ಮಂಗಳವಾರ, ಆಗಸ್ಟ್ 3, 2021
26 °C

ವರುಣನ ಜೊತೆ ಮುಂಗಾರು ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ಮಳೆಯ ನಡುವೆಯೂ ಮುಂಗಾರು ಹಬ್ಬವಾದ ಕಾರ ಹುಣ್ಣಿಮೆಯನ್ನು ಕರಿ ಹರಿಯುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.ಮಳೆರಾಯ, ಕಾರಹುಣ್ಣಿಮೆಯ ದಿನವೇ ಧರೆಗೆ ಇಳಿದಿದ್ದರಿಂದ ಮಳೆಯಿಲ್ಲದೆ ಕಂಗಾಲಾದ ರೈತರ ಮೊಗದಲ್ಲಿ ಮಂದಹಾಸ ಬೀರಿತು. ರೈತರು ತಮ್ಮ ಎತ್ತುಗಳನ್ನು ನವ ವಧುವಿನಂತೆ ಸಿಂಗರಿಸಿದ್ದರು. ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಮಾಡುತ್ತ, ಹನುಮಾನ ಮಂದಿರಕ್ಕೆ ಹೋಗಿ ದರ್ಶನ ಪಡೆದರು. ನಂತರ ಊರಿನ ಅಗಸಿಗೆ ಕಟ್ಟಿರುವ ಕರಿ(ಹಗ್ಗ)ಯನ್ನು ಹರಿಯುವ ಕಾರ್ಯಕ್ರಮವನ್ನು ಗೂಳಿಯಿಂದ ನೆರವೇರಿಸಲಾಯಿತು.ಓಡಾಡಿಸಿದ ಗೂಳಿ: ಗೂಳಿಯ ಮೂಲಕ ಪ್ರತಿ ವರ್ಷ ಊರಿನ ಅಗಸಿಗೆ ಕಟ್ಟಿರುವ ಕರಿ ಹರಿಯಲಾಗುತ್ತದೆ. ಈ ವರ್ಷವು ಗೂಳಿಯಿಂದ ನೆರವೇರಿಸಬೇಕು ಎಂದು ರೈತರು ಗೂಳಿಯ ಹಿಂದೆ ಬಿದ್ದು, ಅದನ್ನು ಸಿಂಗರಿಸಿದರು.ತಪ್ಪಿಸಿಕೊಂಡ ಗೂಳಿಯು ಸುಮಾರು ಒಂದು ತಾಸಿನವರೆಗೂ ಯಾರ ಕೈಗೂ ಸಿಗದೇ ಮಳೆಯಲ್ಲಿ ಗ್ರಾಮದ ತುಂಬೆಲ್ಲ ಓಡಾಡಿಸಿತು. ಅಗಸಿಯ ಮೂಲಕ ಗೂಳಿ ಹಾಯ್ದು ಹೋದ ಬಳಿಕ ರೈತರು ನಿಟ್ಟುಸಿರು ಬಿಟ್ಟು ಕರಿಯನ್ನು ಹರಿದರು.ಸಂಭ್ರಮದ ಕಾರಹುಣ್ಣಿಮೆ

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಹಬ್ಬವಾದ ಕಾರಹುಣ್ಣಿಮೆ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಹಳ್ಳದ ದಂಡೆಯಲ್ಲಿ ಎತ್ತುಗಳಿಗೆ ಮೈತಿಕ್ಕಿ, ಮೈತೊಳೆದು ಬಣ್ಣಗಳಿಂದ ಅಲಂಕರಿಸುತ್ತಿದ್ದರು. ಕೆಲವು ರೈತರು ಕೊಂಬನ್ನು ಅಣಸ್‌ನಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.ವಜ್ಜಲ, ಹುಣಸಗಿ, ಕಾಮನಟಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ಎತ್ತುಗಳನ್ನು ಮೆರವಣಿಗೆಯೊಂದಿಗೆ ಅಗಸಿ ಬಳಿ ಕರೆದುಕೊಂಡು ಹೋಗಿ ಅಲ್ಲಿ ಎತ್ತುಗಳ ಕರಿ ಹರಿಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು. ಹಳ್ಳಿಗಳಲ್ಲಿ ಈ ಹಬ್ಬದಲ್ಲಿ ಮಹಿಳೆಯರು, ಮಕ್ಕಳು, ತರುಣರು ಸೇರಿದಂತೆ ಎಲ್ಲರೂ ಪಾಲ್ಗೊಂಡು ಸಂತಸಪಟ್ಟರು.ಹುಣಸಗಿಯಲ್ಲಿ ನಡೆದ ಕರಿ ಹರಿಯುವ ಹಬ್ಬದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಬಳಿ, ನಾನಾಗೌಡ ಪಾಟೀಲ, ಭೀಮಗೌಡ ದೇಸಾಯಿ, ಸಂಗನಗೌಡ ಪೊಲೀಸ್‌ಪಾಟೀಲ, ಸಿದ್ದುರೇವಡಿ, ರವಿ ಪುರಾಣಮಠ, ಹೊನ್ನಕೇಶವ ದೇಸಾಯಿ, ಮಡಿವಾಳಪ್ಪ ಮಿಲ್ಟ್ರಿ, ಶಾಂತಪ್ಪ ಬಾಕಲಿ, ಬಸವರಾಜ ಸಜ್ಜನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಳಿಕ ಯುವಕರಿಂದ ಭಾರ ಎತ್ತುವ ಸ್ಪರ್ಧೆ ನಡೆಯಿತು. ವಿಜೇತರಿಗೆ ಬೆಳ್ಳಿಯ ಕಡಗ ಬಹುಮಾನವಾಗಿ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.