್ವರಾಜ್, ಮುರುಳಿ ಮನೋಹರ ಜೋಷಿ, ಅನಂತ ಕುಮಾರ್, ರಾಜನಾಥ್‌ಸಿಂಗ್, ವೆಂಕಯ್ಯನಾಯ್ಡು ಅವರನ್ನು ಗೌಡರು ಕಂಡು ಚರ್ಚೆ ನಡೆಸಿದರು. ಅನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸದಾನಂದಗೌಡರು `ಸದ್ಯಕಂತೂ ನಾಯಕತ್ವ ಬದಲಾವಣೆ ಇಲ್ಲ~ ಎಂದು ವರಿಷ್ಠರು ಖಚಿತವಾಗಿ ಹೇಳಿದ್ದಾರೆ ಎಂದರು.ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರ ಜತೆಗೂಡಿ ಹಿರಿಯ ನಾಯಕರನ್ನು ಭೇಟಿ ಮಾಡಿದರು. ಉಡುಪಿ- ಚಿಕ್ಕಮಗಳೂರು ಚುನಾವಣೆ ಸೋಲನ್ನೇ ಅವರು ಸದಾನಂದಗೌಡರ ವಿರುದ್ಧ `ಅಸ್ತ್ರ~ವಾಗಿ ಪ್ರಯೋಗಿಸಿದರು. `ತಕ್ಷಣ ನಾಯಕತ್ವ ಬದಲಾವಣೆ ಮಾಡದಿದ್ದರೆ ಬಿಜೆಪಿ ರಾಜ್ಯದಲ್ಲಿ ನೆಲ ಕಚ್ಚುವುದು ಖಚಿತ~ ಎಂದು ವಿವರಿಸಿದರು. ಅವರ ಮಾತನ್ನೂ ಕೇಳಿಸಿಕೊಂಡ ಹೈಕಮಾಂಡ್ ಯಾವುದೇ ಭರವಸೆ ಕೊಡಲಿಲ್ಲ.`ಬಿಜೆಪಿ ನಾಯಕತ್ವ ನಮಗೆ ಯಾವುದೇ ಭರವಸೆ ನೀಡಿಲ್ಲ. ತಾಳ್ಮೆಯಿಂದ ಕಾಯುವಂತೆ ಹೇಳಿದೆ. ರಾಜ್ಯಸಭೆ ಚುನಾವಣೆ- ಬಜೆಟ್ ಅಧಿವೇಶನ ಮುಗಿದ ಬಳಿಕ ನಾಯಕತ್ವ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇದೆ~ ಎಂದು ಮಾಜಿ ಮುಖ್ಯಮಂತ್ರಿ ನುಡಿದರು. ಆದರೆ, ಅವರ ಹತ್ತಿರದ ಮೂಲಗಳು `ಜನವರಿ ಒಂದರ ಬಳಿಕ ನಾಯಕತ್ವ ಬದಲಾವಣೆ ಮಾಡುವ ಖಚಿತ ಸುಳಿವನ್ನು ಗಡ್ಕರಿ ಮತ್ತು ಜೇಟ್ಲಿ ನೀಡಿದ್ದಾರೆ~ ಎಂದು ಸ್ಪಷ್ಟಪಡಿಸಿವೆ.ಯಡಿಯೂರಪ್ಪ ಮೊದಲಿನ ಕಾರ್ಯಕ್ರಮದಂತೆ ನಾಳೆ ಬೆಂಗಳೂರಿಗೆ ಹಿಂತಿರುಗುವುದಿತ್ತು. ಆದರೆ, ಸಂಜೆ ರಾಜ್‌ನಾಥ್‌ಸಿಂಗ್ ಮತ್ತು ಅಡ್ವಾಣಿ ಅವರ ಭೇಟಿ ಬಳಿಕ ಯಡಿಯೂರಪ್ಪ ಗೆಲುವಾಗಿರಲಿಲ್ಲ. ಅಡ್ವಾಣಿ ಮನೆ ಹೊರಗೆ ಕಾದಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಏನೂ ಮಾತನಾಡದೆ ಕೈ ಮುಗಿದು ಮುನ್ನಡೆದರು. ಇದು ಎಲ್ಲವೂ ಅವರ ಪರವಾಗಿಲ್ಲ ಎಂಬ ಸುಳಿವು ನೀಡಿತು.ಇಡೀ ದಿನದ ರಾಜಕೀಯ ವಿದ್ಯಮಾನದ ಬಳಿಕವೂ ಬಿಜೆಪಿ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಳ್ಳದೆ ಗೊಂದಲ ಮುಂದುವರೆಯಿತು. ನಾಯಕತ್ವ ಬದಲಾವಣೆ ಕುರಿತು ವರಿಷ್ಠರಲ್ಲಿ ಒಮ್ಮತ ಮೂಡಿಲ್ಲ ಎಂಬುದಕ್ಕೆ ರಾಜಧಾನಿಯ ರಾಜಕೀಯ ಚಟುವಟಿಕೆ ಸಾಕ್ಷಿಯಾಯಿತು. ಮಾಮೂಲಿನಂತೆ ವರಿಷ್ಠರಲ್ಲಿ ಕೆಲವರು ಸದಾನಂದಗೌಡರ ಪರ, ಇನ್ನು ಕೆಲವರು ಯಡಿಯೂರಪ್ಪ ಅವರ ಪರ `ವಕಾಲತ್ತು~ ವಹಿಸುವುದು ಸಾಗಿತ್ತು.`ಸದಾನಂದಗೌಡರ ನಾಯಕತ್ವ ಬದಲಾವಣೆ ಮಾಡಬಾರದು~ ಎಂದು ಒತ್ತಾಯಿಸಲು ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಮತ್ತೊಂದು ಶಾಸಕರ ತಂಡ ರಾತ್ರಿ ದೆಹಲಿಗೆ ಬಂದಿಳಿಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.